Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಹೊಶೇಯನ ಗ್ರಂಥ (ಹನ್ನೆರಡು ಮಂದಿ ಕಿರಿಯ ಪ್ರವಾದಿಗಳು )


1 : “ತುತೂರಿಯನ್ನು ಎತ್ತಿಕೊಂಡು ಊದು. ಶತ್ರುಗಳು ಹದ್ದಿನಂತೆ ದೇವರ ಆಲಯದ ಮೇಲೆ ಎರಗಿಬರುತ್ತಿದ್ದಾರೆ. ಕಾರಣ – ಜನರು ನನ್ನ ಒಡಂಬಡಿಕೆಯನ್ನು ಮೀರಿದ್ದಾರೆ, ನನ್ನ ವಿಧಿನಿಯಮಗಳನ್ನು ಉಲ್ಲಂಘಿಡಿದ್ದಾರೆ.
2 : ನನ್ನನ್ನು ತಮ್ಮ ದೇವರೆಂದೂ ತಾವು ದೇವಜನರೆಂದೂ ನನ್ನನ್ನು ಅರಿತವರೆಂದೂ ಕೂಗಿಕೊಳ್ಳುತ್ತಾರೆ.
3 : ಆದರೆ ಈ ಇಸ್ರಯೇಲರು ಸತ್ಯವನ್ನು ತೊರೆದು ಬಿಟ್ಟಿದ್ದಾರೆ. ಎಂತಲೇ ಶತ್ರುಗಳು ಅವರನ್ನು ಬೆನ್ನಟ್ಟಿ ಹೋಗುವರು.
4 : “ಅವರು ನನ್ನ ಅನುಮತಿ ಇಲ್ಲದೆ ಅರಸರನ್ನು ನೇಮಿಸಿಕೊಂಡಿದ್ದಾರೆ. ನನಗೆ ತಿಳಿಯದಂತೆ ಅಧಿಪತಿಗಳನ್ನು ಮಾಡಿಕೊಂಡಿದ್ದಾರೆ. ಬೆಳ್ಳಿ ಬಂಗಾರದ ವಿಗ್ರಹಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವರು ಮಾಡಿರುವುದೆಲ್ಲ ಅವರ ನಾಶಕ್ಕಾಗಿಯೇ.
5 : ಸಮಾರಿಯವೇ, ನೀನು ನಿರ್ಮಿಸಿಕೊಂಡಿರುವ ಬಸವನನ್ನು ಧಿಕ್ಕರಿಸಿದ್ದೇನೆ. ನನ್ನ ಕೋಪಾಗ್ನಿ ನಿನ್ನ ಮೇಲೆ ಉರಿದುಬರುತ್ತಿದೆ. ಈ ಜನರು ನಿರ್ಮಲರಾಗುವುದಕ್ಕೆ ಇನ್ನೆಷ್ಟು ಕಾಲ ಹಿಡಿಯುವುದೋ?
6 : ಆ ಬಸವ ಇಸ್ರಯೇಲಿನ ಕೈಕೆಲಸವೇ. ಶಿಲ್ಪಿ ಕೊಟ್ಟ ರೂಪವದು; ಅದು ದೇವರಲ್ಲ. ಸಮಾರ್ಯದ ಬಸವನು ನುಚ್ಚು ನೂರಾಗುವನು.
7 : ಇವರು ಗಾಳಿಯನ್ನು ಬಿತ್ತುತ್ತಾರೆ; ಬಿರುಗಾಳಿಯನ್ನು ಕೊಯ್ಯುತ್ತಾರೆ. ಅವರ ಪೈರು ತೆನೆಗೆ ಬಾರದು. ಕಾಳು ಮೊಳೆತರೂ ಕೂಳು ದೊರಕದು. ಒಂದು ವೇಳೆ ದೊರಕಿದರೂ ಅನ್ಯ ಜನರು ಅದನ್ನು ಕಬಳಿಸಿಬಿಡುವರು.
8 : ಇಸ್ರಯೇಲನ್ನು ಕಬಳಿಸಲಾಗಿದೆ. ಈಗದು ಅನ್ಯ ಜನಾಂಗಗಳ ಮಧ್ಯೆ ಯಾರಿಗೂ ಬೇಡವಾದ ಮಡಕೆಯಂತಿದೆ.
9 : ಅದು ಒಂಟಿಯಾಗಿ ಅಲೆಯುವ ಕಾಡುಕತ್ತೆಯಂತೆ ಅಸ್ಸೀರಿಯಕ್ಕೆ ಹೋಗಿದೆ: ಎಫ್ರಯಿಮ್ ಕಾಮುಕರಿಗೆ ತನ್ನನ್ನೇ ಮಾರಿಕೊಂಡಿದೆ.
10 : ಹಣ ತೆತ್ತು ಅನ್ಯರಾಷ್ಟ್ರಗಳೊಡನೆ ಮೈತ್ರಿ ಬೆಳೆಸಿಕೊಂಡಿದ್ದರೂ ನಾನು ಶೀಘ್ರದಲ್ಲಿ ಅದನ್ನು ಸೆರೆಗೂಡಿಸಲಿರುವೆನು. ಅಸ್ಸೀರಿಯದ ರಾಜಾಧಿರಾಜನು ಹೊರಿಸುವ ಹೊರೆಯಿಂದ ಅದು ಕುಗ್ಗಿಹೋಗಲಿದೆ.
11 : “ಎಫ್ರಯಿಮ್ ಪಾಪಪರಿಹಾರಕ್ಕಾಗಿ ಬಲಿಪೀಠಗಳನ್ನು ಕಟ್ಟಿದೆ. ಆ ಬಲಿಪೀಠಗಳೇ ಅದರ ಪಾಪಕ್ಕೆ ಕಾರಣವಾಗಿ ಪರಿಣಮಿಸಿವೆ.
12 : ನಾನು ನನ್ನ ಧರ್ಮವನ್ನು ಲಕ್ಷಾಂತರ ವಿಧಿಗಳ ರೂಪದಲ್ಲಿ ಬರೆದುಕೊಟ್ಟರೂ ಅವುಗಳು ತನಗೆ ಪರಕೀಯವೆಂದು ಭಾವಿಸುತ್ತದೆ.
13 : ಎಫ್ರಯಿಮಿನವರು ಬಲಿಪಶುಗಳನ್ನು ನನಗೆ ನೈವೇದ್ಯವಾಗಿ ವಧಿಸುತ್ತಾರೆ, ವಧಿಸಿದ್ದನ್ನು ಭುಜಿಸುತ್ತಾರೆ. ಆದರೆ ಆ ಬಲಿಗಳನ್ನು ನಾನು ಮೆಚ್ಚುವುದಿಲ್ಲ. ಅವರ ಅಧರ್ಮವನ್ನು ನೆನಪಿಗೆ ತಂದುಕೊಂಡು ಅವರ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವೆನು. ಆ ಜನರು ಈಜಿಪ್ಟಿಗೆ ಹಿಂದಿರುಗಬೇಕಾಗುವುದು.
14 : “ಇಸ್ರಯೇಲ್ ತನ್ನ ಸೃಷ್ಟಿಕರ್ತನನ್ನು ಮರೆತು ಅರಮನೆಗಳನ್ನು ಕಟ್ಟಿಕೊಂಡಿದೆ. ಜುದೇಯವು ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ನಿರ್ಮಿಸಿಕೊಂಡಿದೆ. ಆದರೆ ನಾನು ಆ ಪಟ್ಟಣಗಳ ಮೇಲೆ ಬೆಂಕಿಯನ್ನು ಕಾರುವೆನು. ಅದು ಆ ಸೌಧಗಳನ್ನು ನುಂಗಿಬಿಡುವುದು.”

· © 2017 kannadacatholicbible.org Privacy Policy