1 : “ನಾನು ನನ್ನ ಜನರ ದುರವಸ್ಥೆಯನ್ನು ನೀಗಿಸಿ ಇಸ್ರಯೇಲನ್ನು ಸ್ವಸ್ಥಗೊಳಿಸಬೇಕೆಂದಿರುವಾಗ ಎಫ್ರಯಿಮಿನ ಅಕ್ರಮ ಮತ್ತು ಸಮಾರ್ಯದ ದುಷ್ಟತನ ಬಯಲಿಗೆ ಬರುತ್ತವೆ. ಅವರು ಒಬ್ಬರಿಗೊಬ್ಬರು ಮೋಸಮಾಡುತ್ತಾರೆ. ಕಳ್ಳರಂತೆ ನುಗ್ಗಿ ಕನ್ನಹಾಕುತ್ತಾರೆ. ದರೋಡೆಗಾರರಂತೆ ದಾರಿಯಲ್ಲೇ ಸುಲಿಗೆಮಾಡುತ್ತಾರೆ.
2 : ಆದರೆ ಅವರ ದುಷ್ಕøತ್ಯಗಳೆಲ್ಲ ಸರ್ವೇಶ್ವರ ಸ್ವಾಮಿಯ ಜ್ಞಾಪಕದಲ್ಲಿ ಇರುತ್ತವೆ ಎಂಬುದನ್ನು ಅವರು ಮನದಟ್ಟು ಮಾಡಿಕೊಂಡಿಲ್ಲ. ಅವರ ನೀಚಕೃತ್ಯಗಳು ಅವರನ್ನು ಆವರಿಸಿಕೊಂಡಿವೆ; ನನ್ನ ಕಣ್ಮುಂದೆಯೇ ಇವೆ.
3 : “ಅವರು ಅಧರ್ಮದಿಂದ ಅರಸನನ್ನು ಆನಂದಗೊಳಿಸುತ್ತಾರೆ; ಅಸತ್ಯದಿಂದ ಅಧಿಕಾರಿಗಳನ್ನು ಸಂತೋಷಪಡಿಸುತ್ತಾರೆ.
4 : ಅವರೆಲ್ಲರು ವ್ಯಭಿಚಾರಿಗಳೇ; ಅವರು ಉರಿಯುವ ಒಲೆಗೆ ಸಮಾನರು. ರೊಟ್ಟಿಸುಡುವವನು ನಾದಿದ ಹಿಟ್ಟು ಹುಳಿಯಾಗುವವರೆಗೂ ಬಿಟ್ಟಿರುವ ಬೂದಿ ಮುಚ್ಚಿದ ಕೆಂಡಕ್ಕೆ ಸಮಾನರು.
5 : ಅರಸನ ಹಬ್ಬದ ದಿನಗಳಲ್ಲಿ ಅಧಿಕಾರಿಗಳು ದ್ರಾಕ್ಷಾರಸವನ್ನು ಕುಡಿದು ಮತ್ತರಾಗುವಂತೆ ಮಾಡಿದರು. ಅರಸನು ಅಪಹಾಸ್ಯ ಮಾಡುವ ತುಂಟರ ಸಂಗಡ ಬೆರೆತುಕೊಂಡನು.
6 : ಒಳಸಂಚಿನಿಂದ ಕೂಡಿದ ಅವರ ಹೃದಯ ಒಲೆಯಂತೆ ಉರಿಯುತ್ತದೆ. ಅವರ ಕೋಪಾಗ್ನಿ ರಾತ್ರಿಯೆಲ್ಲ ಹೊತ್ತಿಕೊಂಡೇ ಇರುತ್ತದೆ. ಬೆಳಗಾದದ್ದೇ ಧಗಧಗನೆ ಭುಗಿಲೇರುತ್ತದೆ.
7 : “ಎಲ್ಲರು ಒಲೆಯಂತೆ ಉರಿಯುತ್ತ ತಮ್ಮ ಅಧಿಕಾರಿಗಳನ್ನೇ ನುಂಗಿಬಿಡುತ್ತಾರೆ. ಅವರ ಅರಸರೆಲ್ಲ ಸತ್ತುಬಿದ್ದಿದ್ದಾರೆ. ನನಗೆ ಮೊರೆಯಿಡುವವರು ಅವರಲ್ಲಿ ಯಾರೂ ಇಲ್ಲ.”
8 : “ಎಫ್ರಯಿಮ್ ಅನ್ಯರಾಷ್ಟ್ರಗಳೊಂದಿಗೆ ಬೆರೆತುಕೊಳ್ಳುತ್ತದೆ. ಅದು ತಿರುವಿಹಾಕದ ರೊಟ್ಟಿ.
9 : ಅನ್ಯ ಜನರು ಅದರ ಶಕ್ತಿಯನ್ನು ಹೀರಿಕೊಂಡರೂ ಅದಕ್ಕೆ ಅರಿವಿಲ್ಲ. ಅದರ ತಲೆಗೂದಲು ನೆರೆತು ಹೋದರೂ ಅದಕ್ಕೆ ಪ್ರಜ್ಞೆ ಇಲ್ಲ.
10 : ಇಸ್ರಯೇಲಿನ ಅಹಂಕಾರವೇ ಅದರ ವಿರುದ್ಧ ಸಾಕ್ಷಿನುಡಿಯುತ್ತದೆ. ಇಷ್ಟೆಲ್ಲ ಸಂಭವಿಸಿದರೂ ಅದು ತನ್ನ ದೇವರಾದ ಸರ್ವೇಶ್ವರಸ್ವಾಮಿಯ ಬಳಿಗೆ ಹಿಂದಿರುಗುವುದಿಲ್ಲ; ಅವರನ್ನು ಆಶ್ರಯಿಸುವುದಿಲ್ಲ.
11 : ಎಫ್ರಯಿಮ್ ಬುದ್ಧವಿವೇಕವಿಲ್ಲದ ಪಾರಿವಾಳದಂತೆ; ಅದರ ಜನರು ಈಜಿಪ್ಟನ್ನು ಸಹಾಯಕ್ಕೆ ಕರೆಯುತ್ತಾರೆ. ಅಸ್ಸೀರಿಯದ ಆಶ್ರಯಕ್ಕೆ ಓಡುತ್ತಾರೆ.
12 : ಅವರು ಹೋಗುವಾಗ ನನ್ನ ಬಲೆಯನ್ನು ಅವರ ಮೇಲೆ ಬೀಸುವೆನು. ಆಕಾಶದ ಪಕ್ಷಿಗಳಂತೆ ಅವರನ್ನು ಕೆಳಕ್ಕೆ ಎಳೆದು ಬಿಡುವೆನು. ಅವರ ದುಷ್ಕøತ್ಯಗಳಿಗನುಸಾರ ಅವರನ್ನು ದಂಡಿಸುವೆನು.
13 : “ನನ್ನನ್ನು ತೊರೆದುಬಿಟ್ಟದ್ದರಿಂದ ಅವರು ಹಾಳಾಗಲಿ, ನನಗೆ ದ್ರೋಹವೆಸಗಿದ್ದರಿಂದ ಅವರು ನಾಶವಾಗಲಿ! ನಾನು ಅವರನ್ನು ಉದ್ಧರಿಸಬೇಕೆಂದಿದ್ದರೂ ಅವರು ನನಗೆ ತಪ್ಪಾಗಿ ನಡೆದುಕೊಂಡಿದ್ದಾರೆ.
14 : ಅವರು ಹೃದಯ ಪೂರ್ವಕವಾಗಿ ನನಗೆ ಪ್ರಾರ್ಥನೆ ಮಾಡುವುದಿಲ್ಲ. ಬದಲಿಗೆ ಅವರ ಹಾಸಿಗೆಗಳ ಮೇಲೆ ಬಿದ್ದು ಅರಚುತ್ತಾರೆ. ಧಾನ್ಯದ್ರಾಕ್ಷಾರಸಗಳಿಗಾಗಿ ಕಿರಿಚಿಕೊಳ್ಳುತ್ತಾರೆ. ನನಗೆ ವಿರುದ್ಧವಾಗಿ ಪ್ರತಿಭಟಿಸುತ್ತಾ ತಮ್ಮ ದೇಹಗಳನ್ನು ಪರಚಿಕೊಳ್ಳುತ್ತಾರೆ.
15 : ನಾನೇ ಅವರಿಗೆ ಯುದ್ಧಾಭ್ಯಾಸ ಮಾಡಿಸಿ, ಅವರ ಭುಜಬಲವನ್ನು ಬೆಳೆಸಿದರೂ ನನ್ನ ವಿರುದ್ಧ ಕೇಡನ್ನು ಕಲ್ಪಿಸುತ್ತಾರೆ.
16 : ಅವರು ಅತ್ತಿತ್ತ ತಿರುಗಿಕೊಳ್ಳುತ್ತಾರೆ. ದೇವರ ಕಡೆ ತಿರುಗಿ ಕೊಳ್ಳುವುದಿಲ್ಲ. ಅವರು ಮೋಸದ ಬಿಲ್ಲಿಗೆ ಸಮಾನರು. ಸೊಕ್ಕಿನ ನಾಲಗೆಯ ನಿಮಿತ್ತ ಅವರ ಮುಖಂಡರು ಹತರಾಗುವರು. ಅವರ ಪತನ ಈಜಿಪ್ಟಿಗೆ ಹಾಸ್ಯಾಸ್ಪದವಾಗುವುದು.”