1 : ನನ್ನನ್ನು ಜನರು ಮರೆಹೋಗುತ್ತಾ ಹೀಗೆನ್ನುವರು: “ಬನ್ನಿ, ಸರ್ವೇಶ್ವರಸ್ವಾಮಿಯ ಬಳಿಗೆ ಹಿಂದಿರುಗೋಣ. ಅವರು ನಮ್ಮನ್ನು ಛಿದ್ರಗೊಳಿಸಿದವರು. ಅವರು ನಮ್ಮನ್ನು ಗಾಯಗೊಳಿಸಿದ್ದಾರೆ; ಅವರೇ ನಮ್ಮ ಗಾಯಗಳನ್ನು ಕಟ್ಟಿ ಗುಣಪಡಿಸುವರು. ಒಂದೆರಡು ದಿನಗಳ ನಂತರ ಅವರು ನಮ್ಮನ್ನು ಬದುಕಿಸುವರು.
2 : ಮೂರನೆಯ ದಿನದಲ್ಲಿ ಅವರು ನಮ್ಮನ್ನು ಎಬ್ಬಿಸುವರು. ಆಗ ನಾವು ಅವರ ಸನ್ನಿಧಿಯಲ್ಲಿ ಬಾಳುವೆವು.
3 : ನಿರಂತರವಾಗಿ ಹುಡುಕಿ ಅವರನ್ನು ಕಂಡುಕೊಳ್ಳೋಣ; ಸರ್ವೇಶ್ವರಸ್ವಾಮಿಯನ್ನು ಅರಿತುಕೊಳ್ಳೋಣ; ಅವರ ಆಗಮನ ಸೂರ್ಯೋದಯದಂತೆ ನಿಶ್ಚಯ. ಭೂಮಿಯನ್ನು ತಣಿಸುವ ಮುಂಗಾರು ಹಿಂಗಾರು ಮಳೆಗಳಂತೆ ಅವರು ನಮ್ಮ ಬಳಿಗೆ ಬಂದೇ ಬರುವರು.
4 : ಆದರೆ ಸರ್ವೇಶ್ವರ ಹೇಳುವುದೇನೆಂದರೆ: “ಎಫ್ರಯಿಮೇ, ನಾನು ನಿನ್ನನ್ನು ಹೇಗೆ ತಿದ್ದಲಿ? ಜುದೇಯವೇ, ನಿನ್ನನ್ನು ಹೇಗೆ ಸರಿಪಡಿಸಲಿ? ನಿಮ್ಮ ಭಕ್ತಿ ಪ್ರಾತಃಕಾಲದ ಮೋಡದಂತಿದೆ; ಬೇಗನೆ ಮಾಯವಾಗುವ ಇಬ್ಬನಿಯಂತಿದೆ.
5 : ಖಂಡ ತುಂಡವಾದ ತೀರ್ಪುನೀಡುವ, ಕತ್ತಿಯಂತೆ ಹರಿತವಾಗಿ ಮಾತನಾಡುವ ನನ್ನ ಪ್ರವಾದಿಗಳನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ. ನನ್ನ ನ್ಯಾಯ ದಂಡನೆ ಮಿಂಚಿನಂತೆ ಹೊರಡುವುದು.
6 : ನನಗೆ ಬೇಕಾದುದು ಕರುಣೆ, ಬಲಿಯರ್ಪಣೆಯಲ್ಲ; ನನಗೆ ಬೇಕಾದುದು ದೈವಜ್ಞಾನ, ದಹನಬಲಿ ದಾನವಲ್ಲ.
7 : “ಆದಾಮನಂತೆ ಅವರು ನನ್ನ ಒಡಂಬಡಿಕೆಯನ್ನು ಉಲ್ಲಂಘಿಸಿದ್ದಾರೆ. ಅವನಂತೆ ಅವರು ನನಗೆ ದ್ರೋಹವೆಸಗಿದ್ದಾರೆ.
8 : ಗಿಲ್ಯಾದು ದುಷ್ಟ ಜನರಿಂದ ತುಂಬಿದೆ. ಅವರು ತುಳಿಯುವ ಹಾದಿಗಳಲ್ಲೆಲ್ಲ ರಕ್ತಕಲೆಗಳೇ.
9 : ದರೋಡೆಗಾರರು ದಾರಿಹೋಕರಿಗಾಗಿ ಹೊಂಚುಹಾಕುವಂತೆ ಯಾಜಕರು ಗುಂಪುಗೂಡಿ ಹೊಂಚುಹಾಕುತ್ತಾ, ಶೆಖೆಮಿಗೆ ಯಾತ್ರೆಹೋಗುವವರನ್ನು ಕೊಂದು ಹಾಕುತ್ತಾರೆ. ಅವರು ಮಾಡುವುದು ನಿಜಕ್ಕೂ ಘೋರಕೃತ್ಯ.
10 : ಇಸ್ರಯೇಲ್ ಮನೆತನದಲ್ಲಿ ಘೋರಕೃತ್ಯಗಳು ಕಾಣಿಸಿಕೊಂಡಿವೆ. ಅಲ್ಲಿ ಎಫ್ರಯಿಮಿನೊಳಗೆ ವೇಶ್ಯಾಚಾರ ನಡೆಯುತ್ತಿದೆ. ಇಸ್ರಯೇಲ್ ಕಲುಷಿತವಾಗಿದೆ.
11 : “ಜುದೇಯವೇ, ನೀನು ಮಾಡುವ ದುಷ್ಕøತ್ಯಗಳಿಗೆ ತಕ್ಕ ಸುಗ್ಗಿ ಕಾದಿದೆ.