1 : “ಯಾಜಕರೇ, ಕೇಳಿ: ಇಸ್ರಯೇಲ್ ಮನೆತನದವರೇ, ಗಮನಿಸಿ. ರಾಜ ವಂಶದವರೇ ಕಿವಿಗೊಡಿ.
2 : ನೀವು ಮಿಚ್ಪದಲ್ಲಿ ಉರುಲಾಗಿದ್ದೀರಿ. ತಾಬೋರಿನಲ್ಲಿ ಬಲೆಯಾಗಿದ್ದೀರಿ. ಶಿಟ್ಟಿಮಿನಲ್ಲಿ ಆಳವಾದ ಕಂದಕವನ್ನು ತೋಡಿದ್ದೀರಿ. ನಿಮ್ಮ ವಿರುದ್ಧ ತೀರ್ಪು ಬಂದಿದೆ. ನಿಮ್ಮೆಲ್ಲರನ್ನು ಶಿಕ್ಷಿಸುವೆನು.
3 : ಎಫ್ರಯಿಮನ್ನು ಬಲ್ಲೆನು; ಇಸ್ರಯೇಲ್ ನನಗೆ ಕಣ್ಮರೆಯಾಗಿಲ್ಲ. ಎಫ್ರಯಿಮ್, ನೀನು ವ್ಯಭಿಚಾರಿಣಿಯಾಗಿರುವೆ. ಇಸ್ರಯೇಲ್, ನೀನು ಹೊಲಸಾಗಿರುವೆ.”
4 : ಅವರು ತಮ್ಮ ದೇವರ ಬಳಿಗೆ ಹಿಂದಿರುಗದಂತೆ ಅವರ ದುಷ್ಕøತ್ಯಗಳು ಅವರಿಗೆ ಅಡ್ಡಿಯಾಗಿವೆ. ವ್ಯಭಿಚಾರ ಅವರಲ್ಲಿ ನೆಲೆಗೊಂಡಿದೆ. ಅವರು ಸರ್ವೇಶ್ವರನನ್ನು ಅರಿಯರು.
5 : ಇಸ್ರಯೇಲಿನ ಅಹಂಕಾರವೇ ಅದಕ್ಕೆ ವಿರುದ್ಧ ಸಾಕ್ಷಿ ನುಡಿಯುತ್ತದೆ. ಇಸ್ರಯೇಲ್ ಮತ್ತು ಎಫ್ರಯಿಮ್ ತಮ್ಮ ದುರ್ಮಾರ್ಗದಲ್ಲಿ ಮುಗ್ಗರಿಸಿ ಬೀಳುತ್ತವೆ. ಜುದೇಯವೂ ಅದರಂತೆಯೇ ಬೀಳಲಿದೆ.
6 : ಅವರು ತಮ್ಮ ದನಕುರಿಗಳೊಂದಿಗೆ ಸರ್ವೇಶ್ವರಸ್ವಾಮಿ ಯನ್ನು ಅರಸಿಹೋದರೂ, ಅವರನ್ನು ಕಾಣರು. ಸರ್ವೇಶ್ವರ ಅವರಿಂದ ಮರೆಯಾಗಿದ್ದಾರೆ.
7 : ಅವರು ವ್ಯಭಿಚಾರದಿಂದ ಸರ್ವೇಶ್ವರಸ್ವಾಮಿಗೆ ದ್ರೋಹವೆಸಗಿದ್ದಾರೆ. ಅವರ ಮಕ್ಕಳು ಆ ಸ್ವಾಮಿಯ ಮಕ್ಕಳಲ್ಲ; ಮುಂದಿನ ಅಮಾವಾಸ್ಯೆಯೊಳಗಾಗಿ ಅವರು ನಾಶವಾಗುವರು. ಅವರ ಸ್ವತ್ತೆಲ್ಲಾ ಅಳಿದು ಹೋಗುವುದು.
8 : ಗಿಬ್ಯದಲ್ಲಿ ತುತೂರಿಯನ್ನು ಊದಿರಿ, ರಮಾದಲ್ಲಿ ಕೊಂಬನ್ನು ಮೊಳಗಿಸಿರಿ; ಬೇತಾವೆನಿನಲ್ಲಿ ಕಾಳಗದ ಕರೆನೀಡಿರಿ. ಬೆನ್ಯಾಮಿನೇ, ನಿನ್ನನ್ನು ಬೆನ್ನಟ್ಟಿ ಬರುತ್ತಿರುವವರನ್ನು ನೋಡು.
9 : ದಂಡನೆಯ ದಿನದಲ್ಲಿ ಎಫ್ರಯಿಮ್ ಹಾಳಾಗುವುದು. ಇಗೋ, ಇಸ್ರಯೇಲಿನ ಕುಲಗಳ ಭವಿಷ್ಯವನ್ನು ಖಚಿತವಾಗಿ ತಿಳಿಸಿದ್ದೇನೆ:
10 : “ಜುದೇಯದ ಮುಖಂಡರು, ಗಡಿದಾಟಿ ಆಕ್ರಮಣ ಮಾಡುವವರನ್ನು ಹೋಲುತ್ತಾರೆ. ಅವರ ಮೇಲೆ ನನ್ನ ಕೋಪಾಗ್ನಿಯನ್ನು ಸುರಿಸುತ್ತೇನೆ.
11 : ದುರಾಚಾರಗಳನ್ನು ಅನುಸರಿಸಲು ನಿರ್ಧರಿಸಿದ ಕಾರಣ, ಎಫ್ರಯಿಮ್ ನ್ಯಾಯತೀರ್ಪಿಗೆ ಗುರಿಯಾಗಿದೆ; ಹಿಂಸೆಗೀಡಾಗಿದೆ; ನುಚ್ಚುನೂರಾಗಿದೆ.
12 : ನಾನು ಎಫ್ರಯಿಮಿಗೆ ನುಸಿಯಾಗಿದ್ದೇನೆ; ಯೆಹೂದ್ಯಕುಲಕ್ಕೆ ಕುಟ್ಟೆಯಾಗಿದ್ದೇನೆ.
13 : “ಎಫ್ರಯಿಮ್ ತನ್ನ ರೋಗವನ್ನು ಅರಿತುಕೊಂಡಿತು; ಜುದೇಯವು ತನ್ನ ಹುಣ್ಣನ್ನು ಕಂಡುಕೊಂಡಿತು. ಆಗ ಎಫ್ರಯಿಮ್ ಅಸ್ಸೀರಿಯಾದ ಕಡೆಗೆ ತಿರುಗಿಕೊಂಡು ಜಗಳಗಂಟಿಯಾದ ರಾಜನ ಬಳಿಗೆ ದೂತರನ್ನು ಕಳುಹಿಸಿತು. ಆದರೆ ಅವನು ನಿಮ್ಮ ರೋಗವನ್ನು ವಾಸಿಮಾಡಲಾರನು, ನಿಮ್ಮ ಹುಣ್ಣನ್ನು ಗುಣಪಡಿಸಲಾರನು.
14 : ಎಫ್ರಯಿಮಿಗೆ ನಾನು ಸಿಂಹ; ಯೆಹೂದ್ಯಕುಲಕ್ಕೆ ಪ್ರಾಯದ ಸಿಂಹ; ಅದನ್ನು ಸೀಳಿಬಿಡುವೆನು; ಎಳೆದುಕೊಂಡು ಹೋಗುವೆನು; ಯಾರೂ ಅದನ್ನು ನನ್ನಿಂದ ಬಿಡಿಸಿಕೊಳ್ಳಲಾರರು.
15 : “ನಾನು ನನ್ನ ನಿವಾಸಕ್ಕೆ ಹಿಂದಿರುಗುವೆನು. ನನ್ನ ಜನರು ತಮ್ಮ ದೋಷಫಲವನ್ನು ಅನುಭವಿಸಿ, ನನ್ನ ಸಾನಿಧ್ಯವನ್ನು ಹರಸುವ ತನಕ ಅಲ್ಲೇ ಇರುವೆನು. ಸಂಕಟದಲ್ಲಿ ಸಿಕ್ಕಿಕೊಂಡಾಗ, ಕೂಡಲೆ ಅವರು ನನ್ನನ್ನು ಆಶ್ರಯಿಸುವರು.”