1 : ಇಸ್ರಯೇಲಿನವರೇ, ಸರ್ವೇಶ್ವರಸ್ವಾಮಿಯ ವಾಕ್ಯವನ್ನು ಆಲಿಸಿರಿ: “ಈ ದೇಶದಲ್ಲಿ ಸತ್ಯ, ಪ್ರೀತಿ, ಭಕ್ತಿ ಎಂಬುದೇ ಇಲ್ಲ. ಇಲ್ಲಿನ ನಿವಾಸಿಗಳ ಮೇಲೆ ಸರ್ವೇಶ್ವರ ಅಪಾದನೆ ಹೊರಿಸಿದ್ದಾರೆ.
2 : ಸುಳ್ಳುಸಾಕ್ಷಿ, ನರಹತ್ಯೆ, ಕಳ್ಳತನ, ವ್ಯಭಿಚಾರ ಇವೆಲ್ಲ ತುಂಬಿಕೊಂಡಿವೆ; ದೊಂಬಿದಾಂಧಲೆಗಳು ನಡೆಯುತ್ತಿವೆ, ನಾಡೆಲ್ಲ ರಕ್ತಮಯವಾಗಿದೆ.
3 : ಇದರಿಂದ ನಾಡು ಶೋಕ ಸಾಗರದಲ್ಲಿ ಮುಳುಗಿದೆ. ಅದರ ನಿವಾಸಿಗಳೆಲ್ಲ ನರಳುತ್ತಿದ್ದಾರೆ. ನೆಲದ ಮೇಲಿನ ಜಂತುಗಳು, ಆಕಾಶದ ಪಕ್ಷಿಗಳು ಬಳಲುತ್ತಿವೆ. ಜಲಜಂತುಗಳು ಸಹ ನಶಿಸಿಹೋಗುತ್ತಿವೆ.
4 : “ಯಾರೂ ಪ್ರತಿಭಟಿಸದಿರಲಿ, ಯಾರೂ ಜನರನ್ನು ಖಂಡಿಸದಿರಲಿ. ನನ್ನ ಆಪಾದನೆ ಇರುವುದು, ಎಲೈ ಯಾಜಕರೇ, ನಿಮ್ಮ ಮೇಲೆಯೇ.
5 : ಹಗಲಿನಲ್ಲೇ ನೀವು ಮುಗ್ಗರಿಸುತ್ತೀರಿ. ರಾತ್ರಿಯಲ್ಲಿ ಪ್ರವಾದಿಗಳು ಸಹ ನಿಮ್ಮೊಂದಿಗೆ ಮುಗ್ಗರಿಸುತ್ತಾರೆ. ನಿಮ್ಮ ವಂಶವೃಕ್ಷವನ್ನೇ ನಾನು ನಿರ್ಮೂಲಮಾಡುವೆನು.
6 : ಜನರು ಜ್ಞಾನಹೀನರಾಗಿ ಅಳಿದುಹೋಗುತ್ತಿದ್ದಾರೆ.
“ನೀವು ದೈವಜ್ಞಾನವನ್ನು ತಿರಸ್ಕರಿಸಿದ್ದೀರಿ; ನಾನು ಸಹ ಯಾಜಕವರ್ಗದಿಂದ ನಿಮ್ಮನ್ನು ವರ್ಜಿಸಿಬಿಡುತ್ತೇನೆ. ನೀವು ದೇವರ ಧರ್ಮೋಪದೇಶವನ್ನು ಮರೆತುಬಿಟ್ಟಿದ್ದೀರಿ; ನಾನು ನಿಮ್ಮ ಮಕ್ಕಳನ್ನು ಮರೆತುಬಿಡುತ್ತೇನೆ.
7 : “ಅವರ ಸಂತಾನ ಹೆಚ್ಚಿದ ಹಾಗೆಲ್ಲ ಅವರು ನನ್ನ ವಿರುದ್ಧ ಪಾಪಮಾಡುತ್ತಾ ಬಂದಿದ್ದಾರೆ. ಅವರ ಮಾನವನ್ನು ಅವಮಾನವನ್ನಾಗಿ ಮಾರ್ಪಡಿಸುತ್ತೇನೆ.
8 : ನನ್ನ ಜನರ ಪಾಪವೇ ಅವರಿಗೆ ಜೀವನಾಧಾರ. ಎಂತಲೇ ಅವರು ಪಾಪ ಕೃತ್ಯಗಳನ್ನೇ ಅಧಿಕವಾಗಿ ಬಯಸುತ್ತಾರೆ.
9 : ಪ್ರಜೆಗಳಂತೆಯೇ ಯಾಜಕ. ನಿಮ್ಮ ದುಷ್ಕøತ್ಯಗಳಿಗೆ ತಕ್ಕ ದಂಡನೆಯನ್ನು ವಿಧಿಸುತ್ತೇನೆ. ಅವುಗಳ ಪ್ರತಿಫಲವನ್ನು ನೀವೇ ಅನುಭವಿಸುವಂತೆ ಮಾಡುತ್ತೇನೆ.
10 : ಎಷ್ಟು ತಿಂದರೂ ನಿಮಗೆ ತೃಪ್ತಿಯಾಗದು. ಎಷ್ಟು ವ್ಯಭಿಚಾರಗೈದರೂ ನಿಮಗೆ ಸಂತಾನ ಪ್ರಾಪ್ತಿಯಾಗದು. ಕಾರಣ, ನೀವು ವೇಶ್ಯಾಚಾರಕ್ಕಾಗಿ ಸರ್ವೇಶ್ವರನನ್ನೇ ತಿರಸ್ಕರಿಸಿದ್ದೀರಿ.
11 : “ಮದ್ಯಪಾನ, ದ್ರಾಕ್ಷಾರಸ – ಇವು ಜನರನ್ನು ಬುದ್ಧಿಹೀನರನ್ನಾಗಿ ಮಾಡುತ್ತವೆ.
12 : ನನ್ನ ಜನರು ಮರದ ತುಂಡನ್ನು ಹಿಡಿದು ಕಣಿ ಕೇಳುತ್ತಾರೆ; ಕೈಯಲ್ಲಿ ಹಿಡಿದ ದೊಣ್ಣೆಯಿಂದ ವಿವೇಕ ವಾಣಿಯನ್ನು ಪಡೆಯಲೆತ್ನಿಸುತ್ತಾರೆ. ವ್ಯಭಿಚಾರ ಗುಣ ಅವರನ್ನು ತಪ್ಪುದಾರಿಗೆ ಎಳೆದಿದೆ. ದೇವರ ಸದ್ಭಕ್ತಿಯನ್ನು ತೊರೆದು ಅವರು ಧರ್ಮಭ್ರಷ್ಠರಾಗಿದ್ದಾರೆ.
13 : ಅವರು ಗಿರಿಶಿಖರಗಳ ಮೇಲೆ ಬಲಿಯನರ್ಪಿಸುತ್ತಾರೆ. ಬೆಟ್ಟಗುಡ್ಡಗಳ ಮೇಲೆ ಧೂಪ ಹಾಕುತ್ತಾರೆ. ದಟ್ಟ ನೆರಳಿನ ಅಲ್ಲೋನ್, ಲಿಬ್ನೆ, ಏಲಾ ವೃಕ್ಷಗಳ ಅಡಿಯಲ್ಲಿ ಇಂತಹುದನ್ನೆಲ್ಲ ಮಾಡುತ್ತಾರೆ. ಹೀಗಿರಲು ನಿಮ್ಮ ಪುತ್ರಿಯರು ಸೂಳೆಯರಾಗುವರು. ನಿಮ್ಮ ಸೊಸೆಗಳು ವ್ಯಭಿಚಾರಿಣಿಗಳಾಗುವರು. ಇದರಲ್ಲಿ ಆಶ್ಚರ್ಯವೇನಿಲ್ಲ.
14 : ಸೂಳೆಯರಾಗಿ ನಡೆಯುವ ಪುತ್ರಿಯರನ್ನು ನಾನು ದಂಡಿಸುವುದಿಲ್ಲ, ವ್ಯಭಿಚಾರ ಮಾಡುವ ಸೊಸೆಗಳನ್ನು ನಾನು ಶಿಕ್ಷಿಸುವುದಿಲ್ಲ. ಕಾರಣ, ನೀವೇ ಸೂಳೆಯರನ್ನು ಸೇರಿಕೊಂಡು ಅಡ್ಡದಾರಿ ಹಿಡಿಯುತ್ತೀರಿ. ದೇವದಾಸಿಯರೊಂದಿಗೆ ಸೇರಿ ಬಲಿಯನ್ನು ಅರ್ಪಿಸುತ್ತೀರಿ. ‘ಮತಿಹೀನರು ಗತಿಸಿಹೋಗುವರು’ ಎಂಬ ಹೇಳಿಕೆ ಖಂಡಿತವಾಗಿ ನಿಮಗೆ ಅನ್ವಯಿಸುತ್ತದೆ.
15 : “ಓ ಇಸ್ರಯೇಲ್ ನೀನು ವೇಶ್ಯೆಯಾಗಿ ನಡೆದರೂ ಜುದೇಯ ನಾಡು ಆ ದೋಷಕ್ಕೆ ಒಳಗಾಗದಿರಲಿ. ಯೆಹೂದ್ಯರೇ, ಗಿಲ್ಗಾಲಿಗೆ ಬರಬೇಡಿ. ಬೇತಾವೆನಿಗೆ ಯಾತ್ರೆಹೋಗಬೇಡಿ. ‘ಜೀವಸ್ವರೂಪನಾದ ಸರ್ವೇಶ್ವರನಾಣೆ’ ಎಂದು ಪ್ರಮಾಣ ಮಾಡಬೇಡಿ.
16 : ಇಸ್ರಯೇಲಿನವರು ಹತೋಟಿಗೆ ಬಾರದ ಹೋರಿಯಂತೆ ಮೊಂಡಾಗಿದ್ದಾರೆ. ಸರ್ವೇಶ್ವರ ಅವರನ್ನು ಈಗ ವಿಶಾಲವಾದ ಹುಲ್ಲುಗಾವಲುಗಳಲ್ಲಿ ಕುರಿಗಳಂತೆ ಮೇಯಿಸಲು ಸಾಧ್ಯವೇ?
17 : ಎಫ್ರಯಿಮ್ ವಿಗ್ರಹಗಳ ಪ್ರಭಾವಕ್ಕೆ ಒಳಗಾಗಿದೆ. ಅದನ್ನು ಅದರಷ್ಟಕ್ಕೆ ಬಿಟ್ಟುಬಿಡಿ.
18 : ಅವರು ಮದ್ಯಪಾನವನ್ನು ಮಾಡಿದ ನಂತರ ವ್ಯಭಿಚಾರಕ್ಕೆ ಇಳಿಯುತ್ತಾರೆ. ಮಾನಕ್ಕಿಂತ ಅವಮಾನವೇ ಅವರಿಗೆ ಅತಿ ಪ್ರಿಯ.
19 : ಬಿರುಗಾಳಿ ಅವರನ್ನು ಬಡಿದೆತ್ತಿಕೊಂಡು ಹೋಗುವುದು. ಅವರು ವಿಗ್ರಹಗಳಿಗೆ ಅರ್ಪಿಸುತ್ತಿದ್ದ ಬಲಿಗಳಿಗಾಗಿ ನಾಚಿಕೆಪಡುವರು.