Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಹೊಶೇಯನ ಗ್ರಂಥ (ಹನ್ನೆರಡು ಮಂದಿ ಕಿರಿಯ ಪ್ರವಾದಿಗಳು )


1 : ಪೂರ್ವದಲ್ಲಿ ಎಫ್ರಯಿಮ್ ಮಾತನಾಡಿದಾಗ ಎಲ್ಲರೂ ನಡುಗುತ್ತಿದ್ದರು. ಅದು ಇಸ್ರಯೇಲಿನಲ್ಲಿ ಅಷ್ಟು ಉನ್ನತ ಸ್ಥಿತಿಗೆ ಏರಿತ್ತು. ಆದರೆ ಅದು ಬಾಳ್ ದೇವತೆಗೆ ಆರಾಧನೆ ಸಲ್ಲಿಸಿದ್ದರಿಂದ ಪಾಪಕಟ್ಟಿಕೊಂಡು ಪತನವಾಯಿತು.
2 : ಈಗ ಎಫ್ರಯಿಮರ ಪಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವರು ಬೆಳ್ಳಿಬಂಗಾರವನ್ನು ಕರಗಿಸಿ ಇಷ್ಟಬಂದಂತೆ ಬೊಂಬೆಗಳನ್ನು ಮಾಡಿಕೊಂಡಿದ್ದಾರೆ. ಅವೆಲ್ಲವು ಶಿಲ್ಪಿಗಳ ಕೈ ಕೆಲಸವೇ ಹೊರತು ಮತ್ತೇನು ಅಲ್ಲ. ಇಂಥ ವಿಗ್ರಹಗಳನ್ನು ಪೂಜೆಗಾಗಿ ಪ್ರತಿಷ್ಠಾಪನೆ ಮಾಡುತ್ತಾರೆ. ಬುದ್ಧಿಜೀವಿಗಳಾದ ಇವರು ಬಸವನಿಗೆ ಮುದ್ದಿಡುತ್ತಾರೆ.
3 : ಇವರು ಪ್ರಾತಃಕಾಲದ ಮೋಡದಂತೆ ಮಾಯವಾಗುತ್ತಾರೆ. ಇಬ್ಬನಿಯಂತೆ ಕರಗಿ ಹೋಗುತ್ತಾರೆ. ಬಿರುಗಾಳಿಗೆ ಸಿಕ್ಕಿದ ಹೊಟ್ಟಿನಂತೆ ತೂರಿಹೋಗುತ್ತಾರೆ; ಗವಾಕ್ಷಿಯ ಹೊಗೆಯಂತೆ ಗಾಳಿಯಲ್ಲಿ ತೇಲಿಹೋಗುತ್ತಾರೆ.
4 : ಸರ್ವೇಶ್ವರ ಇಂತೆನ್ನುತ್ತಾರೆ: “ಈಜಿಪ್ಟಿನಿಂದ ನಿನ್ನನ್ನು ಬಿಡಿಸಿಕೊಂಡು ಬಂದಾಗಲಿಂದ ನಾನೇ ನಿನ್ನ ಸರ್ವೇಶ್ವರನಾದ ದೇವರು. ನಾನಲ್ಲದೆ ಬೇರೆ ದೇವರುಗಳು ನಿನಗಿಲ್ಲ. ನಾನಲ್ಲದೆ ನಿನಗೆ ಬೇರೆ ಉದ್ಧಾರಕರಿಲ್ಲ.
5 : ಬೆಂಗಾಡಿನಲ್ಲಿ, ಘೋರ ಮರುಭೂಮಿಯಲ್ಲಿ ನಿನ್ನನ್ನು ಕಾಪಾಡಿದವನು ನಾನೇ.
6 : ಅನ್ನ ಆಹಾರ ಯಥೇಚ್ಛವಾಗಿ ಸಿಕ್ಕಿದಾಗ ನಿನ್ನವರು ತಿಂದು ತೃಪ್ತರಾದರು; ಅಹಂಭಾವ ಅವರ ನೆತ್ತಿಗೇರಿತು. ಆಗ ಅವರು ನನ್ನನ್ನು ಮರೆತುಬಿಟ್ಟರು.
7 : ಆದುದರಿಂದ ನಾನು ಅವರಿಗೆ ಸಿಂಹದಂತಿರುವೆನು. ದಾರಿಯ ಮಗ್ಗುಲಲ್ಲಿ ಹೊಂಚು ಹಾಕುವ ಚಿರತೆಯಂತಿರುವೆನು.
8 : ಮರಿಗಳನ್ನು ಕಳೆದುಕೊಂಡ ಕರಡಿಯಂತೆ ಅವರ ಮೇಲೆ ಬೀಳುವೆನು. ಅವರ ಎದೆಯನ್ನು ಬಗಿದುಹಾಕುವೆನು. ಮೃಗರಾಜರಂತೆ ಅವರನ್ನು ನುಂಗಿಬಿಡುವೆನು. ಕಾಡುಮೃಗದಂತೆ ಅವರನ್ನು ಸೀಳಿಬಿಡುವೆನು.
9 : “ಇಸ್ರಯೇಲ್, ನಿನ್ನನ್ನು ನಾಶಮಾಡುವೆನು, ನಿನಗೆ ನೆರವಾಗಬಲ್ಲವರು ಯಾರು?
10 : ‘ನನಗೆ ರಾಜನು ಬೇಕು, ರಾಜಾಧಿಕಾರಿಗಳು ಬೇಕು’ ಎಂದು ಹೇಳಿಕೊಂಡಿದ್ದಿಯಲ್ಲಾ; ನಿನ್ನನ್ನು ರಕ್ಷಿಸಬಲ್ಲ ರಾಜನೆಲ್ಲಿ? ನಿನ್ನನ್ನು ಕಾಪಾಡಬಲ್ಲ ನಗರಪಾಲಕರೆಲ್ಲಿ?
11 : ಇಷ್ಟವಿಲ್ಲದೆ ಸಿಟ್ಟಿನಿಂದ ನಿನಗೆ ರಾಜನನ್ನು ಕೊಟ್ಟೆ. ಈಗ ಕಡುಕೋಪದಿಂದ ಆ ರಾಜರನ್ನು ತೆಗೆದುಬಿಡುತ್ತೇನೆ.
12 : “ಎಫ್ರಯಿಮಿನ ಅಕ್ರಮಗಳೆಲ್ಲ ದಾಖಲಾಗಿವೆ. ಅದರ ಪಾಪಕೃತ್ಯಗಳನ್ನೆಲ್ಲ ಒಂದೂ ಬಿಡದೆ ಲೆಕ್ಕಹಾಕಿಡಲಾಗಿದೆ.
13 : ಎಫ್ರಯಿಮಿಗೆ ಪ್ರಸವವೇದನೆ ಬಂದಿದೆ. ಅಷ್ಟೇ ಅಲ್ಲ. ಅದೊಂದು ಮಂಕು ಮಗುವಿನಂತಿದೆ. ಹುಟ್ಟಿ, ಹೊರಗೆ ಬರಬಹುದಾದರೂ, ಅದು ಬಾರದೆ ಇದೆ.
14 : ಅದನ್ನು ಪಾತಾಳದ ಹಿಡಿತದಿಂದ ನಾನು ಬಿಡಿಸಲಾರೆ. ಮರಣದ ಬಾಧೆಯಿಂದ ಅವರನ್ನು ರಕ್ಷಿಸಲಾರೆ. ‘ಮರಣವೇ, ನಿನ್ನ ಮಾರಕ ವ್ಯಾಧಿಗಳಿಂದ ಅವರನ್ನು ಬಾಧಿಸು. ಪಾತಾಳವೇ, ಅವರನ್ನು ಕಬಳಿಸಿ ನಾಶಗೊಳಿಸು. ಕರುಣೆ ನನ್ನಿಂದ ದೂರವಾಗಿದೆ.
15 : ಎಫ್ರಯಿಮ್ ಕಳೆಗಳ ನಡುವೆ ಸೊಂಪಾಗಿ ಬೆಳೆದ ಜೊಂಡಿನಂತಿದೆ. ಆದರೆ ಸರ್ವೇಶ್ವರ ಮರುಭೂಮಿಯಿಂದ ಮೂಡಣಗಾಳಿ ಬೀಸುವಂತೆ ಮಾಡುವರು. ಅದರ ಬುಗ್ಗೆ ಬತ್ತಿ ಹೋಗುವುದು. ಅದರ ಒರತೆ ಒಣಗಿಹೋಗುವುದು. ಅದರ ಸಿರಿ ಸಂಪತ್ತಿನ ನಿಧಿಯನ್ನು ಶತ್ರುಗಳು ಸೂರೆಮಾಡುವರು.
16 : ಸಮಾರ್ಯವು ತನ್ನ ದೇವರಿಗೆ ವಿರುದ್ಧ ದಂಗೆ ಎದ್ದಿದೆ. ಅದಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸಲೇಬೇಕು. ಅದರ ಜನರು ಖಡ್ಗದಿಂದ ಹತರಾಗುವರು; ಶತ್ರುಗಳು ಅಲ್ಲಿನ ಮಕ್ಕಳನ್ನು ಬಂಡೆಗೆ ಅಪ್ಪಳಿಸುವರು. ಗರ್ಭಿಣಿಯರ ಹೊಟ್ಟೆಯನ್ನು ಸೀಳಿಹಾಕುವರು.”

· © 2017 kannadacatholicbible.org Privacy Policy