Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಜೆಕಿಯೇಲ


1 : ಅದು ಆರನೆಯ ವರ್ಷದ ಆರನೆಯ ತಿಂಗಳಿನ ಐದನೆಯ ದಿನ. ನಾನೂ ಯಹೂದದ ಹಿರಿಯರೂ ನನ್ನ ಮನೆಯೊಳಗೆ ಎದುರುಬದುರಾಗಿ ಕುಳಿತಿದ್ದೆವು. ಸರ್ವೇಶ್ವರನಾದ ದೇವರ ಹಸ್ತಸ್ಪರ್ಶದಿಂದ ನಾನು ಪರವಶನಾದೆ.
2 : ಇಗೋ, ನಾನು ನೋಡುತ್ತಿದ್ದಂತೆ ಬೆಂಕಿ ಉರಿಯುತ್ತದೋ ಎಂಬಂತೆ ಮನುಷ್ಯಾಕೃತಿಯೊಂದು ನನಗೆ ಕಾಣಿಸಿತು; ಸೊಂಟದ ಹಾಗೆ ತೋರುವ ಅದರ ಮಧ್ಯಭಾಗದಿಂದ ಕೆಳಗಡೆ ಬೆಂಕಿ ಉರಿಯುತ್ತಿತ್ತು; ಅದರ ಮಧ್ಯಭಾಗದಿಂದ ಮೇಲ್ಗಡೆ ಸುವರ್ಣವು ಥಳಥಳಿಸುತ್ತದೋ ಎಂಬಂತೆ ಅದ್ಭುತ ಕಾಂತಿಯೊಂದು ಹೊಳೆಯಿತು.
3 : ಆಗ ಆ ಮನುಷ್ಯಾಕೃತಿ ಮಾನವನ ಹಸ್ತದಂಥ ಹಸ್ತವನ್ನು ಚಾಚಿ ನನ್ನ ಚಂಡಿಕೆಯನ್ನು ಹಿಡಿಯಿತು. ದೇವರಾತ್ಮ ನನ್ನನ್ನು ಎತ್ತಿಕೊಂಡು ಭೂಮ್ಯಾಕಾಶಗಳ ನಡುವೆ ಜೆರುಸಲೇಮಿನವರೆಗೆ ಒಯ್ದಿತು. ಅಲ್ಲಿನ ದೇವಾಲಯದ ಒಳಗಣ ಪ್ರಾಕಾರದ ಉತ್ತರ ಬಾಗಿಲ ಮುಂದೆ, ದೇವರನ್ನು ರೋಷಗೊಳಿಸುವ ವಿಗ್ರಹವು ಮೊದಲಿದ್ದ ಸ್ಥಳದಲ್ಲಿ ನಿಲ್ಲಿಸಿದ ಹಾಗೆ ಆ ದೇವದರ್ಶನದಲ್ಲಿ ನನಗೆ ಕಂಡು ಬಂದಿತು.
4 : ಆಗ ಇಗೋ, ಇಸ್ರಯೇಲಿನ ದೇವರ ಮಹಿಮಾದ್ಭುತ ದರ್ಶನವು ಬಯಲು ಸೀಮೆಯಲ್ಲಿ ಆದಂತೆ ಇಲ್ಲಿಯೂ ನನಗಾಯಿತು.
5 : ಆಗ ಅವರು ನನಗೆ, “ನರಪುತ್ರನೇ, ಉತ್ತರಕ್ಕೆ ಕಣ್ಣೆತ್ತಿ ನೋಡು,” ಎಂದು ಹೇಳಿದರು; ಅಂತೆಯೇ ನಾನು ಉತ್ತರಕ್ಕೆ ಕಣ್ಣೆತ್ತಿ ನೋಡಿದೆ. ಇಗೋ ದೇವರನ್ನು ರೋಷಗೊಳಿಸುವ ಅದೇ ವಿಗ್ರಹವು ಬಲಿಪೀಠದ ಬಾಗಿಲ ಉತ್ತರದಲ್ಲಿ ಪ್ರವೇಶದ್ವಾರದ ಮುಂದೆ ನಿಂತಿತ್ತು.
6 : ಆಗ ಅವರು ನನಗೆ, “ನರಪುತ್ರನೇ, ಇವರು ಮಾಡುವುದನ್ನು ನೋಡಿದೆಯಾ? ಇಸ್ರಯೇಲ್ ವಂಶದವರು ಇಲ್ಲಿ ನಡೆಸುವ ಅಧಿಕ ದುರಾಚಾರಗಳನ್ನೆಲ್ಲ ಕಂಡೆಯಾ? ಇದರಿಂದ ನಾನು ನನ್ನ ಪವಿತ್ರಾಲಯವನ್ನು ಬಿಟ್ಟು ದೂರ ಹೋಗಬೇಕಾಯಿತು. ಬಾ, ಇವುಗಳಿಗಿಂತ ಇನ್ನು ಹೆಚ್ಚಾದ ದುರಾಚಾರಗಳನ್ನು ನೋಡುವೆ,” ಎಂದು ಹೇಳಿದರು.
7 : ಆಮೇಲೆ ದೇವರು ನನ್ನನ್ನು ಪ್ರಾಕಾರದ ಬಾಗಿಲಿಗೆ ಬರಮಾಡಿದರು; ಇಗೋ, ಆ ಗೋಡೆಯಲ್ಲಿ ಒಂದು ರಂಧ್ರವು ನನಗೆ ಕಾಣಿಸಿತು.
8 : ಆಗ ಅವರು ನನಗೆ, “ನರಪುತ್ರನೇ, ಗೋಡೆಯನ್ನು ತೋಡು,” ಎಂದು ಹೇಳಿದರು. ನಾನು ಗೋಡೆಯನ್ನು ತೋಡಿದೆ. ಆಗ ಇಗೋ, ಒಂದು ಬಾಗಿಲು ಕಾಣಿಸಿತು.
9 : ದೇವರು ನನಗೆ, “ನೀನು ಒಳಹೊಕ್ಕು ಜನರು ಇಲ್ಲಿ ನಡೆಸುವ ಅಸಹ್ಯ ದುಷ್ಕಾರ್ಯಗಳನ್ನು ನೋಡು,” ಎಂದು ಹೇಳಿದರು. ನಾನು ಹೊಕ್ಕು ನೋಡಿದೆ;
10 : ಅಕಟಾ, ಎಲ್ಲಾ ಜಾತಿಯ ಕ್ರಿಮಿಕೀಟಗಳು, ಅಸಹ್ಯ ಮೃಗಗಳು ಹಾಗು ಇಸ್ರಯೇಲ್ ವಂಶದವರು ಪೂಜಿಸುವ ಸಕಲ ಮೂರ್ತಿಗಳು ಆ ಗೋಡೆಯ ಸುತ್ತಲೂ ಚಿತ್ರಿತವಾಗಿದ್ದವು.
11 : ಇಸ್ರಯೇಲ್ ವಂಶದ ಎಪ್ಪತ್ತು ಮಂದಿ ಹಿರಿಯರೂ ಅವರ ಮಧ್ಯದಲ್ಲಿ ಶಾಫಾನನ ಮಗ ಯಾಜನ್ಯನೂ ತಮ್ಮ ತಮ್ಮ ಕೈಗಳಲ್ಲಿ ಧೂಪಾರತಿಗಳನ್ನು ಹಿಡಿದುಕೊಂಡು ಆ ಚಿತ್ರಗಳ ಮುಂದೆ ನಿಂತಿದ್ದರು; ಧೂಪದ ಸುವಾಸನೆಯ ಧೂಮವು ಮೇಘವಾಗಿ ಏರುತ್ತಿತ್ತು.
12 : ಆಗ ದೇವರು ನನಗೆ, “ನರಪುತ್ರನೇ, ಇಸ್ರಯೇಲ್ ವಂಶದ ಹಿರಿಯರೆಲ್ಲರು ನಾನಾ ರೂಪಗಳಿಂದ ಚಿತ್ರಿತವಾದ ತಮ್ಮ ತಮ್ಮ ಕೊಠಡಿಗಳೊಳಗೆ, ಕತ್ತಲೆಯಲ್ಲಿ ನಡೆಸುವ ಕೆಲಸವನ್ನು ನೋಡಿದೆಯಾ? ‘ಸರ್ವೇಶ್ವರ ನಮ್ಮನ್ನು ನೋಡನು, ಸರ್ವೇಶ್ವರ ನಾಡನ್ನು ತೊರೆದುಬಿಟ್ಟಿದ್ದಾನೆ,’ ಎಂದು ಮಾತಾಡಿಕೊಳ್ಳುತ್ತಾರಷ್ಟೆ,” ಎಂಬುದಾಗಿ ಹೇಳಿದರು.
13 : ಆಮೇಲೆ ದೇವರು ನನಗೆ, “ಇವುಗಳಿಗಿಂತ ಇನ್ನು ಹೆಚ್ಚಾದ ದುರಾಚಾರಗಳನ್ನು ನೋಡುವೆ,” ಎಂದು ಹೇಳಿ
14 : ನನ್ನನ್ನು ಸರ್ವೇಶ್ವರನ ಆಲಯದ ಉತ್ತರ ಬಾಗಿಲ ಮುಂದಕ್ಕೆ ಕರೆತಂದರು; ಇಗೋ, ಅಲ್ಲಿ ಹೆಂಗಸರು ‘ತಮ್ಮೂಜ್’ ದೇವತೆಗಾಗಿ ಅಳುತ್ತಾ ಕುಳಿತಿದ್ದರು.
15 : ಇದಾದ ಮೇಲೆ ದೇವರು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ? ಇವುಗಳಿಗಿಂತ ಮತ್ತೂ ಹೆಚ್ಚಾದ ದುರಾಚಾರಗಳನ್ನು ನೋಡುವೆ,” ಎಂದು ಹೇಳಿ
16 : ಸರ್ವೇಶ್ವರನ ಆಲಯದ ಒಳಗಣ ಪ್ರಾಕಾರದೊಳಕ್ಕೆ ನನ್ನನ್ನು ಕರೆದುತಂದರು; ಇಗೋ, ಆ ಆಲಯದ ಬಾಗಿಲ ಮುಂದೆ ಮಂಟಪಕ್ಕೂ ಬಲಿಪೀಠಕ್ಕೂ ನಡುವೆ ಸುಮಾರು ಇಪ್ಪತ್ತೈದು ಜನರು ಸರ್ವೇಶ್ವರನ ಆಲಯಕ್ಕೆ ಬೆನ್ನುಮಾಡಿ ಪೂರ್ವದ ಕಡೆಗೆ ಮುಖ ಮಾಡಿ ಉದಯಕಾಲದ ಸೂರ್ಯನನ್ನು ಪೂಜಿಸುತ್ತಿದ್ದರು.
17 : ಆಗ ದೇವರು ನನಗೆ, “ನರಪುತ್ರನೇ, ನೋಡಿದೆಯಾ? ಯೆಹೂದವಂಶದವರು ತಾವು ಇಲ್ಲಿ ನಡೆಸುವ ಅಸಹ್ಯಕಾರ್ಯಗಳು ಅಲ್ಪವೆಂದು ಭಾವಿಸಿದ್ದಾರೋ? ನಾಡನ್ನು ಹಿಂಸಾಕೃತ್ಯಗಳಿಂದ ತುಂಬಿಸಿದ್ದಲ್ಲದೆ ನನ್ನನ್ನು ಕೆಣಕಬೇಕೆಂದೇ ಮತ್ತೆ ಯತ್ನಿಸುತ್ತಿದ್ದಾರೆ; ನೋಡು, ಪತ್ರೆಯನ್ನು ಮೂಗಿಗೆ ಒತ್ತಿಕೊಳ್ಳುತ್ತಾರೆ.
18 : ಆದಕಾರಣ ನಾನೂ ಕೋಪೋದ್ರೇಕದಿಂದ ವರ್ತಿಸುವೆನು. ಅವರನ್ನು ಕಟಾಕ್ಷಿಸೆನು, ಉಳಿಸೆನು; ಅವರು ನನ್ನ ಕಿವಿಯಲ್ಲಿ ಎಷ್ಟು ಗಟ್ಟಿಯಾಗಿ ಕೂಗಿಕೊಂಡರೂ ನಾನು ಆಲಿಸೆನು.”

· © 2017 kannadacatholicbible.org Privacy Policy