Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಜೆಕಿಯೇಲ


1 : ಇದಲ್ಲದೆ ಸರ್ವೇಶ್ವರ ಅನುಗ್ರಹಿಸಿದ ಈ ವಾಣಿ ನನಗೆ ಕೇಳಿಸಿತು:
2 : “ನರಪುತ್ರನೇ, ಸರ್ವೇಶ್ವರನಾದ ದೇವರು ಇಸ್ರಯೇಲ್ ನಾಡಿಗೆ ಹೀಗೆ ನುಡಿಯುತ್ತಾರೆ: ‘ಪ್ರಳಯ, ಪೂರ್ಣ ಪ್ರಳಯ ನಾಡಿನ ಚತುರ್ದಿಕ್ಕಿನಲ್ಲೂ ಸಂಭವಿಸಿದೆ.’
3 : “ಈಗಲೇ ನಿನಗೆ ಪ್ರಳಯ ಬಂದು ಬಿಟ್ಟಿತು; ನಾನು ನನ್ನ ಕೋಪವನ್ನು ನಿನ್ನ ಮೇಲೆ ಬರಮಾಡಿ, ನಿನ್ನ ನಡತೆಗೆ ತಕ್ಕಂತೆ ನ್ಯಾಯ ತೀರಿಸಿ, ನಿನ್ನ ಸಮಸ್ತ ಅಸಹ್ಯಕಾರ್ಯಗಳ ಫಲವನ್ನು ನಿನಗೆ ಉಣ್ಣಿಸುವೆನು.
4 : ನಿನ್ನನ್ನು ಕಟಾಕ್ಷಿಸೆನು, ಉಳಿಸೆನು; ನಿನ್ನ ದುರ್ಮಾರ್ಗದ ಫಲವನ್ನು ನಿನಗೆ ತಿನ್ನಿಸುವೆನು; ನಿನ್ನ ಅಸಹ್ಯ ಕಾರ್ಯಗಳು ನಿನ್ನ ಅನುಭವಕ್ಕೆ ಬರುವುವು; ಆಗ ನಾನೇ ಸರ್ವೇಶ್ವರ ಎಂದು ನಿನಗೆ ಗೊತ್ತಾಗುವುದು.”
5 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಅಯ್ಯೋ, ಕೇಡು, ಎಂದೂ ಕಾಣದ ಕೇಡು, ಇಗೋ ಬಂದಿತು;
6 : ಪ್ರಳಯ ಬಂದಿತು, ಪೂರ್ಣಪ್ರಳಯ ಬಂದಿತು, ನಿನ್ನನ್ನು ಚಚ್ಚುವುದಕ್ಕೆ ಚಚ್ಚರಗೊಂಡಿದೆ, ಇಗೋ ಬಂದೇ ಬಂತು;
7 : ದೇಶನಿವಾಸಿಯೇ, ನಿನ್ನ ಗತಿ ಮುಗಿಯಿತು, ಸಮಯ ಬಂದಿತು, ದಿನ ಸಮೀಪಿಸಿತು; ಬೆಟ್ಟಗಳ ಮೇಲೆ ಕೇಳಿಸುವ ಧ್ವನಿ ಉತ್ಸಾಹಧ್ವನಿಯಲ್ಲ, ಅದು ಬರೀ ಗೋಳೇ!
8 : “ಇನ್ನು ಸ್ವಲ್ಪಕಾಲದೊಳಗೆ ನಾನು ನಿನ್ನ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸುವೆನು, ನನ್ನ ಕೋಪವನ್ನು ತೀರಿಸಿಕೊಳ್ಳುವೆನು; ನಿನ್ನ ನಡತೆಗೆ ತಕ್ಕ ದಂಡನೆಯನ್ನು ವಿಧಿಸಿ, ನಿನ್ನ ಅಸಹ್ಯ ಕಾರ್ಯಗಳ ಫಲವನ್ನೆಲ್ಲಾ ನಿನಗೆ ತಿನ್ನಿಸುವೆನು.
9 : ನಿನ್ನನ್ನು ಕಟಾಕ್ಷಿಸುವುದಿಲ್ಲ, ಉಳಿಸುವುದಿಲ್ಲ, ನಿನ್ನ ದುರ್ಮಾರ್ಗಗಳಿಗೆ ತಕ್ಕ ಗತಿಯನ್ನು ಬರಮಾಡುವೆನು. ಆಗ ನಿನ್ನ ಅಸಹ್ಯಕಾರ್ಯಗಳು ನಿನ್ನ ಅನುಭವಕ್ಕೆ ಬರುವುವು; ಸರ್ವೇಶ್ವರನಾದ ನಾನು ದಂಡಿಸುವವನು ಎಂಬುದು ನಿನಗೆ ಚೆನ್ನಾಗಿ ಗೊತ್ತಾಗುವುದು.
10 : “ಇಗೋ, ದಂಡನೆಯ ದಿನ ಬಂದೇ ಬಿಟ್ಟಿತು; ನಿನಗೆ ದುರ್ಗತಿ ಅಂಕುರಿಸಿದೆ, ಕೋಲು ಹೂಬಿಟ್ಟಿದೆ, ಹೆಮ್ಮೆ ಚಿಗುರಿದೆ
11 : ಹಿಂಸೆ ಬೆಳೆದು ಬೆಳೆದು ಕೆಡುಕಿನ ಕೋಲಾಗಿದೆ; ನಿನ್ನವರಲ್ಲಿ ಯಾರೂ ಉಳಿಯರು. ಆ ಜನಸಮೂಹದಲ್ಲೂ ಅವರ ಆಸ್ತಿಯಲ್ಲೂ ಶೇಷವೇನೂ ಇರದು; ಅವರಲ್ಲಿ ಯಾವ ಶ್ರೇಷ್ಠತೆಯೂ ನಿಲ್ಲದು.
12 : “ಸಮಯ ಬಂದಿದೆ, ದಿನ ಹತ್ತಿರವಾಗಿದೆ; ಕೊಂಡುಕೊಳ್ಳುವವನು ಹರ್ಷಿಸದಿರಲಿ, ಮಾರುವವನು ದುಃಖಿಸದಿರಲಿ; ರೋಷಾಗ್ನಿ ಆ ಸಮೂಹದವರೆಲ್ಲರ ಮೇಲೆ ಹತ್ತಿದೆ.
13 : ಮಾರಿದವನು ಎಷ್ಟು ವರ್ಷ ಬದುಕಿದರೂ ಮಾರಿದ ಸೊತ್ತು ಅವನ ವಶಕ್ಕೆ ತಿರುಗಿಬಾರದು; ಉಂಟಾದ ದಿವ್ಯದರ್ಶನ ಸಮಾಜದವರಿಗೆಲ್ಲಾ ಸಂಬಂಧಿಸಿದೆ, ಯಾರೂ ಹಿಂದಿರುಗರು, ಯಾರೂ ತಮ್ಮ ಅಧರ್ಮದಿಂದ ತಮ್ಮ ಜೀವವನ್ನು ಉಳಿಸಿಕೊಳ್ಳರು;
14 : ಅವರು ಕೊಂಬನ್ನೂದಿ ಸರ್ವಸನ್ನಾಹಮಾಡಿದರೂ ಯಾರು ಯುದ್ಧಕ್ಕೆ ಹೊರಡರು; ನನ್ನ ರೋಷಾಗ್ನಿ ಆ ಸಮಾಜದವರೆಲ್ಲರ ಮೇಲೆ ಹತ್ತಿದೆ.
15 : “ಊರ ಹೊರಗೆ ಖಡ್ಗಕ್ಕೆ, ಊರೊಳಗೆ ವ್ಯಾಧಿ ಕ್ಷಾಮಗಳಿಗೆ ತುತ್ತಾಗುವರು; ಹೊರಗಿರುವವರು ಖಡ್ಗದಿಂದ ಸಾಯುವರು.
16 : ಅವರಲ್ಲಿ ಪಲಾಯನ ಮಾಡಿದವರು ತಪ್ಪಿಸಿಕೊಂಡು, ತಮ್ಮ ಅಧರ್ಮದಲ್ಲಿಯೇ ಇದ್ದು, ಡೊಂಗರಗಳಲ್ಲಿನ ಪಾರಿವಾಳಗಳಂತೆ ಬೆಟ್ಟಗಳ ಮೇಲೆ ಗೋಳಿಡುತ್ತಿರುವರು.
17 : ಎಲ್ಲರ ಕೈಗಳು ಜೋಲು ಬಿದ್ದಿರುವುವು; ಎಲ್ಲರ ಮೊಣಕಾಲುಗಳು ನೀರಿನಂತೆ ಅದರುವುವು.
18 : ಅವರು ಗೋಣಿತಟ್ಟನ್ನು ಸುತ್ತಿಕೊಳ್ಳುವರು, ದಿಗಿಲು ಅವರನ್ನು ಆವರಿಸಿ ಬಿಡುವುದು; ಎಲ್ಲರ ಮುಖದಲ್ಲೂ ನಾಚಿಕೆ ತುಂಬಿರುವುದು, ಎಲ್ಲರು ತಲೆಬೋಳಿಸಿಕೊಂಡು ಇರುವರು.
19 : ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು, ಅವರ ಬಂಗಾರ ಅಶುದ್ಧ ಪದಾರ್ಥದಂತಿರುವುದು; ಸರ್ವೇಶ್ವರ ರೋಷವನ್ನು ತೀರಿಸುವ ದಿನದಲ್ಲಿ ಅವರ ಬೆಳ್ಳಿ ಬಂಗಾರ ಅವರನ್ನು ರಕ್ಷಿಸಲಾರದು; ಅವರ ಇಷ್ಟಾರ್ಥ ನೆರವೇರದು, ಅವರ ಹೊಟ್ಟೆ ತುಂಬದು; ಏಕೆಂದರೆ ಅವರ ಆಸ್ತಿ ಅವರಿಗೆ ಪಾಪಕ್ಕೆ ಕಾರಣವಾಗಿತ್ತು.
20 : “ಅವರ ಆಭರಣಗಳ ಚಂದವು ಅವರಿಗೆ ಗರ್ವಕ್ಕೆ ಆಸ್ಪದವಾಯಿತು. ಇದಲ್ಲದೆ ಹೇಯವೂ ಅಸಹ್ಯವೂ ಆದ ತಮ್ಮ ದೇವತೆಗಳ ಪ್ರತಿಮೆಗಳನ್ನು ಬೆಳ್ಳಿಬಂಗಾರದಿಂದ ರೂಪಿಸುತ್ತಿದ್ದರು.
21 : ಆದಕಾರಣ ಅದನ್ನು ಅವರಿಗೆ ಅಶುದ್ಧ ಪದಾರ್ಥವನ್ನಾಗಿ ಮಾಡುವೆನು. ಅನ್ಯರ ಕೈಯಿಂದ ಕೊಳ್ಳೆಹೊಡೆಯಿಸಿ ಲೋಕಕುಖ್ಯಾತ ದುಷ್ಟರಿಂದ ಸೂರೆಮಾಡಿಸುವೆನು; ಅವರು ಅದನ್ನು ಹೊಲೆಗೊಳಿಸುವರು.
22 : ನಾನು ಅವರ ಕಡೆಯಿಂದ ನನ್ನ ಮುಖವನ್ನು ತಿರುಗಿಸಿಕೊಳ್ಳುವೆನು; ಅವರು ನನ್ನ ಪ್ರಿಯ ಮಂದಿರವನ್ನು ಅಪವಿತ್ರಗೊಳಿಸುವರು. ಕಳ್ಳರು ಅದರಲ್ಲಿ ನುಗ್ಗಿ ಅದನ್ನು ಹೊಲೆಗೆಡಿಸುವರು.
23 : “ಒಂದು ಸರಪಣಿಯನ್ನು ಮಾಡು; ಏಕೆಂದರೆ ನಾಡು ನರಹತ್ಯಪೂರಿತವಾಗಿದೆ. ಪಟ್ಟಣವು ಹಿಂಸಾಕೃತ್ಯಗಳಿಂದ ತುಂಬಿಹೋಗಿದೆ.
24 : ಹೀಗಿರಲು ನಾನು ಅತಿ ದುಷ್ಟಜನಾಂಗಗಳನ್ನು ಬರಮಾಡುವೆನು; ಅವು ನನ್ನ ಜನರ ಮನೆಗಳನ್ನು ವಶಮಾಡಿಕೊಳ್ಳುವುವು; ನಾನು ಬಲಿಷ್ಠರ ಸೊಕ್ಕನ್ನು ಅಡಗಿಸುವೆನು, ಅವರ ಪವಿತ್ರ ಸ್ಥಾನಗಳು ಹೊಲೆಗೆಡುವುವು;
25 : ಸಂಕಟ ಸಂಭವಿಸುವುದು; ಅಲ್ಪ ಸ್ವಲ್ಪ ಸಮಾಧಾನವನ್ನು ಹುಡುಕಿದರೂ ಸಿಕ್ಕದು.
26 : ಉಪದ್ರವದ ಮೇಲೆ ಉಪದ್ರವ, ಸುದ್ದಿಯ ಮೇಲೆ ಸುದ್ದಿ ಹರಡುವುವು; ‘ದಿವ್ಯದರ್ಶನವಾಯಿತೆ’ ಎಂದು ಪ್ರವಾದಿಯನ್ನು ಕೇಳುತ್ತಲೇ ಇರುವರು; ಯಾಜಕರಲ್ಲಿ ಧರ್ಮೋಪದೇಶ ಅಡಗಿಹೋಗುವುದು, ಹಿರಿಯರಲ್ಲಿ ಸಲಹೆ ಸಮಾಲೋಚನೆ ಇಲ್ಲವಾಗುವುದು.
27 : ರಾಜನು ದುಃಖಿಸುವನು, ದಿಗಿಲು ಒಡೆಯನನ್ನು ಮುಸುಕುವುದು, ಜನಸಾಮಾನ್ಯರ ಕೈಗಳು ತತ್ತರಿಸುವುವು; ನಾನು ಅವರ ದುರ್ನಡತೆಗೆ ತಕ್ಕ ಪ್ರತೀಕಾರವನ್ನು ಮಾಡಿ ಅವರ ದುಷ್ಕರ್ಮಗಳಿಗೆ ಸರಿಯಾದ ದಂಡನೆಯನ್ನು ವಿಧಿಸುವೆನು; ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.”

· © 2017 kannadacatholicbible.org Privacy Policy