1 : “ನರಪುತ್ರನೇ, ಹರಿತವಾದ ಖಡ್ಗವನ್ನು ತೆಗೆದುಕೊಂಡು, ಕ್ಷೌರಿಕನ ಕತ್ತಿಯನ್ನಾಗಿ ಉಪಯೋಗಿಸಿ ನಿನ್ನ ತಲೆಯನ್ನೂ ಗಡ್ಡವನ್ನೂ ಬೋಳಿಸಿಬಿಡು; ತಕ್ಕಡಿಯನ್ನು ತಂದು ತೂಗಿ ಆ ಕೂದಲನ್ನು ಸರಿಯಾಗಿ ಮೂರು ಭಾಗ ಮಾಡು.
2 : ಮುತ್ತಿಗೆಯ ದಿನಗಳು ಮುಗಿದ ಕೂಡಲೆ ಕೂದಲಿನ ಒಂದು ಭಾಗವನ್ನು ಪಟ್ಟಣದ ಮಧ್ಯೆ ಬೆಂಕಿಯಲ್ಲಿ ಸುಡು; ಇನ್ನೊಂದು ಭಾಗವನ್ನು ತೆಗೆದುಕೊಂಡು ಪಟ್ಟಣದ ಸುತ್ತಲು ಖಡ್ಗದಿಂದ ಕಡಿ; ಮತ್ತೊಂದು ಭಾಗವನ್ನು ಗಾಳಿಗೆ ತೂರಿಬಿಡು; (ಈ ಪ್ರಕಾರ ನಾನು ನನ್ನ ಜನರ ಹಿಂದೆ ಕತ್ತಿಯನ್ನು ಬೀಸುವೆನು).
3 : ಈ ಕಡೆಯ ಭಾಗದಲ್ಲಿ ಉಳಿಸಿಕೊಂಡ ಕೆಲವು ಕೂದಲನ್ನು ನಿನ್ನ ಮೇಲಂಗಿಯ ಅಂಚಿನಲ್ಲಿ ಕಟ್ಟು;
4 : ಆಮೇಲೆ ಇವುಗಳಲ್ಲಿ ಕೆಲವನ್ನು ಆರಿಸಿ ಬೆಂಕಿಯಲ್ಲಿ ಹಾಕಿ ಸುಡು; ಅವುಗಳಿಂದ ಬೆಂಕಿ ಹೊರಟು ಇಸ್ರಯೇಲ್ ವಂಶವನ್ನೆಲ್ಲಾ ವ್ಯಾಪಿಸುವುದು.”
5 : ಸರ್ವೇಶ್ವರನಾದ ದೇವರು ಹೀಗೆಂದರು: “ನಾನಾ ದೇಶಗಳ ನಡುವೆ, ನಾನಾ ಜನಾಂಗಗಳ ಮಧ್ಯೆ ನಾನು ಸ್ಥಾಪಿಸಿದ ಜೆರುಸಲೇಮ್ ಪಟ್ಟಣ ಈ ಮನೆ.
6 : ಅದು ನನ್ನ ನಿಯಮನಿಷ್ಠೆಗಳಿಗೆ ಒಳಪಡದೆ ಇತರ ಜನಾಂಗಗಳಿಗಿಂತಲೂ ಸುತ್ತಲಿನ ದೇಶಗಳಿಗಿಂತಲೂ ಹೆಚ್ಚು ಅಧರ್ಮವನ್ನು ನಡೆಸಿದೆ; ಅದರ ನಿವಾಸಿಗಳು ನನ್ನ ನಿಯಮಗಳನ್ನು ಅನುಸರಿಸದೆ ನನ್ನ ವಿಧಿಗಳನ್ನು ನಿರಾಕರಿಸಿದ್ದಾರೆ.
7 : ಹೀಗಿರಲು ಸರ್ವೇಶ್ವರ ಸ್ವಾಮಿಯಾದ ನಾನು ಹೇಳುವುದಿದು: ‘ನೀವು ನನ್ನ ನಿಯಮಗಳನ್ನು ಅನುಸರಿಸದೆ, ನನ್ನ ವಿಧಿಗಳನ್ನು ಕೈಗೊಳ್ಳದೆ, ನಿಮ್ಮ ಸುತ್ತಲಿನ ಜನಾಂಗಗಳ ಧರ್ಮವಿಧಿಗಳನ್ನು ಆಚರಿಸಿ, ಆ ಜನಾಂಗಗಳಿಗಿಂತ ಹೆಚ್ಚು ದಂಗೆಕೋರರಾಗಿ ವರ್ತಿಸಿದ್ದೀರಿ.
8 : ಆದುದರಿಂದ ಜೆರುಸಲೇಮೇ, ಇಗೋ, ನಾನೇ ನಿನಗೆ ವಿರುದ್ಧವಾಗಿದ್ದೇನೆ. ಜನಾಂಗಗಳ ಕಣ್ಣೆದುರಿಗೆ ನಿನ್ನ ಜನರನ್ನು ದಂಡಿಸುವೆನು; ಇದು ಸರ್ವೇಶ್ವರನಾದ ನನ್ನ ನುಡಿ.
9 : ನೀನು ಬಹಳ ಅಸಹ್ಯಕೃತ್ಯಗಳಲ್ಲಿ ತೊಡಗಿದ್ದರಿಂದ ನಾನು ಈವರೆಗೂ ಇನ್ನು ಮುಂದಕ್ಕೂ ಮಾಡದಂಥ ದಂಡನೆಯನ್ನು ಈಗ ನಿನಗೆ ಮಾಡುವೆನು.
10 : ನಿನ್ನಲ್ಲಿ ತಂದೆಗಳು ಮಕ್ಕಳನ್ನು, ಮಕ್ಕಳು ತಂದೆಗಳನ್ನು, ತಿನ್ನುವರು; ನಾನು ನಿನ್ನನ್ನು ದಂಡಿಸಿ ನಿನ್ನಲ್ಲಿ ಉಳಿದ ಸಮಸ್ತರನ್ನು ಎಲ್ಲಾ ಕಡೆಯ ಗಾಳಿಗೂ ತೂರುವೆನು.’
11 : “ನನ್ನ ಜೀವದಾಣೆ, ನೀನು ನಿನ್ನ ಹೇರಳವಾದ ಹೇಯ ವಿಗ್ರಹಗಳಿಂದಲೂ ಅಸಹ್ಯ ವಸ್ತುಗಳಿಂದಲೂ ನನ್ನ ಪವಿತ್ರಾಲಯವನ್ನು ಹೊಸಲು ಮಾಡಿದ್ದರಿಂದ ಖಂಡಿತವಾಗಿ ನಾನು ಸಹಿಸೆನು, ಕಟಾಕ್ಷಿಸೆನು, ಕ್ಷಮಿಸೆನು.
12 : ನಿನ್ನಲ್ಲಿನ ಮೂರನೆಯ ಒಂದು ಭಾಗದ ಜನರು ವ್ಯಾಧಿಯಿಂದ ಸಾಯುವರು, ನಿನ್ನ ಮಧ್ಯದಲ್ಲೆ ಕ್ಷಾಮದಿಂದ ನಾಶವಾಗುವರು; ಇನ್ನೊಂದು ಭಾಗದವರು ನಿನ್ನ ಸುತ್ತಲ ಖಡ್ಗದಿಂದ ಹತರಾಗುವರು; ಮತ್ತೊಂದು ಭಾಗದವರನ್ನು ನಾನು ಎಲ್ಲಾ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.
13 : “ಹೀಗೆ ನನ್ನ ಸಿಟ್ಟನ್ನು ತೀರಿಸಿಕೊಳ್ಳುವೆನು, ನನ್ನ ರೋಷವನ್ನು ಅವರ ಮೇಲೆ ಕಾರಿ ಶಾಂತನಾಗುವೆನು; ಆಗ್ರಹದಿಂದ ಮಾತಾಡಿದವನು ಸರ್ವೇಶ್ವರನಾದ ನಾನೇ ಎಂಬುದು ನನ್ನ ಕೋಪವನ್ನು ಅವರ ಮೇಲೆ ಹೊಯ್ದುಬಿಟ್ಟ ಬಳಿಕ ಅವರಿಗೆ ಗೊತ್ತಾಗುವುದು.
14 : ಹಾದು ಹೋಗುವವರೆಲ್ಲರ ಕಣ್ಣೆದುರಿಗೆ ನಾನು ನಿನ್ನನ್ನು ಹಾಳುಮಾಡಿ ಸುತ್ತಲಿನ ಜನಾಂಗಗಳ ನಿಂದೆಗೆ ಗುರಿಮಾಡುವೆನು.
15 : “ನಾನು ಕೋಪದಿಂದ, ರೋಷದಿಂದ ಹಾಗು ತೀವ್ರ ಖಂಡನೆಯಿಂದ ನಿನಗೆ ಮಾಡುವ ದಂಡನೆಗಳು ಸುತ್ತಲಿನ ಜನಾಂಗಗಳ ದೂಷಣೆಗೂ ಪರಿಹಾಸ್ಯಗಳಿಗೂ ಬೆರಗು ಬುದ್ಧಿವಾದಗಳಿಗೂ ಆಸ್ಪದವಾಗುವುವು; ಇದು ಸರ್ವೇಶ್ವರನಾದ ನನ್ನ ನುಡಿ.
16 : ಆಗ ನಾನು ನಿನ್ನನ್ನು ಹಾಳು ಮಾಡಲು ಕ್ಷಾಮವೆಂಬ ವಿನಾಶಕರವಾದ ತೀಕ್ಷ್ಣಬಾಣಗಳನ್ನು ನಿನ್ನ ಮೇಲೆ ಬಿಡುವೆನು; ನಿನ್ನನ್ನು ಬರದಿಂದ ಬಹಳವಾಗಿ ಬಾಧಿಸಿ ನಿನ್ನ ಆಹಾರ ಸರಬರಾಜನ್ನು ನಿಲ್ಲಿಸುವೆನು.
17 : ನಾನು ಕಳುಹಿಸುವ ಕ್ಷಾಮದಿಂದ, ದುಷ್ಟಮೃಗಗಳಿಂದ ನಿನಗೆ ಪುತ್ರಶೋಕ ಪ್ರಾಪ್ತಿಯಾಗುವುದು; ವ್ಯಾಧಿಯೂ ರಕ್ತಪ್ರವಾಹವೂ ನಿನ್ನನ್ನು ಪೀಡಿಸುವುದು; ನಿನ್ನನ್ನು ಖಡ್ಗಕ್ಕೆ ತುತ್ತುಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.”