Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಜೆಕಿಯೇಲ


1 : ಆಮೇಲೆ ಆ ಪುರುಷ ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು: ಇಗೋ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವದಕಡೆಗೆ ಹರಿಯುತ್ತಿತ್ತು. (ದೇವಸ್ಥಾನ ಪೂರ್ವಾಭಿಮುಖವಾಗಿತ್ತು). ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಬಲಿಪೀಠದ ದಕ್ಷಿಣದಲ್ಲಿ ಹರಿಯುತ್ತಿತ್ತು.
2 : ಆಗ ಅವನು ನನ್ನನ್ನು ಉತ್ತರ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಸಿಕೊಂಡು ಪೂರ್ವದ ಹೆಬ್ಬಾಗಿಲಿಗೆ ಕರೆದುತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲಮೆಲ್ಲನೆ ಹರಿಯುವ ನೀರು ಕಾಣಿಸಿತು.
3 : ಆ ಪುರುಷನು ಕೈಯಲ್ಲಿ ಹುರಿಯನ್ನು ಹಿಡಿದುಕೊಂಡು ಪೂರ್ವದಂಡೆಗೆ ಮುಂದುವರಿದು ಐನೂರು ವಿೂಟರ್ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ ಆ ನೀರು ಹೆಜ್ಜೆ ಮುಳುಗುವಷ್ಟಿತ್ತು.
4 : ಅವನು ಪುನಃ ಐನೂರು ವಿೂಟರ್ ಅಳೆದು ದಾಟಿಸುವಾಗ ಆ ನೀರು ಮೊಣಕಾಲಿನವರೆಗೆ ಇತ್ತು. ಅವನು ಮತ್ತೆ ಐನೂರು ವಿೂಟರ್ ಅಳೆದು ನನ್ನನ್ನು ನೀರಿನ ಆಚೆ ದಾಟಿಸುವಾಗ ಆ ನೀರು ಸೊಂಟದವರೆಗೆ ಇತ್ತು.
5 : ಅವನು ಮತ್ತೆ ಅಳೆದು ಐನೂರು ವಿೂಟರ್ ಅಳೆದಾಗ ಅದು ನನ್ನಿಂದ ದಾಟಲಾಗದ ತೊರೆಯಾಗಿತ್ತು; ನೀರು ಏರಿ ಈಜಾಡುವಷ್ಟು ಪ್ರವಾಹವಾಗಿತ್ತು. ದಾಟಲಾಗದ ತೊರೆಯಾಗಿತ್ತು.
6 : ಆಗ ಅವನು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ?” ಎಂದು ಹೇಳಿ ನನ್ನನ್ನು ತೊರೆಯ ದಡಕ್ಕೆ ಹತ್ತಿಸಿ ಹಿಂದಿರುಗಿಸಿದನು.
7 : ನಾನು ಹಿಂದಿರುಗಲು, ಇಗೋ, ತೊರೆಯ ಎರಡು ದಡಗಳಲ್ಲಿಯೂ ಅನೇಕಾನೇಕ ವೃಕ್ಷಗಳು ಕಾಣಿಸಿದವು.
8 : ಆಗ ಅವನು ನನಗೆ ಹೀಗೆ ಹೇಳಿದನು: “ಈ ಪ್ರವಾಹ ಪೂರ್ವಪ್ರಾಂತ್ಯಕ್ಕೆ ಹೊರಟು ಅರಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು; ದೇವಸ್ಥಾನದಿಂದ ಹೊರಟ ಪ್ರವಾಹವು ಲವಣಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು.
9 : ಈ ತೊರೆ ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪು ಗುಂಪಾಗಿ ಚಲಿಸುವ ಸಕಲವಿಧ ಜಲ ಜಂತುಗಳು ಬದುಕಿ ಬಾಳುವುವು; ವಿೂನುಗಳು ತಂಡೋಪ ತಂಡವಾಗಿರುವುವು. ಈ ನೀರು ಸಮುದ್ರಕ್ಕೆ ಬೀಳಲು ಆ ನೀರೂ ಸಿಹಿಯಾಗುವುದು; ಈ ತೊರೆ ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು.
10 : ಆಗ ಆ ಸಮುದ್ರದ ತೀರದಲ್ಲಿ ಬೆಸ್ತರು ನಿಂತಿರುವರು; ಏನ್‍ಗೆದಿಯಿಂದ ಏನ್‍ಎಗ್ಲಯಿಮಿನವರೆಗೆ ದಡವೆಲ್ಲಾ ಬಲೆಹಾಸುವ ಸ್ಥಳವಾಗುವುದು; ಬಗೆಬಗೆಯ ಮೀನುಗಳು ಮಹಾಸಾಗರದ ಮೀನುಗಳಂತೆ ಅವರಿಗೆ ರಾಶಿರಾಶಿಯಾಗಿ ಸಿಕ್ಕುವುವು.
11 : ಆದರೆ ಅದರ ಸುತ್ತಣ ಜವುಗುನೆಲವೂ ಸವುಳುಹೊಂಡಗಳೂ ಸಿಹಿಯಾಗುವುದಿಲ್ಲ, ಅವು ಉಪ್ಪಿನ ಗಣಿಯಾಗುವುವು.
12 : ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟುಬರುವ ಕಾರಣ ಅವು ತಿಂಗಳು ತಿಂಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡುತ್ತಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಅನುಕೂಲಿಸುವುವು.”
13 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ನೀವು ಇಸ್ರಯೇಲಿನ ಹನ್ನೆರಡು ಕುಲಗಳಿಗೆ ನಾಡನ್ನು ಬಾಧ್ಯವಾಗಿ ಹಂಚಿಕೊಡುವಾಗ ಮುಂದಿನ ಮೇರೆಗಳನ್ನು ಅನುಸರಿಸಬೇಕು. ಜೋಸೆಫಿಗೆ ಎರಡು ಪಾಲು ಸೇರಲಿ.
14 : ನಾನು ನಿಮ್ಮ ಪಿತೃಗಳಿಗೆ ಪ್ರಮಾಣವಾಗಿ ವಾಗ್ದಾನಮಾಡಿದ ಈ ನಾಡನ್ನು ನೀವೆಲ್ಲರೂ ಸರಿಸಮಾನವಾಗಿ ಅನುಭವಿಸಿರಿ; ಇದು ನಿಮಗೆ ಸೊತ್ತಾಗಿಯೇ ಇರುವುದು.
15 : “ನಿಮ್ಮ ನಾಡಿನ ಮೇರೆಗಳು ಹೀಗಿರಬೇಕು: ಉತ್ತರದ ಮೇಲೆ ದೊಡ್ಡ ಸಮುದ್ರದಿಂದ ಆರಂಭವಾಗಿ ಚೆದಾದಿನ ದಾರಿಯಲ್ಲಿನ
16 : ಹೆತ್ಲೋನಿನ ಮಾರ್ಗವಾಗಿ ಬಂದು ಹಮಾತ್, ಬೇರೋತ, ದಮಸ್ಕದ ಎಲ್ಲೆಗೂ ಹಮಾತಿನ ಎಲ್ಲೆಗೂ ನಡುವಣ ಸಿಬ್ರಯಿಮ್ ಎಂಬ ಊರುಗಳ ಮೇಲೆ ಹವ್ರಾನಿನ ಸರಹದ್ದಿಗೆ ಹತ್ತಿರವಾದ ಹಾಚೇರ್ ಹತ್ತೀಕೋನಿನ ಬಳಿಯಲ್ಲಿ ಮುಗಿಯಬೇಕು.
17 : ಹೀಗೆ ಉತ್ತರದ ಮೇರೆಯು ಸಮುದ್ರದಿಂದ, ದಮಸ್ಕದ ಸರಹದ್ದಿನಲ್ಲಿರುವ ಹಚರ್ ಐನೋನಿನವರೆಗೆ ಹಬ್ಬುವುದು; ಅದರ ಉತ್ತರದಲ್ಲಿ ಹಮಾತಿನ ಪ್ರಾಂತ್ಯವಿರುವುದು. ಇದು ಉತ್ತರ ಮೇರೆ.
18 : “ಪೂರ್ವದಲ್ಲಿ ಹವ್ರಾನ್, ದಮಸ್ಕ, ಗಿಲ್ಯಾದ್ ಇವುಗಳಿಗೂ ಇಸ್ರಯೇಲ್ ನಾಡಿಗೂ ಮಧ್ಯೆ ಜೋರ್ಡನ್ ಹೊಳೆ ಎಲ್ಲೆಯಾಗಿರುವುದು; ಉತ್ತರದ ಮೇರೆಯಿಂದ ಪೂರ್ವದ ಸಮುದ್ರದವರೆಗೆ ನೀವು ಗುರುತುಹಾಕಿಕೊಳ್ಳಬೇಕು. ಇದು ಪೂರ್ವದಿಕ್ಕಿನ ಮೇರೆ.
19 : “ದಕ್ಷಿಣದ ಮೇರೆ ತಾಮಾರಿನಿಂದ ಹೊರಟು ಮೆರೀಬೋತ್‍ಕಾದೇಶಿನ ಹಳ್ಳದ ಮೇಲೆ, ಈಜಿಪ್ಟಿನ ಮುಂದಿರುವ, ತೊರೆಯ ಮಾರ್ಗವಾಗಿ ದೊಡ್ಡ ಸಮುದ್ರಕ್ಕೆ ಮುಟ್ಟಬೇಕು. ಇದು ದಕ್ಷಿಣದ ಮೇರೆ.
20 : “ಪಶ್ಚಿಮದಲ್ಲಿ ಉತ್ತರದ ಮೇರೆಯಿಂದ ಹಮಾತಿನ ದಾರಿಗೆ ಎದುರಿನ ಕರಾವಳಿಯ ತನಕ ದೊಡ್ಡ ಸಮುದ್ರವು ಎಲ್ಲೆಯಾಗಿರುವುದು. ಇದು ಪಶ್ಚಿಮದ ಮೇರೆ.
21 : “ಈ ನಾಡನ್ನು, ನೀವು ಇಸ್ರಯೇಲಿನ ಕುಲಕುಲಕ್ಕೂ ಹಂಚಿಕೊಳ್ಳಬೇಕು.
22 : ನಿಮಗೂ ನಿಮ್ಮ ಮಧ್ಯೆ ಪ್ರವಾಸಮಾಡುತ್ತಾ ಮಕ್ಕಳನ್ನು ಪಡೆದಿರುವ ವಿದೇಶಿಗಳಿಗೂ ನಾಡನ್ನು ಬಾಧ್ಯವಾಗಿ ಹಂಚಬೇಕು: ಅವರು ಇಸ್ರಯೇಲರ ಮಧ್ಯೆ ನಿಮಗೆ ಸ್ವದೇಶಿಗಳಂತೆಯೇ ಇರತಕ್ಕದ್ದು; ಇಸ್ರಯೇಲಿನ ಕುಲಗಳೊಳಗೆ ನಿಮ್ಮೊಂದಿಗೆ ಅವರಿಗೆ ಸೊತ್ತಿರಲಿ.
23 : ಯಾವ ಕುಲದಲ್ಲಿ ವಿದೇಶಿಯು ನೆಲೆಯಾಗಿರುತ್ತಾನೋ ಅಲ್ಲಿ ಅವನಿಗೆ ಸೊತ್ತನ್ನು ಕೊಡಬೇಕು; ಇದು ಸರ್ವೇಶ್ವರನಾದ ದೇವರ ನುಡಿ.”

· © 2017 kannadacatholicbible.org Privacy Policy