Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಜೆಕಿಯೇಲ


1 : ಆಮೇಲೆ ಆ ಪುರುಷ ನನ್ನನ್ನು ಪರಿಶುದ್ಧ ಸ್ಥಳಕ್ಕೆ ತಂದು ಅದನ್ನು ಅಳೆಯಲು ಅದರ ಎದುರುಬದುರಿನ ನಿಲವುಕಂಬಗಳ ಅಗಲ ದೇವರ ಗುಡಾರದ ಅಗಲದಂತೆ ಮೂರು ಮೂರು ಮೀಟರ್,
2 : ದ್ವಾರದ ಅಗಲ ಐದು ಮೀಟರು ದ್ವಾರದ ಎರಡು ಪಕ್ಕದ ಗೋಡೆಗಳ ಅಗಲ ಎರಡುವರೆ ಎರಡುವರೆ ಮೀಟರ್, ಪರಿಶುದ್ಧ ಸ್ಥಳದ ಉದ್ದ ಇಪ್ಪತ್ತು ಮೀಟರ್, ಅಗಲ ಹತ್ತು ಮೀಟರ್ ಇದ್ದವು.
3 : ಆಮೇಲೆ ಆ ಪುರುಷ ಇನ್ನೂ ಮುಂದಕ್ಕೆ ಹೋಗಿ ಪರಿಶುದ್ಧ ಸ್ಥಳದ ಕೊನೆಯಲ್ಲಿ ಗರ್ಭಗೃಹವನ್ನು ಅಳೆಯಲು ದ್ವಾರದ ಒಂದೊಂದು ನಿಲವುಕಂಬದ ಅಗಲ ಒಂದೊಂದು ಮೀಟರ್, ದ್ವಾರದ ಅಗಲ ಮೂರು ಮೀಟರ್,
4 : ದ್ವಾರದ ಪಕ್ಕದ ಗೋಡೆಗಳ ಅಗಲ ಮೂರುವರೆ ಮೂರುವರೆ ಮೀಟರ್, ಗರ್ಭಗೃಹದ ಉದ್ದ ಹತ್ತು ಮೀಟರ್, ಅಗಲ ಹತ್ತು ಮೀಟರ್ ಇದ್ದವು. ಆಗ ಅವನು ನನಗೆ, “ಇದು ಮಹಾ ಪರಿಶುದ್ಧ ಸ್ಥಳ” ಎಂದು ಹೇಳಿದನು.
5 : ಆಮೇಲೆ ಆ ಪುರುಷ ಅಳೆಯಲು ದೇವಸ್ಥಾನದ ಗೋಡೆಯ ಅಗಲ ಮೂರು ಮೀಟರ್, ದೇವಸ್ಥಾನದ ಸುತ್ತುಮುತ್ತಲು ಎಲ್ಲಕಡೆ ಅದರ ಪಕ್ಕಗಳಿಗೆ ಅಂಟಿಕೊಂಡಿದ್ದ ಕೊಠಡಿಗಳ ಅಗಲ ಎರಡೆರಡು ಮೀಟರ್ ಇದ್ದವು.
6 : ಆ ಕೊಠಡಿಗಳು ಒಂದರ ಮೇಲೊಂದು ಮೂರಂತಸ್ತಾಗಿದ್ದವು. ಒಂದೊಂದು ಅಂತಸ್ತಿನಲ್ಲಿ ಮೂವತ್ತು ಮೂವತ್ತು ಕೊಠಡಿಗಳಿದ್ದವು. ದೇವಸ್ಥಾನದ ಗೋಡೆಯನ್ನು ಮೆಟ್ಟಲು ಮೆಟ್ಟಲಾಗಿ ಕಟ್ಟಲಾಗಿತ್ತು. ಗೋಡೆಯಲ್ಲಿ ತೂತಿಲ್ಲದೆ ಆ ಮೆಟ್ಟಲುಗಳೇ ಸುತ್ತಣ ಕೊಠಡಿಗಳ ತೊಲೆಗಳಿಗೆ ಆಧಾರವಾಗಿದ್ದವು.
7 : ಸುತ್ತಣ ಅಂತಸ್ತುಗಳು ಮೇಲೆ ಮೇಲೆ ಹೋದ ಹಾಗೆಲ್ಲಾ ಆಯಾ ಕೊಠಡಿಗಳ ಅಗಲವು ಹೆಚ್ಚುತ್ತಾ ಆಯಾ ಕೊಠಡಿಗಳ ಅಗಲವು ಹೆಚ್ಚುತ್ತಾ ಬಂದಿತು; ಅವು ದೇವಸ್ಥಾನವನ್ನು ಸುತ್ತಿಕೊಂಡು ಮೇಲೆ ಮೇಲೆ ಹೋದ ಹಾಗೆಲ್ಲಾ ಅದನ್ನು ಬಿಗಿಬಿಗಿಯಾಗಿ ತಬ್ಬಿಕೊಂಡಂತೆ ಇದ್ದವು. ಹೀಗೆ ಮೇಲು ಮೇಲಿನ ಅಂತಸ್ತುಗಳು ದೇವಸ್ಥಾನದ ಕಡೆಗೆ ಅಗಲವಾಗುತ್ತಾ ಬಂದವು; ಕೆಳಗಣ ಅಂತಸ್ತಿನಿಂದ ನಡುವಣ ಅಂತಸ್ತಿನ ಮಾರ್ಗವಾಗಿ ಮೇಲಣ ಅಂತಸ್ತಿಗೆ ಹತ್ತುತ್ತಿದ್ದರು.
8 : ದೇವಸ್ಥಾನದ ಸುತ್ತಮುತ್ತಲು ಒಂದು ಜಗಲಿ ಕಾಣಿಸಿತು. ಅದು ಕೊಠಡಿಗಳಿಗೆ ತಳಹದಿಯಾಗಿ ನೆಲಮಟ್ಟದಿಂದ ಮೂರು ಮೀಟರ್ ಅಳತೇ ಕೋಲಿನಷ್ಟು ಎತ್ತರವಾಗಿತ್ತು.
9 : ಕೊಠಡಿಗಳ ಹೊರಗೋಡೆಯ ದಪ್ಪ ಎರಡುವರೆ ಮೀಟರಿತ್ತು.
10 : ದೇವಸ್ಥಾನಕ್ಕೆ ಅಂಟಿಕೊಂಡ ಆ ಕೊಠಡಿಗಳಿಗೂ ದೀಕ್ಷಿತ ಯಾಜಕರ ಕೋಣೆಗಳಿಗೂ ನಡುವೆ ದೇವಸ್ಥಾನದ ಸುತ್ತು ಮುತ್ತಲೂ ಹತ್ತು ಮೀಟರ್ ಅಂತರವಿತ್ತು
11 : ಆ ಎಲ್ಲ ಕೊಠಡಿಗಳ ಪ್ರವೇಶಕ್ಕೂ ಎರಡೇ ಬಾಗಿಲು, ಉತ್ತರ ದಕ್ಷಿಣಕ್ಕೊಂದೊಂದು. ಅವೆರಡೂ ಜಗಲಿಯ ಕಡೆಗಿದ್ದವು; ಆ ಜಗಲಿ ಎಲ್ಲ ಕಡೆ ಎರಡುವರೆ ಮೀಟರ್ ಅಗಲವಾಗಿತ್ತು.
12 : ಪಶ್ಚಿಮದಲ್ಲಿ ದೀಕ್ಷಿತರ ಪ್ರಾಕಾರದ ಹಿಂದಿನ ಶಾಲೆಯ ಅಗಲ ಮೂವತ್ತೈದು ಮೀಟರ್, ಉದ್ದ ನಲವತ್ತೈದು ಮೀಟರ್, ಅದರ ಗೋಡೆಯ ದಪ್ಪ ಎರಡುವರೆ ಮೀಟರ್.
13 : ಆ ಪುರುಷ ಅಳೆದಾಗ ದೇವಸ್ಥಾನದ ಉದ್ದ ಐವತ್ತು ಮೀಟರ್, ದೀಕ್ಷಿತರ ಪ್ರಾಕಾರ, ಶಾಲೆ ಶಾಲೆಯ ಗೋಡೆಗಳು, ಇವುಗಳ ಒಟ್ಟಗಲ ಐವತ್ತು ಮೀಟರ್.
14 : ಪೂರ್ವದಲ್ಲಿನ ದೇವಸ್ಥಾನ ಮುಖ, ದೀಕ್ಷಿತರ ಪ್ರಾಕಾರ, ಇವುಗಳ ಒಟ್ಟಗಲ ಐವತ್ತು ಮೀಟರ್ ಇದ್ದವು
15 : ಅವನು ದೀಕ್ಷಿತರ ಪ್ರಾಕಾರದ ಹಿಂದಿನ ಶಾಲೆಯನ್ನು ಆ ಪ್ರಾಕಾರದ ಕಡೆಯಲ್ಲಿ ಅಳೆಯಲು ಅದರ ಉದ್ದ ಎರಡು ಪಕ್ಕದ ಗೋಡೆಗಳ ಸಹಿತ ಐವತ್ತು ಮೀಟರಿತ್ತು.
16 : ಗರ್ಭಗೃಹ, ಪ್ರಾಕಾರದಲ್ಲಿನ ದ್ವಾರ ಮಂಟಪಗಳು, ಹೊಸ್ತಿಲುಗಳು, ತೆರೆಯಲಾಗದ ಕಿಟಕಿಗಳು, ಹೊಸ್ತಿಲಿನ ಎದುರಿಗೆ ಮೂರಂತಸ್ತಾಗಿ ಸುತ್ತಲು ಕಟ್ಟಲಾಗಿದ್ದ ಗೋಡೆಯಟ್ಟಗಳು, ಇವುಗಳನ್ನೂ ಅಳೆದನು.
17 : ನೆಲದಿಂದ ಕಿಟಕಿಗಳವರೆಗೂ ದ್ವಾರದ ಮೇಲೂ ಗರ್ಭಗೃಹದ ಮತ್ತು ಈಚಿನ ಗೃಹದ ಗೊಡೆಗೆಲ್ಲಾ ಸುತ್ತಮುತ್ತಲು ಹಲಗೆಗಳನ್ನು ಚೌಕಚೌಕವಾಗಿ ಹೊದಿಸಲಾಗಿತ್ತು. ಕಿಟಕಿಗಳ ಪಕ್ಕಗಳಿಗೂ ಹಲಿಗೆಯ ಹೊದಿಕೆಯಿತ್ತು.
18 : ಆ ಚೌಕಗಳಲ್ಲಿ ಕೆರೂಬಿಗಳೂ ಖರ್ಜೂರ ವೃಕ್ಷಗಳೂ ಚಿತ್ರಿತವಾಗಿದ್ದವು; ಎರಡೆರಡು ಕೆರೂಬಿಗಳ ನಡುವೆ ಒಂದೊಂದು ಖರ್ಜೂರ ವೃಕ್ಷ; ಒಂದೊಂದು ಕೆರೂಬಿಗೆ ಎರಡೆರಡು ಮುಖ;
19 : ಖರ್ಜೂರ ವೃಕ್ಷದ ಒಂದು ಪಕ್ಕವು ಮನುಷ್ಯಮುಖಕ್ಕೆ ಎದುರು, ಇನ್ನೊಂದು ಪಕ್ಕವು ಸಿಂಹಮುಖಕ್ಕೆ ಎದುರು; ದೇವಸ್ಥಾನದ ಒಳ ಭಾಗವೆಲ್ಲಾ ಸುತ್ತಮುತ್ತ ಹೀಗೆ ಚಿತ್ರಮಯವಾಗಿತ್ತು.
20 : ನೆಲದಿಂದ ದಾರವಂದದ ಮೇಲ್ಮಟ್ಟದ ತನಕ ಕೆರೂಬಿಗಳೂ ಖರ್ಜೂರ ವೃಕ್ಷಗಳೂ ಚಿತ್ರಿತವಾಗಿದ್ದವು.
21 : ಪರಿಶುದ್ಧ ಸ್ಥಳದ ಈಚಿನ ಗೋಡೆಯ ಬಾಗಿಲ ಚೌಕಟ್ಟು ಚಚ್ಚೌಕವಾಗಿತ್ತು; ಮಹಾಪರಿಶುದ್ಧ ಸ್ಥಳದ ಈಚಿನ ಗೋಡೆಯ ಚೌಕಟ್ಟು ಹಾಗೆಯೇ ಇತ್ತು.
22 : ಅಲ್ಲಿ ಮರದ ವೇದಿಕೆಯೊಂದಿತ್ತು: ಅದರ ಎತ್ತರ ಒಂದೂವರೆ ಮೀಟರ್, ಉದ್ದ ಒಂದು ಮೀಟರ್; ಅದರ ಮೂಲೆಗಳು, ಪೀಠ ಹಾಗು ಪಕ್ಕೆಗಳು ಮರದ್ದೇ ಆಗಿದ್ದವು. ಆ ಪುರುಷ ನನಗೆ, “ಇದು ಸರ್ವೇಶ್ವರನ ಸಮ್ಮುಖದ ಮೇಜು,” ಎಂದು ಹೇಳಿದನು.
23 : ಪರಿಶುದ್ಧ ಸ್ಥಳದ ಮತ್ತು ಮಹಾಪರಿಶುದ್ಧ ಸ್ಥಳದ ಬಾಗಿಲುಗಳಿಗೆ ಎರಡೆರಡು ಕದಗಳು;
24 : ಒಂದೊಂದು ಕದಕ್ಕೆ ಎರಡೆರಡು ಮಡಚುವ ಭಾಗಗಳು; ಇತ್ತಕಡೆಯ ಕದಕ್ಕೆ ಎರಡು ಭಾಗ; ಅತ್ತಕಡೆಯ ಕದಕ್ಕೆ ಎರಡು ಭಾಗ ಇದ್ದವು.
25 : ಆ ಕದಗಳಲ್ಲಿ, ಅಂದರೆ ಪರಿಶುದ್ಧ ಸ್ಥಳದ ಕದಗಳಲ್ಲಿ ಕೆರೂಬಿಗಳು ಹಾಗು ಖರ್ಜೂರ ವೃಕ್ಷಗಳು ಗೋಡೆಗಳಲ್ಲಿ ಚಿತ್ರಿತವಾಗಿದ್ದ ಹಾಗೆಯೇ ಚಿತ್ರಿತವಾಗಿದ್ದವು. ದ್ವಾರ ಮಂಟಪದ ಹೊರಗಡೆ ಮರದ ಸೂರು ಇತ್ತು.
26 : ದ್ವಾರಮಂಟಪದ ಪಕ್ಕದ ಗೋಡೆಗಳಲ್ಲಿ ತೆರೆಯಲಾಗದ ಕಿಟಕಿಗಳೂ ಚಿತ್ರಿತ ಖರ್ಜೂರ ವೃಕ್ಷಗಳೂ ಇದ್ದವು.

· © 2017 kannadacatholicbible.org Privacy Policy