Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಜೆಕಿಯೇಲ


1 : ಜೆರುಸಲೇಮಿಗೆ ಒಯ್ಯಲಾದ ಯೆಜೆಕಿಯೇಲ ನಾವು ಸೆರೆಯಾದ ಇಪ್ಪತ್ತೈದನೆಯ ವರ್ಷದ ಅಂದರೆ, ಪಟ್ಟಣವು ಹಾಳಾದ ಹದಿನಾಲ್ಕನೆಯ ವರ್ಷದ ಮೊದಲನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಹೌದು, ಆ ದಿನದಲ್ಲೇ ನಾನು ಸರ್ವೇಶ್ವರಸ್ವಾಮಿಯ ಹಸ್ತ ಸ್ಪರ್ಶದಿಂದ ಪರವಶನಾದೆ. ಆಗ ಅವರು ನನ್ನನ್ನು ಅಲ್ಲಿಗೆ ಒಯ್ದರು.
2 : ನನ್ನನ್ನು ಇಸ್ರಯೇಲ್ ನಾಡಿಗೆ ತಂದು, ಅತ್ಯುನ್ನತ ಪರ್ವತದ ಮೇಲೆ ಇಳಿಸಿದರೆಂದು ದೇವರ ದರ್ಶನದಲ್ಲಿ ನನಗೆ ಕಂಡುಬಂದಿತು. ದಕ್ಷಿಣ ಕಡೆಯಲ್ಲಿ ಆ ಪರ್ವತದ ಮೇಲೆ ಪಟ್ಟಣದಂತಿರುವ ಒಂದು ಕಟ್ಟಡ ಕಾಣಿಸಿತು.
3 : ಅವರು ನನ್ನನ್ನು ಅಲ್ಲಿಗೆ ತರಲು, ಇಗೋ, ತಾಮ್ರದಂತೆ ಹೊಳೆಯುವ ಒಬ್ಬ ಪುರುಷನು ನಾರಿನ ಹುರಿಯನ್ನೂ ಅಳತೆ ಕೋಲನ್ನೂ ಕೈಯಲ್ಲಿ ಹಿಡಿದುಕೊಂಡು ಬಾಗಿಲಲ್ಲಿ ನಿಂತಿದ್ದನು.
4 : ಆ ಪುರುಷ ನನಗೆ, “ನರಪುತ್ರನೇ, ನೀನು ಕಣ್ಣಿಟ್ಟು ನೋಡು, ಕಿವಿಗೊಟ್ಟು ಕೇಳು; ನಾನು ನಿನಗೆ ತೋರಿಸುವುದನ್ನೆಲ್ಲಾ ಮನಸ್ಸಿಟ್ಟು ತಿಳಿದುಕೋ; ನಾನು ನಿನಗೆ ತೋರಿಸುವುದನ್ನು ನೀನು ನೋಡಬೇಕೆಂದೇ ನಿನ್ನನ್ನು ಇಲ್ಲಿಗೆ ತರಲಾಗಿದೆ; ನೀನು ನೋಡುವುದನ್ನೆಲ್ಲ ಇಸ್ರಯೇಲ್ ವಂಶದವರಿಗೆ ಪ್ರಕಟಿಸು,” ಎಂದು ಹೇಳಿದನು.
5 : ಇಗೋ, ಒಂದು ಗೋಡೆಯು ಆ ಕಟ್ಟಡವನ್ನು ಸುತ್ತಿಕೊಂಡಿತ್ತು. ಆ ಪುರುಷನ ಕೈಯಲ್ಲಿ ಮೂರು ಮೀಟರ್ ಅಳತೆಕೋಲೊಂದಿತ್ತು. ಆ ಗೋಡೆ ಮೂರು ಮೀಟರ್ ದಪ್ಪ ಹಾಗು ಮೂರು ಮೀಟರ್ ಎತ್ತರ ಇತ್ತು.
6 : ಆಮೇಲೆ ಅವನು ಪೂರ್ವದಿಕ್ಕಿನ ಹೆಬ್ಬಾಗಿಲಿಗೆ ಬಂದು ಮೆಟ್ಟಲುಗಳನ್ನು ಹತ್ತಿ ಹೊಸ್ತಿಲಿನ ಅಗಲವನ್ನು ಅಳೆದನು. ಒಂದೊಂದು ಹೊಸ್ತಿಲಿನ ಅಗಲವು ಮೂರು ಮೀಟರ್ ಇತ್ತು.
7 : ಅಲ್ಲಿ ಒಂದೊಂದು ಕೋಣೆಯ ಉದ್ದ ಮೂರು ಮೀಟರ್, ಅಗಲ ಮೂರು ಮೀಟರ್.
8 : ಆ ಗೋಡೇಕೋಣೆಗಳು ಒಂದಕ್ಕೊಂದು ಎರಡುವರೆ ಮೀಟರ್ ದೂರವಾಗಿದ್ದವು; ದೇವಸ್ಥಾನಕ್ಕೆ ಎದುರಾಗಿರುವ ಹೆಬ್ಬಾಗಿಲ ಕೈಸಾಲೆಯ ಹೊಸ್ತಿಲಿನ ಅಗಲವು ಮೂರು ಮೀಟರ್.
9 : ಆಮೇಲೆ ಅವನು ಹೆಬ್ಬಾಗಿಲ ಕೈಸಾಲೆಯ ಅಗಲವನ್ನು ಅಳೆದನು; ಅದು ನಾಲ್ಕು ಮೀಟರ್ ಇತ್ತು; ನಿಲವು ಕಂಬಗಳ ಅಗಲ ಒಂದೊಂದು ಮೀಟರ್. ಹೆಬ್ಬಾಗಿಲ ಕೈಸಾಲೆಯು ದೇವಸ್ಥಾನಕ್ಕೆ ಎದುರಾಗಿತ್ತು.
10 : ಪೂರ್ವದಿಕ್ಕಿನ ಹೆಬ್ಬಾಗಿಲಿನ ಎರಡು ಪಕ್ಕಗಳಲ್ಲಿ ಮೂರು ಮೂರು ಗೋಡೇಕೋಣೆಗಳಿದ್ದವು; ಅವೆಲ್ಲಾ ಒಂದೇ ಅಳತೆ; ಎರಡು ಪಕ್ಕಗಳಲ್ಲಿನ ನಿಲವು ಕಂಬಗಳೂ ಒಂದೇ ಅಳತೆಯಾಗಿದ್ದವು.
11 : ಅನಂತರ ಅವನು ಹೆಬ್ಬಾಗಿಲ ದ್ವಾರವನ್ನು ಅಳೆದನು. ಅಗಲ ಐದು ಮೀಟರ್, ಉದ್ದ ಆರುವರೆ ಮೀಟರ್.
12 : ಎರಡು ಪಕ್ಕಗಳಲ್ಲಿನ ಗೋಡೇಕೋಣೆಗಳ ಮುಂದೆ ಒಂದೊಂದು ಐವತ್ತು ಸೆಂಟಿಮೀಟರ್ ಅವಕಾಶ; ಎರಡು ಕಡೆಯ ಗೋಡೇಕೋಣೆಗಳ ಅಗಲವು ಮೂರು ಮೀಟರ್.
13 : ಅವನು ಒಂದು ಕಡೆಯ ಗೋಡೆಕೋಣೆಗಳ ಮಾಳಿಗೆಯ ಹೊರಕೊನೆಯಿಂದ ಇನ್ನೊಂದು ಕಡೆಯ ಗೋಡೇಕೋಣೆಗಳ ಮಾಳಿಗೆಯ ಹೊರ ಕೊನೆಗೆ, ಅಂದರೆ ಒಂದು ಕೋಣೆಯ ಬಾಗಿಲಿನಿಂದ ಇನ್ನೊಂದು ಕೋಣೆಯ ಬಾಗಿಲಿಗೆ ಹೆಬ್ಬಾಗಿಲಿನ ಅಗಲವನ್ನು ಅಳೆಯಲು ಹನ್ನೆರಡುವರೆ ಮೀಟರಿತ್ತು.
14 : ಪ್ರಾಕಾರದಲ್ಲಿನ ನಿಲವು ಕಂಬದವರೆಗೆ ನಿಲವುಕಂಬಗಳನ್ನು ಅಳತೆ ಮಾಡಲು ಮೂವತ್ತು ಮೀಟರ್ ಇದ್ದವು. ಹೆಬ್ಬಾಗಿಲನ್ನು ಸುತ್ತುಮುತ್ತಲು ಅಳೆದನು.
15 : ಪ್ರವೇಶ ಸ್ಥಾನದ ಹೊರಗಡೆಯಿಂದ ಒಳ ಕೈಸಾಲೆಯ ಕೊನೆಯತನಕ ಹೆಬ್ಬಾಗಿಲು ಇಪ್ಪತ್ತೈದು ಮೀಟರ್ ಉದ್ದವಾಗಿತ್ತು.
16 : ಗೋಡೇಕೋಣೆಗಳಲ್ಲೂ ಒಳಗಣ ಎರಡು ಕಡೆಯ ನಿಲುವುಕಂಬಗಳಲ್ಲೂ ಕೈಸಾಲೆಗಳಲ್ಲೂ ತೆರೆಯಲಾಗದ ಕಿಟಕಿಗಳು ಹೆಬ್ಬಾಗಿಲೊಳಗೆ ಸುತ್ತಮುತ್ತಲು ಇದ್ದವು; ಹೊರಗಣ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು.
17 : ಅನಂತರ ಆ ಪುರುಷ ನನ್ನನ್ನು ಹೊರಗಣ ಪ್ರಾಕಾರಕ್ಕೆ ಕರೆದುತಂದನು; ಇಗೋ, ಕೋಣೆಗಳೂ ಪ್ರಾಕಾರದ ಸುತ್ತಲು ಹಾಕಿದ ನೆಲಗಟ್ಟೂ ಕಾಣಿಸಿದವು. ಒಟ್ಟಾಗಿ ನೆಲೆಗಟ್ಟಿನ ಮೇಲೆ ಮೂವತ್ತು ಕೋಣೆಗಳಿದ್ದವು.
18 : ಆ ಕೆಳಗಣ ನೆಲೆಗಟ್ಟು ಹೆಬ್ಬಾಗಿಲುಗಳ ಎರಡು ಪಕ್ಕಗಳಲ್ಲೂ ಹಾಸಲಾಗಿದ್ದ ಅವುಗಳಷ್ಟು ಅಗಲವಾಗಿತ್ತು.
19 : ಅವನು ಪೂರ್ವದಲ್ಲೂ ಉತ್ತರದಲ್ಲೂ ಕೆಳಗೂ ಹೆಬ್ಬಾಗಿಲಿನ ಒಳಗಡೆಯಿಂದ ಒಳಗಣ ಪ್ರಾಕಾರದ ಹೊರಗಡೆಯ ತನಕ ಅಳೆಯಲು ಐವತ್ತು ಮೀಟರ್ ಇತ್ತು.
20 : ಇದಲ್ಲದೆ ಹೊರಗಣ ಪ್ರಾಕಾರದ ಉತ್ತರದ ಹೆಬ್ಬಾಗಿಲಿನ ಅಗಲವನ್ನೂ ಉದ್ದವನ್ನೂ ಅಳೆದನು.
21 : ಅದರೊಳಗೆ ಎರಡು ಕಡೆ ಗೋಡೇಕೋಣೆಗಳು ಮೂರು ಮೂರಿದ್ದವು; ಅಲ್ಲಿನ ನಿಲವುಕಂಬಗಳೂ ಕೈಸಾಲೆಯೂ ಮೊದಲನೆಯ ಹೆಬ್ಬಾಗಿಲಿನ ಅಳತೆಯಂತಿದ್ದವು; ಆ ಹೆಬ್ಬಾಗಿಲಿನ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್.
22 : ಅಲ್ಲಿನ ಕಿಟಕಿಗಳೂ ಕೈಸಾಲೆಯೂ ಚಿತ್ರಿತವಾಗಿದ್ದ ಖರ್ಜೂರ ವೃಕ್ಷಗಳೂ ಮೂಡಣ ಹೆಬ್ಬಾಗಿಲುಗಳ ಅಳತೆಯಷ್ಟಿದ್ದವು; ಏಳು ಮೆಟ್ಟಲು ಹತ್ತಿ ಅಲ್ಲಿಗೆ ಸೇರುತ್ತಿದ್ದರು; ಕೈಸಾಲೆ ಒಳಗಡೆಯಿತ್ತು;
23 : ಹೊರಗಣ ಪ್ರಾಕಾರದ ಬಡಗಣ ಪ್ರಾಕಾರಕ್ಕೂ ಹೆಬ್ಬಾಗಿಲುಗಳು ಇದ್ದವು. ಒಂದು ಬಾಗಿಲಿನಿಂದ ಎದುರು ಬಾಗಿಲಿಗೆ ಐವತ್ತು ಮೀಟರ್ ಅಳೆದನು.
24 : ಆಮೇಲೆ ಅವನು ನನ್ನನ್ನು ದಕ್ಷಿಣಕ್ಕೆ ಕರೆತಂದನು. ಇಗೋ, ಅಲ್ಲಿಯೂ ಒಂದು ಹೆಬ್ಬಾಗಿಲು; ಅವನು ಅಲ್ಲಿನ ನಿಲವುಕಂಬಗಳನ್ನೂ ಕೈಸಾಲೆಯನ್ನೂ ಅಳೆಯಲು ಹಿಂದಣ ಅಳತೆಗಳೇ ಕಂಡುಬಂದವು.
25 : ಅದರಲ್ಲೂ ಅದರ ಕೈಸಾಲೆಯಲ್ಲೂ ಎಲ್ಲ ಕಡೆ ಅಂಥ ಕಿಟಕಿಗಳೇ ಇದ್ದವು; ಹೆಬ್ಬಾಗಿಲಿನ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್.
26 : ಅಲ್ಲಿ ಹತ್ತುವುದಕ್ಕೆ ಏಳು ಮೆಟ್ಟಲುಗಳಿದ್ದವು. ಕೈಸಾಲೆ ಒಳಗಡೆಯಿತ್ತು; ಕೈಸಾಲೆಯ ಎದುರು ಬದುರಿನ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು.
27 : ಒಳಗಿನ ಪ್ರಾಕಾರದಲ್ಲೂ ದಕ್ಷಿಣಕ್ಕೆ ಹೆಬ್ಬಾಗಿಲಿತ್ತು; ದಕ್ಷಿಣದಲ್ಲಿ ಒಂದು ಬಾಗಿಲಿನಿಂದ ಎದುರುಬಾಗಿಲಿಗೆ ಅಳೆದಾಗ ಐವತ್ತು ಮೀಟರ್ ಇತ್ತು.
28 : ಆಮೇಲೆ ಅವನು ನನ್ನನ್ನು ದಕ್ಷಿಣ ಬಾಗಿಲ ಮಾರ್ಗವಾಗಿ ಒಳಗಣ ಪ್ರಾಕಾರಕ್ಕೆ ಕರೆದು ತಂದನು. ಅವನು ಆ ದಕ್ಷಿಣ ಹೆಬ್ಬಾಗಿಲನ್ನೂ ಅಲ್ಲಿನ ಗೋಡೇಕೋಣೆ, ನಿಲವುಕಂಬ, ಕೈಸಾಲೆ ಇವುಗಳನ್ನೂ ಅಳೆಯಲು ಅಷ್ಟೇ ಅಳತೆಗಳಿದ್ದವು.
29 : ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಕಿಟಕಿಗಳು ಎಲ್ಲ ಕಡೆಯಿದ್ದವು.
30 : ಹೆಬ್ಬಾಗಿಲಿನ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್.
31 : ಆ ಹೆಬ್ಬಾಗಿಲ ಕೈಸಾಲೆ ಹೊರಗಣ ಪ್ರಾಕಾರಕ್ಕೆ ಅಭಿಮುಖವಾಗಿತ್ತು; ಅದರ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು. ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಲುಗಳಿದ್ದವು.
32 : ಅವನು ನನ್ನನ್ನು ಒಳಗಣ ಪ್ರಾಕಾರದ ಪೂರ್ವಕ್ಕೆ ಕರೆದುತಂದು ಅಲ್ಲಿನ ಹೆಬ್ಬಾಗಿಲನ್ನೂ ಅದರ ಗೋಡೇಕೋಣೆ, ನಿಲವುಕಂಬ, ಕೈಸಾಲೆ ಇವುಗಳನ್ನೂ ಅಳೆಯಲು ಆ ಅಳತೆಗಳೇ ಕಂಡು ಬಂದವು.
33 : ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಎಲ್ಲಾ ಕಡೆ ಕಿಟಕಿಗಳಿದ್ದವು. ಆ ಹೆಬ್ಬಾಗಿಲಿನ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್.
34 : ಅದರ ಕೈಸಾಲೆ ಹೊರಗಣ ಪ್ರಾಕಾರಕ್ಕೆ ಅಭಿಮುಖವಾಗಿತ್ತು. ಕೈಸಾಲೆಯ ಎದುರುಬದುರಿನ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು; ಇಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಲುಗಳಿದ್ದವು.
35 : ಆಮೇಲೆ ಅವನು ನನ್ನನ್ನು ಉತ್ತರ ಬಾಗಿಲಿಗೆ ಕರೆದುತಂದು ಅದನ್ನೂ ಅದರ ಗೋಡೇಕೋಣೆ, ನಿಲವುಕಂಬ, ಕೈಸಾಲೆ ಇವುಗಳನ್ನೂ ಅಳೆಯಲು ಅಲ್ಲಿಯೂ ಆ ಅಳತೆಗಳೇ ಕಂಡುಬಂದವು;
36 : ಅದರಲ್ಲಿ ಎಲ್ಲಾ ಕಡೆ ಕಿಟಕಿಗಳಿದ್ದವು; ಅದರ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್.
37 : ಆದರೆ ನಿಲವುಕಂಬಗಳು ಹೊರಗಣ ಪ್ರಾಕಾರಕ್ಕೆ ಅಭಿಮುಖವಾಗಿದ್ದವು; ಆ ಎದುರುಬದುರಿನ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು; ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಲುಗಳಿದ್ದವು.
38 : ಹೆಬ್ಬಾಗಿಲ ನಿಲವುಕಂಬಗಳ ಪಕ್ಕದಲ್ಲಿ ಒಂದು ಕೊಠಡಿಯೂ ಅದರ ದ್ವಾರವೂ ಕಾಣಿಸಿದವು. ಆ ಕೋಣೆಯೊಳಗೆ ದಹನಬಲಿಪ್ರಾಣಿಗಳ ಮಾಂಸವನ್ನು ತೊಳೆಯುತ್ತಿದ್ದರು.
39 : ಹೆಬ್ಬಾಗಿಲ ಕೈಸಾಲೆಯಲ್ಲಿ ಎರಡು ಕಡೆಯಲ್ಲೂ ಎರಡೆರಡು ಪೀಠಗಳಿದ್ದವು. ಅವುಗಳ ಮೇಲೆ ದಹನಬಲಿ ಪ್ರಾಣಿ, ದೋಷಪರಿಹಾರಕ ಬಲಿಪ್ರಾಣಿ, ಪ್ರಾಯಶ್ಚಿತ್ತ ಬಲಿಪ್ರಾಣಿ, ಇವುಗಳನ್ನು ವಧಿಸುತ್ತಿದ್ದರು.
40 : ಉತ್ತರ ಹೆಬ್ಬಾಗಿಲ ಪ್ರವೇಶ ಸ್ಥಾನದ ಮೆಟ್ಟಲುಗಳ ಹತ್ತಿರ, ಆ ಬಾಗಿಲ ಕೈಸಾಲೆಯ ಹೊರಗೆ, ಒಂದು ಕೊನೆಯಲ್ಲಿ ಎರಡು ಪೀಠಗಳು ಇದ್ದವು.
41 : ಹೆಬ್ಬಾಗಿಲಿನ ಎರಡು ಪಕ್ಕಗಳಲ್ಲಿ ಇತ್ತ ನಾಲ್ಕು, ಅತ್ತ ನಾಲ್ಕು ಪೀಠಗಳು, ಒಟ್ಟಿಗೆ ಬಲಿಪ್ರಾಣಿಗಳನ್ನು ವಧಿಸುವ ಎಂಟು ಪೀಠಗಳಿದ್ದವು.
42 : ಇದಲ್ಲದೆ ದಹನಬಲಿಗೆ ಉಪಯುಕ್ತವಾದ, ಕೆತ್ತಿದ ಕಲ್ಲಿನ ನಾಲ್ಕು ಪೀಠಗಳಿದ್ದವು; ಅವುಗಳ ಉದ್ದ ಎಪ್ಪತ್ತೈದು ಸೆಂಟಿಮೀಟರ್, ಎತ್ತರ ಐವತ್ತು ಸೆಂಟಿಮೀಟರ್, ಅವುಗಳ ಮೇಲೆ ದಹನಬಲಿಪಶುಗಳ ವಧೆಯ ಉಪಕರಣಗಳನ್ನು ಇಡುತ್ತಿದ್ದರು.
43 : ಅಂಚಿನಲ್ಲಿ ಎಪ್ಪತ್ತೈದು ಮಿಲಿಮೀಟರ್ ದಿಂಡು ಕಟ್ಟಿತ್ತು; ನೈವೇದ್ಯ ಮಾಂಸವು ಪೀಠಗಳ ಮೇಲಿತ್ತು.
44 : ಆಮೇಲೆ ಆ ಪುರುಷ ನನ್ನನ್ನು ಒಳಗಣ ಪ್ರಾಕಾರಕ್ಕೆ ಕರೆದುತಂದನು. ಇಗೋ, ಅಲ್ಲಿ ಎರಡು ಕೋಣೆಗಳು ಕಾಣಿಸಿದವು. ಉತ್ತರ ಹೆಬ್ಬಾಗಿಲ ಪಕ್ಕದಲ್ಲಿ ಒಂದು ಕೋಣೆಯು ದಕ್ಷಿಣಕ್ಕೆ ಅಭಿಮುಖವಾಗಿತ್ತು; ದಕ್ಷಿಣ ಹೆಬ್ಬಾಗಿಲ ಪಕ್ಕದಲ್ಲಿ ಇನ್ನೊಂದು ಕೋಣೆ ಉತ್ತರಕ್ಕೆ ಅಭಿಮುಖವಾಗಿತ್ತು.
45 : ಆಗ ಅವನು ನನಗೆ, ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೋಣೆ ದೇವಾಲಯ ಪಾರುಪತ್ಯವನ್ನು ನಡೆಸುವ ಯಾಜಕರಿಗೆ ನೇಮಕವಾಗಿದೆ.
46 : ಉತ್ತರಕ್ಕೆ ಅಭಿಮುಖವಾಗಿರುವ ಆ ಕೋಣೆ ಬಲಿಪೀಠದ ಕಾರ್ಯದರ್ಶಿಗಳಾದ ಯಾಜಕರಿಗೆ ನೇಮಕವಾಗಿದೆ. ಚಾದೋಕನ ಸಂತತಿಯಾದವರಾದ ಇವರು ಲೇವಿಯ ಕುಲದವರಲ್ಲಿ ಸರ್ವೇಶ್ವರನ ಸನ್ನಿಧಿ ಸೇವಕರಾಗಿದ್ದಾರೆ ಎಂದು ಹೇಳಿದನು.
47 : ಆಮೇಲೆ ಅವನು ಪ್ರಾಕಾರವನ್ನು ಅಳೆಯಲು ಅದು ಐವತ್ತು ಮೀಟರ್ ಉದ್ದವಾಗಿಯೂ ಐವತ್ತು ಮೀಟರ್ ಅಗಲವಾಗಿಯೂ ಚಚ್ಚೌಕವಾಗಿತ್ತು; ಬಲಿಪೀಠವು ದೇವಸ್ಥಾನದ ಮುಂದೆ ಇತ್ತು.
48 : ಕೂಡಲೆ ಆ ಪುರುಷ ನನ್ನನ್ನು ದೇವಸ್ಥಾನದ ದ್ವಾರಮಂಟಪಕ್ಕೆ ಕರೆದುತಂದು ಅದನ್ನು ಅಳೆದನು. ಅದರ ಎದುರುಬದುರಿನ ನಿಲವುಕಂಬಗಳ ಅಗಲ ಎರಡುವರೆ ಮೀಟರುಗಳು, ಬಾಗಿಲಿನ ಎರಡು ಪಕ್ಕದ ಗೋಡೆಗಳ ಅಗಲ ಅರ್ಧರ್ಧ ಮೀಟರ್,
49 : ದ್ವಾರಮಂಟಪದ ಉದ್ದ ಹತ್ತು ಮೀಟರ್, ಅಗಲ ಐದುವರೆ ಮೀಟರ್ ಇದ್ದವು. ಹತ್ತು ಮೆಟ್ಟಲುಗಳನ್ನು ಹತ್ತಿ ಅಲ್ಲಿಗೆ ಸೇರುತ್ತಿದ್ದರು. ಎರಡು ಕಡೆಯ ನಿಲವುಕಂಬಗಳ ಪಕ್ಕದಲ್ಲಿ ಒಂದೊಂದು ಉಪಸ್ತಂಭ ಇತ್ತು.

· © 2017 kannadacatholicbible.org Privacy Policy