1 :
ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು:
2 : “ನರಪುತ್ರನೇ, ರೋಷಿನವರನ್ನು, ಮೆಷೆಕಿನವರನ್ನು ಹಾಗು ತೂಬಲಿನವರನ್ನು ಆಳುವ ಮಾಗೋಗ್ ದೇಶದ ದೊರೆಯಾದ ಗೋಗನ ಕಡೆಗೆ ಮುಖಮಾಡಿ ಅವನಿಗೆ ಈ ದೈವೋಕ್ತಿಯನ್ನು ನುಡಿ:
3 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ, ‘ರೋಷ್, ಮೆಷೆಕ್, ತೂಬಲ್ ಜನಾಂಗಗಳ ರಾಜನಾದ ಗೋಗನೇ
4 : ಇಗೋ, ನಾನು ನಿನಗೆ ವಿರುದ್ಧವಾಗಿ ನಿನ್ನನ್ನು ತಿರುಗಿಸಿ, ನಿನ್ನ ದವಡೆಗೆ ಕೊಕ್ಕೆಹಾಕಿ ಈಚೆಗೆ ಎಳೆಯುವೆನು. ಅಶ್ವಾರೂಢರು, ಖೇಡ್ಯ ಪ್ರಾಣಿಗಳು, ಎಲ್ಲ ವಿಚಿತ್ರಾಂಬರರು ಹಾಗು ಖಡ್ಗಹಸ್ತರು ಆದ ರಾಹುತರ ದೊಡ್ಡ ತಂಡದಿಂದ ಕೂಡಿದ ನಿನ್ನ ಸೈನ್ಯವೆಲ್ಲವನ್ನು,
5 : ಮತ್ತು ಎಲ್ಲ ಖೇಡ್ಯಶಿರಸ್ತ್ರಾಣಧಾರಿಗಳಾದ ಪರ್ಷಿಯರು, ಕೂಷ್ಯರು, ಪೂಟ್ಯರು ಇವರನ್ನು ಹಾಗು
6 : ಪಡೆಪಡೆಯಾದ ಗೋಮೆರ್ಯರನ್ನು, ಉತ್ತರ ದಿಕ್ಕಿನ ಕಟ್ಟಕಡೆಯಿಂದ ಬಂದ ಪಡೆಪಡೆಯಾದ
7 : ಸಿದ್ಧವಾಗಿರು, ನಿನ್ನಲ್ಲಿಗೆ ಕೂಡಿ ಬಂದಿರುವ ಎಲ್ಲ ತಂಡಗಳೊಡನೆ ನಿನ್ನನ್ನು ಸಿದ್ಧಮಾಡಿಕೋ; ನೀನು ಅವುಗಳಿಗೆ ಪಾಲಕನಾಗಿರು.
8 : ಬಹುದಿನಗಳ ಮೇಲೆ ನಿನಗೆ ಅಪ್ಪಣೆಯಾಗುವುದು: ಖಡ್ಗದಿಂದ ನಾಶವಾಗಿ, ಪುನರ್ಜೀವಿತವಾದ ದೇಶದೊಳಗೆ ನೀನು ಕಾಲಾನುಕಾಲಕ್ಕೆ ನುಗಗ್ಗಿ, ಅನೇಕ ಜನಾಂಗಗಳಿಂದ ಒಟ್ಟುಗೂಡಿದ ನನ್ನ ಜನರ ಮೇಲೆ ಬೀಳುವೆ; ಹೌದು, ಜನಾಂಗಗಳಿಂದ ಪಾರಾದ ಆ ಜನರೆಲ್ಲರು ಬಹುಕಾಲ ಹಾಳಾಗಿದ್ದ ಇಸ್ರಯೇಲಿನ ಪರ್ವತಗಳಲ್ಲಿ ನೆಮ್ಮದಿಯಾಗಿ ವಾಸಿಸುತ್ತಿರುವಾಗ ನೀನು ಅವರ ಮೇಲೆ ಬೀಳುವೆ.
9 : ನೀನೂ ನಿನ್ನ ಎಲ್ಲ ಪಡೆಗಳೂ ನಿನ್ನೊಂದಿಗಿರುವ ಬಹು ಜನಾಂಗಗಳೂ ಬಿರುಗಾಳಿಯಂತೆ ಹೊರಟುಬರುವಿರಿ; ಕಾರ್ಮುಗಿಲಿನಂತೆ ದೇಶವನ್ನು ಮುಚ್ಚಿಬಿಡುವಿರಿ.’
10 : “ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಆಗ ನಿನ್ನಮನಸ್ಸಿನಲ್ಲಿ ಆಲೋಚನೆಗಳು ಹುಟ್ಟುವುವು:
11 : ನೀನು, ‘ಆಹಾ, ನಾನು ಪೌಳಿಗೋಡೆಯಿಲ್ಲದ, ಹಳ್ಳಿಪಳ್ಳಿಗಳು ತುಂಬಿದ ದೇಶವನ್ನು ನುಗ್ಗಿ, ಅಗುಳಿ ಬಾಗಿಲು ಗೋಡೆಗಳಿಲ್ಲದೆ ನೆಮ್ಮದಿಯಿಂದ ನಿರ್ಭಯವಾಗಿರುವವರ ಮೇಲೆ ಬೀಳುವೆನು,’ ಎಂದುಕೊಂಡು ಸೂರೆ ಗೈಯಲು ಆಶಿಸುವೆ;
12 : ಕೊಳ್ಳೆಹೊಡೆಯಬೇಕು, ನಿರ್ಜನವಾಗಿದ್ದು ಜನಭರಿತವಾದ ಪ್ರದೇಶಗಳ ಮೇಲೆ ಕೈಮಾಡಬೇಕು ಹಾಗು ಜನಾಂಗಗಳಿಂದ ಒಟ್ಟುಗೂಡಿ, ದನ ಮೊದಲಾದ ಸೊತ್ತನ್ನು ಸಂಗ್ರಹಿಸಿಕೊಂಡು, ಲೋಕದ ನಟ್ಟನಡುವೆ ವಾಸಿಸುವವರನ್ನು ಹತಿಸಬೇಕು’ ಎಂದು ಕುತಂತ್ರ ಕಲ್ಪಿಸುವೆ.
13 : ಶೆಬದವರು, ದೆದಾನಿನವರು, ತಾರ್ಷೀಷಿನ ವರ್ತಕರು ಹಾಗು ಅದರ ಸಿಂಹ ಪ್ರಾಯರೆಲ್ಲರು ನಿನ್ನನ್ನು ನೋಡಿ, ‘ನೀನು ಸೂರೆಮಾಡಲಿಕ್ಕೆ ಬಂದಿಯೋ? ಕೊಳ್ಳೆ ಹೊಡೆದು ಬೆಳ್ಳಿಬಂಗಾರವನ್ನು ದೋಚಿಕೊಂಡು, ದನ ಮುಂತಾದ ಸೊತ್ತನ್ನು ಅಪಹರಿಸಿ, ಅಪಾರವಾದ ಆಸ್ತಿಯನ್ನು ಸುಲಿದುಕೊಂಡು ಹೋಗಲು ನಿನ್ನ ತಂಡವನ್ನು ಕೂಡಿಸಿಕೊಂಡು ಬಂದಿಯೋ?’ ಎಂದು ಕೇಳುವರು.
14 : “ಹೀಗಿರಲು, ನರಪುತ್ರನೇ, ನೀನು ಗೋಗನಿಗೆ ಈ ದೈವೋಕ್ತಿಯನ್ನು ನುಡಿ: ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ನನ್ನ ಜನರಾದ ಇಸ್ರಯೇಲರು ನೆಮ್ಮದಿಯಾಗಿ ವಾಸಿಸುವ ಕಾಲದಲ್ಲಿ ಆ ನೆಮ್ಮದಿಯು ನನಗೆ ಗೊತ್ತಾಗುವುದಿಲ್ಲವೆ?
15 : ನೀನು ನಿನ್ನ ಸ್ಥಳವನ್ನು ಬಿಟ್ಟು, ಅಶ್ವಬಲದ ಮಹಾಸೈನ್ಯವಾಗಿ ಗುಂಪುಕೂಡಿದ ಬಹುಜನಾಂಗಗಳೊಡನೆ ಉತ್ತರದಿಕ್ಕಿನ ಕಟ್ಟಕಡೆಯಿಂದ ಬರುವೆ.
16 : ನನ್ನ ಜನರಾದ ಇಸ್ರಯೇಲರ ಮೇಲೆ ಬಿದ್ದು ಕಾರ್ಮುಗಿಲಿನಂತೆ ದೇಶವನ್ನು ಮುಚ್ಚಿಬಿಡುವೆ. ಗೋಗನೇ, ಜನಾಂಗಗಳ ಕಣ್ಣೆದುರಿಗೆ ನಿನ್ನ ನಾಶದಿಂದ ನನ್ನ ಗೌರವವನ್ನು ಕಾಪಾಡಿಕೊಂಡು, ನಾನೇ ಸರ್ವೇಶ್ವರ ಎಂದು ಜನಾಂಗಗಳಿಗೆ ಗೋಚರನಾಗುವಂತೆ ನಾನು ನಿನ್ನನ್ನು ಕಾಲಾನುಕಾಲಕ್ಕೆ ನನ್ನ ನಾಡಿನ ಮೇಲೆ ಬೀಳಮಾಡುವೆನು.
17 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ‘ನನ್ನ ದಾಸರಾದ ಇಸ್ರಯೇಲಿನ ಪ್ರವಾದಿಗಳು ಪುರಾತನಕಾಲದಲ್ಲಿ ಬಹು ವರ್ಷ ಪ್ರವಾದಿಸುತ್ತಾ ನಾನು ಒಬ್ಬನನ್ನು ಇಸ್ರಯೇಲರ ಮೇಲೆ ಬೀಳಮಾಡುವೆನು, ಎಂದು ಮುಂತಿಳಿಸಿದ್ದರು; ನಾನು ಅವರ ಮುಖಾಂತರ ಮುಂತಿಳಿಸಿದವನು ನೀನೇ ಅಲ್ಲವೇ?’
18 :
ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಗೋಗನು ಇಸ್ರಯೇಲ್ ನಾಡಿನ ಮೇಲೆ ಬೀಳುವ ದಿನದಲ್ಲಿ ನಾನು ಸಿಟ್ಟಿನಿಂದ ಬುಸುಗುಟ್ಟುವೆನು.
19 : ನಾನು ರೋಷಾನಿಷ್ಟನಾಗಿ ಕೋಪದಿಂದಿರಿಯುತ್ತಾ ಹೀಗೆ ನುಡಿದಿದ್ದೇನೆ: ಆಹಾ, ಆ ದಿನದಲ್ಲಿ ಇಸ್ರಯೇಲ್ ನಾಡಿನೊಳಗೆ ಅದ್ಭುತ ಕಂಪನವಾಗುವುದು ಖಂಡಿತ;
20 : ಸಮುದ್ರದ ಮೀನುಗಳು, ಆಕಾಶದ ಪಕ್ಷಿಗಳು, ಭೂಜಂತುಗಳು, ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳು ಹಾಗು ಜಗದ ಸಕಲ ಮಾನವರು ನನ್ನೆದುರಿಗೆ ನಡುಗುವರು; ಪರ್ವತಗಳು ಉರಳಿ ಹೋಗುವುವು, ಝರಿಗಳು ಕವಚಿಕೊಳ್ಳುವುವು, ಎಲ್ಲ ಗೋಡೆಗಳು ನೆಲಸಮವಾಗುವುವು.
21 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಖಡ್ಗವು ನನ್ನ ಪರ್ವತಗಳಲ್ಲೆಲ್ಲಾ ಗೋಗನವರನ್ನು ಸಂಹರಿಸಲಿ,’ ಎಂದು ಅಪ್ಪಣೆಕೊಡುವೆನು; ಒಬ್ಬರಿಂದೊಬ್ಬರು ಹತರಾಗುವರು.
22 : ನಾನು ಗೋಗನ ಸಂಗಡ ವ್ಯಾಜ್ಯವಾಡುತ್ತಾ ಅವನನ್ನು ವ್ಯಾಧಿಗೂ ವಧೆಗೂ ಗುರಿಮಾಡುವೆನು. ಅವನ ಮೇಲೂ ಅವನ ಪಡೆಗಳ ಮೇಲೂ ಅವನೊಂದಿಗಿರುವ ಬಹು ಜನಾಂಗಗಳ ಮೇಲೂ ವಿಪರೀತ ಮಳೆ, ದೊಡ್ಡ ದೊಡ್ಡ ಆನೆಕಲ್ಲು, ಬೆಂಕಿ, ಗಂಧಕ, ಇವುಗಳನ್ನು ಸುರಿಸುವೆನು.
23 : ಹೀಗೆ ನಾನು ನನ್ನ ಮಹಿಮೆಯನ್ನು ತೋರ್ಪಡಿಸಿ, ನನ್ನ ಗೌರವವನ್ನು ಕಾಪಾಡಿಕೊಂಡು, ಬಹು ಜನಾಂಗಗಳು ನಾನೇ ಸರ್ವೇಶ್ವರ ಎಂದು ತಿಳಿದುಕೊಳ್ಳುವಂತೆ ಅವುಗಳ ಕಣ್ಣೆದುರಿಗೆ ವ್ಯಕ್ತವಾಗುವೆನು.”