Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಜೆಕಿಯೇಲ


1 : ನಾನು ಸರ್ವೇಶ್ವರನ ಹಸ್ತಸ್ಪರ್ಶದಿಂದ ಪರವಶನಾಗಿದ್ದೆ. ಆಗ ಅವರು ತಮ್ಮ ಆತ್ಮದ ಮೂಲಕ ನನ್ನನ್ನು ಒಯ್ದು, ಎಲುಬುಗಳಿಂದ ತುಂಬಿದ್ದ ಒಂದು ಕಣಿವೆಯಲ್ಲಿ ಇಳಿಸಿದರು.
2 : ನಾನು ಎಲುಬುಗಳ ಮಧ್ಯೆ ಆ ಕಣಿವೆಯನ್ನು ಬಳಸಿಕೊಂಡು ಬರುವಂತೆ ಮಾಡಿದರು. ಇಗೋ, ಕಣಿವೆಯ ಮೇಲೆಲ್ಲಾ ಬಹಳವಾಗಿ ಒಣಗಿದ ಎಲುಬುಗಳು ಲೆಕ್ಕವಿಲ್ಲದಷ್ಟು ಬಿದ್ದಿದ್ದವು.
3 : ಸರ್ವೇಶ್ವರ ನನ್ನನ್ನು – “ನರಪುತ್ರನೇ, ಈ ಎಲುಬುಗಳಿಗೆ ಜೀವ ಬರಬಹುದೇ?” ಎಂದು ಕೇಳಿದರು. ನಾನು, “ಸರ್ವೇಶ್ವರರಾದ ದೇವರೇ, ನೀವೇಬಲ್ಲಿರಿ”, ಎಂದು ಉತ್ತರ ಕೊಟ್ಟೆ. 4
4 : ಆಗ ಅವರು ನನಗೆ ಹೀಗೆ ಅಪ್ಪಣೆ ಮಾಡಿದರು: “ನೀನು ಆ ಎಲುಬುಗಳಿಗೇ ಪ್ರವಾದಿಸಿ ಅವಕ್ಕೆ ಈ ದೈವೋಕ್ತಿಯನ್ನು ನುಡಿ: ಒಣ ಎಲುಬುಗಳೇ, ಸರ್ವೇಶ್ವರನ ವಾಣಿಯನ್ನು ಕೇಳಿ:
5 : ಸರ್ವೇಶ್ವರನಾದ ದೇವರು ನಿಮಗೆ ಹೀಗೆ ಹೇಳುತ್ತಾರೆ –ಇಗೋ, ನಾನು ನಿಮ್ಮೊಳಗೆ ಶ್ವಾಸವನ್ನು ಊದುವೆನು; ನೀವು ಬದುಕುವಿರಿ.
6 : ನಾನು ನಿಮ್ಮ ಮೇಲೆ ನರಗಳನ್ನು ಹಬ್ಬಿಸಿ, ಮಾಂಸವನ್ನು ಹರಡಿ, ಚರ್ಮವನ್ನು ಹೊದಿಸಿ, ನಿಮ್ಮಲ್ಲಿ ಶ್ವಾಸವನ್ನು ತುಂಬುವೆನು; ಆಗ ನೀವು ಬದುಕಿ ನಾನೇ ಸರ್ವೇಶ್ವರ ಎಂದು ತಿಳಿದುಕೊಳ್ಳುವಿರಿ.”
7 : ನನಗೆ ಅಪ್ಪಣೆಯಾದಂತೆ ನಾನು ಈ ದೈವೋಕ್ತಿಯನ್ನು ನುಡಿದೆ. ನಾನು ಮಾತಾಡುತ್ತಿರುವಾಗ ಒಂದು ಶಬ್ದ ಕೇಳಿಸಿತು. ಇಗೋ, ಟಕಟಕ ಎನ್ನುತ್ತಾ ಎಲುಬು ಎಲುಬಿಗೆ, ಜೋಡನೆಯಾದವು.
8 : ನಾನು ನೋಡುತ್ತಿರಲು ಏನಾಶ್ಚರ್ಯ! ಅವುಗಳ ಮೇಲೆ ನರಗಳು ಹಬ್ಬಿಕೊಂಡವು, ಮಾಂಸವು ಹರಡಿಕೊಂಡಿತು, ಚರ್ಮವು ಮೇಲು ಹೊದಿಕೆಯಾಯಿತು; ಶ್ವಾಸ ಮಾತ್ರ ಇರಲಿಲ್ಲ.
9 : ಆಗ ಸರ್ವೇಶ್ವರ ನನಗೆ – “ನರಪುತ್ರನೇ, ನೀನು ಶ್ವಾಸಕ್ಕೆ ನುಡಿ; ಶ್ವಾಸವೇ, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ಚತುರ್ದಿಕ್ಕುಗಳಿಂದ ಬೀಸಿ ಹತ ಶರೀರಗಳು ಬದುಕುವಂತೆ ಅವುಗಳ ಮೇಲೆ ಸುಳಿ, ಎಂಬುದಾಗಿ ಶ್ವಾಸಕ್ಕೆ ನುಡಿ,” ಎಂದು ಅಪ್ಪಣೆಕೊಟ್ಟರು.
10 : ನಾನು ಅವರ ಅಪ್ಪಣೆಯಂತೆ ನುಡಿದೆ. ಇಗೋ, ಶ್ವಾಸವು ಅವುಗಳಲ್ಲಿ ಹೊಕ್ಕಿತು. ಅವು ಬದುಕಿದವು, ಕಾಲೂರಿ ನಿಂತವು, ಅತ್ಯಂತ ದೊಡ್ಡ ಸೈನ್ಯವಾದವು.
11 : ಆಮೇಲೆ ಸರ್ವೇಶ್ವರ ನನಗೆ ಹೀಗೆ ಹೇಳಿದರು: “ನರಪುತ್ರನೇ, ಈ ಎಲುಬುಗಳೇ ಇಸ್ರಯೇಲಿನ ಪೂರ್ಣವಂಶ; ಇಗೋ, ಆ ವಂಶೀಯರು, ‘ಅಯ್ಯೋ, ನಮ್ಮ ಎಲುಬುಗಳು ಒಣಗಿಹೋದವು, ನಮ್ಮ ನಿರೀಕ್ಷೆ ಹಾಳಾಯಿತು; ನಾವು ಬುಡನಾಶವಾದೆವು,’ ಎಂದು ಕೊಳ್ಳುತ್ತಿದ್ದಾರೆ.
12 : ಆದಕಾರಣ ನೀನು ಈ ದೈವೋಕ್ತಿಯನ್ನು ಅವರಿಗೆ ನುಡಿ: ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜನರೇ, ನೋಡಿ: ನಾನು ನಿಮ್ಮ ಗೋರಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿ, ಇಸ್ರಯೇಲ್ ನಾಡಿಗೆ ಸೇರಮಾಡುವೆನು.
13 : ನನ್ನ ಜನರೇ, ನಾನು ನಿಮ್ಮ ಗೋರಿಗಳನ್ನು ತೆರೆದು, ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿದಾಗ, ನಾನೇ ಸರ್ವೇಶ್ವರ ಎಂದು ನಿಮಗೆ ದೃಢವಾಗುವುದು.
14 : ನಾನು ನನ್ನ ಶ್ವಾಸವನ್ನು ನಿಮ್ಮಲ್ಲಿ ಊದಿ, ನಿಮ್ಮನ್ನು ಬದುಕಿಸಿ, ನಿಮ್ಮ ದೇಶದಲ್ಲಿ ನೆಲೆಗೊಳಿಸುವೆನು. ಆಗ ಸರ್ವೇಶ್ವರನಾದ ನಾನೇ ಇದನ್ನು ನುಡಿದು ನಡೆಸಿದ್ದೇನೆ ಎಂದು ತಿಳಿದುಕೊಳ್ಳುವಿರಿ; ಇದು ಸರ್ವೇಶ್ವರನ ಸಂಕಲ್ಪ’.”
15 : ಸರ್ವೇಶ್ವರ ಇನ್ನೊಂದು ವಾಣಿಯನ್ನು ನನಗೆ ದಯಪಾಲಿಸಿದರು.
16 : “ನರಪುತ್ರನೇ, ನೀನು ಒಂದು ದಂಡವನ್ನು ತೆಗೆದು ಅದರಲ್ಲಿ ‘ಜುದೇಯದ್ದು, ಜುದೇಯಕ್ಕೆ ಸೇರಿದ ಇಸ್ರಯೇಲರದು’ ಎಂದು ಬರೆ; ಇನ್ನೊಂದು ದಂಡವನ್ನು ತೆಗೆದು ಅದರಲ್ಲಿ, ‘ಜೋಸೆಫನದು, ಎಫ್ರಯಿಮಿನದು, ಜೊಸೇಫಿಗೆ ಸೇರಿದ ಎಲ್ಲ ಇಸ್ರಯೇಲರದು’ ಎಂದು ಬರೆ;
17 : ಆಮೇಲೆ ಅವು ನಿನ್ನ ಕೈಯಲ್ಲಿ ಒಂದಾಗುವಂತೆ ಅವೆರಡನ್ನೂ ಒಂದಕ್ಕೊಂದು ಉದ್ದವಾಗಿ ಸೇರಿಸಿ ಹಿಡಿ.
18 : ನಿನ್ನ ಜನರು, “ಇದೇನು? ನಮಗೆ ತಿಳಿಸುವುದಿಲ್ಲವೆ?” ಎಂದು ನಿನ್ನನ್ನು ಕೇಳುವರು.
19 : ಆಗ ನೀನು ಅವರಿಗೆ, “ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ, ‘ಇಗೋ, ಎಫ್ರಯಿಮು ಹಿಡಿದಿರುವ ದಂಡವನ್ನು ಅಂದರೆ, ಜೋಸೆಫನ ಮತ್ತು ಜೋಸೆಫನಿಗೆ ಸೇರಿದ ಇಸ್ರಯೇಲ್ ಕುಲಗಳ ದಂಡವನ್ನು ನಾನು ತೆಗೆದು ಜುದೇಯದ ದಂಡಕ್ಕೆ ಉದ್ದವಾಗಿ ಸೇರಿಸಿ ಅವೆರಡನ್ನು ನನ್ನ ಕೈಯಲ್ಲಿ ಒಂದೇ ದಂಡವಾಗಿ ಹಿಡಿಯುವೆನು’ ಎಂಬುದನ್ನು ಹೇಳು.
20 : “ಹಾಗೆ ಹೇಳುವಾಗನೀನು ಹೆಸರು ಬರೆದಿರುವ ದಂಡಗಳು ಅವರ ಕಣ್ಣೆದುರಿಗೆ ನಿನ್ನ ಕೈಯಲ್ಲಿರಲಿ.
21 : ಇದನ್ನೂ ಅವರಿಗೆ ನುಡಿ, ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಇಗೋ, ಇಸ್ರಯೇಲರು ವಶವಾಗಿರುವ ಜನಾಂಗಗಳಿಂದ ನಾನು ಅವರನ್ನು ಉದ್ಧರಿಸಿ, ಎಲ್ಲ ಕಡೆಯಿಂದಲು ಒಟ್ಟುಗೂಡಿಸಿ, ಸ್ವದೇಶಕ್ಕೆ ಕರೆದು ತರುವೆನು.
22 : ಅಲ್ಲಿ ಇಸ್ರಯೇಲಿನ ಪರ್ವತಗಳ ಮೇಲೆ, ಒಂದೇ ಜನಾಂಗವನ್ನಾಗಿ ಮಾಡುವೆನು; ಒಬ್ಬನೇ ಅವರೆಲ್ಲರಿಗೂ ರಾಜನಾಗಿರುವನು; ಅವರು ಇನ್ನೆಂದಿಗೂ ಎರಡು ಜನಾಂಗದವರಾಗಿರರು; ಭಿನ್ನರಾಜ್ಯದವರಾಗಿ ಇರರು.
23 : ತಮ್ಮ ವಿಗ್ರಹಗಳಿಂದಾಗಲಿ, ಅಸಹ್ಯ ವಸ್ತುಗಳಿಂದಾಗಲಿ, ಯಾವ ದುರಾಚಾರದಿಂದಲೇ ಆಗಲಿ, ತಮ್ಮನ್ನು ಇನ್ನು ಮುಂದೆ ಹೊಲೆಗೆ ಹೊಯ್ದುಕೊಳ್ಳರು. ಅವರು ಪಾಪ ಮಾಡಿಮಾಡಿ ಸಿಕ್ಕಿಬಿದ್ದ ದೇವದ್ರೋಹದಿಂದೆಲ್ಲಾ ನಾನು ಅವರನ್ನು ಉದ್ಧರಿಸಿ ಶುದ್ಧೀಕರಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು.
24 : ನನ್ನ ದಾಸ ದಾವೀದನು ಅವರಿಗೆ ರಾಜನಾಗಿರುವನು; ಅವರೆಲ್ಲರಿಗು ಒಬ್ಬನೇ ಪಾಲಕನಿರುವನು; ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವರು.
25 : ನನ್ನ ದಾಸ ಯಕೋಬನಿಗೆ ನಾನು ದಯಪಾಲಿಸಿದ ನಾಡಿನಲ್ಲಿ ಅವರು ವಾಸಿಸುವರು. ಹೌದು, ನಿಮ್ಮ ಪಿತೃಗಳು ವಾಸಿಸಿದ ನಾಡಿನಲ್ಲಿ ಅವರೂ ಅವರ ಸಂತಾನದವರೂ ತಲತಲಾಂತರವಾಗಿ ವಾಸಿಸುವರು; ನನ್ನ ದಾಸ ದಾವೀದನು ಅವರಿಗೆ ಸದಾ ಪ್ರಭುವಾಗಿರುವನು.
26 : ನಾನು ಅವರೊಂದಿಗೆ ಶಾಂತಿಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಅದು ಶಾಶ್ವತವಾಗಿರುವುದು. ನಾನು ಅವರನ್ನು ನೆಲೆಗೊಳಿಸಿ, ವೃದ್ಧಿಮಾಡಿ, ನನ್ನ ಪವಿತ್ರಾಲಯವನ್ನು ಅವರ ನಡುವೆ ಯುಗಯುಗಾಂತರಕ್ಕೂ ನಿಲ್ಲಿಸುವೆನು.
27 : ಹೌದು, ನನ್ನ ವಾಸಸ್ಥಾನವು ಅವರ ಮಧ್ಯೆಯಿರುವುದು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.
28 : ನನ್ನ ಪವಿತ್ರಾಲಯ ಅವರ ಮಧ್ಯೆ ಶಾಶ್ವತವಾಗಿರಲು ಇಸ್ರಯೇಲನ್ನು ವಿೂಸಲು ಮಾಡಿಕೊಂಡಾತ ಸರ್ವೇಶ್ವರ ನಾನೇ ಎಂದು ಜನಾಂಗಗಳಿಗೆ ತಿಳಿದುಬರುವುದು”.

· © 2017 kannadacatholicbible.org Privacy Policy