Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಜೆಕಿಯೇಲ


1 : ಸರ್ವೇಶ್ವರಸ್ವಾಮಿ ಈ ವಾಣಿಯನ್ನು ನನಗೆ ದಯಪಾಲಿಸಿದರು.
2 : “ನರಪುತ್ರನೇ, ಇಸ್ರಯೇಲೆಂಬ ಮಂದೆಯ ಕುರುಬರಿಗೆ ವಿರುದ್ಧ ಈ ದೈವೋಕ್ತಿಯನ್ನು ಪ್ರವಚನ ರೂಪವಾಗಿ ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಅಯ್ಯೋ ಸ್ವಂತ ಹೊಟ್ಟೆ ಹೊರೆದುಕೊಳ್ಳುವ ಇಸ್ರಯೇಲಿನ ಕುರುಬರಿಗೆ ಧಿಕ್ಕಾರ! ಕುರಿಗಳ ಹೊಟ್ಟೆ ಗಮನಿಸುವುದು ಕುರುಬರ ಧರ್ಮವಲ್ಲವೆ?
3 : ನೀವು ಅವುಗಳ ಹಾಲನ್ನು ಕುಡಿಯುತ್ತೀರಿ, ಉಣ್ಣೆಯ ಹೊದಿಕೆಯನ್ನು ಹೊದಿಯುತ್ತೀರಿ. ಕೊಬ್ಬಿದ ಕುರಿಗಳನ್ನು ಕಡಿಯುತ್ತೀರಿ; ಆದರೆ ಕುರಿಗಳನ್ನು ಮೇಯಿಸುವುದಿಲ್ಲ.
4 : ಹೌದು, ದುರ್ಬಲವಾದವುಗಳನ್ನು ನೀವು ಬಲಗೊಳಿಸಲಿಲ್ಲ, ರೋಗದವುಗಳನ್ನು ಸ್ವಸ್ಥ ಮಾಡಲಿಲ್ಲ, ಮುರಿದ ಅಂಗಗಳನ್ನು ಕಟ್ಟಲಿಲ್ಲ, ದಾರಿತಪ್ಪಿದವುಗಳನ್ನು ಮಂದೆಗೆ ಸೇರಿಸಲಿಲ್ಲ, ತಪ್ಪಿಸಿಕೊಂಡವುಗಳನ್ನು ಹುಡುಕಲಿಲ್ಲ; ಅವುಗಳನ್ನು ಹಿಂಸೆ, ಬಲಾತ್ಕಾರಗಳಿಂದ ಆಳುತ್ತಾ ಬಂದಿದ್ದೀರಿ.
5 : ಕುರಿಗಾಹಿಗಳು ಇರಲಿಲ್ಲವಾದುದರಿಂದ ಅವು ಚದುರಿಹೋದುವು; ದಿಕ್ಕಾಪಾಲಾಗಿ ಕಾಡಿನ ಸಕಲ ಮೃಗಗಳಿಗೆ ತುತ್ತಾದವು;
6 : ನನ್ನ ಕುರಿಗಳು ಮಲೆನಾಡಿನಲ್ಲೆಲ್ಲಾ ಎತ್ತರವಾದ ಪ್ರತಿಯೊಂದು ಬೆಟ್ಟದ ಮೇಲೆ ಅಲೆದಾಡಿದವು; ಹೌದು, ನನ್ನ ಕುರಿಗಳು ಭೂ ಮಂಡಲದಲ್ಲೆಲ್ಲಾ ಚದರಿಹೋದವು; ಯಾರೂ ಅವುಗಳ ಹಿಂದೆ ಹೋಗಿ ಹುಡುಕಲಿಲ್ಲ.
7 : “ಕುರುಬರೇ, ಸರ್ವೇಶ್ವರನ ಮಾತನ್ನು ಕೇಳಿರಿ; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ –
8 : ಅಯ್ಯೋ, ನನ್ನ ಕುರಿಗಳು ಕೊಳ್ಳೆಯಾದವು, ಕಾಡಿನ ಸಕಲಮೃಗಗಳಿಗೆ ತುತ್ತಾದವು; ಕುರುಬರೇ ಇರಲಿಲ್ಲ. ನನ್ನ ಕುರುಬರು ನನ್ನ ಕುರಿಗಳನ್ನು ಹುಡುಕಲಿಲ್ಲ; ಅವರು ಸ್ವಂತ ಹೊಟ್ಟೆಪಾಡನ್ನು ನೋಡಿಕೊಂಡರೇ ಹೊರತು, ನನ್ನ ಕುರಿಗಳ ಹೊಟ್ಟೆಯನ್ನು ನೋಡಲೇ ಇಲ್ಲ.
9 : ಆದ ಕಾರಣ ಕುರುಬರೇ, ಸರ್ವೇಶ್ವರನ ವಾಕ್ಯವನ್ನು ಕೇಳಿರಿ;
10 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಅಕಟಾ! ನನ್ನ ಜೀವದಾಣೆ, ನಾನು ಆ ಕುರಿಗಾಹಿಗಳಿಗೆ ವಿರುದ್ಧನಾಗಿದ್ದೇನೆ; ಅವರು ನನ್ನ ಕುರಿಗಳ ಲೆಕ್ಕವನ್ನು ನನಗೆ ಒಪ್ಪಿಸಬೇಕು; ನನ್ನ ಕುರಿ ಮೇಯಿಸುವ ಕೆಲಸದಿಂದ ಅವರನ್ನು ತೆಗೆದುಬಿಡುವೆನು; ಆ ಕುರುಬರು ಇನ್ನು ಸ್ವಂತ ಹೊಟ್ಟೆಯನ್ನು ತುಂಬಿಸಿಕೊಳ್ಳರು; ನನ್ನ ಕುರಿಗಳು ಆಹಾರವಾಗಿ ಅವರ ಬಾಯಿಗೆ ಬೀಳದಂತೆ ಅವುಗಳನ್ನು ರಕ್ಷಿಸುವೆನು.
11 : “ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು.
12 : ಮಂದೆಯ ಕುರುಬನು ಸುತ್ತಮುತ್ತಲು ಚದರಿಹೋದ ತನ್ನ ಕುರಿಗಳನ್ನು ಹುಡುಕುವ ಹಾಗೆ ನಾನು ನನ್ನ ಕುರಿಗಳನ್ನು ಹುಡುಕುವೆನು;
13 : ಕಾರ್ಮುಗಿಲಿನ ದುರ್ದಿನದಲ್ಲಿ ಚೆಲ್ಲಾಪಿಲ್ಲಿಯಾದ ಅವುಗಳನ್ನು ಎಲ್ಲ ಸ್ಥಳಗಳಿಂದ ಬಿಡಿಸಿ, ಜನಾಂಗಗಳ ವಶದಿಂದ ತಪ್ಪಿಸಿ, ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡಿ ಇಸ್ರಯೇಲಿನ ಬೆಟ್ಟಗಳಲ್ಲೂ, ತೊರೆಗಳ ಬಳಿಯಲ್ಲೂ ನಾಡಿನ ಎಲ್ಲ ಹಕ್ಕೆಗಳಲ್ಲೂ ಮೇಯಿಸುವೆನು;
14 : ಅವುಗಳಿಗೆ ಒಳ್ಳೆಯ ಮೇವನ್ನು ಮೇಯಿಸುವೆನು; ಅವುಗಳ ಹುಲ್ಲುಗಾವಲು ಇಸ್ರಯೇಲಿನ ಎತ್ತರವಾದ ಬೆಟ್ಟಗಳಲ್ಲಿರುವುದು; ಅಲ್ಲಿ ಒಳ್ಳೆಯ ತೆವರಿನಲ್ಲಿ ಮಲಗುವುವು; ಇಸ್ರಯೇಲಿನ ಬೆಟ್ಟಗಳಲ್ಲಿ ಹಸಿಹುಲ್ಲನ್ನು ಮೇಯುವುವು.
15 : ನಾನೇ ನನ್ನ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡುವೆನು; ಇದು ಸರ್ವೇಶ್ವರನಾದ ದೇವರ ನುಡಿ.
16 : “ತಪ್ಪಿಸಿಕೊಂಡಿದ್ದನ್ನು ಹುಡುಕುವೆನು, ದಾರಿತಪ್ಪಿದ್ದನ್ನು ಮಂದೆಗೆ ಸೇರಿಸುವೆನು, ದುರ್ಬಲವಾದುದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು; ಬಲಿತ ಕೊಬ್ಬಿದ ಕುರಿಗಳನ್ನಾದರೋ ಧ್ವಂಸಮಾಡುವೆನು; ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ತಿನ್ನಿಸುವೆನು.”
17 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – “ನನ್ನ ಹಿಂಡೇ, ಇಗೋ, ನಾನು ನಿಮ್ಮಲ್ಲಿನ ಕುರಿಮೇಕೆಗಳಿಗೂ ಟಗರುಹೋತಗಳಿಗೂ ಮಧ್ಯವರ್ತಿಯಾಗಿ ನ್ಯಾಯ ತೀರಿಸುವೆನು.
18 : (ಟಗರು ಹೋತಗಳೇ,) ಒಳ್ಳೆಯ ಮೇವನ್ನು ನೀವು ಮೇದುಬಿಟ್ಟು ಮಿಕ್ಕ ಮೇವನ್ನು ತುಳಿದು, ಕಾಲಕಸ ಮಾಡಿದ್ದು ಅಲ್ಪ ಕಾರ್ಯವೋ? ತಿಳಿನೀರನ್ನು ಕುಡಿದುಬಿಟ್ಟು ಮಿಕ್ಕದ್ದನ್ನು ಕಾಲಿನಿಂದ ಕಲಕಿ ಬದಿಮಾಡಿದ್ದು ಸಣ್ಣ ಕೆಲಸವೋ?
19 : ನೀವು ತುಳಿದು ಕಾಲ ಕಸಮಾಡಿದ್ದನ್ನು ನನ್ನ ಕುರಿಗಳು ಮೇಯಬೇಕಾಯಿತು. ನೀವು ಕಾಲಿನಿಂದ ಕಲಕಿ ಬದಿಮಾಡಿದ್ದನ್ನು ಅವು ಕುಡಿಯಬೇಕಾಯಿತು.
20 : “ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಇಗೋ, ನಾನೇ ಕೊಬ್ಬಿದ ಟಗರು ಹೋತಗಳಿಗೂ ಬಡ ಕುರಿಮೇಕೆಗಳಿಗೂ ನ್ಯಾಯತೀರಿಸುವೆನು.
21 : ಟಗರು ಹೋತಗಳೇ, ನೀವು ಕುರಿಮೇಕೆಗಳನ್ನು ಪಕ್ಕದಿಂದಲೂ ಹೆಗಲಿನಿಂದಲೂ ನೂಕುತ್ತಾ ದುರ್ಬಲವಾದವುಗಳನ್ನು ಕೊಂಬುಗಳಿಂದ ಹಾಯುತ್ತಾ ನನ್ನ ಹಿಂಡನ್ನು ಚದರಿಸಿಬಿಟ್ಟಿರಿ;
22 : ಆದಕಾರಣ ನನ್ನ ಹಿಂಡು ಇನ್ನೆಂದಿಗೂ ಸೂರೆಯಾಗದಂತೆ ನಾನು ಅದನ್ನು ರಕ್ಷಿಸಿ ಟಗರುಹೋತಗಳಿಗೂ ಕುರಿಮೇಕೆಗಳಿಗೂ ನ್ಯಾಯತೀರಿಸುವೆನು.
23 : “ನನ್ನ ಹಿಂಡನ್ನು ಕಾಯಲು ಒಬ್ಬನೇ ಕುರುಬನನ್ನು ಏರ್ಪಡಿಸುವೆನು; ನನ್ನ ದಾಸ ದಾವೀದನೆಂಬ ಆ ಕುರುಬನು ಅದನ್ನು ಮೇಯಿಸುವನು; ಹೌದು, ಅದರ ಕುರುಬನಾಗಿ ಅದನ್ನು ಮೇಯಿಸುತ್ತಾ ಬರುವನು.
24 : ಸರ್ವೇಶ್ವರನಾದ ನಾನು ನನ್ನ ಜನರ ದೇವರಾಗಿರುವೆನು; ನನ್ನ ದಾಸ ದಾವೀದನು ಅವರನ್ನಾಳುವ ಪ್ರಭುವಾಗಿರುವನು; ಸರ್ವೇಶ್ವರನಾದ ನಾನೇ ಇದನ್ನು ನುಡಿದಿದ್ದೇನೆ.
25 : ನಾನು ಅವರೊಂದಿಗೆ ಶಾಂತಿ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ದುಷ್ಟಮೃಗಗಳು ನಾಡಿನಲ್ಲಿ ಇನ್ನಿರದಂತೆ ಮಾಡುವೆನು; ನನ್ನ ಜನರು ಕಾಡಿನಲ್ಲಿ ನಿರ್ಭಯವಾಗಿ ವಾಸಿಸುವರು, ಅರಣ್ಯದಲ್ಲಿ ಹಾಯಾಗಿ ನಿದ್ರಿಸುವರು.
26 : ನಾನು ಅವರನ್ನೂ ನನ್ನ ಪರ್ವತದ ಸುತ್ತಣ ಪ್ರದೇಶಗಳನ್ನೂ ಆಶೀರ್ವದಿಸಿ ಸುಖಪಡಿಸುವೆನು; ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು; ಶುಭದಾಯಕ ವೃಷ್ಟಿ ಆಗುವುದು.
27 : ತೋಟದ ಮರಗಳು ಹಣ್ಣು ಬಿಡುವುವು; ಹೊಲಗಳು ಒಳ್ಳೆಯ ಬೆಳೆಕೊಡುವುವು; ಜನರು ಸ್ವದೇಶದಲ್ಲಿ ನೆಮ್ಮದಿಯಾಗಿರುವರು; ಅವರ ಮೇಲೆ ಹೇರಿದ ನೊಗಗಳನ್ನು ನಾನು ಮುರಿದು ಹಾಕಿ, ಅವರನ್ನು ಅಡಿಯಾಳಾಗಿ ಮಾಡಿಕೊಂಡವರ ಅಧೀನದಿಂದ ಬಿಡಿಸಿದಾಗ, ನಾನೇ ಸರ್ವೇಶ್ವರ ಎಂದು ಅವರಿಗೆ ದೃಢವಾಗುವುದು.
28 : ಅಂದಿನಿಂದ ಅವರನ್ನು ಅನ್ಯಜನರು ಸೂರೆಮಾಡರು, ಕಾಡುಮೃಗಗಳು ನುಂಗವು; ಅವರು ಯಾರಿಗೂ ಹೆದರದೆ ನೆಮ್ಮದಿಯಾಗಿ ವಾಸಿಸುವರು.
29 : ನಾನು ಅವರಿಗಾಗಿ ಪ್ರಸಿದ್ಧ ಫಲವೃಕ್ಷಗಳನ್ನು ಬೆಳೆಯಿಸುವೆನು, ಕ್ಷಾಮವು ಅವರ ನಾಡನ್ನು ಇನ್ನು ಹಾಳು ಮಾಡದು. ಅವರು ಅನ್ಯಜನರ ತಿರಸ್ಕಾರಕ್ಕೆ ಗುರಿಯಾಗರು.
30 : ಆಗ ಅವರು ತಮ್ಮ ದೇವರಾದ ಸರ್ವೇಶ್ವರನೆಂಬ ನಾನು ತಮ್ಮೊಂದಿಗಿದ್ದೇನೆಂದೂ ಇಸ್ರಯೇಲ್ ವಂಶದವರಾದ ತಾವು ನನ್ನ ಜನರಾಗಿದ್ದೇವೆಂದೂ ನಿಶ್ಚಯಿಸಿಕೊಳ್ಳುವರು; ಇದು ಸರ್ವೇಶ್ವರನಾದ ದೇವರ ನುಡಿ.
31 : ನೀವು ನನ್ನ ಕುರಿಗಳು, ನನ್ನ ಕಾವಲಿನ ಕುರಿಗಳು, ನರಕುರಿಗಳಾದ ನಿಮಗೆ ನಾನು ದೇವರು,” ಎಂದು ಸರ್ವೇಶ್ವರನಾದ ದೇವರು ಹೇಳುತ್ತಾರೆ.

· © 2017 kannadacatholicbible.org Privacy Policy