1 : ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು:
2 : “ನರಪುತ್ರನೇ, ಜನರನ್ನು ಸಂಭೋದಿಸಿ ಅವರಿಗೆ ಹೀಗೆ ನುಡಿ – “ನಾನು ದೇಶದ ಮೇಲೆ ಖಡ್ಗವನ್ನು ಬೀಳಮಾಡುವಾಗ, ಆ ದೇಶದವರು ತಮ್ಮಲ್ಲಿ ಆರಿಸಿ ನೇಮಿಸಿಕೊಂಡ ಕಾವಲುಗಾರನು
3 : ದೇಶದ ಮೇಲೆ ಬೀಳುವ ಖಡ್ಗವನ್ನು ನೋಡಿದ ಕೂಡಲೆ ಕೊಂಬನ್ನೂದಿ ಸಜ್ಜನರನ್ನು ಎಚ್ಚರಿಸಲಿ; ಕೊಂಬಿನ ಕೂಗನ್ನು
4 : ಕೇಳಿಯೂ ಯಾವನಾದರು ಎಚ್ಚರಗೊಳ್ಳದೆ ಬೀಳುವ ಖಡ್ಗಕ್ಕೆ ಸಿಕ್ಕಿ ನಾಶವಾದರೆ, ತನ್ನ ಮರಣಕ್ಕೆ ತಾನೇ ಕಾರಣನಾಗುತ್ತಾನೆ.
5 : ಏಕೆಂದರೆ ಅವನು ಕೊಂಬಿನ ಕೂಗನ್ನು ಕೇಳಿಯೂ ಎಚ್ಚರಗೊಳ್ಳಲಿಲ್ಲ. ತನ್ನ ಮರಣಕ್ಕೆ ತಾನೇ ಕಾರಣನು; ಎಚ್ಚರಗೊಂಡಿದ್ದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುತ್ತಿದ್ದ.
6 : ಆದರೆ ಕಾವಲುಗಾರನೇ ಬೀಳುವ ಖಡ್ಗವನ್ನು ನೋಡಿಯೂ ಕೊಂಬನ್ನೂದದೆ, ಸಜ್ಜನರನ್ನು ಎಚ್ಚರಿಸದೆ ಹೋದರೆ ಖಡ್ಗ ಬಿದ್ದು ಆ ಜನರೊಳಗೆ ಯಾವನನ್ನೇ ಆಗಲಿ ನಾಶಮಾಡಿದರೆ, ತನ್ನ ಅಧರ್ಮದಲ್ಲೇ ನಾಶಗೊಂಡ ಆ ಮನುಷ್ಯನ ಮರಣಕ್ಕೆ, ಕಾವಲುಗಾರನೇ ಹೊಣೆ. ಅವನಿಗೆ ನಾನು ಮುಯ್ಯಿ ತೀರಿಸುವೆನು.
7 : “ನರಪುತ್ರನೇ, ನಾನು ನಿನ್ನನ್ನು ಇಸ್ರಯೇಲ್ ವಂಶದವರಿಗೆ ಕಾವಲುಗಾರನಾಗಿ ನೇಮಿಸಿದ್ದೇನೆ; ನೀನು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ, ನನ್ನ ದೂತನಾಗಿ ಅವರನ್ನು ಎಚ್ಚರಪಡಿಸು.
8 : ನಾನು ದುಷ್ಟನಿಗೆ – ‘ದುಷ್ಟನೇ, ನೀನು ಸತ್ತೇಸಾಯುವೆ’ ಎಂದು ನುಡಿಯುವಾಗ ನೀನು ಆ ದುಷ್ಟನನ್ನು ತನ್ನ ದುರ್ಮಾರ್ಗದಿಂದ ತಪ್ಪಿಸಲು ಅವನನ್ನು ಎಚ್ಚರಪಡಿಸದೆ ಹೋದರೆ ಅವನು ತನ್ನ ಅಪರಾಧದಿಂದಲೇ ಸಾಯಬೇಕಾಗುವುದು; ಅವನ ಮರಣಕ್ಕೆ ಹೊಣೆಯಾದ ನಿನಗೆ ಮುಯ್ಯಿತೀರಿಸುವೆನು.
9 : .ಆದರೆ ನೀನು ದುಷ್ಟನನ್ನು ದುರ್ಮಾರ್ಗದಿಂದ ತಪ್ಪಿಸಲು ಅವನನ್ನು ಎಚ್ಚರಿಸಿದರೂ ಇವನು ಅದನ್ನು ಬಿಡದೆ ಹೋದರೆ ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ.
10 :
“ನರಪುತ್ರನೇ, ಇಸ್ರಯೇಲ್ ವಂಶದವರಿಗೆ ಹೀಗೆ ನುಡಿ – ಅಯ್ಯೋ, ನಮ್ಮ ದ್ರೋಹಗಳ ಮತ್ತು ಪಾಪಗಳ ಭಾರ ನಮ್ಮ ಮೇಲೆ ಬಿದ್ದಿವೆ; ಅವುಗಳಿಂದ ಕ್ಷೀಣವಾಗಿ ಹೋಗುತ್ತಿದ್ದೇವೆ; ನಾವು ಹೇಗೆ ಉಳಿದೇವು ಅಂದುಕೊಳ್ಳುತ್ತೀರಲ್ಲವೇ?
11 : ನನ್ನ ಜೀವದಾಣೆ, ದುಷ್ಟನ ಸಾವಿನಲ್ಲಿ ನನಗೆ ಲವಲೇಶವೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ. ಇಸ್ರಯೇಲ್ ವಂಶದವರೇ, ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ. ಇಸ್ರಯೇಲ್ ವಂಶದವರೇ, ನಿಮ್ಮ ದುರ್ಮಾರ್ಗಗಳನ್ನು ಬಿಡಿ, ಬಿಟ್ಟುಬಿಡಿ; ನೀವು ಏಕೆ ಸಾಯಬೇಕು?” ಇದು ಸರ್ವೇಶ್ವರನಾದ ದೇವರ ನುಡಿ.
12 : “ನರಪುತ್ರನೇ, ನಿನ್ನ ಜನರಿಗೆ ಹೀಗೆ ಹೇಳು: ಶಿಷ್ಟನು ದ್ರೋಹಮಾಡಿದ್ದಲ್ಲಿ ಅವನ ಪುಣ್ಯ ಅವನನ್ನು ಉದ್ಧರಿಸದು; ದುಷ್ಟನು ತನ್ನ ದುಷ್ಟತನವನ್ನು ಬಿಟ್ಟಲ್ಲಿ ಅವನ ಪಾಪ ಅವನನ್ನು ಬೀಳಿಸದು; ಶಿಷ್ಟನು ಪಾಪಮಾಡಿದಲ್ಲಿ ಅವನ ಪುಣ್ಯ ಅವನನ್ನು ಉಳಿಸಲಾರದು.
13 : ನಾನು ಶಿಷ್ಟನಿಗೆ, ನೀನು ಬಾಳೇ ಬಾಳುವೆ ಎಂದು ಹೇಳಲು, ಅವನು ತನ್ನ ಪುಣ್ಯದ ಮೇಲೆ ಭರವಸೆಯಿಟ್ಟು ಪಾಪಮಾಡಿದರೆ, ಅವನು ಮಾಡಿದ ಯಾವ ಸುಕೃತ್ಯವು ಅವನ ಲೆಕ್ಕಕ್ಕೆ ಸೇರದು; ಅವನು ಮಾಡುವ ಪಾಪದಿಂದರೇ ಅವನು ಸಾಯುವನು.
14 : ನಾನು ದುಷ್ಟನಿಗೆ ‘ನೀನು ಸತ್ತೇ ಸಾಯುವೆ’ ಎಂದು ಹೇಳಲು ಅವನು ತನ್ನ ಪಾಪವನ್ನು ಬಿಟ್ಟು ನ್ಯಾಯನೀತಿಗಳನ್ನು ನಡೆಸಲು
15 : ಅಂದರೆ, ಆ ದುಷ್ಟನು ಒತ್ತೆಯನ್ನು ಬಿಗಿಹಿಡಿಯದೆ, ದೋಚಿಕೊಂಡದ್ದನ್ನು ಹಿಂದಕ್ಕೆ ಕೊಟ್ಟು, ಜೀವಾಧಾರವಾದ ವಿಧಿಗಳನ್ನು ಅನುಸರಿಸಿ, ಸಕಲ ದುಷ್ಕರ್ಮಗಳಿಗೂ ದೂರವಾದರೆ ಅವನು ಸಾಯನು, ಬಾಳೇ ಬಾಳುವನು.
16 : ಅವನು ಮಾಡಿದ ಯಾವ ಪಾಪವೂ ಅವನ ಲೆಕ್ಕಕ್ಕೆ ಸೇರದು; ನ್ಯಾಯ ನೀತಿಗಳನ್ನು ನಡೆಸುತ್ತಿರುವುದರಿಂದ ಅವನು ಬಾಳೇ ಬಾಳುವನು.
17 : “ಆದರೆ ನಿನ್ನ ಜನರು ಸರ್ವೇಶ್ವರನ ಕ್ರಮ ಸರಿಯಲ್ಲವೆಂದು ಹೇಳುತ್ತಿದ್ದಾರೆ. ಬದಲಿಗೆ ಅವರ ಕ್ರಮವೇ ಸರಿಯಿಲ್ಲ.
18 : ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮಮಾಡಿದರೆ, ಆ ಅಧರ್ಮದಿಂದಲೇ ಸಾಯುವನು
19 : ದುಷ್ಟನು ತನ್ನ ದುಷ್ಟತನವನ್ನು ಬಿಟ್ಟು ನೀತಿ ನ್ಯಾಯಗಳನ್ನು ನಡೆಸಿದರೆ, ಅವುಗಳಿಂದ ಉಳಿಯುವನು.
20 : ಆದರೆ ನೀವು ಸರ್ವೇಶ್ವರನ ಕ್ರಮವು ಸರಿಯಿಲ್ಲವೆಂದು ಹೇಳುತ್ತಿದ್ದೀರಿ; ಇಸ್ರಯೇಲ್ ವಂಶದವರೇ, ನಿಮ್ಮ ನಿಮ್ಮ ನಡತೆಗೆ ತಕ್ಕ ಹಾಗೆ ನಾನು ನಿಮಗೆ ತೀರ್ಪುನೀಡುವೆನು.”
21 :
ನಾವು ಸೆರೆಯಾಗಿ ಹನ್ನೆರಡನೆಯ ವರ್ಷದ ಹತ್ತನೆಯ ತಿಂಗಳಿನ ಐದನೆಯ ದಿನದಲ್ಲಿ ಜೆರುಸಲೇಮಿನಿಂದ ಪಲಾಯನ ಮಾಡಿದವನೊಬ್ಬನು ನನ್ನ ಬಳಿಗೆ ಬಂದು, - ‘ಪಟ್ಟಣವು ಶತ್ರು ವಶವಾಯಿತು’ ಎಂದು ಹೇಳಿದನು.
22 : ಅವನು ಬರುವುದಕ್ಕೆ ಹಿಂದಿನ ಸಾಯಂಕಾಲ ನಾನು ಸರ್ವೇಶ್ವರನ ಹಸ್ತಸ್ಪರ್ಶದಿಂದ ಪರವಶನಾಗಿದ್ದೆ. ಆ ಪಲಾಯಿತನು ಬೆಳಿಗ್ಗೆ ಬರುವನೆಂದು ಸರ್ವೇಶ್ವರ ನನ್ನ ಬಾಯನ್ನು ಬಿಚ್ಚಿದರು; ಹೌದು ನನ್ನ ಬಾಯಿ ಬಿಚ್ಚಿತ್ತು, ನನ್ನ ಮೂಕತನ ಹೋಗಿತ್ತು
23 : ಇಸ್ರಯೇಲ್ ಜನರ ಪಾಪಗಳು
ಆಗ ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು-
24 : “ನರಪುತ್ರನೇ, ಇಸ್ರಯೇಲ್ ನಾಡಿನ ಹಾಳುಪ್ರದೇಶಗಳಲ್ಲಿ ವಾಸಿಸುವರು, ‘ಅಬ್ರಹಾಮನು ಒಂಟಿಗನಾಗಿದ್ದರೂ ಈ ನಾಡು ಅವನಿಗೆ ಸೊತ್ತಾಗಿ ಸಿಕ್ಕಿತು; ಅದು ಬಹುಜನರಾದ ನಮಗೆ ಸೊತ್ತಾಗಿ ಸಿಕ್ಕಿದ್ದು ಏನು ದೊಡ್ಡದು! ಎಂದುಕೊಳ್ಳುತ್ತಿದ್ದಾರೆ.
25 : “ಆದುದರಿಂದ ನೀನು ಅವರಿಗೆ ಹೀಗೆ ನುಡಿ: ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ರಕ್ತದಿಂದ ಕೂಡಿದ ಮಾಂಸವನ್ನು ತಿನ್ನುತ್ತೀರಿ, ವಿಗ್ರಹಗಳ ಕಡೆಗೆ ಕಣ್ಣೆತ್ತುತ್ತೀರಿ; ರಕ್ತವನ್ನು ಸುರಿಸುತ್ತೀರಿ; ನಿಮ್ಮಥವರು ದೇಶವನ್ನು ಅನುಭವಿಸಬಹುದೇ?
26 : ನೀವು ಕತ್ತಿ ಬಳಸುವುದರಲ್ಲೇ ನಿರತರಾಗಿದ್ದೀರಿ, ದುರಾಚಾರ ನಡೆಸುತ್ತೀರಿ, ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ನೆರೆಯವನ ಹೆಂಡತಿಯನ್ನು ಕೆಡಿಸುತ್ತಾನೆ; ನಿಮ್ಮಂಥವರು ದೇಶವನ್ನು ಅನುಭವಿಸಬಹುದೋ?’
27 : “ಮತ್ತು ಅವರಿಗೆ ಹೀಗೆ ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ಹಾಳು ಪ್ರದೇಶಗಳಲ್ಲಿ ಇರುವವರನ್ನು ಖಡ್ಗವು ಹತಿಸುವುದು; ಬಯಲಿನಲ್ಲಿ ಇರುವವರನ್ನು ನಾನು ಮೃಗಗಳಿಗೆ ತುತ್ತುಮಾಡುವೆನು; ಗುಹೆದುರ್ಗಗಳಲ್ಲಿ ಇರುವವರನ್ನು ವ್ಯಾಧಿಯು ಸಾಯಿಸುವದು.
28 : ನಾನು ದೇಶವನ್ನು ಹಾಳುಪಾಳು ಮಾಡುವೆನು, ಅದರ ಶಕ್ತಿಯ ಮದವು ಇಳಿದು ಹೋಗುವುದು; ಇಸ್ರಯೇಲಿನ ಮಲೆನಾಡು ಬೀಡುಬೀಳುವುದು; ಯಾರೂ ಇಲ್ಲಿ ಹಾದುಹೋಗರು.
29 : ಅವರು ನಡೆಸಿದ ಬಹುದುರಾಚಾರಗಳ ನಿಮಿತ್ತ ನಾನು ದೇಶವನ್ನು ಹಾಳುಪಾಳು ಮಾಡಿದಾಗ ನಾನೇ ಸರ್ವೇಶ್ವರ ಎಂದು ಅವರಿಗೆ ದೃಢವಾಗುವುದು
30 :
“ನರಪುತ್ರನೇ, ನಿನ್ನ ಜನರು ಗೋಡೆಗಳ ನೆರಳಿನಲ್ಲೂ ಮನೆಯ ಬಾಗಿಲುಗಳಲ್ಲೂ ನಿಂತು ನಿನ್ನ ಪ್ರಸ್ತಾಪವನ್ನೆತ್ತಿ ಒಬ್ಬರಿಗೊಬ್ಬರು, ‘ಸರ್ವೇಶ್ವರನ ಬಾಯಿಂದ ಹೊರಟ ಮಾತೇನೆಂದು ಕೇಳೋಣ ಬನ್ನಿ’ ಎಂದು ಹೇಳಿಕೊಳ್ಳುತ್ತಿದ್ದಾರೆ.
31 : ಪ್ರಶ್ನೆ ಕೇಳುವುದಕ್ಕೆ ಬರುವ ಜನರಂತೆ, ಅವರು ನಿನ್ನ ಬಳಿಗೆ ಬಂದು, ನನ್ನ ಭಕ್ತರಾಗಿ ನಿನ್ನ ಮುಂದೆ ಕೂತುಕೊಂಡು, ನಿನ್ನ ಮಾತುಗಳನ್ನು ಕೇಳುತ್ತಾರೆ; ಆದರೆ ಕೈಗೊಳ್ಳುವುದಿಲ್ಲ. ಬಾಯಿಂದ ಬಹು ಪ್ರೀತಿಯನ್ನು ತೋರಿಸುತ್ತಾರೆ; ಅವರ ಮನಸ್ಸಾದರೋ ತಾವು ದೋಚಿಕೊಂಡದ್ದರ ಮೇಲೆ ಇರುತ್ತದೆ.
32 : ಇಗೋ, ನಿನ್ನ ಮಾತು ಅವರ ಎಣಿಕೆಯಲ್ಲಿ ಒಬ್ಬ ಸಂಗೀತಗಾರನು ವಾದ್ಯವನ್ನು ಜಾಣತನದಿಂದ ಬಾರಿಸಿ ಮಧುರಸ್ವರದಿಂದ ಹಾಡುವ ಪ್ರೇಮಗೀತೆಗೆ ಸಮಾನವಾಗಿದೆ; ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಕೈಗೊಳ್ಳುವುದಿಲ್ಲ.
33 : ನೀನು ಮುಂತಿಳಿಸಿದ್ದು ಸಂಭವಿಸುವಾಗ ಅದು ಈಗ ಸಂಭವಿಸಲಿದೆ, ತಮ್ಮ ಮಧ್ಯೆ ಇದ್ದವನು ಪ್ರವಾದಿಯೇ ಎಂದು ಅವರಿಗೆ ನಿಶ್ಚಿತವಾಗುವುದು.”