Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಜೆಕಿಯೇಲ


1 : ಹನ್ನೆರಡನೆಯ ವರ್ಷದ ಹನ್ನೆರಡನೆಯ ತಿಂಗಳಿನ ಮೊದಲನೆಯ ದಿನ ಸರ್ವೇಶ್ವರಸ್ವಾಮಿ ನನಗೆ ಅನುಗ್ರಹಿಸಿದ ವಾಣಿ ಇದು:
2 : “ನರಪುತ್ರನೇ, ನೀನು ಈಜಿಪ್ಟ್‍ನ ಅರಸ ಫರೋಹನನ್ನು ಕುರಿತು ಶೋಕಗೀತೆಯೊಂದನ್ನು ನುಡಿ: “ನೀನು ಮೃಗರಾಜನೆನಿಸಿಕೊಂಡಿರುವೆ ಜನಾಂಗಗಳಲ್ಲಿ, ಇಗೋ ದೊಡ್ಡ ಮೊಸಳೆಯಾಗಿಬಿಟ್ಟಿರುವೆ ಮಹಾನದಿಯಲ್ಲಿ. ನೀನಿದ್ದ ನದಿಗಳ ಭೇದಿಸಿಕೊಂಡು ಬಂದು, ಕಾಲಿಂದ ನೀ ಕಲಕಿರುವೆ ಅದರ ನೀರನ್ನು, ತುಳಿದು ಬದಿಮಾಡಿರುವೆ ಜನಾಂಗವೆಂಬ ಹೊಳೆಯನ್ನು.”
3 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಗುಂಪಾಗಿ ಕೂಡಿದ ಬಹುಜನಾಂಗಗಳ ಕೈಯಿಂದ, ನಾ ನಿನ್ನ ಮೇಲೆ ಬೀಸುವೆ ಬಲೆಯೊಂದ.
4 : ಆಕಾಶದ ಪಕ್ಷಿಗಳು ನಿನ್ನ ಮೇಲೆರಗುವಂತೆ, ಸಮಸ್ತ ಭೂಜಂತುಗಳು ನಿನ್ನಿಂದ ತೃಪ್ತಿಗೊಳ್ಳುವಂತೆ, ನಿನ್ನನೆಸೆದು ಬಿಡುವೆ ನೆಲದಮೇಲೆ ಬಯಲಿಗೆ.
5 : ಚೆಲ್ಲಲಾಗುವುದು ನಿನ್ನ ಮಾಂಸಖಂಡಗಳನು ಗುಡ್ಡೆಗಳ ಮೇಲೆ, ತುಂಬಲಾಗುವುದು ಕಣಿವೆಗಳನು ನಿನ್ನ ಮೂಳೆ ಮುಸುಕುಗಳಿಂದಲೆ.
6 : ತೋಯಿಸುವೆನು ಸಮನಾಡನು ನಿನ್ನ ರಕ್ತ ಪ್ರವಾಹದಿಂದ, ಹಳ್ಳಕೊಳ್ಳಗಳು ತುಂಬಿ ತುಳುಕುವುವು ಅದರಿಂದ.
7 : ನಿನ್ನ ಬೆಳಕನು ನಾ ನಂದಿಸಿ ಕತ್ತಲಾಗಿಸುವಾಗ, ಮುಚ್ಚುವೆನು ಸೂರ್ಯಚಂದ್ರ ನಕ್ಷತ್ರಗಳನು ಮೋಡಮುಸುಕಿನಿಂದ.
8 : ನಿನ್ನ ಮೇಲೆ ಗಗನದಲಿ ಮಿನುಗುವ ಸಕಲ ಜ್ಯೋತಿಗಳನು ಮುಸುಕು ಮಾಡುವೆನು, ನಿನ್ನ ನಾಡಿನೊಳು ಕತ್ತಲನೊಡ್ಡುವೆನು.
9 : “ನಿನ್ನ ವಿನಾಶದ ಸುದ್ದಿಯನ್ನು, ರಾಷ್ಟ್ರಗಳಲ್ಲಿ ನಿನಗೇ ತಿಳಿಯದ ದೇಶಗಳಿಗೆ ನಾನು ಮುಟ್ಟಿಸುವಾಗ ಆ ದೇಶಗಳು ಕಳವಳ ಪಡುವುವು.
10 : ಹೌದು, ಬಹುರಾಷ್ಟ್ರಗಳು ನಿನ್ನ ಗತಿಗೆ ಬೆಚ್ಚಿಬೆರಗಾಗುವಂತೆ ಮಾಡುವೆನು; ನಾನು ನನ್ನ ಖಡ್ಗವನ್ನು ಅವುಗಳ ಅರಸರ ಕಣ್ಣೆದುರಿಗೆ ಬೀಳಿಸುವಾಗ ಅವರು ನಿನ್ನ ದುರ್ಗತಿಯನ್ನು ನೆನೆಸಿ ಭಯಭ್ರಾಂತರಾಗುವರು; ನಿನ್ನ ಪತನದಿಂದ ಪ್ರತಿಯೊಬ್ಬನು ತನ್ನ ಪ್ರಾಣಾಪಾಯಕ್ಕೆ ಕ್ಷಣಕ್ಷಣವು ನಡುಗುವನು.”
11 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಬಾಬಿಲೋನಿನ ಅರಸನ ಖಡ್ಗ ನಿನ್ನ ಮೇಲೆ ಬೀಳುವುದು.
12 : ನಿನ್ನ ಬಹುಪ್ರಜೆಯನ್ನು ಅತಿ ಭಯಾನಕ ಜನಾಂಗದವರಾದ ಬಲಿಷ್ಠರ ಕತ್ತಿಗಳಿಂದ ಸಂಹರಿಸುವೆನು; ಈಜಿಪ್ಟ್ ಹೆಚ್ಚಳ ಪಡುವ ವಸ್ತುಗಳನ್ನೇ ಅವರು ಸೂರೆಮಾಡುವರು; ಅದರ ಜನ ನಿರ್ನಾಮವಾಗುವುದು.
13 : ದೊಡ್ಡ ಪ್ರವಾಹಗಳ ತೀರದಲ್ಲಿನ ಪಶುಗಳನ್ನೆಲ್ಲಾ ನಾಶಪಡಿಸುವೆನು; ಆ ನೀರನ್ನು ಕಲಕಲು ಇನ್ನು ಯಾವ ಮನುಷ್ಯನೂ ಅಲ್ಲಿ ಹೆಜ್ಜೆಯಿಡನು, ಯಾವ ಪಶುವೂ ಅಲ್ಲಿ ಗೊರಸಿಕ್ಕದು.
14 : ಆಗ ಆ ನೀರು ತಿಳಿಯಾಗುವಂತೆ, ಆ ಪ್ರವಾಹಗಳು ಎಣ್ಣೆಯ ಹಾಗೆ ಹರಿಯುವಂತೆ ಮಾಡುವೆನು; ಇದು ಸರ್ವೇಶ್ವರನಾದ ದೇವರ ನುಡಿ.
15 : ಈಜಿಪ್ಟಿನಲ್ಲಿ ತುಂಬಿದ್ದ ಸೊತ್ತನ್ನೆಲ್ಲಾ ಕರಗಿಸಿ ಆ ದೇಶವನ್ನು ಹಾಳುಪಾಳುಮಾಡಿ ಅಲ್ಲಿನ ಸಕಲ ನಿವಾಸಿಗಳನ್ನು ಸಂಹರಿಸಿದಾಗ ನಾನೇ ಸರ್ವೇಶ್ವರ ಎಂದು ಗೊತ್ತಾಗುವುದು.
16 : ಪ್ರಲಾಪಿಸುವವರು ಈ ಶೋಕಗೀತವನ್ನು ಹಾಡಲಿ; ಜನಾಂಗಗಳ ಯುವತಿಯರು ಹೀಗೆ ಗೋಳಿಡಲಿ; ಈಜಿಪ್ಟಿಗಾಗಿಯೂ ಅಲ್ಲಿನ ಬಹುಪ್ರಜೆಗಾಗಿಯೂ ದುಃಖಿಸಿ ಈ ಗೀತೆಯನ್ನು ಹಾಡಲಿ; ಇದು ಸರ್ವೇಶ್ವರನಾದ ದೇವರ ನುಡಿ.”
17 : ಹನ್ನೆರಡನೆಯ ವರ್ಷದ ಹದಿನೈದನೆಯ ದಿನದಲ್ಲಿ ಸರ್ವೇಶ್ವರ ಈ ವಾಣಿಯನ್ನು ದಯಪಾಲಿಸಿದರು –
18 : “ನರಪುತ್ರನೇ, ನೀನು ಈಜಿಪ್ಟಿನ ಅಸಂಖ್ಯಾತ ಪ್ರಜೆಗಾಗಿ ಗೋಳಾಡಿ ಅವರನ್ನೂ ಘನವಾದ ಜನಾಂಗಗಳವರನ್ನೂ ಅಧೋಲೋಕಕ್ಕೆ, ಪ್ರೇತಗಳ ಜೊತೆಗೆ ತಳ್ಳಿಬಿಡು.
19 : ಈಜಿಪ್ಟೇ, ನೀನು ಸೌಂದರ್ಯದಲ್ಲಿ ಯಾರಿಗೆ ಕಡಿಮೆ? ಪಾತಾಳಕ್ಕೆ ಇಳಿದು ನೆಲಸು ಸುನ್ನತಿಹೀನರ ನಡುವೆ.
20 : ಖಡ್ಗ ಹತರ ಮಧ್ಯೆ ಬೀಳು, ಕತ್ತಿಯನ್ನು ಎತ್ತಿಹಿಡಿಯಲಾಗಿದೆ. ಅಧೋಲೋಕದವರೇ, ಈಜಿಪ್ಟನ್ನು ಅದರ ಅನಂತ ಪ್ರಜೆಗಳನ್ನೂ ಎಳೆದುಕೊಳ್ಳಿ.
21 : ಪಾತಾಳದಲ್ಲಿನ ಬಲಿಷ್ಠಶೂರರೂ ಅದನ್ನೂ ಅದರ ಸಹಾಯಕರನ್ನೂ ನೋಡಿ, “ಓಹೋ, ಇವರು ಸುನ್ನತಿ ಹೀನರು, ಖಡ್ಗಹತರು, ಇಳಿದು ಬಂದು ಒರಗಿಬಿದ್ದರು’ ಎಂದುಕೊಳ್ಳುವರು.
22 : “ಅಸ್ಸೀರಿಯ ಮತ್ತು ಅದರ ಜನತೆ ಯಾವಾಗಲು ಅಲ್ಲಿರುವುವು; ಆ ಜನರ ಗೋರಿಗಳು ಅದನ್ನು ಸುತ್ತಿಕೊಂಡಿವೆ; ಅವರೆಲ್ಲರೂ ಸಂಹೃತರು, ಖಡ್ಗಹತರು.
23 : ಅವರ ಗೋರಿಗಳು ಅಧೋಲೋಕದ ಅಗಾಧ ಸ್ಥಳಗಳಲ್ಲಿ ಹರಡಿಕೊಂಡಿವೆ; ಅವರು ಅಸ್ಸೀರಿಯದ ಗೋರಿಯ ಸುತ್ತಲಿದ್ದಾರೆ; ಜೀವಲೋಕದಲ್ಲಿ ಭೀಕರವಾಗಿದ್ದ ಇವರೆಲ್ಲರೂ ಸಂಹೃತರು, ಖಡ್ಗಹತರು.
24 : “ಏಲಾಮೂ ಅಲ್ಲಿದೆ; ಅದರ ಪ್ರಜೆಯೆಲ್ಲಾ ಅದರ ಗೋರಿಯನ್ನು ಸುತ್ತಿಕೊಂಡಿವೆ. ಅವರೆಲ್ಲರೂ ಸಂಹೃತರು, ಖಡ್ಗಹತರು; ಜೀವಲೋಕದಲ್ಲಿ ಭೀಕರವಾಗಿದ್ದ ಆ ಸುನ್ನತಿಹೀನರು ಅಧೋಲೋಕಕ್ಕೆ ಇಳಿದು ಪ್ರೇತಗಳ ನಡುವೆ ಅವಮಾನಪಟ್ಟಿದ್ದಾರೆ.
25 : ಏಲಾಮು ಮಲಗುವುದಕ್ಕೆ, ಹತರಾದ ಅದರ ಪ್ರಜೆಗಳೆಲ್ಲರ ನಡುವೆ ಸ್ಥಳವನ್ನು ಏರ್ಪಡಿಸಿದ್ದಾರೆ, ಅವರ ಗೋರಿಗಳು ಅದರ ಸುತ್ತುಮುತ್ತಲಿವೆ. ಅವರೆಲ್ಲರೂ ಸುನ್ನತಿ ಹೀನರು, ಖಡ್ಗಹತರು; ಅವರು ಜೀವಲೋಕದಲ್ಲಿ ಭೀಕರರಾಗಿದ್ದು ಪ್ರೇತಗಳ ಜೊತೆಗೆ ಸೇರಿ ಅವಮಾನಪಟ್ಟವರಾಗಿದ್ದಾರೆ. ಸಂಹೃತರ ಮಧ್ಯದಲ್ಲೇ ಏಲಾಮಿಗೆ ಸ್ಥಳ ಏರ್ಪಾಡಾಗಿದೆ.
26 : “ಮೆಷೆಕ್, ತೂಬಲ್ ಅವುಗಳ ಎಲ್ಲಾ ಪ್ರಜೆಯೂ ಅಲ್ಲಿರುತ್ತಾರೆ; ಆ ಪ್ರಜೆಗಳ ಗೋರಿಗಳು ಅವುಗಳನ್ನು ಸುತ್ತಿಕೊಂಡಿವೆ; ಅವರೆಲ್ಲರೂ ಸುನ್ನತಿಹೀನರು, ಖಡ್ಗಹತರು. ಜೀವಲೋಕದಲ್ಲಿ ಅವರು ಭೀಕರ ರಾಗಿದ್ದರಲ್ಲವೇ?
27 : ಪೂರ್ವದಲ್ಲಿ ಯಾವ ಸುನ್ನತಿಹೀನ ಶೂರರು, ಜೀವಲೋಕದೊಳಗೆ ಬಲಿಷ್ಠರಿಗೂ ಭೀಕರರಾಗಿದ್ದು, ಹತರಾಗಿ ಆಯುಧ ಸಹಿತ ಪಾತಾಳಕ್ಕೆ ಇಳಿದು, ಕತ್ತಿಗಳನ್ನು ತಲೆದಿಂಬು ಮಾಡಿಕೊಂಡು, ತಮ್ಮ ಅಸ್ಥಿಗಳ ಮೇಲೆ ತಮ್ಮ ದುಷ್ಕøತ್ಯಗಳ ಭಾರವನ್ನು ಹೊತ್ತುಕೊಂಡಿದ್ದರೋ ಅವರ ನಡುವೆ ಮೆಷೆಕಿನವರೂ, ತೂಬಲಿನವರೂ ನೆಲಸದೆ ಹೋಗುವರೇ?
28 : “ಹೀಗೆ ಈಜಿಪ್ಟರು ಸುನ್ನತಿಹೀನರ ಮಧ್ಯೆ ನಾಶವಾಗಿ ಖಡ್ಗಹತರ ನಡುವೆ ಸೇರಿ ಹೋಗುವರು.
29 : “ಎದೋಮೂ ಅದರ ಅರಸರೂ ಎಲ್ಲ ಸರದಾರರೂ ಅಲ್ಲಿದ್ದಾರೆ; ಅವರು ಹಿಂಸಾಚಾರಿಗಳಾಗಿದ್ದು, ಖಡ್ಗಹತರ ಸಂಗಡ ಬಿದ್ದಿರುತ್ತಾರೆ; ಸುನ್ನತಿಹೀನರೊಡನೆ ಪ್ರೇತಗಳ ನಡುವೆ ನೆಲಸಿದ್ದಾರೆ.
30 : “ಉತ್ತರದೇಶದ ಸಕಲ ರಾಜರುಗಳೂ ಸಮಸ್ತ ಸಿದೋನ್ಯರೂ ಸಂಹೃತರೊಂದಿಗೆ ಇಳಿದು ಅಲ್ಲಿದ್ದಾರೆ; ಭಯಂಕರರಾಗಿದ್ದ ತಮ್ಮ ಶೌರ್ಯಕ್ಕೆ ನಾಚಿಕೆಗೊಂಡು, ಖಡ್ಗಹತರ ಮಧ್ಯೆ ಸುನ್ನತಿಹೀನರಾಗಿ ಬಿದ್ದು, ಪ್ರೇತಗಳ ನಡುವೆ ಅವಮಾನ ಪಟ್ಟಿದ್ದಾರೆ.
31 : “ಫರೋಹನು ಇವರೆಲ್ಲರನ್ನೂ ನೋಡಿ ತನ್ನ ಸಮಸ್ತ ಪ್ರಜೆಯ ವಿಷಯದಲ್ಲಿ ಸಮಾಧಾನ ಹೊಂದುವನು; ಹೌದು, ಫರೋಹನೂ ಖಡ್ಗಹತರಾದ ಅವನ ಸಕಲ ಸೈನಿಕರೂ ಸಮಾಧಾನ ಹೊಂದುವರು. ಇದು ಸರ್ವೇಶ್ವರನಾದ ದೇವರ ನುಡಿ.
32 : “ಇಗೋ, ಜೀವಲೋಕದಲ್ಲಿ ನಾನು ನನ್ನ ಭಯವನ್ನು ಹುಟ್ಟಿಸಿದ್ದೇನೆ; ಫರೋಹನೂ ಅವನ ಸಮಸ್ತ ಪ್ರಜೆಯೂ ಸುನ್ನತಿಹೀನರ ಮಧ್ಯೆ ಖಡ್ಗ ಹತರ ನಡುವೆ ಸೇರಿಹೋಗುವರು,” ಎಂಬುದು ಸರ್ವೇಶ್ವರನಾದ ದೇವರ ನುಡಿ.

· © 2017 kannadacatholicbible.org Privacy Policy