1 : ಈಜಿಪ್ಟಿಗಾಗುವ ದಂಡನೆ
ಸರ್ವೇಶ್ವರ ಇನ್ನೊಂದು ವಾಣಿಯನ್ನು ನನಗೆ ದಯಪಾಲಿಸಿದರು –
2 : “ನರಪುತ್ರನೇ, ನೀನು ಈ ದೈವೋಕ್ತಿಯನ್ನು ಪ್ರಕಟಿಸು - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಅರಚಿಕೊಳ್ಳಿರಿ, ಅಯ್ಯೋ ದುರ್ದಿನವೇ! ಆ ದಿನ ಹತ್ತಿರವಾಯಿತು:
3 : ಹೌದು, ಸಮೀಪಿಸಿತು ಸರ್ವೇಶ್ವರನ ದಿನ,
ಕಾರ್ಮುಗಿಲಿನ ದಿನ
ಅದು ರಾಷ್ಟ್ರಗಳಿಗೆ ನ್ಯಾಯತೀರಿಸತಕ್ಕ ಕಾಲ.
4 : ಖಡ್ಗವು ಈಜಿಪ್ಟಿನ ಮೇಲೆ ಬೀಳುವುದು;
ಅಲ್ಲಿ ಪ್ರಜೆಗಳು ಹತರಾಗಲು
ಸುಡಾನಿನಲ್ಲಿಯೂ ಸಂಕಟವಾಗುವುದು;
ಈಜಿಪ್ಟಿನಲ್ಲಿ ಹಲವರು ಸತ್ತು ಬೀಳುವರು,
ಅದರ ಅಸ್ತಿಭಾರ ಹಾಳಾಗುವುದು.
5 : “ಸುಡಾನರು, ಲೀಡಿಯರು, ಲೂದ್ಯರು, ಬಗೆಬಗೆಯ ಸಕಲವಿದೇಶೀಯರು, ಕೂಬ್ಯರು, ಮಿತ್ರರಾಜ್ಯದವರು ಇವರೆಲ್ಲ ಈಜಿಪ್ಟಿನವರೊಂದಿಗೆ ಖಡ್ಗದಿಂದ ಹತರಾಗುವರು.”
6 : ಸರ್ವೇಶ್ವರ ಇಂತೆನ್ನುತ್ತಾರೆ-“ಈಜಿಪ್ಟ್‍ಗೆ ಆಧಾರವಾದವರು ಬೀಳುವರು, ಅದರ ಶಕ್ತಿ ಮದವು ಇಳಿದು ಹೋಗುವುದು; ಅಲ್ಲಿನ ಜನರು ಮಿಗ್ದೋಲಿನಿಂದ ಸೆವೇನೆಯವರೆಗೆ ಖಡ್ಗದಿಂದ ಹತರಾಗುವರು. ಇದು ಸರ್ವೇಶ್ವರನಾದ ದೇವರ ನುಡಿ.
7 : ಹಾಳಾದ ದೇಶಗಳಲ್ಲಿ ಈ ದೇಶವೂ ಹಾಳಾಗುವುದು. ಪಾಳುಬಿದ್ದಿರುವ ಪಟ್ಟಣಗಳಲ್ಲಿ ಅದರ ಪಟ್ಟಣಗಳೂ ಪಾಳುಬಿದ್ದಿರುವುವು.
8 : ನಾನು ಈಜಿಪ್ಟ್‍ಗೆ ಬೆಂಕಿಹಚ್ಚಿ, ಅದರ ಸಹಾಯಕರನ್ನೆಲ್ಲ ನಾಶಮಾಡಿದ ಮೇಲೆ ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗವುದು.”
9 : “ಆ ದಿನಗಳಲ್ಲಿ ದೂತರು ನನ್ನ ಸನ್ನಿಧಾನದಿಂದ ಹೊರಟು, ಹಡಗುಗಳಲ್ಲಿ ಪ್ರಯಾಣ ಮಾಡಿ, ನಿಶ್ಚಿಂತರಾದ ಸುಡಾನರನ್ನು ಹೆದರಿಸುವರು; ಈಜಿಪ್ಟಿನ ವಿನಾಶ ದಿನದಲ್ಲಿ ಸುಡಾನರಿಗೂ ಸಂಕಟವಾಗುವುದು; ಇಗೋ, ಆ ದಿನ ಬಂದಿತು!”
10 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ನಾನು ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಕೈಯಿಂದ ಈಜಿಪ್ಟಿನ ಅಸಂಖ್ಯಾತ ಪ್ರಜೆಯನ್ನು ಕೊನೆಗಾಣಿಸುವೆನು.
11 : ಆ ದೇಶವನ್ನು ನಾಶಪಡಿಸಲು ಅವನನ್ನು ಅತಿ ಭಯಂಕರ ಜನಾಂಗದವರಾದ ಅವನ ಸೈನಿಕರೊಡನೆ ಬರಮಾಡುವೆನು; ಅವರು ಈಜಿಪ್ಟಿನ ಮೇಲೆ ಕತ್ತಿ ಹಿರಿದು ದೇಶವನ್ನು ಹತರಾದವರಿಂದ ತುಂಬಿಸುವರು.
12 : ನಾನು ನದೀ ಶಾಖೆಗಳನ್ನು ಬತ್ತಿಸಿ, ದೇಶವನ್ನು ದುಷ್ಟರ ಕೈಗೆ ವಶಮಾಡಿಬಿಡುವೆನು; ಹೌದು, ದೇಶವನ್ನೂ ಅದರಲ್ಲಿನ ಸಮಸ್ತವನ್ನೂ ಅನ್ಯರ ಕೈಯಿಂದ ಹಾಳುಮಾಡಿಸುವೆನು; ಸರ್ವೇಶ್ವರನಾದ ನಾನೇ ನುಡಿದಿದ್ದೇನೆ.”
13 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ನಾನು ಮೆಂಫೀಸ್‍ನ ವಿಗ್ರಹಗಳನ್ನೆಲ್ಲ ಒಡೆದು, ಕೊನೆಗಾಣಿಸುವೆನು; ಈಜಿಪ್ಟ್ ದೇಶದಲ್ಲಿ ಇನ್ನು ಯಾವ ಪ್ರಭುವೂ ಇರನು; ನಾನು ಆ ದೇಶಕ್ಕೆ ಭಯವನ್ನೊಡ್ಡುವೆನು.
14 : ನಾನು ದಕ್ಷಿಣ ಈಜಿಪ್ಟನ್ನು ಹಾಳುಮಾಡಿ, ಚೋವನಿಗೆ ಬೆಂಕಿಯಿಕ್ಕಿ, ತೆಬೆಸಿನ ರಾಜಧಾನಿಯನ್ನು ದಂಡಿಸಿ,
15 : ಈಜಿಪ್ಟಿಗೆ ರಕ್ಷಣಾ ಕೋಟೆಯಾದ ಪೆಲೂಸಿಯಮ್‍ನ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ, ತೆಬೆಸಿನ ನಿವಾಸಿಗಳನ್ನೆಲ್ಲಾ ಕತ್ತರಿಸಿಬಿಡುವೆನು.
16 : ನಾನು ಈಜಿಪ್ಟಿಗೆ ಕಿಚ್ಚನ್ನು ಹತ್ತಿಸಲು ಪೆಲೂಸಿಯಮ್ ಪ್ರಾಣಸಂಕಟ ಪಡುವುದು; ತೆಬೆಸ್ ಭಂಗಕ್ಕೆ ಈಡಾಗುವುದು; ಮೆಂಫೀಸ್ ಮೇಲೆ ವೈರಿಗಳು ಮಧ್ಯಾಹ್ನದಲ್ಲೇ ಬೀಳುವರು.
17 : ಓನಿನ ಮತ್ತು ಪೀಬೆತಿನ ಯುವಕರು ಖಡ್ಗದಿಂದ ಹತರಾಗುವರು; ಅಲ್ಲಿನ ನಿವಾಸಿಗಳು ಸೆರೆಯಾಗಿ ಹೋಗುವರು.
18 : ಈಜಿಪ್ಟ್ ಹೊರಿಸಿದ ನೊಗಗಳನ್ನು ನಾನು ತಹಪನೇಸಿನಲ್ಲಿ ಮುರಿಯುವಾಗ, ಅಲ್ಲಿ ಹೊತ್ತು ಮೂಡದು, ಅದರ ಶಕ್ತಿಮದವು ಅಡಗಿ ಹೋಗುವುದು. ಕಾರ್ಮುಗಿಲು ಅದನ್ನು ಆವರಿಸುವುದು. ಅದರ ಯುವತಿಯರು ಸೆರೆಗೆ ಒಯ್ಯಲ್ಪಡುವರು.
19 : ಹೀಗೆ ನಾನು ಈಜಿಪ್ಟರಿಗೆ ದಂಡನೆಗಳನ್ನು ವಿಧಿಸಿ ತೀರಿಸುವಾಗ ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.”
20 : ದುರ್ಬಲನಾದ ಈಜಿಪ್ಟಿನ ಅರಸ
ಹನ್ನೊಂದನೆಯ ವರ್ಷದ ಮೊದಲನೆಯ ತಿಂಗಳಿನ ಏಳನೆಯ ದಿವಸದಲ್ಲಿ ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು.
21 : “ನರಪುತ್ರನೇ, ನಾನು ಈಜಿಪ್ಟ್‍ನ ಅರಸ ಫರೋಹನ ಕೈಯನ್ನು ಮುರಿದುಬಿಟ್ಟಿದ್ದೇನೆ; ಇಗೋ, ಅದನ್ನು ಯಾರೂ ಕಟ್ಟಲಿಲ್ಲ, ಔಷಧ ಹಚ್ಚಲಿಲ್ಲ. ಅದು ಖಡ್ಗ ಹಿಡಿಯುವಷ್ಟು ಬಲಗೊಳ್ಳುವಂತೆ ಯಾರೂ ಬಟ್ಟೆ ಸುತ್ತಿ ಅದನ್ನು ಬಿಗಿಸಲಿಲ್ಲ.
22 : . ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಾನು ಈಜಿಪ್ಟಿನ ಅರಸ ಫರೋಹನಿಗೆ ವಿರುದ್ಧನಾಗಿ ಅವನ ಕೈಗಳನ್ನು, ಅಂದರೆ ಸರಿಯಾಗಿ ಇರುವುದನ್ನೂ, ಮುರಿದದ್ದನ್ನೂ ಪೂರ್ತಿಯಾಗಿ ಮುರಿದು ಬಿಟ್ಟು, ಖಡ್ಗವು ಅವನ ಕೈಯೊಳಗಿನಿಂದ ಬೀಳುವಂತೆ ಮಾಡುವೆನು.
23 : ಈಜಿಪ್ಟರನ್ನು ಜನಾಂಗಗಳಲ್ಲಿ ಚದರಿಸಿ ದೇಶದೇಶಗಳಿಗೆ ತೂರಿಬಿಡುವೆನು.
24 : ನಾನು ಬಾಬಿಲೋನಿನ ಅರಸನ ಕೈಗಳನ್ನು ಬಲಪಡಿಸಿ, ನನ್ನ ಖಡ್ಗವನ್ನು ಅವನ ಕೈಗೆ ಕೊಟ್ಟು, ಫರೋಹನ ಕೈಗಳನ್ನು ಮುರಿಸುವಾಗ ಗಾಯದಿಂದ ಪ್ರಾಣಸಂಕಟ ಪಡುವವನಂತೆ ಫರೋಹನು ಆ ಅರಸನ ಮುಂದೆ ನರಳಾಡುವನು.
25 : ನಾನು ಬಾಬಿಲೋನಿನ ಅರಸನ ಕೈಗಳನ್ನು ಬಲಪಡಿಸುವೆನು; ಫರೋಹನ ಕೈಗಳಾದರೋ ಜೋಲು ಬೀಳುವುವು: ನಾನು ನನ್ನ ಖಡ್ಗವನ್ನು ಬಾಬಿಲೋನಿನ ಅರಸನಿಗೆ ಎತ್ತುವೆನು. ಅವನು ಅದನ್ನು ಈಜಿಪ್ಟ್ ದೇಶದ ಮೇಲೆ ಎತ್ತುವನು.
26 : ನಾನು ಈಜಿಪ್ಟರನ್ನು ಜನಾಂಗಗಳಲ್ಲಿ ಚದರಿಸಿ ದೇಶವಿದೇಶಗಳಿಗೆ ತೂರಿಬಿಡುವಾಗ ನಾನೇ ಸರ್ವೇಶ್ವರ ಎಂದು ಅವರಿಗೆ ತಿಳಿದು ಬರುವುದು.”