1 : ಬಳಿಕ ಸರ್ವೇಶ್ವರ ನನಗೆ, “ನರಪುತ್ರನೇ, ನಿನಗೆ ಕೊಟ್ಟ ಈ ಸುರುಳಿಯನ್ನು ತಿನ್ನು; ಅನಂತರ ಇಸ್ರಯೇಲ್ ವಂಶದವರಿಗೆ ಸಾರು, ಹೋಗು,” ಎಂದು ಆಜ್ಞಾಪಿಸಿದರು.
2 : ನಾನು ಬಾಯಿ ತೆರೆದೆ; ಅವರೇ ಆ ಸುರುಳಿಯನ್ನು ನನಗೆ ತಿನ್ನಿಸಿದರು.
3 : ತಿನ್ನಿಸುತ್ತಾ, “ನರಪುತ್ರನೇ, ನಾನು ಕೊಡುವ ಈ ಸುರುಳಿಯನ್ನು ತಿಂದು ಹೊಟ್ಟೆ ತುಂಬಿಸಿಕೋ,” ಎಂದರು. ನಾನು ಅದನ್ನು ತಿಂದು ಬಿಟ್ಟೆ; ಅದು ನನ್ನ ಬಾಯಿಗೆ ಜೇನಿನಂತೆ ಸಿಹಿಯಾಗಿತ್ತು.
4 : ಆಮೇಲೆ ಸರ್ವೇಶ್ವರ ನನಗೆ ಹೀಗೆಂದರು: “ನರಪುತ್ರನೇ, ನೀನು ಇಸ್ರಯೇಲ್ ವಂಶದವರ ಬಳಿಗೆ ಹೋಗಿ ನಾನು ತಿಳಿಸುವ ಮಾತುಗಳನ್ನು ಅವರಿಗೆ ಹೇಳು.
5 : ನಾನು ನಿನ್ನನ್ನು ಇಸ್ರಯೇಲ್ ವಂಶದವರ ಬಳಿಗೆ ಕಳುಹಿಸುತ್ತೇನೆಯೇ ಹೊರತು ಕಷ್ಟಕರವಾದ ಅನ್ಯಭಾಷೆಯನ್ನಾಡುವ ಜನರ ಬಳಿಗೆ ಕಳುಹಿಸುತ್ತಿಲ್ಲ;
6 : ಹೌದು, ನಿನಗೆ ಅರ್ಥವಾಗದ ಕಷ್ಟಕರವಾದ ಅನ್ಯಭಾಷೆಯನ್ನಾಡುವ ಜನರ ಬಳಿಗೆ ಕಳುಹಿಸುತ್ತಿಲ್ಲ; 6ಹೌದು, ನಿನಗೆ ಅರ್ಥವಾಗದ ಕಷ್ಟಕರವಾದ ಅನ್ಯಭಾಷೆಯನ್ನಾಡುವ ನಾನಾ ಜನಾಂಗಗಳ ಕಡೆಗೆ ಕಳುಹಿಸುತ್ತಿಲ್ಲ. ಇಂಥವರ ಕಡೆಗೆ ನಾನು ನಿನ್ನನ್ನು ಕಳುಹಿಸಿದ ಪಕ್ಷದಲ್ಲಿ ಅವರಾದರೂ ನಿಶ್ಚಯವಾಗಿ ನಿನ್ನ ಮಾತಿಗೆ ಕಿವಿಗೊಡುತ್ತಿದ್ದರು.
7 : ಇಸ್ರಯೇಲ್ ವಂಶದವರೋ ನಿನಗೆ ಕಿವಿಗೊಡಲು ಸಿದ್ಧರಿಲ್ಲ; ನನಗೂ ಕಿವಿಗೊಡಲು ಸಿದ್ಧರಿಲ್ಲ; ನನಗೂ ಕಿವಿಗೊಡಲು ಸಿದ್ಧರಿಲ್ಲ; ಅವರೆಲ್ಲರು ಗರ್ವಿಗಳು ಹಾಗೂ ಹಟಮಾರಿಗಳು.
8 : ಇಗೋ, ಅವರ ಕಠಿಣ ಹೃದಯಕ್ಕೆ ವಿರುದ್ಧ ನಿನ್ನ ಹೃದಯವನ್ನು ಕಠಿಣಪಡಿಸಿದ್ದೇನೆ; ಅವರ ಹಟಮಾರಿತನಕ್ಕೆ ಪ್ರತಿಯಾಗಿ ನಿನ್ನನ್ನು ಹಟವಾದಿಯನ್ನಾಗಿ ಮಾಡಿದ್ದೇನೆ.
9 : ನಿನ್ನ ನಿರ್ಧಾರವನ್ನು ಕಗ್ಗಲ್ಲಿಗಿಂತ ಕಠಿಣವಾದ ವಜ್ರದಷ್ಟು ಕಠಿಣಪಡಿಸಿದ್ದೇನೆ; ಅವರು ದ್ರೋಹಿ ವಂಶದವರು, ಅವರಿಗೆ ಭಯಪಡಬೇಡ; ಅವರ ಬಿರುನೋಟಕ್ಕೆ ಬೆಚ್ಚದಿರು.”
10 : ಇದಲ್ಲದೆ ಸರ್ವೇಶ್ವರ ನನಗೆ ಹೀಗೆ ಹೇಳಿದರು: “ನರಪುತ್ರನೇ, ನಾನು ನಿನಗೆ ನುಡಿಯುವ, ಮಾತುಗಳನ್ನೆಲ್ಲಾ ಕಿವಿಯಿಂದ ಕೇಳಿ ಮನಸ್ಸಿನಲ್ಲಿಟ್ಟುಕೋ.
11 : ಸೆರೆಯಾಗಿರುವ ನಿನ್ನ ಸ್ವಜನರ ಬಳಿಗೆಹೋಗಿ ಅವರು ಕೇಳಲಿ ಅಥವಾ ಕೇಳದೆ ಹೋಗಲಿ ಅವರನ್ನು ಪ್ರಬೋಧಿಸು; ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ,’ ಎಂದು ಅವರಿಗೆ ಸಾರಿಹೇಳು.”
12 : ಆಮೇಲೆ ದೇವರಾತ್ಮ ನನ್ನನ್ನು ಎತ್ತಿಕೊಂಡು ಹೋಯಿತು. “ಮಹಿಮಾಭರಿತ ಸರ್ವೇಶ್ವರಸ್ವಾಮಿಗೆ ಆತನಾಲಯದಲ್ಲಿ ಸ್ತೋತ್ರ; ಸ್ತೋತ್ರ;” ಎಂಬ ಮಹಾಶಬ್ದ ನನ್ನ ಹಿಂದೆ ಭರಭರನೆ ಕೇಳಿಸಿತು.
13 : ಆ ಜೀವಿಗಳ ರೆಕ್ಕೆಗಳು ಒಂದಕ್ಕೊಂದು ಬಡಿದಾಡುವ ಸಪ್ಪಳ, ಅವುಗಳ ಪಕ್ಕದಲ್ಲಿ ಗರಗರನೆ ತಿರುಗುವ ಚಕ್ರಗಳ ಸದ್ದು, ಹೀಗೆ ಭೂಕಂಪದಂಥ ಮಹಾಶಬ್ದ ನನ್ನ ಕಿವಿಗೆ ಬಿತ್ತು.
14 : ದೇವರಾತ್ಮ ನನ್ನನ್ನು ಎತ್ತಿಕೊಂಡು ಹೋಯಿತು. ಸರ್ವೇಶ್ವರನ ಹಸ್ತಸ್ಪರ್ಶದಿಂದ ನಾನು ಅತಿ ಪರವಶನಾಗಿದ್ದು ವ್ಯಥೆಗೊಳ್ಳುತ್ತಾ ಮನಸ್ತಾಪಪಡುತ್ತಾ ಮುನ್ನಡೆದೆ.
15 : ಅನಂತರ ಕೆಬಾರ್ ನದಿಯ ಹತ್ತಿರ ತೇಲ್ ಅಬೀಬ್‍ನಲ್ಲಿ ವಾಸವಾಗಿದ್ದ ಗಡೀಪಾರಾಗಿ ಸೆರೆಯಾಳುಗಳಾಗಿದ್ದವರ ಬಳಿಗೆ ಬಂದೆ. ಅವರು ಕೂತಿದ್ದ ಸ್ಥಳದಲ್ಲಿಯೇ ಕುಳಿತುಕೊಂಡೆ; ಏಳು ದಿವಸ ಅಲ್ಲೇ ಅವರ ಮಧ್ಯದಲ್ಲಿ ಸ್ತಬ್ದನಾಗಿ ಇದ್ದುಬಿಟ್ಟೆ.
16 : ಏಳು ದಿವಸಗಳಾದ ಮೇಲೆ ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ ಇದು:
17 : “ನರಪುತ್ರನೇ, ನಾನು ನಿನ್ನನ್ನು ಇಸ್ರಯೇಲ್ ವಂಶದವರ ಮೇಲೆ ಕಾವಲುಗಾರನನ್ನಾಗಿ ನೇಮಿಸಿದ್ದೇನೆ. ಹೀಗಿರಲು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ ನನ್ನ ಪರವಾಗಿ ಅವರನ್ನು ಎಚ್ಚರಿಸು.
18 : ನಾನು ದುಷ್ಟನಿಗೆ, “ನೀನು ಖಂಡಿತವಾಗಿ ಸಾಯುವೆ,” ಎಂದು ನುಡಿಯುವಾಗ ನೀನು ಅವನನ್ನು ಎಚ್ಚರಿಸದೆ ಹಾಗು ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ ಅವನಿಗೆ ಬುದ್ದಿ ಹೇಳದೆ ಇದ್ದರೆ, ಆ ದುಷ್ಟನು ತನ್ನ ಅಪರಾಧಕ್ಕಾಗಿ ಸಾಯಬೇಕಾಗುವುದು; ಅವನ ಮರಣಕ್ಕೆ ನೀನೆ ಹೊಣೆಯಾಗುವೆ.
19 : ನೀನು ಆ ದುಷ್ಟನನ್ನು ಎಚ್ಚರಿಸಿದರೂ ಅವನು ತನ್ನ ದುಷ್ಟತನವನ್ನೂ ದುರ್ಮಾರ್ಗವನ್ನೂ ಬಿಡದೆ ಹೋದರೆ ತನ್ನ ಅಪರಾಧಕ್ಕಾಗಿ ಸಾಯುವನು; ನೀನಾದರೋ ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ.
20 : ಇದಲ್ಲದೆ, ಸಜ್ಜನನೊಬ್ಬನು ತನ್ನ ಸನ್ನಡತೆಯನ್ನು ಬಿಟ್ಟು ಅಧರ್ಮಮಾಡುವಲ್ಲಿ, ನಾನು ಅವನ ಮುಂದೆ ಒಡ್ಡುವ ಆತಂಕವನ್ನು ಎಡವಿ ಅವನು ಸತ್ತೇ ಸಾಯುವನು; ನೀನು ಅವನನ್ನು ಎಚ್ಚರಿಸದೆ ಹೋದ ಕಾರಣ ಅವನು ತನ್ನ ಪಾಪದಿಂದ ಸಾಯಬೇಕಾಯಿತು. ಅವನು ಮಾಡಿದ ಸುಕೃತ್ಯಗಳು ಲೆಕ್ಕಕ್ಕೆಬಾರವು; ಅವನ ಮರಣಕ್ಕೆ ನೀನೆ ಹೊಣೆಯಾಗುವೆ.
21 : ನೀನು ಆ ಸಜ್ಜನನನ್ನು ಪಾಪಮಾಡದಂತೆ ಎಚ್ಚರಿಸಿದ ಮೇಲೆ ಅವನು ಪಾಪ ಮಾಡದೆ ಎಚ್ಚರಗೊಂಡರೆ ಈ ಕಾರಣ ಜೀವದಿಂದ ಉಳಿಯುವನು; ನೀನೂ ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ.”
22 : ಅದೇ ಸ್ಥಳದಲ್ಲಿ ನಾನು ಸರ್ವೇಶ್ವರನ ಹಸ್ತಸ್ಪರ್ಶದಿಂದ ಪರವಶನಾದೆ. ಆಗ ಅವರು ನನಗೆ, “ನೀನೆದ್ದು ಬಯಲುಪ್ರದೇಶಕ್ಕೆ ಹೊರಡು, ಅಲ್ಲಿ ನಾನು ನಿನ್ನೊಂದಿಗೆ ಮಾತಾಡುವೆನು,” ಎಂದು ಹೇಳಿದರು.
23 : ನಾನೆದ್ದು ಬಯಲು ಪ್ರದೇಶಕ್ಕೆ ಹೊರಟುಬಂದಾಗ, ಕೆಬಾರ್ ನದಿಯ ಹತ್ತಿರ ನನಗೆ ಮಹಿಮಾದ್ಭುತ ದರ್ಶನವು ಆದಂತೆ, ಇಗೋ ಅಲ್ಲಿಯೂ ಸರ್ವೇಶ್ವರನ ಮಹಿಮೆ ಪ್ರತ್ಯಕ್ಷವಾಯಿತು. ಅದನ್ನು ನೋಡಿ ಅಡ್ಡಬಿದ್ದೆ.
24 : ದೇವರಾತ್ಮ ನನ್ನೊಳಗೆ ಹೊಕ್ಕು ನಾನು ಎದ್ದು ನಿಂತುಕೊಳ್ಳುವಂತೆ ಮಾಡಿತು. ಆಮೇಲೆ ಅವರು ನನಗೆ ಹೀಗೆ ಹೇಳಿದರು: ನೀನು ಹೋಗಿ ನಿನ್ನ ಮನೆಯೊಳಗೆ ಅಡಗಿಕೋ,
25 : ನರಪುತ್ರನೇ, ಇಗೋ, ನಿನ್ನ ಸ್ವಜನರೇ ನಿನ್ನನ್ನು ಕಟ್ಟಿ ಬಂಧಿಸುವರು. ನೀನು ಅವರ ಮಧ್ಯೆ ಅತ್ತಿತ್ತ ಸಂಚರಿಸದಿರುವೆ.
26 : ಇದಲ್ಲದೆ, ನಿನ್ನ ನಾಲಿಗೆ ಸೇದಿಹೋಗಿ ನೀನು ಮೂಕನಾಗಿರುವಂತೆ ಮಾಡುವೆನು; ದ್ರೋಹಿವಂಶದವರಾದ ಅವರನ್ನು ನೀನು ಖಂಡಿಸಲು ಸಾಧ್ಯವಾಗದು.
27 : ನಾನು ನಿನ್ನೊಡನೆ ಮತ್ತೆ ಮಾತಾಡುವಾಗ ನಿನ್ನ ಬಾಯನ್ನು ಬಿಚ್ಚುವೆನು; ಆಗ ನೀನು ಅವರಿಗೆ, ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ’ ಎಂದು ನುಡಿಯಬೇಕು; ಕೇಳುವವನು ಕೇಳಲಿ, ಕೇಳದವನು ಬಿಡಲಿ; ಏಕೆಂದರೆ ಅವರು ದ್ರೋಹಿವಂಶದವರೇ.