1 : ಟೈರಿನ ಪ್ರಭುವಿನ ಅಹಂಭಾವ – ಅದರ ಖಂಡನೆ
ಸರ್ವೇಶ್ವರ ಇನ್ನೊಂದು ವಾಣಿಯನ್ನು ನನಗೆ ದಯಪಾಲಿಸಿದರು –
2 : “ನರಪುತ್ರನೇ, ನೀನು ಟೈರ್ ನಗರದ ರಾಜನಿಗೆ ಹೀಗೆ ನುಡಿ; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ಗರ್ವದಿಂದ ‘ಆಹಾ, ನಾನೆ ದೇವರು, ಸಮುದ್ರ ಮಧ್ಯೆ ದೇವರ ಆಸನವನ್ನೇ ಆಲಂಕರಿಸಿದ್ದೇನೆ’, ಎಂದುಕೊಂಡೆ. ನೀನು ನಿನ್ನ ದೇವರಿಗೆ ಸಮನಾಗಿಸಿಕೊಂಡೆಯೋ? ನೀನು ಎಂದಿಗೂ ದೇವರಲ್ಲ, ನೀನೊಬ್ಬ ನರಪ್ರಾಣಿಯಷ್ಟೆ.
3 : ನೀನು ದಾನಿಯೇಲನಿಗಿಂತಲೂ ಬುದ್ಧಿವಂತನೋ? ಹಾಗಾದರೆ ನಿನಗೆ ಮರೆಯಾದ ರಹಸ್ಯ ಯಾವುದೂ ಇಲ್ಲ!
4 : ನಿನ್ನ ಜ್ಞಾನ ವಿವೇಕಿಗಳಿಂದ ಐಶ್ವರ್ಯವನ್ನು ಗಳಿಸಿ, ನಿನ್ನ ಬೊಕ್ಕಸಗಳಲ್ಲಿ ಬೆಳ್ಳಿಬಂಗಾರವನ್ನು ತುಂಬಿಸಿ ಕೊಂಡಿರುವೆ.
5 : ನಿನ್ನ ಅಧಿಕ ಜ್ಞಾನದಿಂದ ಹಾಗು ವ್ಯಾಪಾರದಿಂದ ಸಿರಿಸಂಪತ್ತನ್ನು ವೃದ್ಧಿಮಾಡಿಕೊಂಡಿರುವೆ. ಆದುದರಿಂದ ನಿನ್ನ ಮನಸ್ಸು ನಿನ್ನ ಆಸ್ತಿಯ ನಿಮಿತ್ತ ಉಬ್ಬಿಹೋಗಿದೆ.
6 : ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ-ನೀನು ನಿನ್ನನ್ನೆ ದೇವರಿಗೆ ಸಮನಾಗಿಸಿಕೊಂಡಿರುವೆ.
7 : ಆದುದರಿಂದ ನಾನು ಅತಿಭಯಂಕರ ಜನಾಂಗದವರಾದ ಮ್ಲೇಚ್ಛರನ್ನು ನಿನ್ನ ಮೇಲೆ ಬೀಳಮಾಡುವೆನು; ಅವರು ನಿನ್ನ ಜ್ಞಾನದ ಸೊಬಗಿನ ಮೇಲೆ ಕತ್ತಿ ಹಿರಿದು, ನಿನ್ನ ಹೊಳಪನ್ನು ಹೊಲಸು ಮಾಡುವರು.
8 : ನಿನ್ನನ್ನು ಪಾತಾಳಕ್ಕೆ ತಳ್ಳಿಬಿಡುವರು; ಸಮುದ್ರಮಧ್ಯೆ ಹತರಾದವರ ಗತಿ ನಿನಗೆ ಸಂಭವಿಸುವುದು.
9 : ನಿನ್ನನ್ನು ಸಂಹರಿಸುವವನೆದುರಿಗೆ ನಿಂತು, ‘ನಾನು ದೇವರು’ ಎಂದು ಹೇಳಬಲ್ಲೆಯಾ? ಹತಿಸುವವನ ಕೈಗೆ ನೀನು ಎಂದಿಗೂ ದೇವರಲ್ಲ, ನರಪ್ರಾಣಿಯೇ!
10 : ನೀನು ಅನ್ಯರ ಕೈಯಿಂದ ಸುನ್ನತಿಹೀನರ ಮರಣಕ್ಕೆ ಗುರಿಯಾಗುವೆ; ನಾನೇ ನುಡಿದಿದ್ದೇನೆ, ಇದು ಸರ್ವೇಶ್ವರನಾದ ದೇವರ ಸಂಕಲ್ಪ.”
11 : ಟೈರಿನ ಅರಸನ ಪತನ
ಸರ್ವೇಶ್ವರ ದಯಪಾಲಿಸಿದ ಇನ್ನೊಂದು ವಾಣಿ ನನಗೆ ಹೀಗೆಂದಿತು:
12 : “ನರಪುತ್ರನೇ, ನೀನು ಟೈರಿನ ಅರಸನನ್ನು ಕುರಿತು ಶೋಕಗೀತೆಯೊಂದನ್ನು ಹಾಡಿ ಅವನಿಗೆ ಹೀಗೆ ನುಡಿ: ಸರ್ವೇಶ್ವರನಾದ ದೇವರು ಹೀಗೆನ್ನುತ್ತಾರೆ:-
“ನೀನು ಸರ್ವಸುಲಕ್ಷಣ ಶಿರೋಮಣಿ
ಪರಿಪೂರ್ಣ ಸುಂದರ, ಪೂರ್ಣಜ್ಞಾನಿ !
13 : ನೀನಿದ್ದೆ ದೇವರ ಉದ್ಯಾನವನದ ಏದೆನಿನೊಳು
ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ,
ಬೆರುಲ್ಲ, ವೈಡೂರ್ಯ, ನೀಲ, ಕೆಂಪರಲು,
ಸ್ಫಟಿಕವೆಂಬ ನವರತ್ನಗಳಿಂದ
ಭೂಷಿತನಾಗಿದ್ದೆ ನೀನು.
ನಿನ್ನ ಕಿವಿಯೋಲೆ ಆಭರಣಗಳು
ಸುವರ್ಣಖಚಿತವಾಗಿದ್ದವು,
ನಿನ್ನ ಸೃಷ್ಟಿಯ ದಿನದಂದೇ ಸಿದ್ಧವಾಗಿದ್ದವವು.
14 : ರೆಕ್ಕೆ ತೆರೆದು ನೆರಳು ನೀಡುವ ಕೆರೂಬಿ
ನೀನಾಗಿದ್ದೆ
ದೇವರ ಪರಿಶುದ್ಧ ಮರೆಯಲ್ಲಿ ನಿನ್ನ ನಾ
ನೆಲೆಗೊಳಿಸಿದ್ದೆ.
ಕೆಂಡದ ಮಡುಮಧ್ಯೆ ನೀ ವಿಹಾರ
ಮಾಡುತ್ತಿದ್ದೆ.
15 : ಹುಟ್ಟಿದ ದಿನದಿಂದ ಅಪರಾಧವೆಸಗುವವರೆಗೆ
ನಿರ್ದೋಷವಾಗಿತ್ತು ನಿನ್ನ ನಡತೆ.
16 : ನೀ ಪಾಪಿಯಾದೆ ಮಿತಿಯಿಲ್ಲದ
ವ್ಯಾಪಾರದಿಂದ
ನಿನ್ನಲ್ಲಿ ಹಿಂಸಾಚಾರಗಳು
ತುಂಬಿಕೊಂಡದ್ದರಿಂದ.
ಎಂದೇ, ಹೊಲಸೆಂಬಂತೆ ನಿನ್ನ ತಳ್ಳಿಬಿಟ್ಟೆ
ದೇವರ ಬೆಟ್ಟದಿಂದ
ಕಿತ್ತೆಸೆದುಬಿಟ್ಟೆ ಕೆಂಡದ ನಡು ಮಡುವಿನ
ನೆಲೆಯಿಂದ
ನೆರಳು ನೀಡುವ ಕೆರೂಬಿಯೇ ಎಸೆಯಿತು.
ನಿನ್ನನ್ನು ಅಲ್ಲಿಂದ
17 : ಸೊಬಗಿನ ನಿಮಿತ್ತ ನೀ ಗರ್ವಿಯಾದೆ
ಮೆರೆತದಿಂದ ಬುದ್ಧಿಯನ್ನು ಕಳೆದುಕೊಂಡೆ.
ಎಂದೇ, ನಾ ನಿನ್ನನ್ನು ದೊಬ್ಬಿಬಿಟ್ಟೆ ನೆಲಕೆ
ಅರಸರ ಕಣ್ಮುಂದೆ ಎಸೆದೆ ಅವರಿಗೆ
ಅವರಿಗೆ ನೋಟವಾಗಲೆಂದೆ.
18 : ಅಪಾರ ಅಪರಾಧಗಳಿಂದ, ಅನ್ಯಾಯ
ವ್ಯಾಪಾರಗಳಿಂದ
ನಿನ್ನಲ್ಲಿನ ಪವಿತ್ರಾಲಯ ಅಶುದ್ಧವಾಯಿತು
ನಿನ್ನಿಂದ.
ಎಂದೇ, ನಾ ಬರ ಮಾಡಿದೆ ಬೆಂಕಿಯನು
ನಿನ್ನೊಳಗಿಂದ
ನೋಡ್ವರೆಲ್ಲರ ಮಂದೆ ಸುಟ್ಟು ಭಸ್ಮ ಮಾಡಿತು ನಿನ್ನ.
19 : ನಿನ್ನೀ ಗತಿ ನೋಡಿ ಬೆರಗಾದರು ನಿನ್ನನ್ನರಿತ
ರಾಷ್ಟ್ರಗಳು
ಪೂರ್ತಿಯಾಗಿ ನೀ ಧ್ವಂಸವಾದೆ, ಇಲ್ಲವಾದೆ
ಇನ್ನೆಂದಿಗೂ.”
20 : ಸಿದೋನನ್ನು ಕುರಿತ ದೈವೋಕ್ತಿ
ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು: -
21 : “ನರಪುತ್ರನೇ, ನೀನು ಸಿದೋನಿಗೆ ಅಭಿಮುಖನಾಗಿ ಅದರ ಬಗ್ಗೆ ಹೀಗೆ ನುಡಿ –
22 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಆಹಾ, ಸಿದೋನೇ, ನಾನು ನಿನಗೆ ವಿರುದ್ಧನಾಗಿ ನಿನ್ನ ಮಧ್ಯದಲ್ಲೆ ಪ್ರಖ್ಯಾತಿಗೊಳ್ಳುವೆನು; ನಾನು ಈ ಪಟ್ಟಣವನ್ನು ದಂಡಿಸಿ, ನನ್ನ ಗೌರವವನ್ನು ಕಾಪಾಡಿಕೊಂಡ ಮೇಲೆ, ನಾನೇ ಸರ್ವೇಶ್ವರ ಎಂದು ಎಲ್ಲರಿಗು ಗೊತ್ತಾಗುವುದು.
23 : ನಾನು ಅದರಲ್ಲಿ ವ್ಯಾಧಿಯನ್ನೂ ಅದರ ಚೌಕಗಳಲ್ಲಿ ಸಂಹಾರವನ್ನೂ ಉಂಟುಮಾಡುವೆನು; ಖಡ್ಗವು ಸುತ್ತುಮುತ್ತಲು ಅದರ ಮೇಲೆ ಬೀಸುತ್ತಿರುವಾಗ ಪ್ರಜೆಗಳು ಅದರ ನಡುವೆ ಹತರಾಗಿ ಬೀಳುವರು; ಆಗ ಸರ್ವೇಶ್ವರ ಎಂದು ಅವರಿಗೆ ತಿಳಿದು ಬರುವುದು.
24 : ಇಸ್ರಯೇಲ್ ವಂಶದವರಿಗೆ ಚುಚ್ಚುವ ಮುಳ್ಳು ಇನ್ನಿರದು; ಹೀನೈಸುವ ನೆರೆಹೊರೆಯವರೆಂಬ ಕಂಟಕದ ಬಾಧೆ ಇನ್ನಾಗದು; ನಾನೇ ಸರ್ವೇಶ್ವರನಾದ ದೇವರು ಎಂದು ಅವರಿಗೆ ವ್ಯಕ್ತವಾಗುವುದು.”
25 : ಇಸ್ರಯೇಲಿನ ಮುಂದಿನ ಸುಸ್ಥಿತಿ
ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಜನಾಂಗಗಳಲ್ಲಿ ಚದುರಿಹೋಗಿರುವ ಇಸ್ರಯೇಲ್ ವಂಶದವರನ್ನು ನಾನು ಒಟ್ಟುಗೂಡಿಸಿ, ಎಲ್ಲ ಜನಾಂಗಗಳ ಕಣ್ಣೆದುರಿಗೆ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಮೇಲೆ ದಾಸ ಯಕೋಬನಿಗೆ ನಾನು ಅನುಗ್ರಹಿಸಿದ ಸ್ವಂತ ನಾಡಿನಲ್ಲಿ ವಾಸಿಸುವರು.
26 : ಅಲ್ಲಿ ನಿರ್ಭಯವಾಗಿರುವರು; ಮನೆಗಳನ್ನು ಕಟ್ಟಿಕೊಂಡು, ತೋಟಗಳನ್ನು ಮಾಡಿಕೊಂಡು, ಸುಖವಾಗಿ ವಾಸಿಸುವರು; ಅವರನ್ನು ಹೀನೈಸುವ ನೆರೆಹೊರೆಯವರನ್ನು ನಾನು ದಂಡಿಸಿದ ಮೇಲೆ ನಾನೇ ತಮ್ಮ ದೇವರಾದ ಸರ್ವೇಶ್ವರ ಎಂದು ಅವರಿಗೆ ನಿಶ್ಚಯವಾಗುವುದು.”