Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಜೆಕಿಯೇಲ


1 : ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಸರ್ವೇಶ್ವರಸ್ವಾಮಿ ಈ ವಾಣಿಯನ್ನು ನನಗೆ ದಯಪಾಲಿಸಿದರು.
2 : “ನರಪುತ್ರನೇ, ಈ ದಿನದ ಇದೇ ದಿನದ ಹೆಸರನ್ನು ಬರೆದುಕೋ; ಇದೇ ದಿನದಲ್ಲಿ ಬಾಬಿಲೋನಿನ ಅರಸನು ಜೆರುಸಲೇಮಿಗೆ ಮುತ್ತಿಗೆ ಹಾಕಿದ್ದಾನೆ.
3 : ಈ ದ್ರೋಹಿವಂಶಕ್ಕೆ ದೃಷ್ಟಾಂತಕೊಟ್ಟು ಹೀಗೆ ಹೇಳು - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಹಂಡೆಯನ್ನು ಒಲೆಯ ಮೇಲಿಡು, ಮೇಲಿಡು, ಅದರಲ್ಲಿ ನೀರನ್ನು ಹೊಯ್ಯಿಸು;
4 : ಮಾಂಸಖಂಡಗಳನ್ನು, ತೊಡೆ ಮುಂದೊಡೆ ಮೊದಲಾದ ಒಳ್ಳೆಯ ಖಂಡಗಳನ್ನೆಲ್ಲಾ ಅದರಲ್ಲಿ ಒಟ್ಟಿಗೆ ಹಾಕು, ಉತ್ತಮವಾದ ಎಲುಬುಗಳನ್ನು ಅದರಲ್ಲಿ ತುಂಬಿಸು.
5 : ಹಿಂಡಿನಲ್ಲಿ ಶ್ರೇಷ್ಠವಾದುದನ್ನು ತೆಗೆದುಕೋ; ಹಂಡೆಯ ತಳದಲ್ಲಿ ಎಲುಬುಗಳನ್ನು ರಾಶಿಯಾಗಿ ಒಟ್ಟು; ಚೆನ್ನಾಗಿ ಕುದಿಸು; ಹೌದು, ಎಲುಬುಗಳನ್ನು ಅದರಲ್ಲಿ ಬೇಯಿಸು.”
6 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – “ಹಾ, ರಕ್ತಮಯವಾದ ಪಟ್ಟಣವೇ, ನಿನಗೆ ಧಿಕ್ಕಾರ ! ಆ ಹಂಡೆಯ ಕಿಲುಬು ಬಿಟ್ಟುಹೋಗದೆ ಅದರಲ್ಲೇ ಲೆಪ್ಪವಾಗಿದೆಯಲ್ಲಾ! ಮಾಂಸದ ತುಂಡುಗಳನ್ನು ಆರಿಸಿ, ಸಿಕ್ಕಿ ಸಿಕ್ಕಿದ ಹಾಗೆ ತೆಗೆದುಬಿಡು
7 : ಜೆರುಸಲೇಮ್ ನಗರ ಸುರಿಸಿದ ರಕ್ತ ಅದರಲ್ಲೇ ನಿಂತಿದೆ. ಧೂಳು ಮುಚ್ಚೇತೆಂದು ಆ ಪಟ್ಟಣದವರು ಅದನ್ನು ನೆಲದ ಮೇಲೆ ಹೊಯ್ಯದೆ, ಬರೀ ಬಂಡೆಯ ಮೇಲೆ ನಿಲ್ಲಿಸಿರುತ್ತಾರೆ.
8 : ಆ ರಕ್ತದಿಂದ ರೋಷವೆದ್ದು ಮುಯ್ಯಿಗೆ ಮುಯ್ಯಿ ತೀರಿಸಲೆಂದು, ಅದನ್ನು ನಾನು ಇಂಗಗೊಡಿಸದೆ ಬರೀ ಬಂಡೆಯ ಮೇಲೆ ನಿಲ್ಲಿಸಿದ್ದೇನೆ.
9 : ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – “ಹಾ, ರಕ್ತಮಯವಾದ ಪಟ್ಟಣವೇ, ನಿನಗೆ ಧಿಕ್ಕಾರ! ನಾನೇ ಬೆಂಕಿಯನ್ನು ರಾಶಿಯಾಗಿ ಹೆಚ್ಚಿಸುವೆನು.
10 : ತುಂಬಾ ಸೌದೆ ಹಾಕು, ಬೆಂಕಿಯನ್ನುರಿಸು, ಮಾಂಸವನ್ನು ತೀರ ಬೇಯಿಸು, ಸಾರನ್ನು ಮಂದಮಾಡು, ಎಲುಬುಗಳು ಬೆಂದು ಹೋಗಲಿ.
11 : ಆಮೇಲೆ ಹಂಡೆಯು ಕಾದು ತಾಮ್ರವು ಕೆಂಪಾಗಿ, ಒಳಗಣ ಕಲ್ಮಷವು ಕರಗಿ ಕಿಲುಬು ಇಲ್ಲವಾಗುವಂತೆ, ಅದನ್ನು ಬರಿದುಮಾಡಿ ಕೆಂಡಗಳ ಮೇಲೆ ಇಡು.
12 : ಅದು ನನಗೆ ಕೇವಲ ಪ್ರಯಾಸವನ್ನೂ ಆಯಾಸವನ್ನೂ ಉಂಟು ಮಾಡಿದೆ; ಆದರೂ ಅದಕ್ಕೆ ಹತ್ತಿದ್ದ ಕಿಲುಬು ಹೋಗಲಿಲ್ಲ, ಬೆಂಕಿಯಿಂದಲೂ ನೀಗಲಿಲ್ಲ.
13 : ಅಂತೆಯೇ ನಿನ್ನ ಲಂಪಟತನ ಅಸಹ್ಯವಾಗಿರುವುದರಿಂದಲೂ ನಾನು ನಿನ್ನನ್ನು ಎಷ್ಟು ಶುದ್ಧಿ ಮಾಡಿದರೂ ನೀನು ಶುದ್ಧಿಯಾಗದೆ ಹೋದದ್ದರಿಂದಲೂ ನಾನು ನನ್ನ ರೋಷವನ್ನು ನಿನ್ನಲ್ಲಿ ಹರಿಸಿ ಶಾಂತನಾಗುವವರೆಗೂ ನೀನು ನಿನ್ನ ಕೊಳೆಯನ್ನು ಇನ್ನೂ ಕಳೆದುಕೊಳ್ಳದೆ, ಶುದ್ಧಿಯಾಗದೆ ಇರುವೆ.
14 : ಸರ್ವೇಶ್ವರನಾದ ನಾನೇ ಇದನ್ನು ನುಡಿದಿದ್ದೇನೆ; ಇದು ನಡೆದೇ ತೀರುವುದು, ನಾನು ನೆರವೇರಿಸುವೆನು; ಹಿಂತೆಗೆಯೆನು, ಕ್ಷಮಿಸೆನು, ಕರುಣಿಸೆನು; ನಿನ್ನ ದುರ್ಮಾರ್ಗ ದುಷ್ಕøತ್ಯಗಳಿಗೆ ಸರಿಯಾಗಿ ನಿನಗೆ ನ್ಯಾಯ ತೀರ್ಪು ಆಗುವುದು; ಇದು ಸರ್ವೇಶ್ವರನಾದ ದೇವರ ನುಡಿ.” ಪ್ರವಾದಿಗೆ ಪತ್ನಿವಿಯೋಗ
15 : ಸರ್ವೇಶ್ವರ ಇನ್ನೊಂದು ವಾಣಿಯನ್ನು ನನಗೆ ದಯಪಾಲಿಸಿದರು
16 : “ನರಪುತ್ರನೇ, ಇಗೋ, ಒಂದೇ ಏಟಿನಿಂದ ನಾನು ನಿನಗೆ ನೇತ್ರಾನಂದವಾಗಿರುವವಳನ್ನು ನಿನ್ನಿಂದ ತೆಗೆದು ಬಿಡುವೆನು. ಆದರೂ ನೀನು ಗೋಳಾಡಬೇಡ, ಅಳಬೇಡ, ಕಣ್ಣೀರು ಸುರಿಸಬೇಡ.
17 : ಸದ್ದಿಲ್ಲದೆ ಮೊರೆಯಿಡು, ವಿಯೋಗದುಃಖ ತೋರಿಸಬೇಡ. ರುಮಾಲನ್ನು ಸುತ್ತಿಕೊಂಡಿರು, ಕೆರಗಳನ್ನು ಮೆಟ್ಟಿಕೊಂಡಿರು, ಬಾಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಡ, ಗಾರಿಗೆಯನ್ನು ತಿನ್ನಬೇಡ.”
18 : “ಹೀಗೆ ಆಜ್ಞೆಯಾಗಲು, ನಾನು ಪ್ರಾತಃ ಕಾಲದಲ್ಲಿ ಜನರಿಗೆ ಪ್ರವಾದಿಸಿದೆನು; ಸಾಯಂಕಾಲಕ್ಕೆ ನನ್ನ ಪತ್ನಿ ತೀರಿಹೋದಳು; ಮಾರನೆಯ ಬೆಳಿಗ್ಗೆ ನನಗೆ ಅಪ್ಪಣೆಯಾದಂತೆ ನಡೆದುಕೊಂಡೆನು.
19 : ಜನರು, “ನೀನು ಹೀಗೆ ಮಾಡುವುದರಿಂದ ನಾವು ತಿಳಿಯತಕ್ಕದ್ದೇನು? ತಿಳಿಸುವುದಿಲ್ಲವೋ?” ಎಂದು ನನ್ನನ್ನು ಕೇಳಿದರು.
20 : ಅದಕ್ಕೆ ನಾನು ಹೀಗೆ ಹೇಳಿದೆ: “ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದ್ದಾರೆ –
21 : ಇಸ್ರಯೇಲ್ ವಂಶದವರಿಗೆ ಹೀಗೆ ಸಾರು - ಹಾ, ನಿಮಗೆ ಮುಖ್ಯಬಲ, ನೇತ್ರಾನಂದ ಹಾಗು ಪ್ರಾಣಪ್ರಿಯ ಆದ ನನ್ನ ಪವಿತ್ರಾಲಯವನ್ನು ನಾನು ಅಪವಿತ್ರ ಮಾಡಿಸುವೆನು; ನೀವು ಬಿಟ್ಟು ಬಂದಿರುವ ನಿಮ್ಮ ಗಂಡು ಹೆಣ್ಣು ಮಕ್ಕಳು ಖಡ್ಗಕ್ಕೆ ತುತ್ತಾಗುವರು, ಎಂಬುದಾಗಿ ಸರ್ವೇಶ್ವರನಾದ ದೇವರು ನುಡಿದಿದ್ದಾರೆ.
22 : ನಾನು ಮಾಡಿದಂತೆ ಆಗ ನೀವೂ ಮಾಡುವಿರಿ, ಅಂದರೆ ಬಟ್ಟೆಯಿಂದ ಬಾಯನ್ನು ಮುಚ್ಚಿಕೊಳ್ಳದೆ,
23 : ಗಾರಿಗೆಯನ್ನು ತಿನ್ನದೆ, ರುಮಾಲನ್ನು ಸುತ್ತಿಕೊಂಡು, ಕೆರಗಳನ್ನು ಮೆಟ್ಟಿಕೊಂಡು ಇರುವಿರಿ; ನೀವು ಗೋಳಾಡುವುದಿಲ್ಲ, ಅಳುವುದಿಲ್ಲ. ಆದರೆ ನಿಮ್ಮ ಅಧರ್ಮದಿಂದ ಕ್ಷೀಣವಾಗಿ ನರಳುವಿರಿ. ಒಬ್ಬರೆದುರಿಗೆ ಒಬ್ಬರು ನರಳುವಿರಿ.
24 : ಈ ವಿಷಯದಲ್ಲಿ ಯೆಜೆಕಿಯೇಲನು ನಿಮಗೆ ಮುಂಗುರುತಾಗಿರುವನು. ಅವನು ಮಾಡಿದಂತೆಯೇ ಎಲ್ಲವನ್ನು ಮಾಡುವಿರಿ; ಇದು ಸಂಭವಿಸುವಾಗ ನಾನೇ ಸರ್ವೇಶ್ವರನಾದ ದೇವರು ಎಂದು ನಿಮಗೆ ಗೊತ್ತಾಗುವುದು.
25 : “ನರಪುತ್ರನೇ, ಅವರಿಗೆ ಬಲಾಧಾರವೂ ನೇತ್ರಾನಂದವೂ ಆದ ಅವರ ಇಷ್ಟು ಸುಂದರ ಆಲಯವನ್ನೂ ಹೃದಯೋಲ್ಲಾಸವಾದ ಅವರ ಗಂಡುಹೆಣ್ಣು ಮಕ್ಕಳನ್ನೂ ನಾನು ನಿರ್ಮೂಲ ಮಾಡುವ ದಿನದಲ್ಲಿ
26 : ತಪ್ಪಿಸಿಕೊಂಡವನು ನಿನ್ನ ಬಳಿಗೆ ಬಂದೇ ಬರುವನು. ನಡೆದ ಸಂಗತಿಯನ್ನು ನೀನು ಕಿವಿಯಾರೆ ಕೇಳುವಂತೆ ನಿನಗೆ ತಿಳಿಸುವನು.
27 : ಆ ದಿನದಲ್ಲಿ ತಪ್ಪಿಸಿಕೊಂಡವನಿಗಾಗಿ ನೀನು ಬಾಯಿಬಿಡುವೆ, ನಿನ್ನ ಮೂಕತನವನ್ನು ಕಳೆದುಕೊಂಡು ಮಾತಾಡುವೆ; ಹೀಗೆ ನೀನು ಅವರಿಗೆ ಗುರುತಾಗುವೆ. ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.”

· © 2017 kannadacatholicbible.org Privacy Policy