1 : ಸರ್ವೇಶ್ವರ ನನಗೆ ಈ ವಾಣಿಯನ್ನು ದಯಪಾಲಿಸಿದರು –
2 : “ನರಪುತ್ರನೇ, ನೀನು ಜೆರುಸಲೇಮಿಗೆ ಅಭಿಮುಖನಾಗಿ, ಅಲ್ಲಿನ ಪವಿತ್ರಸ್ಥಳಗಳ ಕಡೆಗೆ ಮಾತಾಡುತ್ತಾ, ಇಸ್ರಯೇಲ್ ನಾಡಿನ ಪ್ರಸ್ತಾಪವನ್ನೆತ್ತಿ ಆ ನಾಡಿಗೆ ಹೀಗೆ ಪ್ರವಾದಿಸು:
3 : ಸರ್ವೇಶ್ವರ ಇಂತೆನ್ನುತ್ತಾರೆ – ಇಗೋ, ನಾನು ನಿನಗೆ ವಿರುದ್ಧವಾಗಿದ್ದೇನೆ, ನನ್ನ ಖಡ್ಗವನ್ನು ಒರೆಯಿಂದ ಹಿರಿದು ನಿನ್ನಲ್ಲಿನ ಸಜ್ಜನರನ್ನೂ ದುರ್ಜನರನ್ನೂ ಸಂಹರಿಸಿಬಿಡುವೆನು.
4 : ನಾನು ನಿನ್ನಲ್ಲಿನ ಸಜ್ಜನರನ್ನೂ ದುರ್ಜನರನ್ನೂ ಸಂಹರಿಸಬೇಕೆಂದಿರುವುದರಿಂದ ನನ್ನ ಖಡ್ಗ ಒರೆಯಿಂದ ಹೊರಟು ದಕ್ಷಿಣದಿಂದ ಉತ್ತರದವರೆಗೆ ಸಕಲ ನರಪ್ರಾಣಿಗಳ ಮೇಲೆ ಬೀಳುವುದು;
5 : ಆಗ ಸರ್ವೇಶ್ವರನಾದ ನಾನೇ ನನ್ನ ಖಡ್ಗವನ್ನು ಒರೆಯಿಂದ ಹಿರಿದಿದ್ದೇನೆ ಎಂಬುದು ಎಲ್ಲ ನರಮಾನವರಿಗೂ ತಿಳಿಯುವುದು; ಅದು ಪುನಃ ಒರೆಗೆ ಸೇರದು,
6 : ನರಪುತ್ರನೇ, ಮೊರೆಯಿಡು; ಸೊಂಟಮುರಿದಷ್ಟು ದುಃಖದಿಂದ ಜನರ ಮುಂದೆ ನರಳಾಡು.
7 : ‘ಏಕೆ ನರಳಾಡುತ್ತೀ?’ ಎಂದು ಅವರು ನಿನ್ನನ್ನು ಕೇಳುವರು. ಆಗ ನೀನು ಅವರಿಗೆ – ‘ದುರ್ವಾರ್ತೆಯ ನಿಮಿತ್ತ ನರಳುತ್ತಿದ್ದೇನೆ; ಇಗೋ, ವಿಪತ್ತು ಬಂದಿತು; ಎಲ್ಲರ ಹೃದಯವು ಕರಗಿ ನೀರಾಗುವುದು, ಎಲ್ಲರ ಕೈ ಜೋಲುಬೀಳುವುದು, ಎಲ್ಲರ ಮನಸ್ಸು ಕುಂದುವುದು, ಎಲ್ಲರ ಮೊಣಕಾಲು ನೀರಿನಂತೆ ಅದರುವುದು; ಇಗೋ, ಬಂದಿತು, ಬಂದಾಯಿತು! ಇದು ಸರ್ವೇಶ್ವರನಾದ ದೇವರ ನುಡಿ,’ ಎಂದು ಉತ್ತರಕೊಡು.”
ಖಡ್ಗದ ಗೀತೆ
8 : ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ
ಇದು:
9 : “ನರಪುತ್ರನೇ, ಪ್ರವಾದಿಸು ಸರ್ವೇಶ್ವರ
ಹೀಗೆನ್ನುತ್ತಾರೆಂದು:
10 : ಆಹಾ ಖಡ್ಗ, ಖಡ್ಗ, ಸಾಣೆ ಹಿಡಿದ ಖಡ್ಗ,
ಮಸೆದ ಖಡ್ಗ !
ಸಾಣೆ ಹಿಡಿದಿದೆ ಹತಿಸುವಂತೆ, ಮಸೆದಿದೆ
ಮಿಂಚುವಂತೆ.
ಸಂಭ್ರಮಿಸಲಾದೀತೆ ‘ನಮ್ಮ ಕುಮಾರನ
ರಾಜದಂಡ’ ಎಂದು?
ಮಿಕ್ಕ ದಂಡಗಳನೆಲ್ಲ ಧಿಕ್ಕರಿಸುವಂಥ
ದಂಡವೆಂದುಕೊಂಡು?
11 : ಬಳಕೆಗೆ ಸಿದ್ಧವಿರಲೆಂದು ಕೊಡಲಾಗಿದೆ ಆ
ಖಡ್ಗ ಮಸೆಯಲಿಕ್ಕೆ
ಮಸೆದು, ಸಾಣೆಹಿಡಿದು, ಸಜ್ಜಾಗಿದೆ ಅದು
ಹತ್ಯಗಾರನ ಹಿಡಿತಕ್ಕೆ.
12 : ನರಪುತ್ರನೇ, ಕೂಗು, ಗೋಳಾಡು,
ಬಡಿದುಕೋ ಎದೆ !
ಎರಗಿದೆ ಆ ಖಡ್ಗ ನನ್ನ ಜನರ ಮೇಲೆ
ಇಸ್ರಯೇಲಿನ ಅರಸರೆಲ್ಲರ ಮೇಲೆ
ತುತ್ತಾಗುವರು ಅದಕ್ಕೆ ಜನನಾಯಕರು
ಜನರೊಂದಿಗೆ.
13 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ:
ಸಂಭವಿಸಿದೆ ಪರಿಶೋಧನೆ
ಏನುಗತಿ, ರಾಜದಂಡವೇ ನಾಶವಾದರೆ !
14 : ನರಪುತ್ರನೇ, ಪ್ರವಾದಿಸು, ಚಪ್ಪಾಳೆ ಬಡಿ,
ಹತಿಸುವುದಾ ಖಡ್ಗ ಇಮ್ಮಡಿ ಮುಮ್ಮಡಿ.
ಪ್ರಜೆಯನ್ನು ಸಂಹರಿಸುವುದಾ ಖಡ್ಗ
ಅಧಿಪತಿಯನ್ನೇ ಸುತ್ತಲು ಬೀಸಿ
ಹತಿಸುವುದಾ ಖಡ್ಗ.
15 : ನೀರಾಗುವುದು ಜನರ ಹೃದಯ,
ಎಡವಿ ಬೀಳುವರು ಬಹುಜನ.
ಪುರದ್ವಾರಗಳಿಗೇ ತಂದಿರುವೆನು ಹತಿಸುವಾ
ಖಡ್ಗವ.
ಮಿನುಗುತಿಹುದದು ಮಿಂಚಿನಂತೆ
ಹರಿತವಿದೆ ವಧೆಗಾಗುವ ಕತ್ತಿಯಂತೆ.
16 : ಖಡ್ಗವೇ, ಏಕಾಗ್ರವಾಗಿ ಹೋಗು ಬಲಕೆ
ಸಜ್ಜಾಗಿ ಸಾಗು ಎಡಕೆ
ಹೊರಡು ನಿನ್ನ ಮುಖವಿದ್ದ ಕಡೆಗೆ.
17 : ನಾನೂ ರೋಷ ತೀರಿಸಿಕೊಳ್ವೆ ಚಪ್ಪಾಳೆ ತಟ್ಟಿ
ಇದು ಸರ್ವೇಶ್ವರನಾದ ನನ್ನ ನುಡಿ”.
ಬಾಬಿಲೋನಿಯಾ ರಾಜನ ಖಡ್ಗ
18 : ಸರ್ವೇಶ್ವರ ನನಗೆ ಮತ್ತೊಂದು ವಾಣಿಯನ್ನು ದಯಪಾಲಿಸಿದರು – “ನರಪುತ್ರನೇ,
19 : ಬಾಬಿಲೋನಿನ ಅರಸನ ಖಡ್ಗ ಬರುವುದಕ್ಕೆ ಎರಡು ದಾರಿಗಳುಳ್ಳ ನಕ್ಷೆಯನ್ನು ಬರೆ; ಅವೆರಡು ದಾರಿಗಳು ಒಂದೇ ದೇಶದಿಂದ ಹೊರಟ ಹಾಗಿರಲಿ; ಒಂದೊಂದು ಪಟ್ಟಣಕ್ಕೆ ಹೋಗುವ ದಾರಿಯ ಮೊದಲಲ್ಲಿ ಕೈಮರವನ್ನು ಚಿತ್ರಿಸು.
20 : ಅಮ್ಮೋನ್ಯರ ರಬ್ಬಾ ಪಟ್ಟಣಕ್ಕೂ ಜುದೇಯದಲ್ಲಿ ಕೋಟೆಕೊತ್ತಲಗಳಿಂದ ಕೂಡಿದ ಜೆರುಸಲೇಮಿಗೂ ಆ ಖಡ್ಗ ಬರುವುದಕ್ಕೆ ದಾರಿಗಳನ್ನು ಮಾಡು.
21 : ಮಾರ್ಗ ಕವಲೊಡೆಯುವ ಸ್ಥಳದಲ್ಲಿ, ಎರಡು ದಾರಿಗಳ ಪ್ರಾರಂಭದಲ್ಲಿ ಬಾಬಿಲೋನಿನ ಅರಸ ಶಕುನ ನೋಡಲು ನಿಂತಿರುವನು. ಬಾಣಗಳನ್ನು ಕಲಕಿ, ವಿಗ್ರಹಗಳನ್ನು ಪ್ರಶ್ನೆ ಕೇಳಿ, ಹಸ್ತರೇಖೆಯನ್ನು ಪರೀಕ್ಷಿಸಿದ್ದಾನೆ.
22 : ಜೆರುಸಲೇಮ್ ಗುರುತಿನ ಬಾಣ ಅವನ ಬಲಗೈಗೆ ಸಿಕ್ಕಿದೆ; ಭಿತ್ತಿಭೇದಕ ಯಂತ್ರಗಳನ್ನು ಪುರದ್ವಾರಗಳೆದುರಿಗೆ ನಿಲ್ಲಿಸಿ, ಬಾಯಿತೆರೆದು ಸಂಹಾರ ಧ್ವನಿಮಾಡಿ, ಹೌದು ಭಿತ್ತಿ ಭೇದಕಯಂತ್ರಗಳನ್ನು ಪುರದ್ವಾರಗಳೆದುರಿಗೆ ನಿಲ್ಲಿಸಿ, ದಿಬ್ಬಹಾಕಿ, ಒಡ್ಡು ಕಟ್ಟಬೇಕೆಂಬ ಸೂಚನೆ ಅದರಿಂದ ಬಂದಿತು.
23 : ಆದರೆ ಪುರನಿವಾಸಿಗಳು ತಾವು ಆ ಅರಸನಿಂದ ಮಾಡಿಸಿಕೊಂಡ ಪ್ರಮಾಣಗಳಲ್ಲಿ ಭರವಸೆಯಿಟ್ಟು, ಈ ಶಕುನವು ಸುಳ್ಳೆಂದು ಭಾವಿಸುವರು; ಆದರೆ ಅವರು ತನ್ನ ಕೈಗೆ ಸಿಕ್ಕಿ ಬೀಳಲೆಂದು ಅವರ ಅಧರ್ಮವನ್ನು ಅವನು ಬೆಳಕಿಗೆ ತರುವನು.
24 : ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – “ನಿಮ್ಮ ಅಪರಾಧಗಳು ಬೆಳಕಿಗೆ ಬಂದು, ನಿಮ್ಮ ಪಾಪಗಳು ನಿಮ್ಮ ಕಾರ್ಯಗಳಲ್ಲೆಲ್ಲಾ ಪ್ರತ್ಯಕ್ಷವಾಗಿ, ನೀವು ನಿಮ್ಮ ಅಧರ್ಮವನ್ನು ನನ್ನ ನೆನಪಿಗೆ ತಂದಿರುವಿರಿ; ಆದಕಾರಣ ಶತ್ರುವಿನ ಕೈಗೆ ಸಿಕ್ಕಿಬೀಳುವಿರಿ.
25 : ಇಸ್ರಯೇಲಿನ ದೊರೆಯೇ, ದುಷ್ಟನೇ, ಭ್ರಷ್ಟನೇ, ನಿನಗೆ ಸಮಯವು ಸಮೀಪಿಸಿದೆ; ಇದೇ ನಿನ್ನ ಅಪರಾಧದ ಕಡೆಗಾಲ.
26 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಿನ್ನ ರುಮಾಲನ್ನು ಕಿತ್ತುಬಿಡು, ಕಿರೀಟವನ್ನು ತೆಗೆದುಹಾಕು. ಎಲ್ಲವೂ ಮೊದಲಿದ್ದ ಹಾಗೆ ಇರುವುದಿಲ್ಲ; ಕೆಳಗಿರುವುದನ್ನು ಮೇಲೆ ಸೇರಿಸಲಾಗುವುದು, ಮೇಲಿರುವುದನ್ನು ಕೆಳಕ್ಕಿಳಿಸಲಾಗುವುದು.
27 : ಧ್ವಂಸ, ಧ್ವಂಸ, ನಾನು ಧ್ವಂಸ ಮಾಡುವೆನು; ರಾಜ್ಯಕ್ಕೆ ಬಾಧ್ಯನು ಬರುವುದರೊಳಗೆ ಒಂದೂ ಇದ್ದಂತಿರದು; ಅವನಿಗೇ ರಾಜ್ಯವನ್ನು ವಹಿಸುವೆನು.
ಅಮ್ಮೋನಿನ ಮೇಲೆ ಬೀಳುವ ಖಡ್ಗ
28 : “ನರಪುತ್ರನೇ, ನೀನು ದೈವಸಂಕಲ್ಪವನ್ನು ಪ್ರಕಟಿಸುತ್ತಾ ಹೀಗೆ ನುಡಿ – ಅಮ್ಮೋನ್ಯರ ವಿಷಯದಲ್ಲೂ ಅವರು ಮಾಡುವ ದೂಷಣೆಯ ವಿಷಯದಲ್ಲೂ ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಆಃಆ, ಖಡ್ಗ, ಖಡ್ಗ, ಸಂಹರಿಸುವುದಕ್ಕೆ ಹಿರಿದಿದೆ; ಮಿಂಚುವಂತೆ ಪೂರ್ಣ ಮಸೆಯಲಾಗಿದೆ.
29 : ಅಮ್ಮೋನೇ, ನಿನ್ನ ಜೋಯಿಸರು ಮಿಥ್ಯೆಯನ್ನು ಕಲ್ಪಿಸಿಕೊಂಡು ಸುಳ್ಳು ಸುಳ್ಳಾಗಿ ಕಣಿಹೇಳುತ್ತಿದ್ದಾರೆ. ಸಮಯವು ಸಮೀಪಿಸಿ ಅಪರಾಧದ ಕಡೆಗಾಲವು ಸಂಭವಿಸಿ, ಹತರಾಗಿ ಬಿದ್ದಿರುವ ದುಷ್ಟರ ಗತಿಯನ್ನು ನೋಡು; ಜೋಯಿಸರನ್ನು ನಂಬಿದ ನೀನೂ ಆ ದುಷ್ಟರ ಕತ್ತುಗಳ ಮೇಲೆ ಬೀಳುವೆ.
30 : ಕತ್ತಿಯನ್ನು ಒರೆಗೆ ಸೇರಿಸು. ನೀನು ಹುಟ್ಟಿದ ಸ್ಥಳದಲ್ಲಿ, ನಿನ್ನ ಜನ್ಮಭೂಮಿಯಲ್ಲಿ, ನಿನಗೆ ನ್ಯಾಯ ತೀರಿಸುವೆನು.
31 : ನಿನ್ನ ಮೇಲೆ ನನ್ನ ಕೋಪವನ್ನು ಸುರಿಸಿ, ರೋಷಾಗ್ನಿಯನ್ನು ಕಾರಿ, ಕ್ರೂರಿಗಳನ್ನು ಹಾಳುಮಾಡುವುದರಲ್ಲಿ ಗಟ್ಟಿಗರಾದವರ ಕೈಗೆ ಸಿಕ್ಕಿಸುವೆನು.
32 : ನೀನು ಅಗ್ನಿಗೆ ಆಹುತಿಯಾಗುವೆ; ನಿನ್ನ ರಕ್ತ ನಾಡಿನಲ್ಲೆಲ್ಲಾ ಇಂಗಿರುವುದು; ನೀನು ಇನ್ನು ನೆನಪಿಗೆ ಬರುವುದಿಲ್ಲ; ಸರ್ವೇಶ್ವರನಾದ ನಾನೇ ಇದನ್ನು ನುಡಿದಿದ್ದೇನೆ.”