Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಜೆಕಿಯೇಲ


1 : ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ:
2 : "ಹೆತ್ತವರು ತಿಂದರು ಹುಳಿದ್ರಾಕ್ಷಿಯನ್ನು; ಚಳಿತು ಹೋದವು ಅವರ ಮಕ್ಕಳ ಹಲ್ಲುಗಳು” ಎಂಬ ಗಾದೆಯನ್ನು ನೀವು ಇಸ್ರಯೇಲ್ ನಾಡನ್ನು ಕುರಿತು ಹೇಳುವುದೇಕೆ?
3 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ನೀವು ಈ ಗಾದೆಯನ್ನು ಇಸ್ರಯೇಲಿನಲ್ಲಿ ಇನ್ನು ಎತ್ತಬೇಕಾಗುವುದಿಲ್ಲ.
4 : ಇಗೋ, ಸಕಲ ನರಪ್ರಾಣಿಗಳು ನನ್ನವೇ; ತಂದೆಯೇನು, ಮಗನೇನು, ನರಪ್ರಾಣಿಗಳೆಲ್ಲವೂ ನನ್ನಧೀನದಲ್ಲಿವೆ; ಪಾಪ ಮಾಡುವ ಪ್ರಾಣಿಯೇ ಸಾಯುವನು.
5 : “ಒಬ್ಬನು ಸದ್ಧರ್ಮಿಯಾಗಿ ನ್ಯಾಯನೀತಿಗಳನ್ನು ನಡೆಸಿ,
6 : ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿನ್ನದೆ, ಇಸ್ರಾಯೇಲ್ ವಂಶದವರ ವಿಗ್ರಹಗಳ ಕಡೆಗೆ ಕಣ್ಣೆತ್ತದೆ, ನೆರೆಯವನ ಹೆಂಡತಿಯನ್ನು ಕೆಡಿಸದೆ,
7 : ಮುಟ್ಟಿನ ಹೆಂಗಸನ್ನು ಕೂಡದೆ, ಯಾರನ್ನೂ ಹಿಂಸಿಸದೆ, ಸಾಲಮಾಡಿದವನ ಒತ್ತೆಯನ್ನು ಬಿಗಿಹಿಡಿಯದೆ, ಯಾರ ಸೊತ್ತನ್ನೂ ಅಪಹರಿಸದೆ, ಹಸಿದವನಿಗೆ ಅನ್ನವಿಕ್ಕಿ, ಬೆತ್ತಲೆ ಇರುವವನಿಗೆ ಹೊದಿಕೆಯನ್ನು ಹೊದಿಸಿ;
8 : ಸಾಲಕ್ಕೆ ಬಡ್ಡಿ ತೆಗೆಯದೆ, ಲಾಭಕ್ಕೆ ಹಣಕೊಡದೆ, ಅನ್ಯಾಯಕ್ಕೆ ಕೈಹಾಕದೆ, ವಾದಿ ಪ್ರತಿವಾದಿಗಳಿಗೆ ಸರಿಯಾಗಿ ನ್ಯಾಯತೀರಿಸಿ,
9 : ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು, ಸತ್ಯಪರನಾಗಿಯೇ ನಡೆದರೆ, ಇಂಥವನು ಸದ್ಧರ್ಮಿ. ಆದುದರಿಂದ ಅವನು ಜೀವಿಸುವುದು ನಿಶ್ಚಯ. ಇದು ಸರ್ವೇಶ್ವರನಾದ ದೇವರ ನುಡಿ:
10 : ಇಂಥವನು ಪಡೆದ ಮಗನು, ಈಗ ಹೇಳಿದ ದುಷ್ಕøತ್ಯಗಳಲ್ಲಿ ಯಾವುದನ್ನಾದರೂ ನಡೆಸಿ,
11 : ಸುಕೃತ್ಯಗಳಲ್ಲಿ ಯಾವುದನ್ನೂ ನಡೆಸದೆ ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿಂದು, ನೆರೆಯವನ ಹೆಂಡತಿಯನ್ನು ಕೆಡಿಸಿ,
12 : ದೀನದಲಿತರನ್ನು ಹಿಂಸಿಸಿ, ಜನರ ಸೊತ್ತನ್ನು ಅಪಹರಿಸಿ, ಸಾಲಗಾರನ ಒತ್ತೆಯನ್ನು ಬಿಗಿಹಿಡಿದು, ವಿಗ್ರಹಗಳ ಕಡೆಗೆ ಕಣ್ಣೆತ್ತಿ,
13 : ಅಸಹ್ಯ ಕಾರ್ಯವನ್ನು ಮಾಡಿ, ಸಾಲಕ್ಕೆ ಬಡ್ಡಿ ತೆಗೆದು, ಲಾಭಕ್ಕೆ ಹಣಕೊಟ್ಟು, ಹಿಂಸಾಚಾರಿಯೂ, ರಕ್ತಸುರಿಸುವವನೂ ಆಗಿದ್ದರೆ, ಜೀವಿಸುವನೇ? ಖಂಡಿತ ಜೀವಿಸನು; ಈ ದುರಾಚಾರಗಳನ್ನೆಲ್ಲಾ ನಡೆಸಿದನಲ್ಲವೇ? ಅವನು ಸಾಯುವುದು ನಿಶ್ಚಯ; ತನ್ನ ಮರಣಕ್ಕೆ ತಾನೇ ಕಾರಣ.
14 : “ಇಗೋ, ಇವನು ಪಡೆದ ಮಗನು ತನ್ನ ತಂದೆ ಮಾಡಿದ ಪಾಪಗಳನ್ನೆಲ್ಲಾ ಕಂಡು ಭಯಪಟ್ಟು, ಇಂಥಾ ಕಾರ್ಯಗಳನ್ನು ನಡೆಸದೆ
15 : ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿನ್ನದೆ, ಇಸ್ರಯೇಲ್ ವಂಶದವರ ವಿಗ್ರಹಗಳ ಕಡೆಗೆ ಕಣ್ಣೆತ್ತದೆ, ನೆರೆಯವನ ಹೆಂಡತಿಯನ್ನು ಕೆಡಿಸದೆ, ಯಾರನ್ನೂ ಹಿಂಸಿಸದೆ,
16 : ಒತ್ತೆಯನ್ನು ಕೇಳದೆ, ಯಾರ ಸೊತ್ತನ್ನೂ ಅಪಹರಿಸದೆ, ಹಸಿದವನಿಗೆ ಅನ್ನವಿಕ್ಕಿ, ಬೆತ್ತಲೆಯಿರುವವನಿಗೆ ಹೊದಿಕೆಯನ್ನು ಹೊದಿಸಿ,
17 : ಬಡವನ ಮೇಲೆ ಕೈ ಮಾಡದೆ, ಬಡ್ಡಿಯನ್ನು ಕೇಳದೆ, ಲಾಭಕ್ಕೆ ಹಣಕೊಡದೆ, ನನ್ನ ವಿಧಿಗಳನ್ನು ಆಚರಿಸಿ, ನನ್ನ ನಿಯಮಗಳನ್ನು ಅನುಸರಿಸಿದರೆ, ತನ್ನ ತಂದೆಯ ಅಧರ್ಮದ ನಿಮಿತ್ತ ಸಾಯನು, ಅವನು ಜೀವಿಸುವುದು ನಿಶ್ಚಯ.
18 : ಇವನ ತಂದೆಯಾದರೊ ಸ್ವಕುಲದವರನ್ನು ಬಹಳವಾಗಿ ಅರೆದು, ಸುಲಿದು, ಸ್ವಜನರ ನಡುವೆ ಕೆಟ್ಟದ್ದನ್ನು ನಡೆಸಿದ ಕಾರಣ, ಇಗೋ, ತನ್ನ ಅಧರ್ಮದಿಂದಲೇ ಸಾಯುವನು.
19 : “ಆದರೆ ನೀವು, - ‘ತಂದೆಯ ದೋಷ ಫಲವನ್ನು ಮಗನು ಹೇಗೆ ಅನುಭವಿಸುವುದಿಲ್ಲ?’ ಎಂದು ಆಕ್ಷೇಪಿಸುವಿರೋ? ಮಗನು ನೀತಿ ನ್ಯಾಯಗಳನ್ನು ನಡೆಸಿ ನನ್ನ ವಿಧಿಗಳನ್ನೆಲ್ಲಾ ಕೈಗೊಂಡು ಆಚರಿಸಿದರೆ ಖಂಡಿತ ಜೀವಿಸುವನು.
20 : ಪಾಪಮಾಡುವವನೇ ಸಾಯುವನು. ಮಗನು ತಂದೆಯ ದೋಷ ಫಲವನ್ನು ಅನುಭವಿಸನು; ತಂದೆಯು ಮಗನ ದೋಷ ಫಲವನ್ನು ಅನುಭವಿಸನು; ಶಿಷ್ಟನ ಶಿಷ್ಟತನದ ಫಲವು ಶಿಷ್ಟನದೇ, ದುಷ್ಟನ ದುಷ್ಟತನದ ಫಲವು ದುಷ್ಟನದೇ.
21 : “ಆದರೆ ದುಷ್ಟನು ತಾನು ಮಾಡುತ್ತಿದ್ದ ಪಾಪಗಳನ್ನೆಲ್ಲಾ ಬಿಟ್ಟುಬಿಟ್ಟು, ನನ್ನ ಸಕಲ ವಿಧಿಗಳನ್ನು ಕೈಗೊಂಡು, ನ್ಯಾಯ ನೀತಿಗಳನ್ನು ನಡೆಸಿದರೆ ಸಾಯನು; ಖಂಡಿತ ಜೀವಿಸುವನು.
22 : ಅವನು ಮಾಡಿದ ಯಾವ ಅಪರಾಧವೂ ಅವನ ಲೆಕ್ಕಕ್ಕೆ ಸೇರದು. ಅವನು ಮಾಡುತ್ತಿರುವ ಸದ್ಧರ್ಮದಿಂದಲೇ ಅವನು ಜೀವಿಸುವನು.
23 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ದುಷ್ಟನ ಸಾವಿನಲ್ಲಿ ನನಗೆ ಲವಲೇಶವಾದರೂ ಸಂತೋಷವಿಲ್ಲ. ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ.
24 : ಆದರೆ ಶಿಷ್ಯನು ತನ್ನ ಶಿಷ್ಟತನವನ್ನು ಬಿಟ್ಟು, ಅಧರ್ಮಮಾಡಿ, ದುಷ್ಟನು ನಡೆಸುವ ದುರಾಚಾರಗಳನ್ನೆಲ್ಲಾ ನಡೆಸಿದರೆ, ಅವನು ಜೀವಿಸುವನೇ? ಅವನು ಮಾಡಿದ ಯಾವ ಸುಕೃತ್ಯವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು, ಅವನು ಮಾಡುತ್ತಿರುವ ಪಾಪಾಪರಾಧಗಳಿಂದಲೇ ಸಾಯುವನು.
25 : “ಆದರೆ ನೀವು, ‘ಸರ್ವೇಶ್ವರನ ಕ್ರಮ ಸರಿಯಲ್ಲ’ ಎಂದು ಹೇಳುತ್ತಿದ್ದೀರಿ; ಇಸ್ರಯೇಲ್ ವಂಶದವರೇ, ನನ್ನ ಕ್ರಮವು ಸರಿಯಲ್ಲವೆ? ನಿಮ್ಮ ಕ್ರಮವೇ ಸರಿಯಲ್ಲವಷ್ಟೆ.
26 : ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮದಿಂದಲೇ ಸಾಯಬೇಕಾಯಿತು.
27 : ದುಷ್ಟನು ತಾನು ಮಾಡುತ್ತಿದ್ದ ದುಷ್ಟತನವನ್ನು ಬಿಟ್ಟು, ನ್ಯಾಯನೀತಿಗಳನ್ನು ನಡೆಸಿದರೆ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು.
28 : ಅವನು ಯೋಚಿಸಿ, ತಾನು ಮಾಡುತ್ತಿದ್ದ ಅಪರಾಧಗಳನ್ನೆಲ್ಲಾ ಬಿಟ್ಟದ್ದರಿಂದ ಸಾಯನು, ಖಂಡಿತ ಜೀವಿಸುವನು.
30 : ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – “ಇಸ್ರಯೇಲ್ ವಂಶದವರೇ, ನಿಮ್ಮ ನಿಮ್ಮ ನಡತೆಗೆ ತಕ್ಕ ಹಾಗೆ ನಾನು ನಿಮಗೆ ತೀರ್ಪು ನೀಡುವೆನು; ಅಧರ್ಮವು ನಿಮ್ಮನ್ನು ನಾಶಮಾಡದಂತೆ ಪಾಪಕ್ಕೆ ವಿಮುಖರಾಗಿರಿ; ನಿಮ್ಮ ಅಪರಾಧಗಳನ್ನೆಲ್ಲಾ ತೊರೆದುಬಿಡಿ.
31 : ನೀವು ಮಾಡುತ್ತಾ ಬಂದಿರುವ ಅಪರಾಧಗಳನ್ನೆಲ್ಲಾ ನಿಮ್ಮಿಂದ ತೊಲಗಿಸಿ ಬಿಟ್ಟು ನಿಮ್ಮ ಹೃದಯವನ್ನೂ ಸ್ವಭಾವವನ್ನೂ ನೂತನ ಮಾಡಿಕೊಳ್ಳಿ; ಇಸ್ರಯೇಲ್ ವಂಶದವರೇ, ನೀವು ಏಕೆ ಸಾಯಬೇಕು?
32 : ಯಾರ ಸಾವಿನಲ್ಲೂ ನನಗೆ ಸಂತೋಷವಿಲ್ಲ; ಪಾಪಕ್ಕೆ ವಿಮುಖರಾಗಿ ಜೀವಿಸಿರಿ; ಇದು ಸರ್ವೇಶ್ವರನಾದ ದೇವರ ನುಡಿ.”

· © 2017 kannadacatholicbible.org Privacy Policy