Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಜೆಕಿಯೇಲ


1 : ಆಮೇಲೆ ಸರ್ವೇಶ್ವರ ನನಗೆ ದಯಪಾಲಿಸಿದ ವಾಣಿ –
2 : “ನರಪುತ್ರನೇ, ನೀನು ಜೆರುಸಲೇಮಿಗೆ ಅದರ ಅಸಹ್ಯಕಾರ್ಯಗಳನ್ನು ತಿಳಿಯಪಡಿಸಿ ಹೀಗೆ ನುಡಿ –
3 : ಸರ್ವೇಶ್ವರ ದೇವರು ಜೆರುಸಲೇಮೆಂಬಾಕೆಗೆ ಈ ಮಾತನ್ನು ಹೇಳಿ ಕಳುಹಿಸಿದ್ದಾರೆ. “ನೀನು ಹುಟ್ಟಿದ್ದು ಕಾನಾನ್ ದೇಶದಲ್ಲಿ, ಅದೇ ನಿನ್ನ ಜನ್ಮಭೂಮಿ. ನಿನ್ನ ತಂದೆ ಅಮೋರಿಯನು, ನಿನ್ನ ತಾಯಿ ಹಿತ್ತಿಯಳು.
4 : ನಿನ್ನ ಜನನವನ್ನು ಕುರಿತು ಏನು ಹೇಳಲಿ! ನೀನು ಹುಟ್ಟಿದ ದಿನದಂದು ಯಾರೂ ನಿನ್ನ ಹೊಕ್ಕಳು ಕೊಯ್ದು ಕಟ್ಟಲಿಲ್ಲ. ನಿನ್ನನ್ನು ನೀರಿನಿಂದ ತೊಳೆದು ಶುಚಿ ಮಾಡಲಿಲ್ಲ, ನಿನಗೆ ಉಪ್ಪನ್ನು ಸ್ವಲ್ಪವು ಸವರಲಿಲ್ಲ, ನಿನ್ನನ್ನು ಬಟ್ಟೆಯಲ್ಲಿ ಸುತ್ತಲೇ ಇಲ್ಲ.
5 : ನಿನ್ನನ್ನು ಕಟಾಕ್ಷಿಸಿ, ಕರುಣಿಸಿ ಯಾರೂ ನಿನಗೆ ಇಂಥಾ ಸಹಾಯ ಮಾಡಲಿಲ್ಲ; ನಿನ್ನ ಜನನ ದಿವಸದಲ್ಲಿ ನೀನು ಹೇಸಿಗೆಯಾಗಿದ್ದೆ, ನಿನ್ನನ್ನು ಬಯಲಿನಲ್ಲಿ ಬಿಸಾಡಿ ಬಿಟ್ಟರು.
6 : “ನಾನು ಹಾದುಹೋಗುತ್ತಾ, ನಿನ್ನ ರಕ್ತದಲ್ಲೇ ಹೊರಳಾಡುತ್ತಿದ್ದ ನಿನ್ನನ್ನು ನೋಡಿ, ‘ನೀನು ರಕ್ತದಿಂದ ಅಶುದ್ಧವಾಗಿದ್ದರೂ ಬದುಕು’ ಎಂದು ಹೇಳಿದೆ; ಹೌದು, ‘ನೀನು ರಕ್ತದಿಂದ ಅಶುದ್ಧವಾಗಿದ್ದರೂ ಬದುಕು’ ಎಂದು ಹೇಳಿ ಬದುಕಿಸಿದೆ.
7 : ಭೂಮಿಯಲ್ಲಿ ಮೊಳಕೆಯನ್ನೋ ಎಂಬಂತೆ ನಾನು ನಿನ್ನನ್ನು ಬೆಳೆಯಿಸಿದೆ; ನೀನು ಬಲಿತು ಪ್ರಾಯ ತುಂಬಿ ಅತಿ ಸುಂದರಿಯಾದೆ; ನಿನಗೆ ಸ್ತನಗಳು ಮೂಡಿದವು. ನಿನ್ನ ಕೂದಲು ಉದ್ದವಾಯಿತು; ಆದರೆ ನೀನು ಬಟ್ಟೆಯಿಲ್ಲದೆ ಬೆತ್ತಲೆಯಾಗಿದ್ದೆ.
8 : “ನಾನು ಪುನಃ ಹಾದುಹೋಗುತ್ತಾ ನಿನ್ನನ್ನು ನೋಡಲು ಇಗೋ, ನೀನು ಮದುವೆಗೆ ಸಿದ್ಧಳಾಗಿದ್ದೆ; ಆಗ ನಾನು ನನ್ನ ಹೊದಿಕೆಯ ಸೆರಗನ್ನು ನಿನಗೆ ಹೊದಿಸಿ, ನಿನ್ನ ಮಾನವನ್ನು ಕಾಪಾಡಿದೆ; ಇದಲ್ಲದೆ ನಾನು ನಿನಗೆ ಮಾತುಕೊಟ್ಟು ಒಡಂಬಡಿಕೆ ಮಾಡಿಕೊಂಡೆ. ಆದ್ದರಿಂದ ನೀನು ನನ್ನವಳಾದೆ; ಇದು ಸರ್ವೇಶ್ವರನಾದ ದೇವರ ನುಡಿ.
9 : “ಆಗ ನಾನು ನೀರಿನಲ್ಲಿ ನಿನಗೆ ಸ್ನಾನ ಮಾಡಿಸಿ, ನಿನ್ನ ಮೇಲಿನ ರಕ್ತವನ್ನು ತೊಳೆದು ಬಿಟ್ಟು, ನಿನಗೆ ತೈಲವನ್ನು ಹಚ್ಚಿದೆ.
10 : ಇದಲ್ಲದೆ ಕಸೂತಿಯ ಬಟ್ಟೆಯನ್ನು ನಿನಗೆ ತೊಡಿಸಿ, ಕಡಲು ಹಂದಿಯ ತೊಗಲಿನ ಕೆರಗಳನ್ನು ನಿನ್ನ ಕಾಲಿಗೆ ಮೆಟ್ಟಿಸಿ, ನಯವಾದ ನಾರುಮಡಿಯನ್ನು ನಿನಗೆ ಉಡಿಸಿ, ರೇಷ್ಮೆಯ ಹೊದಿಕೆಯನ್ನು ನಿನಗೆ ಹೊದಿಸಿದೆ.
11 : ಮತ್ತು ನಾನು ನಿನ್ನ ಕೈಗಳಿಗೆ ಬಳೆಗಳನ್ನು,
12 : ಕೊರಳಿಗೆ ಮಾಲೆಯನ್ನು, ಮೂಗಿಗೆ ಮೂಗುತಿಯನ್ನು, ಶಿರಸ್ಸಿಗೆ ಸುಂದರ ಕಿರೀಟವನ್ನು ಇಟ್ಟು, ನಿನ್ನನ್ನು ಆಭರಣಗಳಿಂದ ಸಿಂಗರಿಸಿದೆ.
13 : ನಿನ್ನ ಒಡವೆಗಳು ಬೆಳ್ಳಿಬಂಗಾರದವು; ನಿನ್ನ ಉಡುಪು ನಯವಾದ ನಾರುಮಡಿ, ರೇಷ್ಮೆಯ ಹೊದಿಕೆ, ಕಸೂತಿಯ ವಸ್ತ್ರ; ನಿನ್ನ ಆಹಾರವು ಗೋದಿಹಿಟ್ಟು, ಜೇನುತುಪ್ಪ ಮತ್ತು ಎಣ್ಣೆ; ನಿನ್ನ ಲಾವಣ್ಯವು ಅತಿ ಮನೋಹರ; ನೀನು ಹೀಗೆ ವೃದ್ಧಿಗೊಂಡು ರಾಣಿಯಾದೆ.
14 : ನಾನು ನಿನಗೆ ಅನುಗ್ರಹಿಸಿದ ನನ್ನ ವೈಭವದಿಂದ ನಿನ್ನ ಸೌಂದರ್ಯ ಪರಿಪೂರ್ಣವಾಯಿತು; ನಿನ್ನ ಚೆಲುವು ಜನಾಂಗಗಳಲ್ಲಿ ಪ್ರಸಿದ್ಧವಾಯಿತು; ಇದು ಸರ್ವೇಶ್ವರನಾದ ದೇವರ ನುಡಿ.
15 : “ಆದರೆ ನೀನು ನಿನ್ನ ಸೌಂದರ್ಯವನ್ನೇ ನೆಚ್ಚಿಕೊಂಡೆ, ‘ನಾನು ಪ್ರಸಿದ್ಧಳಾದೆ’ ಎಂದು ಉಬ್ಬಿಕೊಂಡು ಸೂಳೆತನಮಾಡಿದೆ; ಹಾದು ಹೋಗುವ ಪ್ರತಿಯೊಬ್ಬನ ಸಂಗಡ ಮಿತಿಮೀರಿ ಹಾದರಮಾಡಿದೆ. ಒಬ್ಬೊಬ್ಬನಿಗೂ ಒಳಗಾದೆ.
16 : ನೀನು ಪುಣ್ಯಕ್ಷೇತ್ರಗಳನ್ನು ನಿರ್ಮಿಸಿ, ನಿನ್ನ ನಾನಾ ಶೈಲಿಯ ವಸ್ತ್ರಗಳಿಂದ ಅವುಗಳನ್ನು ಅಲಂಕರಿಸಿ, ಹಿಂದೆಂದೂ ನಡೆಯದಂತಹ, ಮುಂದೆ ಎಂದೂ ನಡೆಯಬಾರದಂತಹ ವ್ಯಭಿಚಾರವನ್ನು ನಡೆಸಿದೆ.
17 : ನಾನು ನನ್ನ ಬೆಳ್ಳಿಬಂಗಾರದಿಂದ ನಿನಗೆ ಮಾಡಿಸಿಕೊಟ್ಟಿದ್ದ ಅಂದಚೆಂದವಾದ ಆಭರಣಗಳನ್ನು ತೆಗೆದು, ಅವುಗಳಿಂದ ಪುರುಷಮೂರ್ತಿಗಳನ್ನು ರೂಪಿಸಿಕೊಂಡು, ಅವುಗಳೊಡನೆ ಹಾದರ ಮಾಡಿದೆ;
18 : ನಿನ್ನ ಕಸೂತಿಯ ವಸ್ತ್ರಗಳನ್ನು ತೆಗೆದು ಮೂರ್ತಿಗಳಿಗೆ ಹೊದಿಸಿ, ಅವುಗಳಿಗೆ ನನ್ನ ತೈಲವನ್ನೂ ನನ್ನ ಧೂಪವನ್ನೂ ಅರ್ಪಿಸಿದೆ.
19 : ನಾನು ನಿನಗೆ ಕೊಟ್ಟ ರೊಟ್ಟಿಯನ್ನೂ ನಿನ್ನ ಆಹಾರಕ್ಕೆ ನಾನು ಒದಗಿಸಿದ ಗೋದಿಹಿಟ್ಟು, ಎಣ್ಣೆ, ಜೇನು, ಇವುಗಳನ್ನೂ, ನೀನು ಆ ಮೂರ್ತಿಗಳ ಮುಂದೆ ಸುಗಂಧಹೋಮ ಮಾಡಿದೆ; ಅಯ್ಯೋ, ನಿನಗೆ ಕೇಡು! ಇದು ಸರ್ವೇಶ್ವರನಾದ ದೇವರ ನುಡಿ
20 : “ಇದಲ್ಲದೆ ನೀನು ನನಗೆ ಹೆತ್ತ ಗಂಡು ಹೆಣ್ಣು ಮಕ್ಕಳನ್ನು ಹಿಡಿದು ಮೂರ್ತಿಗಳಿಗೆ ಆಹಾರವಾಗಲೆಂದು ಯಜ್ಞವಾಗಿ ಅರ್ಪಿಸಿದೆ.
21 : ನಿನ್ನ ಈ ಸೂಳೆತನ ಅಲ್ಪಕಾರ್ಯವೆಂದು ಭಾವಿಸಿದಿಯೋ? ಅದನ್ನು ಮೀರಿಸಬೇಕೆಂದು ನೀನು ನನ್ನ ಮಕ್ಕಳನ್ನು ಹತಿಸಿ ಮೂರ್ತಿಗಳಿಗೆ ಆಹುತಿಯಾಗಿಟ್ಟೆ!
22 : ಈ ನಿನ್ನ ಅಸಹ್ಯಕಾರ್ಯಗಳನ್ನೂ ಸೂಳೆತನವನ್ನೂ ನೀನು ಪದೇ ಪದೇ ನಡಿಸುತ್ತಿದ್ದಾಗ ನೀನು ಬಟ್ಟೆಯಿಲ್ಲದೆ ಬೆತ್ತಲೆಯಾಗಿ ನಿನ್ನ ರಕ್ತದಲ್ಲಿ ಹೊರಳಾಡುತ್ತಿದ್ದ ನಿನ್ನ ಎಳೆತನವನ್ನು ನೀನು ಜ್ಞಾಪಕಕ್ಕೆ ತಂದುಕೊಳ್ಳಲಿಲ್ಲ.
23 : ಅಯ್ಯೋ, ನಿನಗೆ ಧಿಕ್ಕಾರ! ಇದು ಸರ್ವೇಶ್ವರನಾದ ದೇವರ ನುಡಿ.
24 : “ನೀನು ಈ ದುಷ್ಕøತ್ಯಗಳನ್ನೆಲ್ಲಾ ನಡೆಸಿದ್ದಲ್ಲದೆ ಪ್ರತಿಯೊಂದು ಚೌಕದಲ್ಲಿ ಮಂಟಪವನ್ನು ಮಾಡಿ ಜಗಲಿಯನ್ನು ಕಟ್ಟಿಕೊಂಡಿರುವೆ.
25 : ಒಂದೊಂದು ಬೀದಿಯ ಕೊನೆಯಲ್ಲಿ ನೀನು ಜಗಲಿಯನ್ನು ಕಟ್ಟಿಕೊಂಡು, ನಿನ್ನ ಸೌಂದರ್ಯವನ್ನು ನೀಚಕೆಲಸಕ್ಕೆ ಒಪ್ಪಿಸಿ, ಹಾದುಹೋಗುವವರೆಲ್ಲರನ್ನೂ ಸೇರಿ ಸೂಳೆತನವನ್ನು ಅಧಿಕಗೊಳಿಸಿರುವೆ.
26 : ನಿನ್ನ ನೆರೆಯವರೂ ಅತಿಕಾಮಿಗಳೂ ಆದ ಈಜಿಪ್ಟರೊಂದಿಗೆ ಸಹ ನೀನು ಕಲೆತು ಹೆಚ್ಚಾಗಿ ಹಾದರಮಾಡಿ ನನ್ನನ್ನು ಕೆರಳಿಸಿರುವೆ.
27 : “ಆದಕಾರಣ ನಾನು ನಿನ್ನ ಮೇಲೆ ಕೈಯೆತ್ತಿ ನಿನ್ನ ಆಹಾರವನ್ನು ಕಡಿಮೆಮಾಡಿದೆ; ನಿನ್ನನ್ನು ದ್ವೇಷಿಸಿ, ನಿನ್ನ ಕೆಟ್ಟನಡತೆಗೆ ಅಸಹ್ಯಪಡುವ ಪಿಲಿಷ್ಟಿಯ ಕುವರಿಯರ ಕೈಗೆ ನಿನ್ನನ್ನು ಒಪ್ಪಿಸಿದೆ.
28 : “ಇಷ್ಟೂ ಸಾಲದೆಂದು ನೀನು ಅಸ್ಸೀರಿಯರೊಂದಿಗೂ ಹಾದರಮಾಡಿದೆ; ಹೌದು, ಅವರೊಡನೆ ಹಾದರಮಾಡಿದರೂ ನಿನಗೆ ತೃಪ್ತಿಯಾಗಲಿಲ್ಲ.
29 : ಇದಲ್ಲದೆ ನೀನು ವ್ಯಾಪಾರಸ್ಥರಾದ ಬಾಬಿಲೋನಿ ಯಾದವರೊಡನೆ ಸೇರಿ ಅಲ್ಲಿಯೂ ಬಹಳ ಸೂಳೆತನಮಾಡಿದೆ; ಆಗಲೂ ನಿನಗೆ ತೃಪ್ತಿಯಾಗಲಿಲ್ಲ”.
30 : ಸರ್ವಶಕ್ತ ದೇವರು ಇಂತೆನ್ನುತ್ತಾರೆ: “ನಿನ್ನ ಮನಸ್ಸು ಮೋಹಪಾಶಕ್ಕೆ ಸಿಕ್ಕಿ ಎಷ್ಟೋ ಸೋತಿದೆ! ಇಷ್ಟೆಲ್ಲಾ ದುಷ್ಕøತ್ಯಗಳನ್ನು ನಡೆಸಿ ಕಟ್ಟಿಲ್ಲದ ಜಾರಿಣಿಯಾಗಿರುವೆ.
31 : ಒಂದೊಂದು ಬೀದಿಯ ಕೊನೆಯಲ್ಲೂ ನೀನು ಮಂಟಪವನ್ನು ಕಟ್ಟಿ ಎಲ್ಲಾ ಚೌಕಗಳಲ್ಲಿ ಜಗಲಿಯನ್ನು ಸ್ಥಾಪಿಸಿಕೊಂಡಿರುವೆ; ದೊರೆತದ್ದನ್ನು ಇದು ಕಡಿಮೆಯೆಂದು ತಿರಸ್ಕರಿಸುವ ಸೂಳೆಯಂತೆ ನೀನು ನಡೆಯುವವಳಲ್ಲ.
32 : ನೀನು ಸೂಳೆತನಮಾಡುವ ಪತಿವ್ರತೆ; ಗಂಡನಿಗೆ ಬದಲಾಗಿ ಅನ್ಯರನ್ನು ಸೇರುವ ಜಾರಿಣಿ!
33 : ಸಾಮಾನ್ಯವಾಗಿ ಸೂಳೆಯರಿಗೆ ಹಣ ಕೊಡುವುದುಂಟು; ನೀನಾದರೋ ನಿನ್ನ ಎಲ್ಲಾ ಮಿಂಡರಿಗೆ ನೀನೇ ಹಣ ನೀಡುತ್ತಿರುವೆ. ಅವರು ಎಲ್ಲ ಕಡೆಯಿಂದಲೂ ಬಂದು ನಿನ್ನಲ್ಲಿ ವ್ಯಭಿಚಾರಮಾಡುವಂತೆ ಅವರಿಗೆ ಬಹುಮಾನ ಕೊಡುತ್ತಿರುವೆ.
34 : ನಿನ್ನ ಸೂಳೆತನಕ್ಕೂ ಇತರ ವೇಶ್ಯೆಯರ ಸೂಳೆತನಕ್ಕೂ ವ್ಯತ್ಯಾಸವುಂಟು; ನಿನ್ನಲ್ಲಿ ವ್ಯಭಿಚಾರಮಾಡಲಿಕ್ಕೆ ಯಾರೂ ನಿನ್ನ ಹಿಂದೆ ಬಾರರು; ನೀನೇ ಕೊಡುತ್ತೀಯೇ ಹೊರತು ನಿನಗೇನೂ ಸಿಕ್ಕದು; ನಿನ್ನ ದುರಾಚಾರ ಹೇಳತೀರದು!”
35 : ಹೀಗಿರಲು ಎಲೌ ಜಾರಿಣಿಯೇ, ಸರ್ವೇಶ್ವರನ ಈ ವಾಕ್ಯವನ್ನು ಕೇಳು: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ:
36 : “ಆಹಾ, ಮಿತಿಮೀರಿದ ನಿನ್ನ ಕಾಮಾತುರ! ನಿನ್ನಲ್ಲಿ ವ್ಯಭಿಚಾರಮಾಡಿದ ನಿನ್ನ ಮಿಂಡರ ಮೂಲಕ ನಿನಗಾದ ಮಾನಭಂಗ, ನಿನ್ನ ಎಲ್ಲ ಅಸಹ್ಯ ವಿಗ್ರಹಗಳು, ನೀನು ಅವುಗಳಿಗೆ ಅರ್ಪಿಸಿದ ನಿನ್ನ ಮಕ್ಕಳ ರಕ್ತ,
37 : ಇವುಗಳನ್ನು ನಾನು ನೋಡಿ, ನೀನು ರಮಿಸಿದ ನಿನ್ನ ಎಲ್ಲ ಮಿಂಡರನ್ನೂ, ನೀನು ಮೋಹಿಸಿದ ಸಮಸ್ತ ಜಾರರನ್ನೂ, ನೀನು ಹಗೆ ಮಾಡಿದ ಎಲ್ಲರನ್ನೂ, ಸುತ್ತುಮುತ್ತಲು ನಿನಗೆ ವಿರುದ್ಧ ಒಟ್ಟುಗೂಡಿಸಿ, ಅವರ ಕಣ್ಣೆದುರಿಗೆ ನಿನ್ನನ್ನು ಬೆತ್ತಲೆಗೈದು ನಿನ್ನ ಮಾನವನ್ನು ಬಟ್ಟಬಯಲು ಮಾಡುವೆನು.
38 : ವ್ಯಭಿಚಾರಮಾಡುವಂಥ, ರಕ್ತ ಹರಿಸುವಂಥ ಹೆಂಗಸರಿಗೆ ವಿಧಿಸತಕ್ಕ ದಂಡನೆಗಳನ್ನು ನಾನು ನಿನಗೆ ವಿಧಿಸಿ ನನ್ನ ಕೋಪೋದ್ರೇಕವನ್ನೂ ರೋಷಾವೇಶವನ್ನೂ ರಕ್ತದಂತೆ ನಿನ್ನ ಮೇಲೆ ಸುರಿಸುವೆನು.
39 : ನಾನು ನಿನ್ನನ್ನು ಸುತ್ತಲಿನವರ ಕೈವಶಮಾಡುವೆನು; ಅವರು ನಿನ್ನ ಮಂಟಪವನ್ನು ಕೆಡವಿ, ನಿನ್ನ ಜಗಲಿಗಳನ್ನು ಒಡೆದು, ನಿನ್ನ ಬಟ್ಟೆಗಳನ್ನು ಕಿತ್ತು, ನಿನ್ನ ಒಡವೆಗಳನ್ನು ಸುಲಿದುಕೊಂಡು, ನಿನ್ನನ್ನು ಬಟ್ಟಬರಿದಾಗಿ ಬಿಟ್ಟುಹೋಗುವರು.
40 : “ಅವರು ನಿನ್ನ ವಿಷಯದಲ್ಲಿ ನ್ಯಾಯಸಭೆಯನ್ನು ಕೂಡಿಸಿ, ನಿನ್ನನ್ನು ಕಲ್ಲೆಸೆದು ಕೊಲ್ಲುವರು; ಕತ್ತಿಗಳಿಂದ ತುಂಡರಿಸುವರು
41 : ನಿನ್ನ ಮನೆಗಳನ್ನು ಬೆಂಕಿಯಿಂದ ಸುಡುವರು; ಬಹುಮಂದಿ ಹೆಂಗಸರ ಕಣ್ಣೆದುರಿನಲ್ಲಿ ನಿನ್ನನ್ನು ದಂಡಿಸುವರು; ನೀನು ನಿನ್ನ ಸೂಳೆತನವನ್ನು ನಿಲ್ಲಿಸಿಬಿಡುವಂತೆ ಮಾಡುವೆನು; ನೀನು ನಿನ್ನ ಮಿಂಡರಿಗೆ ಇನ್ನು ಬಹುಮಾನ ತರದಂತೆ ಮಾಡುವೆನು.
42 : ಹೀಗೆ ನಾನು ನಿನ್ನ ಮೇಲಣ ಸಿಟ್ಟನ್ನು ತೀರಿಸುವೆನು. ಆಗ ನನ್ನ ರೋಷವು ನಿನ್ನಿಂದ ದೂರವಾಗುವುದು; ನಾನು ಶಾಂತನಾಗಿ ಇನ್ನು ಮೇಲೆ ಕೋಪಗೊಳ್ಳೆನು.
43 : ನೀನು ನಿನ್ನ ಯೌವನಕಾಲವನ್ನು ನೆನೆಸಿಕೊಳ್ಳದೆ, ಈ ದುಷ್ಕøತ್ಯಗಳನ್ನೆಲ್ಲಾ ನಡೆಸಿ, ನನ್ನನ್ನು ರೇಗಿಸಿದ್ದರಿಂದ ಇಗೋ, ನಾನು ನಿನ್ನ ದುರ್ಮಾರ್ಗದ ಫಲವನ್ನು ನಿನ್ನ ತಲೆಗೆ ಕಟ್ಟುವೆನು; ನೀನು ಲೆಕ್ಕವಿಲ್ಲದ ದುರಾಚಾರಗಳನ್ನು ನಡೆಸಿದ್ದಲ್ಲದೆ ಈ ಅಸಹ್ಯಕಾರ್ಯವನ್ನೂ ಮಾಡಿರುವೆ. ಇದು ಸರ್ವೇಶ್ವರನಾದ ದೇವರ ನುಡಿ.
44 : “ಗಾದೆಗಳಲ್ಲಿ ಜಾಣರು ‘ತಾಯಿಯಂತೆ ಮಗಳು’ ಎಂಬ ಗಾದೆಯನ್ನು ನಿನ್ನ ಬಗ್ಗೆ ಖಂಡಿತವಾಗಿ ನುಡಿಯುವರು.
45 : ಗಂಡನನ್ನೂ ಮಕ್ಕಳನ್ನೂ ಅಸಹ್ಯವಾಗಿ ಕಂಡ ನಿನ್ನ ತಾಯಿಗೆ ನೀನು ತಕ್ಕ ಮಗಳು; ಗಂಡನನ್ನೂ ಮಕ್ಕಳನ್ನೂ ಬೇಸರಪಡಿಸಿದ ನಿನ್ನ ಅಕ್ಕಂದಿರಿಗೆ ನೀನು ತಕ್ಕ ತಂಗಿ; ನಿನ್ನ ತಾಯಿ ಹಿತ್ತಿಯಳು, ನಿನ್ನ ತಂದೆ ಅಮೋರಿಯನು.
46 : “ನಿನ್ನ ಉತ್ತರಕ್ಕೆ ತನ್ನ ಕುವರಿಯರೊಂದಿಗೆ ವಾಸಿಸುವ ಸಮಾರಿಯ, ನಿನ್ನ ಅಕ್ಕ; ನಿನ್ನ ದಕ್ಷಿಣ ಕಡೆಯಲ್ಲಿ ಕುವರಿಯರೊಂದಿಗೆ ವಾಸಿಸುವ ಸೊದೋಮ್, ನಿನ್ನ ತಂಗಿ.
47 : “ಆದರೆ ನೀನು ನಡೆದ ದುರ್ಮಾರ್ಗ ಅವರು ನಡೆದಂಥದಲ್ಲ. ನಿನ್ನ ಅಸಹ್ಯಕಾರ್ಯಗಳು ಅವರು ನಡೆಸಿದಂಥವುಗಳಲ್ಲ. ಅವರ ದುರ್ನಡತೆ ಅತ್ಯಲ್ಪವೆಂದು ಸರ್ವದಾ ಅವರಿಗಿಂತ ಬಹುಕೆಟ್ಟವಳಾಗಿ ನಡೆದುಕೊಂಡೆ.
48 : ಸರ್ವೇಶ್ವರ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ನೀನೂ ನಿನ್ನ ಕುವರಿಯರೂ ನಡೆದಂತೆ ಸೊದೋಮೆಂಬ ನಿನ್ನ ತಂಗಿಯಾಗಲಿ ಆಕೆಯ ಕುವರಿಯರಾಗಲಿ ನಡೆಯಲಿಲ್ಲ.
49 : ಸೊದೋಮೆಂಬ ನಿನ್ನ ತಂಗಿಯ ದೋಷವನ್ನು ನೋಡು; ಗರ್ವಪಡುವುದು, ಹೊಟ್ಟೆ ತುಂಬಿಸಿಕೊಳ್ಳುವುದು, ಸ್ವಸುಖದಲ್ಲಿ ಮುಳುಗಿರುವುದು, ಇವು ಆಕೆಯಲ್ಲಿಯೂ ಆಕೆಯ ಕುವರಿಯರಲ್ಲೂ ಇದ್ದವು. ಅಲ್ಲದೆ ಅವರು ದೀನದಲಿತರಿಗೆ ಬೆಂಬಲವಾಗಿರಲಿಲ್ಲ.
50 : ಅವರು ಸೊಕ್ಕೇರಿ ನನ್ನ ಕಣ್ಣೆದುರಿಗೆ ಅಸಹ್ಯಾಚಾರಗಳನ್ನು ನಡೆಸಿದರು; ನಾನು ಅದನ್ನು ನೋಡಿ ಅವರನ್ನು ನಿರ್ಮೂಲಮಾಡಿದೆ.
51 : “ಸಮಾರಿಯ ಎಂಬಾಕೆ ಕೂಡ ನೀನು ಮಾಡಿದ ಪಾಪಗಳಲ್ಲಿ ಅರ್ಧವನ್ನೂ ಮಾಡಲಿಲ್ಲ. ನೀನು ನಿನ್ನ ಅಕ್ಕತಂಗಿಯರಿಗಿಂತಲೂ ಅತ್ಯಧಿಕ ಅಸಹ್ಯಕಾರ್ಯಗಳನ್ನು ನಡೆಸಿರುವೆ; ನೀನು ಮಾಡಿದ ಲೆಕ್ಕವಿಲ್ಲದ ದುರಾಚಾರಗಳಿಂದ ಅವರನ್ನು ನಿರ್ದೋಷಿಗಳೆಂದು ತೋರ್ಪಡಿಸಿರುವೆ.
52 : ನಿನ್ನ ದೋಷಗಳೇ ನಿನ್ನ ಅಕ್ಕತಂಗಿಯರ ಪರವಾಗಿ ನಿಂತದ್ದರಿಂದ ನೀನು ನಾಚಿಕೆ ಪಡಬೇಕು; ಅವರಿಗಿಂತ ಅಧಿಕವಾಗಿ ನೀನು ಅಸಹ್ಯ ಪಾಪಗಳನ್ನು ಮಾಡಿರುವುದರಿಂದ ಅವರು ನಿನಗಿಂತ ಉತ್ತಮರಾಗಿದ್ದಾರೆ. ಹೌದು, ನಿನ್ನ ಅಕ್ಕತಂಗಿಯರನ್ನು ನಿರ್ದೋಷಿಗಳೆಂದು ತೋರ್ಪಡಿಸಿದ್ದಕ್ಕಾಗಿ ಲಜ್ಜೆಪಡು, ನಾಚಿಕೆಪಡು.
53 : “ಸೊದೋಮ್ ಮತ್ತು ಆಕೆಯ ಕುವರಿಯರ ಹಾಗೂ ಸಮಾರಿಯ ಮತ್ತು ಆಕೆಯ ಕುವರಿಯರ ಸೌಭಾಗ್ಯವನ್ನು ಪುನಃ ನೀಡುವೆನು. ಅದರೊಂದಿಗೆ ನಿನ್ನ ಸೌಭಾಗ್ಯವನ್ನೂ ಮರಳಿಸುವೆನು.
54 : ಹೀಗಿರಲು, ನೀನು ನಿನ್ನ ಲೆಕ್ಕವಿಲ್ಲದ ದುಷ್ಕøತ್ಯಗಳ ಮೂಲಕ ಅವರನ್ನು ಸಂತೈಸಿದ್ದರಿಂದ ಲಜ್ಜೆಪಡುವೆ, ನಾಚಿಕೆಪಡುವೆ.
55 : ಆಗ ಸಮಾರಿಯ ಮತ್ತು ಸೊದೋಮ್ ಎಂಬ ನಿನ್ನ ಅಕ್ಕತಂಗಿಯರನ್ನೂ ಅವರ ಕುವರಿಯರನ್ನೂ ನಿನ್ನನ್ನೂ ನಿಮ್ಮ ಪೂರ್ವಸ್ಥಿತಿಗೆ ತರುವೆ.
56 : ಅರಾಮಿನ ಕುವರಿಯರು ಆಕೆಯ ಸುತ್ತಮುತ್ತಲಿನ ಸಮಸ್ತರು, ನಿನ್ನನ್ನು ಎಲ್ಲೆಲ್ಲೂ ಹೀನೈಸುತ್ತಿರುವ ಫಿಲಿಷ್ಟಿಯದ ಕುವರಿಯರು, ಇವರೆಲ್ಲರ ದೂಷಣೆಗೆ ನೀನು ಗುರಿಯಾಗುವುದಕ್ಕೆ ಮುಂಚೆ, ನಿನ್ನ ಕೆಟ್ಟತನವು ಬೆಳಕಿಗೆ ಬರುವುದಕ್ಕೆ ಮೊದಲು,
57 : ನೀನು ಗರ್ವಪಡುತ್ತಿದ್ದ ಆ ಕಾಲದಲ್ಲಿ ಸೊದೋಮೆಂಬ ನಿನ್ನ ತಂಗಿಯ ಹೆಸರು ನಿನ್ನ ಬಾಯಲ್ಲಿ ಬರಲೇ ಇಲ್ಲ;
58 : ಈಗ ನಿನ್ನ ದುರ್ನಡತೆಯ ಮತ್ತು ದುರಾಚಾರಗಳ ಫಲವನ್ನು ಅವಳಂತೆ ಅನುಭವಿಸಬೇಕಾಗಿ ಬಂತು.” ಇದು ಸರ್ವೇಶ್ವರನ ನುಡಿ.
59 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: - “ನೀನು ಒಡಂಬಡಿಕೆಯನ್ನು ಮೀರಿ ನಿನ್ನ ಆಣೆಯನ್ನು ತಿರಸ್ಕರಿಸಿದೆ. ನೀನು ಮಾಡಿದ್ದಕ್ಕೆ ತಕ್ಕದ್ದನ್ನು ನಾನು ನಿನಗೆ ಮಾಡುವೆನು.
60 : ಆದರೂ ನಾನು ನಿನ್ನ ಯೌವನಕಾಲದಲ್ಲಿ ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು ನಿನ್ನೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡು ದೃಢೀಕರಿಸುವೆನು.
61 : ಇದಕ್ಕನುಸಾರ ನಾನು ಕುವರಿಯನ್ನೋ ಎಂಬಂತೆ ನಿನಗೆ ದಯಪಾಲಿಸುವ ನಿನ್ನ ಅಕ್ಕಂದಿರೂ ತಂಗಿಯರೂ ನಿನ್ನಲ್ಲಿ ಸೇರಿಕೊಳ್ಳುವರು. ಆಗ ನೀನು ನಿನ್ನ ದುರ್ಮಾರ್ಗಗಳನ್ನು ನೆನಸಿಕೊಂಡು ನಾಚಿಕೆಪಡುವೆ; ಈ ನನ್ನ ದಯೆ ನಿನ್ನ ಹಿಂದಿನ ಒಡಂಬಡಿಕೆಯ ಫಲವಲ್ಲ.
62 : ನಾನು ಈ ಒಡಂಬಡಿಕೆಯನ್ನು ನಿನ್ನೊಂದಿಗೆ ಮಾಡಿಕೊಳ್ಳುವಾಗ ನಾನೇ ಸರ್ವೇಶ್ವರ ಎಂದು ನಿನಗೆ ಗೊತ್ತಾಗುವುದು.
63 : ನಾನು ನಿನ್ನ ದುಷ್ಕøತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ, ನೀನು ಅವುಗಳನ್ನು ನೆನಪಿಗೆ ತಂದು ನಾಚಿಕೆಪಟ್ಟು, ನಿನಗಾದ ಅವಮಾನದ ನಿಮಿತ್ತ ಇನ್ನು ಬಾಯಿ ತೆರೆಯದಿರುವೆ.” ಇದು ಸರ್ವೇಶ್ವರನಾದ ದೇವರು ನುಡಿ.

· © 2017 kannadacatholicbible.org Privacy Policy