1 : ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ ಇದು:
2 : “ನರಪುತ್ರನೇ, ನೀನು ದ್ರೋಹಿವಂಶದ ಮಧ್ಯೆ ವಾಸಿಸುತ್ತಿರುವೆ. ಆ ವಂಶದವರು ದ್ರೋಹಿಗಳಾಗಿರುವುದರಿಂದ ಕಣ್ಣಿದ್ದರೂ ಕಾಣರು, ಕಿವಿಯಿದ್ದರೂ ಕೇಳರು.
3 : “ನರಪುತ್ರನೇ, ವಲಸೆಹೋಗುವುದಕ್ಕೆ ಬೇಕಾದ ಸಾಮಗ್ರಿಗಳನ್ನು ನೀನು ಕೂಡಿಸಿಕೊಂಡು ಹಗಲಿನಲ್ಲಿ ಅವರ ಕಣ್ಣಿದುರಿಗೇ ಹೊರಡು. ಅಂದರೆ, ನಿನ್ನ ವಾಸಸ್ಥಳವನ್ನು ಬಿಟ್ಟು ಅವರು ನೋಡುವ ಹಾಗೆ ಬೇರೊಂದು ಸ್ಥಳಕ್ಕೆ ಹೋಗು: ಅವರು ದ್ರೋಹಿವಂಶದವರಾಗಿದ್ದರೂ ಒಂದು ವೇಳೆ ತಮ್ಮ ದ್ರೋಹವನ್ನು ಮನಸ್ಸಿಗೆ ತಂದುಕೊಳ್ಳಬಹುದು.
4 : ನೀನು ನಿನ್ನ ಸಾಮಗ್ರಿಗಳನ್ನು ವಲಸೆಯ ಸಾಮಗ್ರಿಗಳನ್ನೊ ಎಂಬಂತೆ ಹಗಲಿನಲ್ಲಿ ಅವರ ಕಣ್ಣೆದುರಿಗೆ ಮನೆಯೊಳಗಿಂದ ಆಚೆಗೆ ಹಾಕಿ ವಲಸೆ ಹೋಗುವವನಂತೆ ಸಾಯಂಕಾಲ ಅವರ ಸಮಕ್ಷಮ ಹೊರಟು ಹೋಗು.
5 : ಅವರು ನೋಡುತ್ತಿರುವಾಗ, ನೀನು ಗೋಡೆಯನ್ನು ತೋಡಿ, ಕಂಡಿಯ ಮೂಲಕ ನಿನ್ನ ಸಾಮಗ್ರಿಗಳನ್ನು ಸಾಗಿಸಿಕೊಂಡು ಹೋಗು.
6 : ಅವರ ಕಣ್ಣ ಮುಂದೆ, ಅದನ್ನು ಹೆಗಲ ಮೇಲೆ ಹಾಕಿ, ಕತ್ತಲಲ್ಲಿ ಹೊತ್ತುಕೊಂಡು ಹೋಗು; ನೆಲವನ್ನು ನೋಡದಂತೆ ಮೋರೆಯನ್ನು ಮುಚ್ಚಿಕೋ; ನಾನು ನಿನ್ನನ್ನು ಇಸ್ರಯೇಲ್ ವಂಶದವರಿಗೆ ಮುಂಗುರುತನ್ನಾಗಿ ಮಾಡಿದ್ದೇನೆ.”
7 : ಆಗ ನಾನು ನನಗಾದ ಅಪ್ಪಣೆಯನ್ನು ನೆರವೇರಿಸಿದೆ: ಹಗಲಿನಲ್ಲಿ ನನ್ನ ಸಾಮಗ್ರಿಗಳನ್ನು ವಲಸೆಯ ಸಾಮಗ್ರಿಗಳನ್ನೋ ಎಂಬಂತೆ ಮನೆಯೊಳಗಿನಿಂದ ಆಚೆಗೆ ಹಾಕಿದೆ; ಸಾಯಂಕಾಲ ನನ್ನ ಕೈಯಿಂದಲೇ ಗೋಡೆಯನ್ನು ಕಂಡಿಮಾಡಿ, ಕತ್ತಲಲ್ಲಿ ಆ ಸಾಮಗ್ರಿಗಳನ್ನು ಆಚೆಗೆ ಸಾಗಿಸಿ, ಅವರ ಕಣ್ಣ ಮುಂದೆ ಹೆಗಲ ಮೇಲೆ ಹೊತ್ತು ಕೊಂಡುಹೋದೆ.
8 : ಬೆಳಿಗ್ಗೆ ಸರ್ವೇಶ್ವರನಿಂದ ಈ ವಾಣಿ ನನಗೆ ಕೇಳಿಸಿತು:
9 : “ನರಪುತ್ರನೇ, ದ್ರೋಹಿವಂಶದವರಾದ ಇಸ್ರಯೇಲರು, ‘ನೀನು ಏನು ಮಾಡುತ್ತಿರುವೆ?’ ಎಂದು ನಿನ್ನನ್ನು ಕೇಳಿದ್ದಾರಲ್ಲವೆ?
10 : ನೀನು ಅವರಿಗೆ ಹೀಗೆ ನುಡಿ, ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಈ ಹೊರೆ ಜೆರುಸಲೇಮಿನಲ್ಲಿರುವ ರಾಜನಿಗೂ ಅಲ್ಲಿನ ಇಸ್ರಯೇಲ್ ವಂಶದವರೆಲ್ಲರಿಗೂ ಸಂಬಂಧಪಟ್ಟಿದೆ;
11 : ಇದನ್ನೂ ನುಡಿ, - ‘ನಾನು ನಿಮಗೆ ಮುಂಗುರುತಾಗಿದ್ದೇನೆ. ನಾನು ಮಾಡಿದಂತೆಯೇ ಅವರಿಗಾಗುವುದು: ಅವರು ವಲಸೆಯಾಗಿ ಸೆರೆಹೋಗುವರು.
12 : ಅವರಲ್ಲಿನ ರಾಜನು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡು ಕತ್ತಲಲ್ಲಿ ಹೊರಟುಹೋಗುವನು: ಅವನು ಗೋಡೆಯನ್ನು ತೋಡಿ, ಕಂಡಿಯ ಮೂಲಕ ಸಾಮಗ್ರಿಗಳನ್ನು ಆಚೆಗೆ ಸಾಗಿಸುವನು; ಅವನು ಮೋರೆಯನ್ನು ಮುಚ್ಚಿಕೊಳ್ಳುವನು, ಭೂಮಿಯು ಅವನ ಕಣ್ಣಿಗೆ ಕಾಣಿಸದು.
13 : ನಾನು ಅವನಿಗೆ ನನ್ನ ಬಲೆಯೊಡ್ಡುವೆನು, ನಾನು ಹಾಕಿದ ಉರುಲಿನಲ್ಲಿ ಸಿಕ್ಕಿಬೀಳುವನು: ಬಾಬಿಲೋನಿಯಾ ದೇಶದ ಬಾಬಿಲೋನ್ ನಗರಕ್ಕೆ ಅವನನ್ನು ಒಯ್ಯುವೆನು; ಅಲ್ಲೇ ಇದ್ದು ಸಾಯುವನು, ಆದರೂ ಆ ದೇಶವನ್ನು ನೋಡನು.
14 : ಅವನ ಸುತ್ತಲಿನ ಸಕಲ ಸಹಾಯಕರನ್ನೂ ಅವನ ಸಮಸ್ತವ್ಯೂಹಗಳವರನ್ನೂ ನಾನು ಎಲ್ಲ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.
15 : “ನಾನು ಅವರನ್ನು ಜನಾಂಗಗಳೊಳಗೆ ಚದರಿಸಿ ಬಿಟ್ಟು, ಅನ್ಯದೇಶಗಳಲ್ಲಿ ಚಲ್ಲಾಪಿಲ್ಲಿ ಮಾಡುವಾಗ ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.
16 : ನಾನು ಕೆಲವರನ್ನು ಖಡ್ಗ-ಕ್ಷಾಮ-ವ್ಯಾಧಿಗಳಿಂದ ಉಳಿಸಿ, ಅವರು ತಮ್ಮ ಅಸಹ್ಯ ಕಾರ್ಯಗಳ ವಿಷಯವನ್ನು ತಾವು ಸೇರಿದ ಜನಾಂಗಗಳಲ್ಲಿ ತಿಳಿಸುವುದಕ್ಕೆ ಅವಕಾಶ ಮಾಡುವೆನು: ನಾನೇ ಸರ್ವೇಶ್ವರ ಎಂದು ಆ ಜನಾಂಗಗಳಿಗೂ ಗೊತ್ತಾಗುವುದು.”
17 : ಇದಲ್ಲದೆ ಸರ್ವೇಶ್ವರನ ವಾಣಿ ನನಗೆ ಇಂತೆಂದಿತು:
18 : “ನರಪುತ್ರನೇ, ನೀನು ಅನ್ನವನ್ನು ಅಂಜಿಕೆಯಿಂದ ತಿಂದು, ನೀರನ್ನು ನಡುಕದಿಂದ ಕುಡಿದು, ಆ ದೇಶದಲ್ಲಿರುವ ಜನರಿಗೆ ಹೀಗೆ ಹೇಳು:
19 : ಸರ್ವೇಶ್ವರನಾದ ದೇವರು ಇಸ್ರಯೇಲ್ ನಾಡಿನ ಜೆರುಸಲೇಮ್ ನಿವಾಸಿಗಳನ್ನೂ ಕುರಿತು ಇಂತೆನ್ನುತ್ತಾರೆ: ‘ಅವರು ಅನ್ನವನ್ನು ಅಂಜಿಕೆಯಿಂದ ತಿಂದು ನೀರನ್ನು ನಡುಕದಿಂದ ಕುಡಿಯುವರು: ಏಕೆಂದರೆ ಆ ನಾಡಿನಲ್ಲಿರುವವರು ಹಿಂಸಾಚಾರಿಗಳು; ಈ ಕಾರಣ, ಅಲ್ಲಿನ ಸೊತ್ತೆಲ್ಲಾ ಸೂರೆಯಾಗಿ, ನಾಡು ಬರಿದಾಗುವುದು.
20 : ಆಗ ಜನ ತುಂಬಿದ ಊರುಗಳು ಹಾಳಾಗಿ ನಾಡು ಪಾಳುಬೀಳುವುದು; ನಾನೇ ಸರ್ವೇಶ್ವರ ಎಂದು ನಿಮಗೆ ಆಗ ಗೊತ್ತಾಗುವುದು.”
21 : ಆಮೇಲೆ ಸರ್ವೇಶ್ವರನ ವಾಣಿ ನನಗೆ ದಯಪಾಲಿಸಿದ್ದು:
22 : “ನರಪುತ್ರನೇ ‘ಕ್ಲುಪ್ತಕಾಲ ದೂರ ದೂರ ಹೋಗುತ್ತಲಿದೆ, ದಿವ್ಯದರ್ಶನಗಳೆಲ್ಲಾ ನಿರರ್ಥಕ’ ಎಂಬುದಾಗಿ ಇಸ್ರಯೇಲ್ ನಾಡಿನವರು ಆಡಿಕೊಳ್ಳುವ ಈ ಗಾದೆ ಏನು?
23 : ಅವರಿಗೆ ಹೀಗೆ ಹೇಳು - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಾನು ಈ ಗಾದೆಯನ್ನು ನಿಲ್ಲಿಸಿಬಿಡುವೆನು; ಅದು ಇಸ್ರಯೇಲಿನಲ್ಲಿ ಇನ್ನು ಸಲ್ಲದು; ನಾನು ನುಡಿಯುವ ಆ ಮಾತನ್ನು ಕೇಳಿರಿ: ಕ್ಲುಪ್ತಕಾಲ ಹತ್ತಿರಬಂದಿದೆ, ದಿವ್ಯ ದರ್ಶನಗಳೆಲ್ಲಾ ಸಾರ್ಥಕವಾಗುವ ಕಾಲ ಸಮೀಪಿಸಿದೆ.
24 : “ಇನ್ನು ಮೇಲೆ ಇಸ್ರಯೇಲ್ ವಂಶದವರಲ್ಲಿ ಯಾರಿಗೂ ಸುಳ್ಳು ದರ್ಶನವಾಗದು; ಮೋಸದ ಕಣಿ ಇರದು.
25 : ನಾನೇ ಸರ್ವೇಶ್ವರ; ನಾನು ನುಡಿದೇ ತೀರುವೆನು; ನಾನು ನುಡಿದ ಮಾತು ನೆರವೇರುವುದು, ಇನ್ನು ನಿಧಾನವಾಗದು. ದ್ರೋಹಿ ವಂಶದವರೇ, ನಾನು ನಿಮ್ಮ ಕಾಲದಲ್ಲಿ ನುಡಿಯುವುದು ಮಾತ್ರವಲ್ಲದೆ ನುಡಿದದ್ದನ್ನು ನೆರವೇರಿಸುವೆನು. ಇದು ಸರ್ವೇಶ್ವರನಾದ ದೇವರ ವಾಕ್ಯ.”
26 : ಮತ್ತು ಸರ್ವೇಶ್ವರನ ವಾಣಿ ನನಗೆ ಹೀಗೆಂದಿತು:
27 : “ನರ ಪುತ್ರನೇ, ಇಗೋ, ಇಸ್ರಯೇಲ್ ವಂಶದವರು, ‘ಇವನಿಗಾದ ದಿವ್ಯದರ್ಶನ ಮುಂದೆ ಬಹುದೂರ ಕಾಲಕ್ಕೆ ಸಂಬಂಧಪಟ್ಟದ್ದು; ಬಹಳ ದಿನಗಳ ಮೇಲೆ ಆಗತಕ್ಕದ್ದನ್ನು ಮುಂತಿಳಿಸುತ್ತಾನೆ’ ಎಂದು ಹೇಳುತ್ತಾರೆ.
28 : ಆದಕಾರಣ ನೀನು ಅವರಿಗೆ ಹೀಗೆ ಹೇಳು: ಸರ್ವೇಶ್ವರನಾದ ದೇವರು ಹೇಳುವುದನ್ನು ಗಮನಿಸಿ: ಇನ್ನು ಮೇಲೆ ನನ್ನ ಮಾತುಗಳಲ್ಲಿ ಯಾವುದೂ ಸಾವಕಾಶವಾಗದು; ನಾನಾಡುವ ಮಾತು ನೆರವೇರುವುದು ಖಂಡಿತ; ಇದು ಸರ್ವೇಶ್ವರನಾದ ದೇವರ ನುಡಿ.”