Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಜೆಕಿಯೇಲ


1 : ದೇವದರ್ಶನದಲ್ಲಿ ಇಗೋ, ಕೆರೂಬಿಗಳ ತಲೆಗಳ ಮೇಲಿದ್ದ ಗವಿಯಾಕೃತಿಯ ಮೇಲ್ಗಡೆ ಇಂದ್ರನೀಲ ಮಣಿಯಂತೆ ಹೊಳೆಯುವ ಸಿಂಹಾಸನದ ಆಕಾರವು ನನಗೆ ಕಾಣಿಸಿತು.
2 : ನಾರಿನ ಬಟ್ಟೆಯನ್ನು ಹೊದ್ದುಕೊಂಡಿದ್ದ ಆ ಪುರುಷನಿಗೆ ದೇವರು, “ನೀನು ಗರಗರನೆ ತಿರುಗುವ ಗಾಲಿಗಳ ನಡುವೆ, ಕೆರೂಬಿಯ ಕೆಳಗೆ ಪ್ರವೇಶಿಸಿ, ಕೆರೂಬಿಗಳ ಮಧ್ಯೆಯಿಂದ ಬೊಗಸೆಯಲ್ಲಿ ಕೆಂಡಗಳನ್ನು ತುಂಬಿ ತಂದು ಪಟ್ಟಣದ ಮೇಲೆ ಎರಚು,” ಎಂದು ಅಪ್ಪಣೆಕೊಟ್ಟರು. ಅವನು ನನ್ನ ಕಣ್ಣೆದುರಿಗೇ ಹೋಗಿ ಅಲ್ಲಿ ಪ್ರವೇಶಿಸಿದನು.
3 : ಅವನು ಒಳಗೆ ಸೇರಿದಾಗ ಕೆರೂಬಿಗಳು ದೇವಾಲಯದ ದಕ್ಷಿಣಭಾಗದಲ್ಲಿ ನಿಂತಿದ್ದವು, ಮೇಘವು ಒಳಗಿನ ಆವರಣವನ್ನು ತುಂಬಿತ್ತು.
4 : ಇದಲ್ಲದೆ ಸರ್ವೇಶ್ವರನ ತೇಜಸ್ಸು ಕೆರೂಬಿಗಳನ್ನು ಬಿಟ್ಟು ಮೇಲಕ್ಕೇರಿ ದೇವಾಲಯದ ಹೊಸ್ತಿಲಿನ ಮೇಲ್ಗಡೆ ನಿಂತಿತು; ದೇವಾಲಯದಲ್ಲೂ ಮೇಘವು ತುಂಬಿತ್ತು; ಸರ್ವೇಶ್ವರನ ತೇಜಸ್ಸಿನ ಅದ್ಭುತಕಾಂತಿ ಆವರಣದಲ್ಲೆಲ್ಲಾ ವ್ಯಾಪಿಸಿತ್ತು.
5 : ಆಗ ಕೆರೂಬಿಗಳ ರೆಕ್ಕೆಗಳ ಶಬ್ದ ಸರ್ವಶಕ್ತನಾದ ದೇವರು ಮಾತಾಡುವ ಧ್ವನಿಯಷ್ಟು ಗಂಭೀರವಾಗಿ ಹೊರಗಣ ಆವರಣದ ಪರ್ಯಂತವೂ ಕೇಳಿಸಿತು.
6 : ದೇವರು ನಾರಿನ ಬಟ್ಟೆಯನ್ನು ಹೊದ್ದುಕೊಂಡಿದ್ದ ಆ ಪುರುಷನಿಗೆ, “ನೀನು ಗರಗರನೆ ತಿರುಗುವ ಗಾಲಿಗಳ ನಡುವೆ ಪ್ರವೇಶಿಸಿ, ಕೆರೂಬಿಗಳ ಮಧ್ಯೆಯಿಂದ ಬೆಂಕಿಯನ್ನು ತೆಗೆದುಕೋ,” ಎಂದು ಅಪ್ಪಣೆಕೊಟ್ಟರು. ಅವನು ಒಳಕ್ಕೆ ಹೋಗಿ ಒಂದು ಚಕ್ರದ ಪಕ್ಕದಲ್ಲಿ ನಿಂತುಕೊಂಡನು.
7 : ಆಗ ಒಬ್ಬ ಕೆರೂಬಿಯು ಇತರ ಕೆರೂಬಿಯರ ನಡುವೆ ಕೈಚಾಚಿ, ಅವುಗಳ ಮಧ್ಯದಲ್ಲಿದ್ದ ಬೆಂಕಿಯನ್ನು ತೆಗೆದು, ನಾರಿನ ಬಟ್ಟೆತೊಟ್ಟವನ ಬೊಗಸೆಯಲ್ಲಿ ಹಾಕಿತು; ಅವನು ಅದನ್ನು ತೆಗೆದುಕೊಂಡು ಆಚೆಗೆ ಹೊರಟನು.
8 : (ಕೆರೂಬಿಗಳ ಒಂದೊಂದು ರೆಕ್ಕೆಯ ಕೆಳಗೂ ಮನುಷ್ಯಹಸ್ತದಂಥ ಒಂದೊಂದು ಹಸ್ತವು ಕಾಣಿಸಿತು.)
9 : ಇಗೋ, ಆ ಕೆರೂಬಿಗಳ ಪಕ್ಕಗಳಲ್ಲಿ, ಒಂದೊಂದು ಕೆರೂಬಿಯ ಪಕ್ಕದಲ್ಲಿ ಒಂದೊಂದು ಚಕ್ರದಂತೆ ನಾಲ್ಕು ಚಕ್ರಗಳಿದ್ದುದು ಕಾಣಿಸಿತು. ಆ ಚಕ್ರಗಳ ಬಣ್ಣ ಪೀತರತ್ನದ ಹಾಗೆ ಹೊಳೆಯುತ್ತಿತ್ತು.
10 : ಅವುಗಳ ರೂಪ ಹೇಗಿತ್ತೆಂದರೆ ಒಂದು ಚಕ್ರದೊಳಗೆ ಇನ್ನೊಂದು ಚಕ್ರ ರಚಿಸಿದಂತಿತ್ತು. ಆ ನಾಲ್ಕು ಚಕ್ರಗಳೂ ಒಂದೇ ಮಾದರಿಯಾಗಿದ್ದವು.
11 : ಅವು ಹೊರಳುವಾಗ ನಾಲ್ಕು ಕಡೆಗಳಲ್ಲಿ ಯಾವ ಕಡೆಗಾದರೂ ಹೊರಳುತ್ತಿದ್ದವು, ಓರೆಯಾಗಿ ಹೊರಳುತ್ತಿರಲಿಲ್ಲ; ಎದುರುಮುಖವಾಗಿ ಹೋಗುತ್ತಿದ್ದವೇ ಹೊರತು ಓರೆಯಾಗಿ ಹೋಗುತ್ತಿರಲಿಲ್ಲ.
12 : ಕೆರೂಬಿಗಳ ಬೆನ್ನು, ಕೈ, ರೆಕ್ಕೆ, ಅಂತು ಸರ್ವಾಂಗಗಳಲ್ಲಿಯೂ ಹಾಗು ಚಕ್ರಗಳಲ್ಲಿಯೂ ಕಣ್ಣುಗಳು ಸರ್ವತ್ರ ತುಂಬಿದ್ದವು; ನಾಲ್ಕು ಕೆರೂಬಿಗಳಲ್ಲಿ ಒಂದೊಂದಕ್ಕೂ ಒಂದೊಂದು ಚಕ್ರವಿತ್ತು.
13 : (ನಾನು ಕೇಳಿದಂತೆ ಆ ಚಕ್ರಗಳ ಹೆಸರು ಗರಗರಗಾಲಿ ಎಂದು.)
14 : ಒಂದೊಂದು ಕೆರೂಬಿಗೆ ನಾಲ್ಕು ನಾಲ್ಕು ಮುಖಗಳಿದ್ದವು; ಮೊದಲನೆಯದು ಕೆರೂಬಿಯದು; ಎರಡನೆಯದು ಮನುಷ್ಯನದು, ಮೂರನೆಯದು ಸಿಂಹನದು, ನಾಲ್ಕನೆಯದು ಗರುಡಪಕ್ಷಿಯದು.
15 : ಆ ಕೆರೂಬಿಗಳು ಮೇಲಕ್ಕೆ ಏರಿದವು; ನಾನು ಕೆಬಾರ್ ನದಿಯ ಹತ್ತಿರ ನೋಡಿದ ಜೀವಿಗಳು ಇವೇ.
16 : ಕೆರೂಬಿಗಳು ಹೋಗುವಾಗ ಚಕ್ರಗಳೂ ಅವುಗಳ ಪಕ್ಕದಲ್ಲಿ ಹೋಗುತ್ತಿದ್ದವು; ಕೆರೂಬಿಗಳು ನೆಲದಿಂದ ಮೇಲಕ್ಕೆ ಏರಬೇಕೆಂದು ರೆಕ್ಕೆಗಳನ್ನು ಹರಡಿಕೊಂಡಾಗ ಚಕ್ರಗಳೂ ಓರೆಯಾಗದೆ ಅವರ ಸಂಗಡವೇ ಏರಿದವು.
17 : ಜೀವಿಗಳ ಆತ್ಮ ಆ ಚಕ್ರಗಳಲ್ಲಿಯೂ ಇದ್ದ ಕಾರಣ, ಅವು ನಿಂತು ಹೋದಾಗ ಇವೂ ನಿಂತುಹೋದವು, ಅವು ಏರಿದಾಗ ಇವೂ ಅವುಗಳ ಜೊತೆಯಲ್ಲೇ ಏರಿದವು.
18 : ಬಳಿಕ ಸರ್ವೇಶ್ವರನ ತೇಜಸ್ಸು ದೇವಾಲಯದ ಹೊಸ್ತಿಲನ್ನು ಬಿಟ್ಟು, ಕೆರೂಬಿಗಳ ಮೇಲೆ ನಿಂತಿತು.
19 : ಆಗ ನನ್ನ ಕಣ್ಣೆದುರಿಗೆ ಕೆರೂಬಿಗಳು ರೆಕ್ಕೆಗಳನ್ನು ಹರಡಿಕೊಂಡು ಚಕ್ರಸಮೇತವಾಗಿ ನೆಲದಿಂದ ಏರಿ ಹೊರಟು ಸರ್ವೇಶ್ವರನ ಆಲಯದ ಪೂರ್ವಬಾಗಿಲ ಮುಂದೆನಿಂತವು. ಅವುಗಳ ಮೇಲ್ಗಡೆ ಇಸ್ರಯೇಲಿನ ದೇವರ ತೇಜಸ್ಸು ನೆಲಸಿತ್ತು.
20 : ಇಸ್ರಯೇಲಿನ ದೇವರ ವಾಹನವಾಗಿ ಕೆಬಾರ್ ನದಿಯ ಹತ್ತಿರ ನನಗೆ ಕಾಣಿಸಿದ ಆ ಜೀವಿಗಳು ಇವೇ; ಅವು ಕೆರೂಬಿಗಳೆಂದು ಈಗ ನನಗೆ ತಿಳಿದುಬಂತು.
21 : ಒಂದೊದಕ್ಕೆ ನಾಲ್ಕು ನಾಲ್ಕು ಮುಖಗಳೂ ನಾಲ್ಕು ನಾಲ್ಕು ರೆಕ್ಕೆಗಳೂ ಇದ್ದವು; ಅವುಗಳ ರೆಕ್ಕೆಗಳ ಕೆಳಗೆ ಮನುಷ್ಯ ಹಸ್ತದಂಥ ಹಸ್ತಗಳು ಇದ್ದವು;
22 : ಅವುಗಳ ಮುಖಗಳು ಕೆಬಾರ್ ನದಿಯ ಹತ್ತಿರ ನಾನು ಕಂಡ ಮುಖಗಳಂತೆ ನನಗೆ ಕಂಡು ಬಂದವು. ಅವು ಆ ಮುಖಗಳೇ. ಪ್ರತಿಯೊಂದು ಜೀವಿಯು ಹೊರಟ ಮುಖವಾಗಿಯೇ ಹೋಗುತ್ತಿತ್ತು.

· © 2017 kannadacatholicbible.org Privacy Policy