1 : ಅಕಟಕಟಾ! ಎಷ್ಟು ಮಸುಕಾಗಿದೆ ಬಂಗಾರ
ಎಷ್ಟು ಕಾಂತಿಹೀನವಾಗಿಬಿಟ್ಟಿವೆ
ಅಪ್ಪಟ ಚಿನ್ನ !
ಪವಿತ್ರಾಲಯದ ಕಲ್ಲುಗಳೂ ಬಿದ್ದಿವೆ
ಚೆಲ್ಲಾಪಿಲ್ಲಿಯಾಗಿ
ಬೀದಿಬೀದಿಗಳ ಬದಿಯಲ್ಲಿ
ರಾಶಿರಾಶಿಯಾಗಿ !
2 : ಅಯ್ಯೋ, ಅಪರಂಜಿಯಂತೆ ಅಮೂಲ್ಯವಾಗಿದ್ದ
ಸಿಯೋನ್ ಪ್ರಜೆ
ಇಂದು ಬೇಡವೆಂದು ಬಿಸಾಡಿದ ಕುಂಬಾರನ
ಮಣ್ಣುಮಡಕೆ !
ಅಮೂಲ್ಯವಾಗಿದ್ದರು ಸಿಯೋನಿನ ಪ್ರಜೆಗಳು
ಅಪರಂಜಿಯಂತೆ
ಅಯ್ಯೋ ಈಗ ಅವರಾಗಿಹರು
ಕುಂಬಾರನೆ ಬಿಸಾಡಿದ ಮಡಕೆಯಂತೆ.
3 : ಮರಿಗಳಿಗೆ ಮೊಲೆಕೊಟ್ಟು ಹಾಲುಣಿಸುತ್ತವೆ
ನರಿಗಳು
ನನ್ನ ಜನರು ಆಗಿಹರು
ಕಾಡಿನ ಉಷ್ಟ್ರಪಕ್ಷಿಯಂತೆ ಕ್ರೂರಿಗಳು.
4 : ದಾಹದಿಂದ ಸೇದುಹೋಗಿದೆ ಮೊಲೆಗೂಸಿನ
ನಾಲಿಗೆ
ಅನ್ನವಿಕ್ಕುವರಾರೂ ಇಲ್ಲ, ಹಂಬಲಿಸುವ
ಆ ಹಸುಳೆಗಳಿಗೆ.
5 : ಮೃಷ್ಟಾನ್ನ ಉಣ್ಣುತ್ತಿದ್ದವರು ದಿಕ್ಕೆಟ್ಟು
ಅಲೆಯುತ್ತಿರುವರು
ಚಿಕ್ಕಂದಿನಿಂದಲೆ ನಾರುಮಡಿಯನ್ನು
ತೊಡುತ್ತಿದ್ದವರು
ತಿಪ್ಪೆಗಳನ್ನು ಅಪ್ಪಿಕೊಳ್ಳುವ ಗತಿಗೆ
ಇಳಿದಿರುವರು.
6 : ‘ಸೊದೋಮ್’ ಊರು ಹಾಳಾಯಿತು
ಕ್ಷಣಮಾತ್ರದಲ್ಲೆ
ಅದರ ಮೇಲೆ ಯಾರೂ ಕೈಮಾಡದೆಯೇ.
ಅದಕ್ಕಿಂತಲೂ ಹೆಚ್ಚಾಯಿತಲ್ಲಾ
ನನ್ನ ಜನರ ಅಧರ್ಮ !
7 : ನನ್ನ ಜನತೆಯ ಮಹನೀಯರು
ಹಿಮಕ್ಕಿಂತ ಶುಭ್ರ, ಹಾಲಿಗಿಂತ ಬಿಳುಪು.
ಅವರ ದೇಹದ ಬಣ್ಣ ಹವಳವನ್ನು ಮೀರಿತ್ತು
ಅವರ ರೂಪ ಇಂದ್ರನೀಲ ಮಣಿಯಂತೆ
ಅಂದವಾಗಿತ್ತು.
8 : ಈಗ ಅವರ ಮುಖ ಕಾರ್ಮೋಡಕ್ಕಿಂತ ಕಪ್ಪು
ಬೀದಿಗಳಲ್ಲಿ ನೋಡುತ್ತಿದ್ದವರಿಗೆ ಅವರ
ಗುರುತೂ ಸಿಗದು.
ಅವರ ಚರ್ಮ ಎಲುಬುಗಳಿಗೆ ಅಂಟಿಕೊಂಡಿದೆ
ಅದಕ್ಕೆ ಸುಕ್ಕು ಹಿಡಿದಿದೆ; ಒಣಗಿ
ಕಟ್ಟಿಗೆಯಾಗಿದೆ.
9 : ಹಸಿವೆಯಿಂದ ಹತರಾದವರಿಗಿಂತ
ಖಡ್ಗದಿಂದ ಹತರಾದವರು ಲೇಸು.
ತುತ್ತಾದರು ಅವರು ಕ್ಷಾಮಕ್ಕೆ
ಕ್ಷಯಿಸಿಹೋದರು ನೆಲದ ಗೆಡ್ಡೆ ಗೆಣಸೂ ಸಿಗದೆ.
10 : ಕರುಣಾಮಯಿಗಳಾದ ಹೆಂಗಳೆಯರು
ತಮ್ಮ ಕಂದಮ್ಮಗಳನ್ನು ಸ್ವಂತ ಕೈಯಿಂದ
ಬೇಯಿಸಿದರು.
ನನ್ನ ಜನರ ಪರಿವಿನಾಶದ ಕಾಲದೊಳು
ತಮ್ಮ ತಾಯಿಗಳಿಗೆ ತಿಂಡಿಯಾದರು
ಆ ಹಸುಳೆಗಳು.
11 : ಸುರಿಸಿದ್ದಾನೆ ಸರ್ವೇಶ್ವರ ತನ್ನ
ರೋಷಾಗ್ನಿಯನ್ನು
ತೀರಿಸಿಕೊಂಡಿದ್ದಾನೆ ತನ್ನ ಉಗ್ರಕೋಪವನ್ನು.
ಆತ ಹೊತ್ತಿಸಿದ ಬೆಂಕಿಗೆ
ಸಿಯೋನಿನ ಅಸ್ತಿವಾರ ಆಹುತಿಯಾಗಿದೆ.
12 : ವೈರಿಗಳೂ ವಿರೋಧಿಗಳೂ
ಜೆರುಸಲೇಮಿನ ಬಾಗಿಲೊಳಗೆ
ಕಾಲಿಡುವರೆಂದು
ವಿಶ್ವದ ರಾಜರಾಗಲಿ, ನಿವಾಸಿಗಳಾಗಲಿ
ನಂಬಿರಲಿಲ್ಲ ಯಾರೂ.
13 : ನಗರದ ನಡುವೆಯೇ ಆದ ನೀತಿವಂತರ
ರಕ್ತಪಾತದಿಂದ
ಯಾಜಕರು, ಪ್ರವಾದಿಗಳು ಎಸಗಿದ ಈ
ಪಾಪದೋಷಗಳಿಂದ
ಬಂದೊದಗಿತು ಈ ಪರಿತಾಪವೆಲ್ಲ.
14 : ಕುರುಡರಂತೆ ಬೀದಿಗಳಲ್ಲಿ ಅಲೆಯುತ್ತಿಹರು
ಆ ಯಾಜಕರು ಮತ್ತು ಪ್ರವಾದಿಗಳು.
ಅವರ ಬಟ್ಟೆಯನ್ನೂ ಯಾರೂ ಮುಟ್ಟರು
ಏಕೆಂದರೆ ರಕ್ತದಿಂದ ಅವರು
ಕಳಂಕಿತರಾಗಿಹರು.
15 : ಅವರನ್ನು ನೋಡುವವರೂ
“ತೊಲಗಿರಿ, ನೀವು ಅಶುದ್ಧರು
ನಡೆಯಿರಿ, ನಡೆಯಿರಿ, ಮುಟ್ಟಬೇಡಿ”
ಎಂದು ಕೂಗುತ್ತಿರುವರು.
ಅವರು ಓಡಿ ಅನ್ಯನಾಡುಗಳಲ್ಲಿ
ಅಲೆಯುತ್ತಿರಲು
“ಇವರು ಇನ್ನು ಇಲ್ಲಿ ತಂಗಕೂಡದು”
ಎನ್ನುತಿಹರು ಅಲ್ಲಿನ ನಾಡಿಗರು.
16 : ಸರ್ವೇಶ್ವರನ ದೃಷ್ಟಿ ಅವರನ್ನು ಚದರಿಸಿದೆ
ಇನ್ನು ಆತ ತೋರನು ಅವರಿಗೆ ಕರುಣೆ.
ಯಾಜಕರಾದರೂ ಅವರಿಗೆ ಮರ್ಯಾದೆ
ತಪ್ಪಿಹೋಗಿದೆ
ಹಿರಿಯರಾದರೂ ಅವರಿಗೆ ಆದರಣೆ ಇಲ್ಲದಿದೆ.
17 : ಮಬ್ಬಾಯಿತು ಕಣ್ಣು ವ್ಯರ್ಥವಾಗಿ ನೆರವನ್ನು
ನಿರೀಕ್ಷಿಸುತ
ರಕ್ಷಿಸಲಾಗದ ರಾಷ್ಟ್ರಕ್ಕಾಗಿ ಕೋವರದಲ್ಲಿ
ಕಾದು ನೋಡುತ.
18 : ಶತ್ರು ನಮ್ಮನ್ನು ಹೆಜ್ಜೆಹೆಜ್ಜೆಗೂ
ಹುಡುಕುತ್ತಿದ್ದುದರಿಂದ
ಹಾದಿಬೀದಿಗಳಲ್ಲಿ ಸಂಚಾರಮಾಡಲೂ
ಆಗುತ್ತಿರಲಿಲ್ಲ.
ನಮಗೆ ಕಾಲವು ತೀರಿತು, ಅಂತ್ಯವು
ಸಮೀಪಿಸಿತು;
ಹೌದು, ನಮ್ಮ ಅಂತ್ಯವು ಬಂದೇ ಬಿಟ್ಟಿತು !
19 : ಹದ್ದುಗಳ ವೇಗದಿಂದ ಹಿಂದಟ್ಟಿಬಂದರು
ನಮ್ಮನ್ನು ಬೆನ್ನಟ್ಟಿ ಬೆಟ್ಟಗಳನ್ನೇರಿದರು
ಅರಣ್ಯಗಳಲ್ಲಿ ನಮಗಾಗಿ ಹೊಂಚುಹಾಕಿದರು.
20 : ಯಾವನನ್ನು ಕುರಿತು ನಾವು:
“ನಮ್ಮ ಬಾಳಿನ ಉಸಿರು, ದೇವರಿಂದ
ಅಭಿಷಿಕ್ತನು,
ಇವನ ಆಶ್ರಯದಿಂದಲೆ ರಾಷ್ಟ್ರಗಳ ನಡುವೆ
ನಮಗೆ ಉಳಿವು”
ಎಂದುಕೊಂಡೆವೋ ಅಂಥವನೇ ಸಿಕ್ಕಿಬಿದ್ದಿದ್ದಾನೆ
ಹಗೆಗಳು ತೋಡಿದ ಗುಳಿಯೊಳಗೆ !
21 : ‘ಊಚ’ ಮತ್ತು ‘ಎದೋಮ್’
ನಾರೀಮಣಿಗಳೇ,
ಸಂತೋಷಿಸಿ ಉಲ್ಲಾಸಿಸುತ್ತಿರುವಿರಿ ಅಲ್ಲವೇ?
ಆದರೆ ಖಂಡಿತ ಬರುವುದು ಕಹಿಪಾನದ ಪಾತ್ರೆ
ನಿಮ್ಮ ಪಾಲಿಗೆ
ಅಮಲೇರಿ ಬೆತ್ತಲೆಯಾಗುವ ಗತಿ
ಬಂದೇಬರುವುದು ನಿಮಗೆ !
22 : ‘ಸಿಯೋನ್’ ನಾರಿಮಣಿಯೇ,
ನಿನ್ನ ದೋಷದ ಫಲವನ್ನು ಅನುಭವಿಸಿ ಆಗಿದೆ.
ಸರ್ವೇಶ್ವರನು ಮತ್ತೆ ಒಯ್ಯನು ನಿನ್ನನ್ನು ಸೆರೆಗೆ.
‘ಎದೋಮ್’ ನಾರಿಮಣಿಯೇ,
ನಿನ್ನ ದೋಷದ ನಿಮಿತ್ತ ಸರ್ವೇಶ್ವರನು ನಿನ್ನನ್ನು
ದಂಡಿಸುವನು
ನಿನ್ನ ಪಾಪಾಕ್ರಮಗಳನ್ನು ಬಯಲಿಗೆ
ಎಳೆಯುವನು.