1 : ಸರ್ವೇಶ್ವರನ ಕೋಪವೆಂಬ ಕೋಲಿನಿಂದಲೇ ಪೆಟ್ಟುತಿಂದ ವ್ಯಕ್ತಿಯೆಂದರೆ ನಾನೇ.
2 : ಆತ ನನ್ನನ್ನು ಕರೆದೊಯ್ದು ಬೆಳಕಿನಲ್ಲಿ ಅಲ್ಲ, ಕತ್ತಲಲ್ಲೇ ನಡೆಸಿದ.
3 : ಹೌದು ದಿನವಿಡೀ, ಪದೇ ಪದೇ
ಕೈಮಾಡುತ್ತಾ ಬಂದಿಹನು ನನ್ನ ಮೇಲೆ.
4 : ಸವೆಸಿರುವನು ನನ್ನ ಮಾಂಸಚರ್ಮಗಳನ್ನು
ಮುರಿದಿರುವನು ನನ್ನ ಎಲುಬುಗಳನ್ನು.
5 : ನನ್ನನ್ನು ಹಿಡಿದು ಬಂಧಿಸಿರುವನು ದಿಬ್ಬಗಳ
ಮಧ್ಯೆ
ಸುತ್ತುಗಟ್ಟಿರುವನು ಕಷ್ಟಸಂಕಟಗಳ ನಡುವೆ.
6 : ಎಷ್ಟೋ ದಿನಗಳ ಹಿಂದೆ ಸತ್ತವರ ಜೊತೆಯಲ್ಲಿ
ನನ್ನನ್ನು ಇರಿಸಿದ್ದಾನೆ ಆ ಕಾರ್ಗತ್ತಲಲ್ಲಿ.
7 : ನಾನು ಹೊರಗಡೆ ಹೋಗದಂತೆ
ಗೋಡೆಯೆಬ್ಬಿಸಿರುವನು,
ಭಾರವಾದ ಬೇಡಿಗಳನ್ನು ನನಗೆ
ತೊಡಿಸಿರುವನು.
8 : ಎಷ್ಟೋ ಮೊರೆಯಿಟ್ಟು ಕೂಗಿಕೊಂಡೆ,
ಕಿವಿಗೊಡಲಿಲ್ಲ ಆತ ನನ್ನ ಮೊರೆಗೆ.
9 : ನನ್ನ ದಾರಿಗೆ ಅಡ್ಡವಾಗಿ ನೆಟ್ಟಿರುವನು ಮೊನಚು
ಕಲ್ಲುಗಳನ್ನು,
ಡೊಂಕು ಡೊಂಕು ಮಾಡಿರುವನು ನನ್ನ
ಹಾದಿಯನ್ನು.
10 : ನನಗಾಗಿ ಆತ ಹೊಂಚುಹಾಕುತ್ತಿರುವನು
ಕರಡಿಯಂತೆ
ಗುಹೆಯಲ್ಲಿ ಅಡಗಿಕೊಂಡಿರುವನು ಸಿಂಹದಂತೆ.
11 : ಆತ ನನಗೆ ದಾರಿತಪ್ಪಿಸಿರುವನು
ತುಂಡರಿಸಿ ದಿಕ್ಕಿಲ್ಲದವನಂತೆ ಮಾಡಿರುವನು.
12 : ತನ್ನ ಬಿಲ್ಲನ್ನು ಬಗ್ಗಿಸಿರುವನು
ಬಾಣಕ್ಕೆ ನನ್ನನ್ನು ಗುರಿಮಾಡಿಕೊಂಡಿರುವನು.
13 : ತನ್ನ ಬತ್ತಳಿಕೆಯ ಅಂಬುಗಳಿಂದ
ಇರಿದಿದ್ದಾನೆ ನನ್ನ ಅಂತರಂಗವನ್ನು.
14 : ಹಾಸ್ಯಾಸ್ಪದನಾದೆ ಸ್ವಜನರೆಲ್ಲರಿಗೆ
ಗುರಿಯಾದೆ ಅವರ ದಿನನಿತ್ಯದ ಗೇಲಿ
ಲಾವಣಿಗಳಿಗೆ.
15 : ಆತ ನನಗೆ ಕಹಿ ಉಣ್ಣಿಸಿದ್ದಾನೆ ಹೊಟ್ಟೆ
ತುಂಬ
ನನ್ನನ್ನು ತಣಿಸಿದ್ದಾನೆ ವಿಷಪದಾರ್ಥಗಳಿಂದ.
16 : ನನ್ನ ಹಲ್ಲು ಮುರಿದಿದ್ದಾನೆ ನುರುಜುಗಲ್ಲಿನಿಂದ
ನನ್ನನ್ನು ಮುಚ್ಚಿಬಿಟ್ಟಿದ್ದಾನೆ ಬೂದಿಯಿಂದ.
17 : ಶಾಂತಿಸಮಾಧಾನಕ್ಕೆ ನಾನು ದೂರವಾದೆ
ಸುಖಸಂತೋಷವನ್ನು ಮರೆತುಹೋದೆ.
18 : ನಾನು ಇಂತೆಂದುಕೊಂಡೆ:
“ಅಯ್ಯೋ, ನನ್ನ ಶಕ್ತಿಯೆಲ್ಲಾ ಹಾಳಾಯಿತು
ಸರ್ವೇಶ್ವರನಲ್ಲಿ ನಾನಿತ್ತ ನಿರೀಕ್ಷೆ
ವ್ಯರ್ಥವಾಯಿತು.”
19 : ನಾನು ಪಟ್ಟ ಕಷ್ಟದುಃಖವನ್ನು ಮನಸ್ಸಿಗೆ
ತಂದುಕೊಂಡಾಗ
ಆಗುತ್ತಿದೆ ನನಗೆ ಕಹಿಯಾದ ಅನುಭವ.
20 : ಮನದಲ್ಲೆ ಇವುಗಳನ್ನು ನಿತ್ಯವೂ ನೆನೆದಾಗ
ನನ್ನೊಳಗೇ ಸೊರಗಿಹೋಗುತ್ತದೆ ನನ್ನ ಮನ.
21 : ಇಂತಿರಲು ನಿನ್ನ ಕರುಣೆಯನ್ನು ನೆನಪಿಗೆ
ತಂದುಕೊಳ್ಳುತ್ತೇನೆ
ಅದರಿಂದಲೆ ನನಗೆ ನಂಬಿಕೆ-ನಿರೀಕ್ಷೆ
ಮರುಕಳಿಸುತ್ತದೆ.
22 : ನಾವು ಉಳಿದಿರುವುದು ಸರ್ವೇಶ್ವರನ
ಕರುಣೆಯಿಂದ
ಆತನ ಕೃಪಾವರಗಳಿಗೆ ಕೊನೆಯೇ ಇಲ್ಲ.
23 : ಹೊಸಹೊಸದಾಗಿ ಅವು ಒದಗುತ್ತವೆ
ದಿನದಿನವು
ಮಹತ್ತರವಾದುದು ಆತನ ಸತ್ಯಸಂಧತೆಯು.
24 : “ನನ್ನ ಪಾಲಿನ ಸೊತ್ತು ಸರ್ವೇಶ್ವರನೇ,
ನಿರೀಕ್ಷಿಸುತ್ತಿರುವೆನು ನಾನು ಆತನನ್ನೇ”
ಇಂತೆಂದುಕೊಳ್ಳುತ್ತದೆ ನನ್ನ ಅಂತರಾತ್ಮ.
25 : ಸರ್ವೇಶ್ವರ ಒಳ್ಳೆಯವನು ಆತನನ್ನು
ನಿರೀಕ್ಷಿಸುವವರಿಗೆ
ಆತನನ್ನು ಹರಸಿ ಹಂಬಲಿಸುವ ಜನರಿಗೆ.
26 : ಸರ್ವೇಶ್ವರನು ನಮ್ಮನ್ನು ಉದ್ಧರಿಸುವನೆಂದು
ಎದುರುನೋಡುತ್ತಾ ತಾಳ್ಮೆಯಿಂದಿರುವುದು
ಒಳಿತು.
27 : ಯೌವನದಿಂದಲೆ ನೊಗ ಹೊತ್ತರೆ
ಮಾನವನಿಗೆ ಅದು ಹಿತಕರ.
28 : ‘ನನ್ನ ಮೇಲೆ ಇದನ್ನು ಹೇರಿಸಿದವನು
ಸರ್ವೇಶ್ವರನು
ಎಂದು ಏಕಾಕಿಯಾಗಿ ಕುಳಿತು ಮೌನದಿಂದಿರು.
29 : ಮಣ್ಣುಮುಕ್ಕಬೇಕಾಗಿ ಬಂದರೂ
30 : ಹೊಡೆಯುವವನಿಗೆ ಕೆನ್ನೆಕೊಡುವಾಗಲೂ
ನಿಂದೆ ಅವಮಾನದಿಂದ ತೃಪ್ತಿಪಡುವಾಗಲೂ.
ನಂಬಿಕೆಗೆ ಎಡೆಯಿರಲು ಸಾಧ್ಯ.
31 : ನರಮಾನವನನ್ನು ಸ್ವಾಮಿ ಸದಾಕಾಲಕ್ಕೂ
ತೊರೆದುಬಿಡುವವನಲ್ಲ.
32 : ಒಂದು ವೇಳೆ ದುಃಖಪಡಿಸಿದರೂ
ಕೃಪಾತಿಶಯದಿಂದ ಕನಿಕರಿಸಬಲ್ಲ.
33 : ನರಮಾನವರನ್ನು ಹಿಂಸಿಸಿ ದುಃಖಪಡಿಸುವುದು
ಆತನಿಗೆ ಎಷ್ಟು ಮಾತ್ರಕ್ಕೂ ಇಷ್ಟವಿಲ್ಲ.
34 : ಇಳೆಯ ಸೆರೆಯಾಳುಗಳನ್ನು
ತುಳಿದುಬಿಡುವುದನ್ನೂ
35 : ಪರಾತ್ಪರನ ಸನ್ನಿಧಿಯಲ್ಲೇ ನ್ಯಾಯ
ತಪ್ಪಿಸುವುದನ್ನೂ
36 : ಅನ್ಯಾಯವಾಗಿ ವ್ಯಾಜ್ಯತೀರಿಸುವುದನ್ನೂ
ಸ್ವಾಮಿ ಲಕ್ಷ್ಯಕ್ಕೆ ತಂದುಕೊಳ್ಳದೆ
ಇರುತ್ತಾನೆಯೇ?
37 : ಸ್ವಾಮಿಯ ಅಪ್ಪಣೆಯಿಲ್ಲದೆ
ಯಾರ ಮಾತೂ ಸಾರ್ಥಕವಾಗದು.
38 : ಒಳಿತು-ಕೇಡು ಸಂಭವಿಸುವುದು
ಪರಾತ್ಪರನ ಮಾತಿನಿಂದ ಅಲ್ಲವೆ?
39 : ಜೀವಾತ್ಮನಾದ ಮಾನವನು
ತನ್ನ ಪಾಪದ ಶಿಕ್ಷೆಗಾಗಿ ಗೊಣಗುಟ್ಟುವುದೆಂತು?
40 : ನಮ್ಮ ನಡತೆಯನ್ನು ಪರೀಕ್ಷಿಸಿ
ಪರಿಶೋಧಿಸೋಣ
ಸರ್ವೇಶ್ವರನ ಕಡೆಗೆ ತಿರುಗಿಕೊಳ್ಳೋಣ;
41 : ಪರಲೋಕದಲ್ಲಿರುವ ದೇವರಕಡೆಗೆ ನಮ್ಮ
ಕರಗಳನ್ನೂ ಹೃನ್ಮನಗಳನ್ನೂ ಎತ್ತೋಣ;
42 : “ನಾವು ಅವಿಧೇಯರಾಗಿ ಪಾಪಮಾಡಿದೆವು
ನೀನು ಕ್ಷಮಿಸಲಿಲ್ಲ ನಮ್ಮನ್ನು.
43 : “ರೋಷಭರಿತನಾಗಿ ನೀನು ಬೆನ್ನಟ್ಟಿಬಂದೆ
ದಯೆದಾಕ್ಷಿಣ್ಯವಿಲ್ಲದೆ ನಮ್ಮನ್ನು ಹತಿಸಿದೆ.
44 : ನಮ್ಮ ಪ್ರಾರ್ಥನೆ ನಿನಗೆ ಮುಟ್ಟಬಾರದೆಂದೆ
ಮೋಡಗಳ ಹಿಂದೆ ಮರೆಮಾಡಿಕೊಂಡೆ.
45 : ಕಸವನ್ನಾಗಿಯೂ ಹೊಲಸನ್ನಾಗಿಯೂ
ನಮ್ಮನ್ನು ಎಸೆದುಬಿಟ್ಟೆ ರಾಷ್ಟ್ರಗಳ ನಡುವೆ.
46 : “ಶತ್ರುಗಳೆಲ್ಲರು ನಮ್ಮನ್ನು ನೋಡಿ
ಬಾಯಿ ಕಿಸಿದಿದ್ದಾರೆ ನಮಗೆ ವಿರುದ್ಧವಾಗಿ.
47 : ಹಳ್ಳಗುಂಡಿಗಳು, ಭಯಭೀತಿಗಳು,
ನಾಶವಿನಾಶಗಳು
ನಮ್ಮ ಪಾಲಿಗೆ ಕಟ್ಟಿಟ್ಟ ಬುತ್ತಿಗಳು.
48 : ಸ್ವಜನರು ನಾಶವಾದ ಕಾರಣದಿಂದಾಗಿ
ಹರಿಯುತ್ತಿದೆ ನನ್ನ ಕಣ್ಣೀರು ತೊರೆಯಾಗಿ.
49 : “ಸರ್ವೇಶ್ವರನು ಪರಲೋಕದಿಂದ ಕಟಾಕ್ಷಿಸಿ
ನೋಡುವವರೆಗೂ
50 : ಹರಿಯುತ್ತಿರುವುದು ನಿರಂತರವಾಗಿ ನನ್ನ
ಕಣ್ಣೀರು.
51 : ನಗರದ ಯುವತಿಯರ ದುರ್ಗತಿಯನ್ನು ನೋಡಿ
ಅಳುತ್ತಿರುವ ನನ್ನನ್ನು ಕಾಡುತ್ತಿದೆ ಕಣ್ಣುರಿ.
52 : “ಹಕ್ಕಿಯನ್ನು ಬೇಟೆಯಾಡುವವರೋ ಎಂಬಂತೆ
ನಿಷ್ಕಾರಣ ವೈರಿಗಳು ಬೆನ್ನಟ್ಟಿ ಓಡಿಬಂದರು
ನನ್ನ ಹಿಂದೆ.
53 : ನನ್ನನ್ನು ಗುಳಿಯಲ್ಲಿಳಿಸಿ ಕಲ್ಲು ಮುಚ್ಚಿದರು
ನನ್ನ ಪ್ರಾಣ ತೆಗೆಯಲು ಪ್ರಯತ್ನಿಸಿದರು.
54 : ಪ್ರವಾಹವು ನನ್ನನ್ನು ಮುಳುಗಿಸಿತು;
ಆಗ ಸತ್ತೆ ಎಂದುಕೊಂಡೆ ನಾನು.
55 : “ಹೇ ಸರ್ವೇಶ್ವರಾ, ಆಳವಾದ ಗುಳಿಯಲ್ಲಿ
ನಾ ಕುಳಿತೆ
ನಿನ್ನ ಹೆಸರೆತ್ತಿ ನಾನು ಪ್ರಾರ್ಥನೆಮಾಡಿದೆ.
56 : ನನ್ನ ನಿಟ್ಟುಸಿರಿಗೂ ಮೊರೆಗೂ
ಕಿವಿಮುಚ್ಚಿಕೊಳ್ಳಬೇಡ ಎಂದೆ
ಆಗ ನೀನು ನನ್ನ ಧ್ವನಿಯನ್ನು ಕೇಳಿದೆ.
57 : ನಿನ್ನನ್ನು ಕೂಗಿಕೊಂಡಾಗ ಸಮೀಪಕ್ಕೆ ಬಂದೆ
“ಭಯಪಡಬೇಡ” ಎಂದು ಅಭಯನೀಡಿದೆ.
58 : “ಸ್ವಾಮೀ, ನೀನೇ ನನ್ನ ಪರವಾಗಿ ವಾದಿಸಿದೆ
ನನ್ನ ಪ್ರಾಣವನ್ನು ಉಳಿಸಿದೆ.
59 : ಸರ್ವೇಶ್ವರಾ, ನಿನಗೆ ತಿಳಿದಿದೆ ನನಗಾದ ಅನ್ಯಾಯ
ದೊರಕುವಂತೆ ಮಾಡು ನನಗೆ ನ್ಯಾಯ.
60 : ನೀನೇ ನೋಡಿರುವೆ ವೈರಿಗಳು ನನ್ನ ವಿರುದ್ಧ
ಸಾಧಿಸಿದ ಹಗೆಯನ್ನು
ಅವರು ಕಲ್ಪಿಸಿಕೊಂಡ ಕುಯುಕ್ತಿಯನ್ನು.
61 : “ಸರ್ವೇಶ್ವರಾ, ನಿನ್ನ ಕಿವಿಗೆ ಬಿದ್ದಿದೆ
ನನ್ನ ವೈರಿ ಕಲ್ಪಿಸಿದ ಕುಯುಕ್ತಿ.
62 : ನನ್ನ ಹಾನಿಗಾಗಿ ನಿತ್ಯವೂ ಮಾಡುತ್ತಿರುವ
ನಿಂದೆ ಅವಮಾನ, ತಂತ್ರೋಪಾಯ.
63 : ಇಗೋ ನೋಡು, ಅವರು ಕುಳಿತಾಗಲೂ, ನಿಂತಾಗಲೂ
ಹಾಸ್ಯ, ಲಾವಣಿಗಳಿಗೆ ಗುರಿಯಾಗಿರುವೆ ನಾನು.
64 : “ಹೇ, ಸರ್ವೇಶ್ವರಾ, ಅವರ ದುಷ್ಕøತ್ಯಗಳಿಗೆ
ತಕ್ಕ ಪ್ರತೀಕಾರ ನೀಡು ಅವರಿಗೆ.
65 : ಅವರ ಮನಸ್ಸನ್ನು ಮಂಕುಮಾಡು
ಅವರಿಗೆ ನಿನ್ನ ಶಾಪ ತಗಲುವಂತೆ ಮಾಡು.
66 : ಸಿಟ್ಟುಗೊಂಡು ಅವರನ್ನು ಹಿಂದಟ್ಟು
ನಿನ್ನ ಆಕಾಶದ ಕೆಳಗಿನಿಂದ ಅವರನ್ನು
ಅಳಿಸಿಹಾಕು”.