1 : ಅಯ್ಯೋ, ಅಂದು ಜನಭರಿತವಾಗಿದ್ದ ನಗರಿ
ಇಂದು ಒಂಟಿಯಾಗಿ ಕುಳಿತುಬಿಟ್ಟಳಲ್ಲಾ !
ರಾಷ್ಟ್ರಗಳಲ್ಲೆಲ್ಲಾ ಅತಿ ಶ್ರೇಷ್ಠಳಾಗಿದ್ದವಳು
ವಿಧವೆ ಆಗಿಬಿಟ್ಟಳಲ್ಲಾ !
ಪ್ರಾಂತ್ಯಗಳಲ್ಲೆಲ್ಲಾ ಬಹಳ
ಪ್ರವೀಣಳಾಗಿದ್ದವಳು
ದಾಸಿಯಂತೆ ಆಗಿಬಿಟ್ಟಿರುವಳಲ್ಲಾ !
2 : ಇರುಳೆಲ್ಲ ಅತ್ತಳು ಬಿಕ್ಕಿಬಿಕ್ಕಿ
ಕೆನ್ನೆ ಮೇಲೆ ನೋಡಿ, ಕಣ್ಣೀರ ಕೋಡಿ !
ಆಕೆಯ ಹಲವಾರು ಪ್ರಿಯರಲ್ಲಿ
ಸಂತೈಸುವವರೇ ಇಲ್ಲ
ಮಿತ್ರರಾಗಿದ್ದವರೇ ದ್ರೋಹವೆಸಗಿ
ಶತ್ರುಗಳಾಗಿರುವರಲ್ಲಾ !
3 : ಘೋರಸೇವೆ ಶ್ರಮೆಗಳಿಂದ ತಪ್ಪಿಸಿಕೊಳ್ಳಲಿಕೆ
ವಲಸೆಹೋಗಿರುವಳಲ್ಲಾ ‘ಯೆಹೂದಿ’
ಎಂಬಾಕೆ !
ಮ್ಲೇಚ್ಚರ ಮಧ್ಯೆ ವಾಸಮಾಡುತ್ತಿರುವಳಲ್ಲಾ
ನೆಮ್ಮದಿಯಿಲ್ಲದೆ
ಹಿಮ್ಮೆಟ್ಟಿ ಹಿಡಿದರು ಹಿಂಸಕರೆಲ್ಲಾ ಆಕೆ
ಇಕ್ಕಟ್ಟಿಗೆ ಸಿಕ್ಕಿರುವಾಗಲೆ !
4 : ಬಿಕೋ ಎನ್ನುತ್ತಿವೆ ಸಿಯೋನಿಗೆ ತೆರಳುವ
ಮಾರ್ಗಗಳು
ಮಹೋತ್ಸವಕ್ಕೆ ಇನ್ನು ಬರುತ್ತಿಲ್ಲ
ಯಾತ್ರಿಕರಾರು
ಪಾಳುಬಿದ್ದಿವೆ ಅದರ ಬಾಗಿಲುಗಳು
ನಿಟ್ಟುಸಿರಿಡುತ್ತಿರುವರು ಅದರ ಯಾಜಕರು
ವ್ಯಥೆಪಡುತ್ತಿರುವರು ಅದರ ಯುವತಿಯರು
ನಗರಕ್ಕೆ ನಗರವೇ ದುಃಖದಲ್ಲಿ
ಮುಳುಗಿರುವುದು.
5 : ಅದರ ಅಗಣಿತ ದ್ರೋಹಗಳಿಗಾಗಿ
ಸರ್ವೇಶ್ವರ ಮಾಡಿದನದನ್ನು ದುಃಖಕ್ಕೆ
ಈಡಾಗಿ,
ಅದರ ವಿರೋಧಿಯೇ ಅದಕ್ಕೀಗ ಅಧಿಪತಿ !
ಅದರ ಶತ್ರುಗಳಿಗೋ ಸುಖಸಮೃದ್ಧಿ !
ಅದರ ಹಸುಳೆಗಳೂ ಸೆರೆಹೋಗಿವೆ ವೈರಿಯ
ವಶವಾಗಿ !
6 : ಕಳೆದು ಹೋಗಿದೆಯಲ್ಲಾ ಸಿಯೋನ್ ನಗರಿಯ
ವೈಭವವೆಲ್ಲಾ !
ಮೇವಿಲ್ಲದೆ ಬಡಕಲಾದ ಜಿಂಕೆಗಳಂತೆ
ಅದರ ನಾಯಕರೆಲ್ಲಾ
ಓಡಿಹೋದರು ಬೆಂಗೊಟ್ಟು
ಅಟ್ಟಿಬಂದವರಿಗೆಲ್ಲಾ !
7 : ಜೆರುಸಲೇಮ್ ದಿಕ್ಕುಪಾಲಾಗಿ ಕಷ್ಟಪಡುವಾಗ
ನೆನೆಸಿಕೊಳ್ಳುತ್ತಾಳೆ ತನ್ನ ಪ್ರಾಚೀನ
ವೈಭವಗಳನ್ನೆಲ್ಲಾ.
ತನ್ನ ಜನತೆ ವೈರಿಗಳ ವಶವಾದಾಗ
ಆಕೆಗೆ ಸಿಗಲಿಲ್ಲ ಯಾರೊಬ್ಬರ ಬೆಂಬಲ.
ಆಕೆಯಾ ಹೀನಸ್ಥಿತಿ ನೋಡಿ
ವೈರಿಗಳು ಮಾಡಿದರು ಪರಿಹಾಸ್ಯ.
8 : ಜೆರುಸಲೇಮ್ ಅಶುದ್ಧಳಾದಳು
ಪದೇ ಪದೇ ಪಾಪಮಾಡಿ.
ಹೊಗಳುತ್ತಿದ್ದವರೇ ತೆಗಳುವವರಾದರು
ಆಕೆಯ ನಗ್ನತೆಯನ್ನು ನೋಡಿ.
ಆಕೆಯೋ ನಿಟ್ಟುಸಿರಿಡುತ್ತಿರುವಳು
ಮುಖವನ್ನು ಮರೆಮಾಡಿ.
9 : ಆಕೆಯ ನೆರಿಗೆಯೂ ಹೊಲಸಾಗಿ
ಮುಂದಿನ ಗತಿ ತೋಚದಂತಾಗಿ
ಸಂತೈಸುವವರೇ ಇಲ್ಲದವಳಾಗಿ
ಬಿದ್ದಿರುವಳಲ್ಲಾ ಈ ಭೀಕರ ಸ್ಥಿತಿಯಲ್ಲಿ !
“ಹೇ ಸರ್ವೇಶ್ವರಾ, ನೋಡು ನನ್ನ ಸಂಕಟವನು
ಹೆಚ್ಚಳ ಪಡುತ್ತಿರುವನಲ್ಲಾ ಶತ್ರುವಾದವನು”
ಎಂದು ಮೊರೆಯಿಡುತ್ತಾಳೆ ಕೂಗಿ.
10 : ದೋಚಿಕೊಂಡನು ದ್ರೋಹಿ
ಆಕೆಯ ಆಸ್ತಿಯನ್ನು ಕೈಚಾಚಿ,
‘ಸೇರಿಸಬಾರದು ಸಭೆಗೆ ಮ್ಲೇಚ್ಛರನ್ನು’
ಎಂಬುದು ದೇವನ ಆಣತಿ.
ಆದರಿಗೋ ಅಂಥವರೇ ಪವಿತ್ರಾಲಯ
ಪ್ರವೇಶಿಸುವ ದುರ್ಗತಿ !
11 : ಅಡ್ಡಾಡುತ್ತಿರುವರು ಆಕೆಯ ಜನರು ಅನ್ನಕ್ಕಾಗಿ
ಮಾರುತ್ತಿರುವರು ಅಮೂಲ್ಯವಾದುದನ್ನೆ
ಆಹಾರಕ್ಕಾಗಿ.
“ಸರ್ವೇಶ್ವರಾ, ನೋಡು, ಕಟಾಕ್ಷಿಸು, ನನ್ನ
ತುಚ್ಛತೆಯನ್ನು”
ಎಂದು ಹೇಳಿ ಆಕೆ ಪ್ರಲಾಪಿಸುತ್ತಿರುವಳು.
12 : “ಹಾದುಹೋಗುವವರೇ, ನಿಮಗಿಲ್ಲವೆ ನನ್ನ
ಚಿಂತೆ?
ಸರ್ವೇಶ್ವರ ಸಿಟ್ಟುಗೊಂಡು ನನಗಿತ್ತಿರುವನು
ಈ ವ್ಯಥೆ !
ಈ ಪರಿ ಸಂಕಟವನ್ನು ನೀವೆಲ್ಲಾದರು
ನೋಡಿದ್ದುಂಟೆ?”
13 : “ಆಕಾಶದಿಂದ ಆತ ಸುರಿಸಿದ್ದಾನೆ ಅಗ್ನಿಯನ್ನೆ
ಅದು ದಹಿಸುತ್ತಿದೆ ನನ್ನೊಳಗಿನ ಎಲುಬುಗಳನ್ನೆ
ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾನೆ
ಅದು ನನ್ನನ್ನೆಳೆಯುತ್ತಿದೆ ನೆಲಕ್ಕೆ
ಹಾಳುಬಿದ್ದ ನಾನು ಸದಾ ಬಳಲುತ್ತಿದ್ದೇನೆ.”
14 : “ನನ್ನ ದ್ರೋಹಗಳನ್ನು ನನಗೆ ಬಿಗಿದಿದ್ದಾನೆ
ನೊಗದ ಕಣ್ಣುಗಳಂತೆ.
ಅವು ಹುರಿಗೊಂಡು, ಸುತ್ತಿಕೊಂಡು ಕುತ್ತಿಗೆಗೆ,
ನನ್ನ ಶಕ್ತಿಯನ್ನು ಹೀರುತ್ತಿವೆ.
ಸಿಕ್ಕಿಸಿದನಲ್ಲಾ ಸ್ವಾಮಿ, ನನ್ನಿಂದ
ಎದುರಿಸಲಾಗದಂಥವರ ಕೈಗೆ !
15 : “ಸ್ವಾಮಿ ತೃಣೀಕರಿಸಿದನು ನನ್ನ ಶೂರರನ್ನೆಲ್ಲಾ
ನನ್ನ ಕಣ್ಮುಂದೆಯೇ.
ಸೈನ್ಯ ಸಮೂಹವನ್ನೆ ಬರಮಾಡಿದನು
ನನ್ನ ಯುವಕರನ್ನು ಸದೆಬಡಿಯಲೆಂದೇ.
ಯೆಹೂದಿಯೆಂಬ ಯುವತಿಯನ್ನು ತುಳಿಸಿದನು
ತೊಟ್ಟಿಯಲ್ಲಿ ದ್ರಾಕ್ಷಿ ತುಳಿವಂತೆ.
16 : “ಗೋಳಾಡುತ್ತಿರುವೆನು ಈ ವಿಪತ್ತುಗಳಿಂದ;
ಸಂತೈಸಿ ಸುಧಾರಿಸುವವನು
ಬಲುದೂರವಿರುವುದರಿಂದ
ಹರಿಯುತ್ತಿದೆ ಕಂಬನಿ ಧಾರೆಧಾರೆಯಾಗಿ
ಕಣ್ಗಳಿಂದ;
ವೈರಿಗಳು ಗೆದ್ದು, ನನ್ನ ಕುವರರು
ಬಿದ್ದುಹೋಗಿರುವುದರಿಂದ.
17 : ಸಿಯೋನ್ ನಗರಿ ಕೈಚಾಚಿ ಕೂಗಿಕೊಂಡರೂ
ಸಂತೈಸುವವರಾರೂ ಇಲ್ಲ.
ನೆರೆಹೊರೆಯವರೇ ಆಕೆಯ
ವಿರೋಧಿಗಳಾಗಲೆಂದು
ಸರ್ವೇಶ್ವರ ತೀರ್ಮಾನಿಸಿದ್ದಾನಲ್ಲಾ !
ಅವರ ನಡುವೆ ಹೊಲೆಯಾದ ಹೆಣ್ಣಿನಂತೆ
ಜೆರುಸಲೇಮ್ ಬಿದ್ದಿದ್ದಾಳಲ್ಲಾ !
18 : “ಸರ್ವೇಶ್ವರನು ನ್ಯಾಯಸ್ವರೂಪಿ,
ನಾನಾದರೊ ಆತನ ಆಜ್ಞೆ ಮೀರಿದ ದ್ರೋಹಿ.
ಜನಾಂಗಗಳೇ, ನೀವೆಲ್ಲರು ಕಿವಿಗೊಡಿ, ನನ್ನ
ಸಂಕಟನೋಡಿ !
ನನ್ನ ಯುವಕ ಯುವತಿಯರು,
ಇಗೋ, ಸೆರೆಹೋಗಿರುವರು ನೋಡಿ.
19 : “ನನ್ನ ಪ್ರಿಯರನ್ನು ಕರೆದೆ:
ಅವರೇ ಮೋಸಮಾಡಿದರೆನಗೆ.
ನನ್ನ ಯಾಜಕರೂ ಪ್ರಮುಖರೂ ಪಟ್ಟಣದಲ್ಲೇ
ಪ್ರಾಣತೆತ್ತರು,
ಉಸಿರನ್ನು ಉಳಿಸಿಕೊಳ್ಳಲು ಊಟವನ್ನು
ಹುಡುಕುತ್ತಿರಲು.
20 : “ಹೇ, ಸರ್ವೇಶ್ವರಾ, ಕಟಾಕ್ಷಿಸು;
ನಾ ಇಕ್ಕಟ್ಟಿಗೆ ಸಿಕ್ಕಿಕೊಂಡಿರುವೆ.
ಕರುಳು ಕುದಿಯುತ್ತಿದೆ,
ಹೃದಯ ವಿಮುಖವಾಗಿದೆ
ನಾ ಗೈದ ದ್ರೋಹಕ್ಕೆ.
ಕತ್ತಿಗೆ ತುತ್ತಾಗುತ್ತಿರುವರು ಹೊರಗೆ
ಪ್ರಾಣಸಂಕಟಕ್ಕೆ ಗುರಿಯಾಗಿರುವೆ ಒಳಗೆ.
21 : “ಸಾಂತ್ವನ ತರುವವರಾರೂ ಇಲ್ಲವಲ್ಲಾ
ನನಗೆ !
ನನ್ನ ನರಳಾಟದ ಸುದ್ದಿ ಮುಟ್ಟಿದೆ ವೈರಿಗಳ
ಕಿವಿಗೆ.
ನನಗಾದ ಕೇಡಿಗೆ ನೀನೇ ಕಾರಣನೆಂಬ ಸಂತಸ
ಶತ್ರುವಿಗೆ.
ನೀ ಮುಂತಿಳಿಸಿದ ಮೇರೆಗೆ ನನಗಾದ ಗತಿ
ಬರಲಿ ಅವರಿಗೆ.
22 : “ಅವರು ಗೈದ ಕೆಡುಕೆಲ್ಲಾ ಬಟ್ಟಬಯಲಾಗಲಿ
ನಿನ್ನ ದೃಷ್ಟಿಗೆ.
ನನ್ನ ದ್ರೋಹಕ್ಕೆ ಪ್ರತಿಯಾಗಿ
ನನಗೆ ಮಾಡಿರುವಂತೆ ನೀ ಮಾಡು ಅವರಿಗೆ.
ನನ್ನ ನರಳಾಟ ಹೆಚ್ಚಿದೆ;
ನನ್ನ ಎದೆ ಕುಂದಿಹೋಗಿದೆ.”
ಎರಡನೆಯ ಶೋಕಗೀತೆ
ಜೆರುಸಲೇಮಿಗೆ ಸರ್ವೇಶ್ವರನೇ ಕೊಟ್ಟ ಶಿಕ್ಷೆ