Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆರೆವಿೂಯ


1 : ನನ್ನ ತಲೆ ಒಂದು ಚಿಲುಮೆಯಾಗಿರಬಾರದಿತ್ತೆ? ನನ್ನ ಕಣ್ಣು ಒಂದು ಒರತೆಯಾಗಿರಬಾರದಿತ್ತೆ? ಆಗ ನನ್ನ ಜನರಲ್ಲಿ ಹತರಾದವರಿಗಾಗಿ ಹಗಲಿರುಳು ಅಳುತ್ತಿದ್ದೆ.
2 : ಅಕಟಾ, ದಾರಿಗರು ತಂಗುವ ಗುಡಿಸಲೊಂದು ಕಾಡಿನಲ್ಲಿ ಸಿಗಬಾರದೆ! ಆಗ ಜನರನ್ನು ತ್ಯಜಿಸಿಬಿಟ್ಟು ನಾನಲ್ಲಿಗೆ ತೆರಳುತ್ತಿದ್ದೆ! ಅವರೆಲ್ಲರು ವ್ಯಭಿಚಾರಿಗಳು, ದ್ರೋಹಿಗಳ ಗುಂಪೇ ಅಲ್ಲವೆ?
3 : ಸರ್ವೇಶ್ವರ: “ಸುಳ್ಳಾಡಲು ಬಿಲ್ಲಿನಂತೆ ನಾಲಿಗೆ ಬಗ್ಗಿಸುತ್ತಾರೆ ಸತ್ಯಕ್ಕೆ ಪ್ರತಿಕೂಲವಾಗಿಯೆ ನಾಡಿನಲ್ಲಿ ಪ್ರಬಲಿಸಿದ್ದಾರೆ ಕೇಡಿನಿಂದ ಕೇಡಿಗೆ ಹಾರುತ್ತಾರೆ; ನನ್ನನ್ನಾದರೊ ಅರಿಯದೆ ಇದ್ದಾರೆ.”
4 : ನಿಮ್ಮ ನಿಮ್ಮ ಗೆಳೆಯರ ವಿಷಯದಲ್ಲಿ ಎಚ್ಚರಿಕೆಯಾಗಿರಿ ಯಾರೇ ಆಗಲಿ, ತನ್ನ ಸೋದರನನ್ನೂ ನಂಬದಿರಲಿ. ಪ್ರತಿಯೊಬ್ಬ ಸೋದರನು ವಂಚಿಸುವುದರಲ್ಲಿ ಯಕೋಬನಿಗೆ ಸಮಾನ. ಒಬ್ಬೊಬ್ಬ ಗೆಳೆಯನೂ ತಿರುಗಾಡುತ್ತಾನೆ ಚಾಡಿಹೇಳುತ್ತಾ.
5 : ಎಲ್ಲರು ತಂತಮ್ಮ ಗೆಳೆಯರಿಗೆ ಮೋಸಮಾಡುತ್ತಾರೆ ಸತ್ಯವನ್ನು ನುಡಿವುದೇ ಇಲ್ಲ; ನಾಳಿಗೆಗೆ ಸುಳ್ಳನ್ನು ಕಲಿಸಿದ್ದಾರೆ ಆಯಾಸವಾಗುವ ಮಟ್ಟಿಗೂ ಕೆಡಕನ್ನು ಮಾಡುತ್ತಿದ್ದಾರೆ.
6 : ‘ನೀನು (ಯೆರೆಮೀಯ) ವಾಸವಾಗಿರುವುದು ಮೋಸಗಾರರ ಮಧ್ಯೆ ಮೋಸಗಾರರಾಗಿರುವುದರಿಂದಲೆ ಅವರು ನನ್ನನ್ನು ಅರಿಯಲೊಲ್ಲರು’ ಎನ್ನುತ್ತಾರೆ ಸರ್ವೇಶ್ವರ.
7 : ಹೀಗಿರಲು ಸರ್ವಶಕ್ತರಾದ ಸರ್ವೇಶ್ವರನ ಮಾತನ್ನು ಕೇಳಿ: “ಅಕಟಾ, ನನ್ನ ಜನರ ದ್ರೋಹಕ್ಕೆ ಏನು ಮಾಡಲಿ? ಅವರನ್ನು ಶೋಧಿಸುವೆನು ಪುಟಕ್ಕೆ ಹಾಕಿ!
8 : ಅವರ ನಾಲಿಗೆ ಕೊಲ್ಲುವ ಬಾಣ, ಅದು ಆಡುವುದು ಸುಳ್ಳನ್ನೇ ಬಾಯಲ್ಲಿ ಶುಭವೆಂದು ಹೇಳಿದರೂ ಹೃದಯದಲ್ಲಿ ಒಡ್ಡಿದ್ದಾರೆ ಹೊಂಚನ್ನೇ.
9 : ಇಂಥವುಗಳಿಗಾಗಿ ನಾನು ಅವರನ್ನು ಹಿಂಸಿಸಬಾರದೆ? ಇಂಥ ಜನಾಂಗದ ಮೇಲೆ ಸೇಡನ್ನು ತೀರಿಸಿಕೊಳ್ಳದಿರುವೆನೆ?”
10 : ನಾನು: ಪರ್ವತಗಳಿಗಾಗಿ ಅತ್ತು ಗೋಳಾಡುವೆನು ಅಡವಿಯ ಕಾವಲುಗಾಳಿಗಾಗಿ ಶೋಕಗೀತೆ ಯನ್ನು ಹಾಡುವೆನು ಅವು ಸುಟ್ಟುಹೋಗಿವೆ, ಯಾರೂ ಅಲ್ಲಿ ಹಾದುಹೋಗರು. ದನಕರುಗಳ ಸದ್ದೂ ಕಿವಿಗೆ ಬೀಳದು ತೊಲಗಿಹೋಗಿವೆ ಮೃಗಪಕ್ಷಿಗಳೂ!
11 : ಸರ್ವೇಶ್ವರ: “ಹಾಳು ದಿಬ್ಬಗಳನ್ನಾಗಿಸುವೆನು ಜೆರುಸಲೇಮನ್ನು ನರಿಗಳ ಹಕ್ಕೆಯನ್ನಾಗಿಸುವೆನು ಜುದೇಯ ಪಟ್ಟಣಗಳನ್ನು ಜನರಿಲ್ಲದ ಬೀಳುಭೂಮಿಯನ್ನಾಗಿಸುವೆನು ಅವುಗಳನ್ನು.”
12 : ನಾನು: “ಈ ನಾಡು ಯಾರೂ ಹಾದು ಹೋಗದಷ್ಟು ಹಾಳಾಗಿ ಕಾಡಿನಂತೆ ಸುಟ್ಟು ಹೋದದ್ದು ಏಕೆ? ಈ ವಿಷಯವನ್ನು ಗ್ರಹಿಸತಕ್ಕ ಜ್ಞಾನಿ ಯಾರು? ಅದನ್ನು ಸರ್ವೇಶ್ವರನ ಬಾಯಿಂದಲೆ ಕೇಳಿ ತಿಳಿಸಬಲ್ಲವನಾರು?”
13 : ಇಸ್ರಯೇಲಿನ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ: “ನಾನು ಇವರ ಕಣ್ಣೆದುರಿಗೇ ಇಟ್ಟಿರುವ ಧರ್ಮೋಪದೇಶವನ್ನು ಇವರು ಲಕ್ಷ್ಯಕ್ಕೆ ತಂದುಕೊಳ್ಳಲಿಲ್ಲ.
14 : ನನ್ನ ಮಾತನ್ನು ಕೇಳದೆ, ಧರ್ಮಮಾರ್ಗದಲ್ಲಿ ನಡೆಯದೆ, ಹಟಮಾರಿಗಳಂತೆ ಸ್ವೇಚ್ಚಾನುಸಾರ ನಡೆದುಕೊಂಡರು. ತಮ್ಮ ಪೂರ್ವಜರು ಕಲಿಸಿಕೊಟ್ಟ ಹಾಗೆ ಬಾಳ್‍ದೇವತೆಗಳನ್ನು ಹಿಂಬಾಲಿಸಿದರು.
15 : ಆದುದರಿಂದ ಈ ಜನರು ಕಹಿಯಾದ ಇಟ್ಟಿಕಾಯನ್ನು ತಿನ್ನುವಂತೆ ಮಾಡುವೆನು; ವಿಷಬೆರೆತ ನೀರನ್ನು ಕುಡಿಯುವಂತೆ ಮಾಡುವೆನು.
16 : ಇವರಿಗಾಗಿ ಇವರ ಪೂರ್ವಜರಿಗಾಗಲಿ ಪರಿಚಯವಿಲ್ಲದ ಜನಾಂಗಗಳ ನಡುವೆ ಇವರನ್ನು ಚದರಿಸಿಬಿಡುವೆನು. ಇವರು ಅಳಿದುಹಾಳಾಗುವ ತನಕ ಇವರ ಹಿಂದೆ ಖಡ್ಗವನ್ನು ಕಳಿಸುವೆನು.”
17 : ಸರ್ವಶಕ್ತ ಸರ್ವೇಶ್ವರಸ್ವಾಮಿಯ ಮಾತು: “ನಡೆಯುತ್ತಿರುವ ಕಾರ್ಯಗಳನ್ನು ಆಲೋಚಿಸಿ ನೋಡಿ ರೋದನಾ ಗಾಯಕಿಯರನ್ನು ಕರೆಯಿಸಿರಿ ಅವರಲ್ಲಿ ಜಾಣೆಯರನ್ನು ಕರೆಯ ಕಳಿಸಿರಿ ಅವರೂ ಬಂದು ಸೇರಲಿ.”
18 : ಜನರು: “ಅವರು ತ್ವರೆಯಾಗಿಬಂದು ನಮಗೋಸ್ಕರ ಗೋಳೆತ್ತಲಿ ನಮ್ಮ ಕಣ್ಣುಗಳಿಂದ ನೀರು ಧಾರಾಕಾರವಾಗಿ ಸುರಿವಂತೆ ಮಾಡಲಿ ಕಣ್ಣಿನ ರೆಪ್ಪೆಗಳಿಂದ ನೀರು ಉಕ್ಕಿ ಹರಿವಂತೆ ಮಾಡಲಿ.”
19 : ಸಿಯೋನಿನಿಂದ ಕೇಳಿಬಂದ ಪ್ರಲಾಪನೆ: “ಅಯ್ಯೋ ಹಾಳಾದೆವು, ನಮ್ಮ ಮಾನಮರ್ಯಾದೆ ಕಳೆದುಹೋಯಿತು! ನಾವು ನಮ್ಮ ನಾಡನ್ನೇ ಬಿಟ್ಟು ತೊಲಗ ಬೇಕಾಗಿ ಬಂದಿತು. (ಶತ್ರುಗಳಿಂದ) ನಮ್ಮ ಮನೆಮಠಗಳು ನೆಲಸಮವಾದವು.”
20 : ನಾನು: “ಮಹಿಳೆಯರೇ, ಸರ್ವೇಶ್ವರಸ್ವಾಮಿಯ ನುಡಿಯನ್ನು ಕೇಳಿರಿ ಅವರ ಬಾಯಿಂದ ಹೊರಟ ಮಾತಿಗೆ ಕಿವಿ ತೆಗೆಯಿರಿ ನಿಮ್ಮ ಹೆಣ್ಣುಮಕ್ಕಳಿಗೂ ಗೋಳಾಟವನ್ನು ಕಲಿಸಿರಿ ಪ್ರತಿಯೊಬ್ಬಳೂ ತನ್ನ ನೆರೆಯವಳಿಗೆ ಶೋಕಗೀತೆಯನ್ನು ಹೇಳಿಕೊಡಲಿ.
21 : ಏಕೆಂದರೆ ಮೃತ್ಯು ನಮ್ಮ ಕಿಟಕಿಗಳನ್ನು ಏರಿಬಂದಿದೆ ನಮ್ಮ ಉಪ್ಪರಿಗೆಗಳೊಳಗೆ ನುಗ್ಗಿಬಿಟ್ಟಿದೆ ಬೀದಿಗಳಲ್ಲಿ ಮಕ್ಕಳೂ ಕಡಿದುಬಿದ್ದರು ಚೌಕಗಳಲ್ಲಿ ಯುವಕರೂ ಇಲ್ಲವಾದರು.
22 : ಜನರ ಹೆಣಗಳು ನೆಲದ ಮೇಲೆ ಬಿದ್ದು ಗೊಬ್ಬರವಾಗುವುವು ಅವು ಹೊಲಕೊಯ್ಯುವವನ ಹಿಂದೆ ಯಾರೂ ಕೂಡಿಸದೆ ಬಿದ್ದಿರುವ ಅರಿಗಳಂತಿರುವುವು -ಈ ಮಾತುಗಳನ್ನು ಸಾರುವಂತೆ ಸರ್ವೇಶ್ವರ ನಿಂದ ನನಗೆ ಅಪ್ಪಣೆಯಾಯಿತು.”
23 : ಸರ್ವೇಶ್ವರಸ್ವಾಮಿ: “ಜ್ಞಾನಿ ತನ್ನ ಜ್ಞಾನಕ್ಕಾಗಿ, ಪರಾಕ್ರಮಿ ತನ್ನ ಪರಾಕ್ರಮಕ್ಕಾಗಿ ಐಶ್ವರ್ಯವಂತ ತನ್ನ ಐಶ್ವರಕ್ಕಾಗಿ ಹೆಚ್ಚಳ ಪಡದಿರಲಿ.
24 : ಹೆಚ್ಚಳಪಡುವವನು ನನ್ನನ್ನು ತಾನು ತಿಳಿದುಕೊಂಡದ್ದಕ್ಕಾಗಿ ಹೆಚ್ಚಳಪಡಲಿ; ಜಗದಲ್ಲಿ ಅಚಲ ಪ್ರೀತಿಯನ್ನೂ ನ್ಯಾಯ ನೀತಿಯನ್ನೂ ತೋರ್ಪಡಿಸುವ ಸರ್ವೇಶ್ವರ ನಾನೇ; ನನಗೆ ಪ್ರಿಯವಾದುವು ಪ್ರೀತಿ, ನೀತಿ, ನ್ಯಾಯಗಳೇ. ಇದನ್ನು ಗ್ರಹಿಸಿಕೊಂಡದ್ದಕ್ಕಾಗಿ ಹೆಚ್ಚಳ ಪಡಲಿ. ಇದು ಸರ್ವೇಶ್ವರನಾದ ನನ್ನ ನುಡಿ.”
25 : “ಈಜಿಪ್ಟರು, ಯೆಹೂದ್ಯರು, ಎದೋಮ್ಯರು, ಅಮ್ಮೋನ್ಯರು, ಮೊವಾಬ್ಯರು, ಮುಂದಲೆ ಕೂದಲನ್ನು ಕತ್ತರಿಸಿಕೊಳ್ಳುವ ಅರಣ್ಯನಿವಾಸಿಗಳು, ಅಂತು ದೇಹದಲ್ಲಿ ಮಾತ್ರ ಸುನ್ನತಿಯುಳ್ಳವರು, ಇವರೆಲ್ಲರನ್ನು ದಂಡಿಸುವ ದಿನಗಳು ಬರುತ್ತವೆ.
26 : ಏಕೆಂದರೆ ಈ ಎಲ್ಲ ಜನಾಂಗದವರು, ಇಸ್ರಯೇಲ್ ವಂಶದವರು ಕೂಡ, ಹೃದಯದಲ್ಲಿ ಸುನ್ನತಿಯಿಲ್ಲದವರು. ಇದು ಸರ್ವೇಶ್ವರನಾದ ನಾನು ಆಡುವ ಮಾತು.”

· © 2017 kannadacatholicbible.org Privacy Policy