1 : “ಆ ಕಾಲ ಬಂದಾಗ ಜುದೇಯದ ಅರಸರು, ಅಧಿಪತಿಗಳು, ಯಾಜಕರು, ಪ್ರವಾದಿಗಳು ಹಾಗು ಜೆರುಸಲೇಮಿನ ನಿವಾಸಿಗಳು ಇವರೆಲ್ಲರ ಎಲುಬುಗಳನ್ನು ಗೋರಿಗಳಿಂದ ಅಗೆದು ತೆಗೆದು ಬಿಡುವರು.
2 : ಅವರು ಪ್ರೀತಿಸಿ, ಸೇವಿಸಿ, ಹಿಂಬಾಲಿಸಿ, ಆಶ್ರಯಿಸಿ, ಪೂಜಿಸಿದ ಸೂರ್ಯ, ಚಂದ್ರ, ತಾರಾಗಣಗಳ ಎದುರಿಗೇ ಆ ಎಲುಬುಗಳನ್ನು ಹರಡಿ ಬಿಡುವರು. ಅವುಗಳನ್ನು ಯಾರೂ ಕೂಡಿಸಿ ಮತ್ತೆ ಹೂಣಿಡುವುದಿಲ್ಲ. ಅವು ಭೂಮಿಯ ಮೇಲೆ ಗೊಬ್ಬರದಂತೆ ಬಿದ್ದಿರುವುವು.
3 : ಈ ಕೆಟ್ಟ ವಂಶದವರನ್ನು ನಾನು ಯಾವಾವ ಸ್ಥಳಗಳಿಗೆ ಅಟ್ಟಿಬಿಡುವೆನೋ, ಅಲ್ಲೆಲ್ಲಾ ಇವರಲ್ಲಿ ಅಳಿದುಳಿದವರು ಜೀವಿಸುವುದಕ್ಕಿಂತ ಸಾವೇ ಲೇಸೆಂದು ಬಯಸುವರು. ಇದು ಸರ್ವೇಶ್ವರನಾದ ನನ್ನ ನುಡಿ.”
4 :
ನೀನು ಅವರಿಗೆ ಹೀಗೆ ಹೇಳಬೇಕು: “ಸರ್ವೇಶ್ವರ ಇಂತೆನ್ನುತ್ತಾರೆ: ಬಿದ್ದವರು ಮತ್ತೆ ಏಳುತ್ತಾರಲ್ಲವೆ? ಬಿಟ್ಟುಹೋದವನು ತಿರುಗಿ ಬರುತ್ತಾನಲ್ಲವೆ?
5 : ಈ ಜೆರುಸಲೇಮಿನವರು ಎಂದಿಗೂ ಹಿಂದಿರುಗದಂತೆ ಬಿಟ್ಟುಹೋದದ್ದೇಕೆ? ಮೋಸವನ್ನೇ ಪಟ್ಟಾಗಿ ಹಿಡಿದಿದ್ದಾರೆ. ಹಿಂತಿರುಗಿ ಬರಲೊಲ್ಲರು.
6 : ನಾನು ಕಿವಿಗೊಟ್ಟುಕೇಳಿದೆ. ಅವರು ಸತ್ಯವಾದುದನ್ನು ನುಡಿಯುತ್ತಿರಲಿಲ್ಲ. ಯಾವನೂ ತನ್ನ ಅಕ್ರಮಕ್ಕಾಗಿ ಪಶ್ಚಾತ್ತಾಪಪಟ್ಟು, ‘ಅಯ್ಯೋ ನಾನು ಎಂಥ ಕೆಲಸ ಮಾಡಿಬಿಟ್ಟೆ!’ ಎಂದುಕೊಳ್ಳುತ್ತಿರಲಿಲ್ಲ. ಯುದ್ಧದಲ್ಲಿ ರಭಸವಾಗಿ ಓಡುವ ಕುದುರೆಗಳಂತೆ ಪ್ರತಿಯೊಬ್ಬನೂ ತನ್ನ ತನ್ನ ಮಾರ್ಗದಲ್ಲೆ ದೌಡಾಯಿಸುತ್ತಿದ್ದಾನೆ.
7 : ಆಕಾಶದಲ್ಲಿ ಹಾರುವ ಬಕಪಕ್ಷಿಯು ತನ್ನ ನಿಯಮಿತ ಕಾಲಗಳನ್ನು ತಿಳಿದುಕೊಂಡಿದೆ. ಬೆಳವಕ್ಕಿ, ಬಾನಕ್ಕಿ, ಕೊಕ್ಕರೆ ಇವು ತಮ್ಮ ಗಮನಾಗಮನದ ಸಮಯಗಳನ್ನು ತಿಳಿದಿರುತ್ತವೆ. ಆದರೆ ನನ್ನ ಜನರು ಸರ್ವೇಶ್ವರನಾದ ನನ್ನ ನಿಯಮಗಳನ್ನೆ ತಿಳಿಯರು.
8 : ‘ನಾವು ಜ್ಞಾನಿಗಳು. ಸರ್ವೇಶ್ವರನ ಧರ್ಮಶಾಸ್ತ್ರ ನಮ್ಮಲ್ಲಿದೆ’ ಎಂದು ನೀವು ಹೇಗೆ ತಾನೇ ಹೇಳಬಲ್ಲಿರಿ? ಧರ್ಮಶಾಸ್ತ್ರಿಗಳ ಸುಳ್ಳು ಲೇಖನಿ ಅದನ್ನು ಸುಳ್ಳನ್ನಾಗಿ ಮಾಡಿದೆ.
9 : ಜ್ಞಾನಿಗಳು ನಾಚಿಕೆಪಡುವರು, ನಿಬ್ಬೆರಗಾಗಿ ಬೋನಿಗೆ ಸಿಕ್ಕಿ ಬೀಳುವರು. ಏಕೆಂದರೆ ಸರ್ವೇಶ್ವರನಾದ ನನ್ನ ಮಾತನ್ನು ಅವರು ನಿರಾಕರಿಸಿದ್ದಾರೆ. ಇದು ತಾನೋ ಅವರ ಜ್ಞಾನ? 10
10 : ಆದುದರಿಂದಲೇ ಇವರ ಹೆಂಡತಿಯರನ್ನು ಅನ್ಯರಿಗೂ ಇವರ ಹೊಲಗದ್ದೆಗಳನ್ನು ಆಕ್ರಮಿಸುವವರಿಗೂ ಕೊಟ್ಟು ಬಿಡುವೆನು. ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಅನ್ಯಾಯವಾಗಿ ದೋಚಿಕೊಳ್ಳುತ್ತಲೇ ಇದ್ದಾರೆ. ಪ್ರವಾದಿಗಳು ಮೊದಲಾಗಿ ಯಾಜಕರವರೆಗೆ ಸಕಲರೂ ಮೋಸ ಮಾಡುತ್ತಾರೆ.
11 : ನನ್ನ ಜನರ ಗಾಯಗಳು ಗುಣವಾಗದಿದ್ದರೂ ಅವು ಮಚ್ಚೆಗಳೋ ಎಂಬಂತೆ ‘ಎಲ್ಲ ಚೆನ್ನಾಗಿದೆ’ ಎಂದು ಸಮಾಧಾನ ಹೇಳಿ ವಂಚಿಸುತ್ತಿದ್ದಾರೆ.
12 : ಅಸಹ್ಯ ಕಾರ್ಯಗಳನ್ನು ಮಾಡಿ ಅವಮಾನಕ್ಕೆ ಗುರಿಯಾಗಿದ್ದರೂ ಎಳ್ಳಷ್ಟೂ ನಾಚಿಕೆ ಇಲ್ಲದಿದ್ದಾರೆ. ಲಜ್ಜೆಯ ಗಂಧವೂ ಅವರಿಗಿಲ್ಲ. ಆದ ಕಾರಣ ಬೇರೆಯವರಂತೆ ಅವರೂ ಬೀಳುವರು. ನಾನು ದಂಡಿಸುವಾಗ ಅವರು ಏಳಲಾಗದಂತೆ ಮುಗ್ಗರಿಸಿ ಬೀಳುವರು. ಇದು ಸರ್ವೇಶ್ವರನಾದ ನನ್ನ ನುಡಿ.
13 : “ನಾನು ಕೊಯ್ಲಿಗೆ ಕೈಹಾಕಲು ನೋಡಿದೆ. ಆದರೆ ದ್ರಾಕ್ಷೆಯ ಬಳ್ಳಿಗಳಲ್ಲಿ ಹಣ್ಣಿಲ್ಲ, ಅಂಜೂರದ ಮರದಲ್ಲಿ ಫಲವಿಲ್ಲ. ಎಲೆಯೂ ಬಾಡಿಹೋಗಿದೆ. ಪರರ ತುಳಿತಕ್ಕೆ ಈಡಾಗಿ ಇರುವುದು ಕಾಣುತ್ತದೆ. ಇದು ಸರ್ವೇಶ್ವರನಾದ ನನ್ನ ನುಡಿ.”
14 : ಜನರು: “ನಾವು ಸುಮ್ಮನೆ ಕುಳಿತಿರುವುದೇಕೆ? ಕೂಡಿಬನ್ನಿ, ಕೋಟೆಕೊತ್ತಲುಗಳುಳ್ಳ ಊರುಗಳನ್ನು ಸೇರಿಕೊಳ್ಳೋಣ. ಅಲ್ಲೆ ನಾಶವಾಗೋಣ. ನಮ್ಮ ದೇವರಾದ ಸರ್ವೇಶ್ವರನಿಗೆ ನಾವು ಪಾಪಮಾಡಿದ್ದರಿಂದ ಅವರು ನಮ್ಮನ್ನು ನಾಶಕ್ಕೆ ಗುರಿಮಾಡಿದ್ದಾರೆ. ವಿಷಬೆರೆತ ನೀರನ್ನು ಕುಡಿಯಲು ಕೊಟ್ಟಿದ್ದಾರೆ.
15 : ಸುಖ ಶಾಂತಿಯನ್ನು ನಿರೀಕ್ಷಿಸಿದೆವು, ಯಾವ ಒಳಿತೂ ಸಿಗಲಿಲ್ಲ. ಸುಕ್ಷೇಮ ಕಾಲವನ್ನು ಎದುರು ನೋಡಿದೆವು. ನಮಗೆ ಗಿಟ್ಟಿದ್ದು ಭಯಭ್ರಾಂತಿ ಮಾತ್ರ.
16 : ವೈರಿ ಕುದುರೆಗಳ ಬುಸುಗುಟ್ಟುವಿಕೆ ಏಕೆ ಕೇಳಿಬರುತ್ತಿದೆ ದಾನಿನಿಂದ? ನಾಡನ್ನೆ ಕಂಪಿಸುತ್ತಿದೆ ಅವುಗಳ ಕೆನೆತದ ನಾದ. ಶತ್ರುಗಳು ಬಂದೇ ಬಿಟ್ಟರು! ನಾಡನ್ನೂ ಅದರಲ್ಲಿ ಇರುವುದೆಲ್ಲವನ್ನೂ, ನಗರವನ್ನೂ ಅದರ ನಿವಾಸಿಗಳನ್ನೂ ನುಂಗಿಯೇ ಬಿಟ್ಟರು!”
17 : ಸರ್ವೇಶ್ವರ: “ಇಗೋ, ನಾನು ನಿಮ್ಮ ಮೇಲೆ ಹಾವುಗಳನ್ನು ಬಿಡುವೆನು. ಅವು ಮಾಯಮಂತ್ರಕ್ಕೆ ಬಾಗದ ನಾಗಸರ್ಪಗಳು! ಅವು ನಿಮ್ಮನ್ನು ಕಚ್ಚದೆ ಬಿಡವು.”
18 :
ಅಯ್ಯೋ, ನಾನು ಮುಕ್ತನಾಗಿಲ್ಲ ದುಃಖದಿಂದ
ನನ್ನ ಹೃದಯ ಕುಂದಿಹೋಗಿದೆ ಶೋಕದಿಂದ.
19 : ಇದೋ, ದೂರ ನಾಡಿನಿಂದ ಕೇಳಿಬರುತ್ತಿದೆ
ನನ್ನ ಪ್ರಜೆಯೆಂಬಾಕೆಯ ಈ ಮೊರೆ:
“ಸಿಯೋನಿನಲ್ಲಿ ಇನ್ನು ಸರ್ವೇಶ್ವರನಿಲ್ಲವೊ?
ಅದರ ರಾಜನು ಅಲ್ಲಿ ವಾಸವಾಗಿಲ್ಲವೊ?”
ಅದಕ್ಕೆ ಸರ್ವೇಶ್ವರ:
“ಇವರು ತಮ್ಮ ವಿಗ್ರಹಾರಾಧನೆಯಿಂದ
ಅನ್ಯದೇವತೆಗಳ ಶೂನ್ಯರೂಪಗಳಿಂದ
ನನ್ನನ್ನು ಕೆಣಕಿದ್ದೇಕೆ?”
20 : ಜನರು: “ಸುಗ್ಗಿ ಮುಗಿಯಿತು, ಹಣ್ಣಿನ ಕಾಲ
ಕಳೆಯಿತು.
ನಮಗಾದರೊ ರಕ್ಷಣೆ ದೊರಕದೆ
ಹೋಯಿತು.”
21 : ನನ್ನ ಪ್ರಜೆಯೆಂಬಾಕೆಯ ವೇದನೆಯಿಂದಲೆ
ನಾನು ಅನುಭವಿಸುತ್ತಿರುವೆ ಮನೋಯಾತನೆ.
22 : ಗಿಲ್ಯಾದಿನಲ್ಲಿ ಔಷಧವಿಲ್ಲವೆ?
ಅಲ್ಲಿ ವೈದ್ಯನು ಸಿಕ್ಕನೆ?
ಮತ್ತೇಕೆ ಗುಣವಾಗಲಿಲ್ಲ ನನ್ನ ಜನತೆಗೆ?