1 :
ಬಾಬಿಲೋನಿಯರ ದೇಶವಾದ ಬಾಬಿಲೋನಿಯದ ಕುರಿತು ಪ್ರವಾದಿ ಯೆರೆಮೀಯನಿಂದ ಸರ್ವೇಶ್ವರಸ್ವಾಮಿ ನುಡಿಸಿದ ವಾಕ್ಯ ಇದು:
2 : “ರಾಷ್ಟ್ರಗಳಲ್ಲಿ ಪ್ರಚುರಪಡಿಸಿರಿ, ಧ್ವಜವೆತ್ತಿ ಪ್ರಕಟಿಸಿರಿ, ಮುಚ್ಚುಮರೆಯಿಲ್ಲದೆ ಹೀಗೆಂದು ಸಾರಿರಿ: ‘ಬಾಬಿಲೋನ್ ಶತ್ರುವಶವಾಯಿತು. ಬೇಲ್ ದೇವತೆ ನಾಚಿಕೆಗೊಂಡಿದೆ. ಮೆರೋದಾಕ್ ದೇವತೆ ಬೆಚ್ಚಿಬಿದ್ದಿದೆ. ಅದರ ಮೂರ್ತಿಗಳು ಅವಮಾನಕ್ಕೆ ಗುರಿಯಾಗಿವೆ. ಅದರ ಬೊಂಬೆಗಳು ಚೂರುಚೂರಾಗಿವೆ.
3 : “ಉತ್ತರದಿಂದ ಒಂದು ರಾಷ್ಟ್ರ ಬಾಬಿಲೋನಿನ ವಿರುದ್ಧ ಬರುತ್ತಿದೆ ಅದು ಬಾಬಿಲೋನ್ ದೇಶವನ್ನು ಹಾಳುಮಾಡುವುದು. ಅಲ್ಲಿ ಯಾರೂ ವಾಸಿಸರು. ಜಾನುವಾರುಗಳೂ ಜನರೂ ಓಡಿಹೋಗಿದ್ದಾರೆ, ತೊಲಗಿಬಿಟ್ಟಿದ್ದಾರೆ.”
4 : ಸರ್ವೇಶ್ವರ ಹೀಗೆನ್ನುತ್ತಾರೆ: “ಆ ದಿನಗಳಲ್ಲಿ, ಆ ಕಾಲದಲ್ಲಿ ಇಸ್ರಯೇಲರೂ ಯೆಹೂದ್ಯರೂ ಒಟ್ಟಿಗೆ ಹಿಂದಿರುಗಿ ಬರುವರು. ದಾರಿ ಯುದ್ದಕ್ಕೂ ಅಳುತ್ತಾ ಬಂದು ತಮ್ಮ ದೇವರಾದ ಸರ್ವೇಶ್ವರನನ್ನು ಮರೆಹೋಗುವರು.
5 : ಸಿಯೋನಿಗೆ ಅಭಿಮುಖರಾಗಿ, ಮಾರ್ಗವನ್ನು ವಿಚಾರಿಸುತ್ತಾ, ‘ಬನ್ನಿ, ಸರ್ವೇಶ್ವರನನ್ನು ಆಶ್ರಯಿಸಿ, ಎಂದಿಗೂ ಮರೆಯಲಾಗದ ಶಾಶ್ವತ ಒಡಂಬಡಿಕೆಯನ್ನು ಅವರೊಂದಿಗೆ ಮಾಡಿಕೊಳ್ಳೋಣ’ ಎಂದು ಹೇಳುವರು.
6 : “ನನ್ನ ಜನರು ದಾರಿತಪ್ಪಿದ ಕುರಿಗಳು. ಕುರಿಗಾಹಿಗಳು ಅವರನ್ನು ದಾರಿ ತಪ್ಪಿಸಿ ಪರ್ವತಗಳಲ್ಲಿ ಅಲೆದಾಡಿಸಿದ್ದಾರೆ. ನನ್ನ ಜನರು ತಮ್ಮ ಬೀಡುಗಳನ್ನು ಮರೆತು ಬೆಟ್ಟ ಗುಡ್ಡಗಳಲ್ಲಿ ತಿರುಗಾಡುತ್ತಿದ್ದಾರೆ.
7 : ಕಂಡಕಂಡವರೆಲ್ಲರು ಅವರನ್ನು ಕಬಳಿಸಿದ್ದಾರೆ. ಅವರ ವಿರೋಧಿಗಳು, ‘ನಾವು ಅವರನ್ನು ಕಬಳಿಸಿದ್ದು ದೋಷವಲ್ಲ, ಏಕೆಂದರೆ, ಸತ್ಯಸ್ವರೂಪರಾದ ಸರ್ವೇಶ್ವರನಿಗೆ, ತಮ್ಮ ಪೂರ್ವಜರ ನಂಬಿಕೆ ನಿರೀಕ್ಷೆಯಾದ ಸರ್ವೇಶ್ವರನಿಗೆ ವಿರುದ್ಧ ಅವರು ಪಾಪಮಾಡಿದ್ದಾರೆ,’ ಎಂದುಕೊಂಡರು.
8 : “ಬಾಬಿಲೋನ್ ದೇಶದಿಂದ ಓಡಿಹೋಗಿ. ಬಾಬಿಲೋನಿಯರ ಆ ಸೀಮೆಯಿಂದ ಹೊರಡಿ. ಹಿಂಡುಗಳ ಮುಂದೆ ನಡೆಯುವ ಹೋತಗಳಂತೆ ಮುಂತೆರಳಿರಿ.
9 : ಇಗೋ, ದೊಡ್ಡ ರಾಷ್ಟ್ರಗಳ ಸಮೂಹವನ್ನು ಎಬ್ಬಿಸಿ ಉತ್ತರದಿಂದ ಬಾಬಿಲೋನಿಯದ ಮೇಲೆ ಬೀಳಮಾಡುವೆನು. ಅವು ಬಾಬಿಲೋನಿಗೆ ವಿರುದ್ಧ, ವ್ಯೂಹಕಟ್ಟಿ ಅದನ್ನು ಬುಡಮೇಲು ಮಾಡುವುವು. ಅವುಗಳು ಪ್ರಯೋಗಿಸುವ ಬಾಣಗಳು ಯುದ್ಧ ಪ್ರವೀಣ ಶೂರನಂತಿರುವುವು; ಅವು ಸುಮ್ಮನೆ ಹಿಂದಿರುಗವು.
10 : ಬಾಬಿಲೋನಿಯದ ರಾಜ್ಯ ಸೂರೆಯಾಗುವುದು. ಅದನ್ನು ಕೊಳ್ಳೆಹೊಡೆಯುವವರೆಲ್ಲರು ಸಂತೃಪ್ತಿಗೊಳ್ಳುವರು. ಇದು ಸರ್ವೇಶ್ವರನಾದ ನನ್ನ ನುಡಿ.”
11 :
“ನನ್ನ ಸೊತ್ತಾದವರನ್ನು ಕೊಳ್ಳೆ ಹೊಡೆಯುವವರೇ, ನೀವು ಹರ್ಷಿಸಿ ಉಲ್ಲಾಸಿಸುತ್ತಿದ್ದೀರಿ! ಕಣ ತುಳಿಯುವ ಕಡಸಿನ ಹಾಗೆ ಕುಣಿದಾಡುತ್ತಿದ್ದೀರಿ. ಕೊಬ್ಬಿದ ಕುದುರೆಗಳಂತೆ ಕೆನೆಯುತ್ತಿದ್ದೀರಿ.
12 : ಆದರೆ ನಿಮ್ಮ ಮಾತೃಭೂಮಿ ಮಾನಭಂಗಕ್ಕೆ ಈಡಾಗುವುದು. ನಿಮ್ಮನ್ನು ಹೆತ್ತ ರಾಜ್ಯ ನಾಚಿಕೊಳ್ಳುವುದು. ಹೌದು, ಅದು ಕಾಡಾಗುವುದು. ಕಗ್ಗಾಡು, ಬೆಂಗಾಡು ಆಗುವುದು. ರಾಷ್ಟ್ರಗಳಲ್ಲಿ ಅದು ಕನಿಷ್ಟವಾಗುವುದು.
13 : ಸರ್ವೇಶ್ವರನ ಕೋಪದ ನಿಮಿತ್ತ ಅದು ನಿರ್ಜನವಾಗುವುದು. ಪೂರ್ತಿಯಾಗಿ ಅದು ಪಾಳುಬೀಳುವುದು. ಬಾಬಿಲೋನನ್ನು ಹಾದು ಹೋಗುವವರೆಲ್ಲರು ಅದಕ್ಕೆ ಬಂದೊದಗಿದ ವಿಪತ್ತುಗಳನ್ನು ಕಂಡು ನಿಬ್ಬೆರಗಾಗುವರು, ಸಿಳ್ಳುಹಾಕಿ ಮೂದಲಿಸುವರು.
14 : “ಬಿಲ್ಲುಗಾರರೇ, ನೀವೆಲ್ಲರು ವ್ಯೂಹಕಟ್ಟಿ ಬಾಬಿಲೋನಿಗೆ ಮುತ್ತಿಗೆಹಾಕಿರಿ. ಬಾಣಗಳನ್ನು ಮಿಗಿಸದೆ ಎಸೆಯಿರಿ. ಅದು ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಿದೆ.
15 : ಅದರ ಸುತ್ತಲು ರಣಘೋಷಮಾಡಿರಿ. ಇಗೋ, ಅದು ಶರಣಾಗತವಾಯಿತು! ಅದರ ಕೋಟೆಕೊತ್ತಲಗಳು ಬಿದ್ದವು. ಅದರ ಪೌಳಿಗೋಡೆಯನ್ನು ಕೆಡವಲಾಯಿತು. ಸರ್ವೇಶ್ವರನಾದ ನಾನು ಅದಕ್ಕೆ ಮುಯ್ಯಿತೀರಿಸಿದ್ದೇನೆ. ನೀವೂ ಮುಯ್ಯಿತೀರಿಸಿರಿ. ಅದು ಮಾಡಿದಂತೆಯೇ ಅದಕ್ಕೆ ಮಾಡಿ
16 : ಬೀಜ ಬಿತ್ತುವವನಾಗಲಿ, ಸುಗ್ಗಿಯಲ್ಲಿ ಕುಡುಗೋಲು ಹಿಡಿಯುವವನಾಗಲಿ ಆ ಬಾಬಿಲೋನಿನಲ್ಲಿ ಇಲ್ಲದಂತೆ ಮಾಡಿ. ಪ್ರತಿಯೊಬ್ಬ ವಿದೇಶಿಯನು ಹತ್ಯಮಾಡುವ ಆ ಖಡ್ಗದ ಮುಂದೆ ನಿಲ್ಲಲಾಗದೆ ಸ್ವಜನರ ಕಡೆಗೆ ತಿರುಗಿಕೊಂಡು ಸ್ವದೇಶಕ್ಕೆ ಓಡಿ ಹೋಗುವನು.
17 :
“ಇಸ್ರಯೇಲ್ ಚದರಿಹೋದ ಮುಂದೆ. ಸಿಂಹಗಳು ಅದನ್ನು ಓಡಿಸಿಬಿಟ್ಟಿವೆ. ಮೊಟ್ಟ ಮೊದಲು ಅಸ್ಸೀರಿಯಾದ ಅರಸನು ಅದನ್ನು ಕಬಳಿಸಿದನು. ಕಟ್ಟಕಡೆಗೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಅದರ ಎಲುಬುಗಳನ್ನು ಕಡಿದುಬಿಟ್ಟನು.
18 : ಹೀಗಿರಲು, ಇಸ್ರಯೇಲಿನ ದೇವರೂ ಸೇನಾಧೀಶ್ವರನೂ ಸರ್ವೇಶ್ವರನೂ ಆದ ನಾನು ಹೇಳುವುದು ಇದು: ಅಸ್ಸೀರಿಯಾದ ಅರಸನನ್ನು ನಾನು ದಂಡಿಸಿದಂತೆ ಬಾಬಿಲೋನಿನ ಅರಸನನ್ನೂ ಅವನ ದೇಶವನ್ನೂ ದಂಡಿಸುವೆನು.
19 : ಇಸ್ರಯೇಲೆಂಬ ಮಂದೆಯನ್ನು ಮರಳಿ ಅದರ ಹುಲ್ಲುಗಾವಲಿಗೆ ಸೇರಿಸುವೆನು. ಅದು ಕರ್ಮೆಲಿನಲ್ಲೂ ಭಾಷಾನಿನಲ್ಲೂ ಮೇಯುವುದು. ಎಫ್ರಯಿಮಿನ ಮತ್ತು ಗಿಲ್ಯಾದಿನ ಗುಡ್ಡಗಳಲ್ಲಿ ಹೊಟ್ಟೆತುಂಬ ತಿನ್ನುವುದು.
20 : ಆ ದಿನಗಳಲ್ಲಿ, ಆ ಕಾಲದಲ್ಲಿ ಇಸ್ರಯೇಲಿನ ಅಧರ್ಮವನ್ನು ಎಲ್ಲಿ ಹುಡುಕಿದರೂ ಸಿಗದು. ಜುದೇಯದ ಪಾಪವನ್ನು ತಡಕಿದರೂ ಸಿಗದು. ಏಕೆಂದರೆ ನಾನು ಉಳಿಸಿದ ಜನಶೇಷವನ್ನು ಕ್ಷಮಿಸಿಬಿಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.”
21 : ಬಾಬಿಲೋನಿನ ಪತನ ಕುರಿತು ಜೆರುಸಲೇಮಿನಲ್ಲಿ ಘೋಷಣೆ
ಸರ್ವೇಶ್ವರ ಹೀಗೆನ್ನುತ್ತಾರೆ: “ಮೆರಾಥಯಿಮ್ ನಾಡಿಗೂ ಪಕೋದಿನ ನಿವಾಸಿಗಳಿಗೂ ವಿರುದ್ಧ ದಂಡೆತ್ತಿಹೋಗಿ ಅವರನ್ನು ಸಂಹರಿಸು. ಆ ನಾಡನ್ನು ಪೂರ್ತಿಯಾಗಿ ಹಾಳು ಮಾಡು. ನಾನು ನಿನಗೆ ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸು.
22 : ಇಗೋ ಯುದ್ಧದ ಆರ್ಭಟ! ಮಹಾವಿನಾಶದ ಕೂಗಾಟ ನಾಡಿನೊಳಗೆಲ್ಲ!
23 : ಲೋಕವನ್ನೆಲ್ಲ ಬಡಿದ ಕೊಡಲಿಯಂಥ ಬಾಬಿಲೋನ್ ಈಗ ಮುರಿದು ಚೂರು ಚೂರಾಗಿದೆ! ಆ ರಾಜ್ಯವು ರಾಷ್ಟ್ರಗಳ ನಡುವೆ ಹಾಳಾಗಿ ಬಿದ್ದಿದೆ.
24 : ಬಾಬಿಲೋನೇ, ನಿನಗೆ ನಾನು ಉರುಲೊಡ್ಡಿದ್ದೆ. ನೀನು ತಿಳಿಯದೆ ಅದರಲ್ಲಿ ಸಿಕ್ಕಿಕೊಂಡೆ. ನೀನು ಸರ್ವೇಶ್ವರನೊಂದಿಗೆ ಹೋರಾಡಿದ್ದರಿಂದ ಬೋನಿನ ವಶವಾದೆ.
25 : ಸೇನಾಧೀಶ್ವರ ಸರ್ವೇಶ್ವರನೆಂಬ ದೇವರು ಬಾಬಿಲೋನಿನ ದೇಶದಲ್ಲಿ ನಿರ್ವಹಿಸಬೇಕಾದ ಕಾರ್ಯವೊಂದು ಉಂಟು. ಅದಕ್ಕಾಗಿ ಸರ್ವೇಶ್ವರನಾದ ನಾನು ನನ್ನ ಆಯುಧ ಶಾಲೆಯನ್ನು ತೆರೆದಿದ್ದೇನೆ. ನನ್ನ ಕೋಪದ ಅಸ್ತ್ರಶಸ್ತ್ರಗಳನ್ನು ಹೊರಗೆ ತೆಗೆದಿದ್ದೇನೆ.
26 : ಲೋಕದ ಕಟ್ಟಕಡೆಯಿಂದ ಬಾಬಿಲೋನಿಗೆ ಬನ್ನಿ. ಅದರ ಕಣಜಗಳನ್ನು ತೆರೆಯಿರಿ. ಆ ನಗರವನ್ನು ಹಾಳುದಿಬ್ಬವನ್ನಾಗಿ ಮಾಡಿ ಪೂರ್ತಿಯಾಗಿ ನಾಶಪಡಿಸಿರಿ. ಅದರಲ್ಲಿ ಏನೂ ಉಳಿಯದಿರಲಿ
27 : ಅದರ ಗೂಳಿಗಳನ್ನೆಲ್ಲ ಕೊಲ್ಲಿರಿ. ಹೋಗಲಿ ಅವು ವಧ್ಯಸ್ಥಾನಕ್ಕೆ. ಅವುಗಳಿಗೆ ಧಿಕ್ಕಾರ. ಅವುಗಳಿಗೆ ಬಂದಿದೆ ವಿಪತ್ಕಾಲ! ಸಮೀಪಿಸಿದೆ ದಂಡನೆಯ ದಿನ!
28 : “ಇಗೋ, ಬಾಬಿಲೋನಿನಿಂದ ತಪ್ಪಿಸಿಕೊಂಡು ಓಡಿಹೋಗುವವರ ಶಬ್ದ! ನಮ್ಮ ದೇವರಾದ ಸರ್ವೇಶ್ವರನು ತನ್ನ ಆಲಯವನ್ನು ನಾಶಮಾಡಿದವರಿಗೆ ಮುಯ್ಯಿತೀರಿಸಿದ್ದಾರೆ ಎಂಬ ಸಮಾಚಾರವನ್ನು ಸಿಯೋನಿನಲ್ಲಿ ಸಾರಲು ಧಾವಿಸುತ್ತಿದ್ದಾರೆ ಆ ಜನ.
29 : “ಬಿಲ್ಲುಬಾಣಗಾರರನ್ನೆಲ್ಲ ಬಾಬಿಲೋನಿಗೆ ಕರೆಯಿರಿ. ಅದರ ಸುತ್ತಲು ದಂಡಿಳಿಸಿರಿ. ಅದರ ನಿವಾಸಿಗಳಲ್ಲಿ ಯಾರೂ ತಪ್ಪಿಸಿಕೊಳ್ಳದ ಹಾಗಿರಲಿ. ಅದರ ಕೃತ್ಯಕ್ಕೆ ತಕ್ಕಂತೆ ಮುಯ್ಯಿ ತೀರಿಸಿರಿ. ಅದು ಮಾಡಿದಂತೆಯೇ ಅದಕ್ಕೆ ಮಾಡಿ. ಏಕೆಂದರೆ ಗರ್ವದಿಂದ ಅದು ಇಸ್ರಯೇಲರ ಪರಮ ಪಾವನನಾದ ಸರ್ವೇಶ್ವರನನ್ನು ಅಸಡ್ಡೆ ಮಾಡಿದೆ. 30ಆದಕಾರಣ ಆ ದಿನದಂದು ಅಲ್ಲಿ ಯುವಕರು ಬೀದಿ ಚೌಕಗಳಲ್ಲಿ ಬಿದ್ದು ಸಾಯುವರು. ಯುದ್ಧವೀರರೆಲ್ಲರು ಸತ್ತು ಸ್ತಬ್ದರಾಗುವರು. ಇದು ಸರ್ವೇಶ್ವರನಾದ ನನ್ನ ನುಡಿ.”
31 : ಸೇನಾಧೀಶ್ವರ ಸರ್ವೇಶ್ವರನಾದ ದೇವರು ಹೀಗೆನ್ನುತ್ತಾರೆ: “ಎಲೈ ಅಹಂಕಾರಿಯೇ, ನಾನು ನಿನಗೆ ವಿರುದ್ಧನು. ನಿನಗೆ ಹೊತ್ತು ಬಂದಿದೆ. ನಿನ್ನನ್ನು ದಂಡಿಸತಕ್ಕ ಕಾಲ ಸಮೀಪಿಸಿದೆ.
32 : ಅಹಂಕಾರದಿಂದ ಕೂಡಿದ ರಾಜ್ಯ ಎಡವಿ ಬೀಳುವುದು. ಅದನ್ನು ಯಾರೂ ಎತ್ತರು. ಅದರ ನಗರಗಳಿಗೆ ಬೆಂಕಿಹೊತ್ತಿಸುವೆನು. ಅದು ಸುತ್ತಮುತ್ತಣದನ್ನೆಲ್ಲ ನುಂಗಿಬಿಡುವುದು.”
33 :
ಸೇನಾಧೀಶ್ವರರಾದ ಸರ್ವೇಶ್ವರ ಹೀಗೆ ಎನ್ನುತ್ತಾರೆ: “ಇಸ್ರಯೇಲಿನ ಹಾಗು ಜುದೇಯದ ಜನರಿಬ್ಬರೂ ಹಿಂಸೆಗೆ ಗುರಿಯಾಗಿದ್ದಾರೆ. ಅವರನ್ನು ಸೆರೆಗೆ ಒಯ್ದವರೆಲ್ಲರು ಅವರನ್ನು ಬಿಡುವುದಿಲ್ಲವೆಂದು ಪಟ್ಟುಹಿಡಿದಿದ್ದಾರೆ.
34 : ಅವರನ್ನು ಬಿಡಿಸಬಲ್ಲವನು ಬಲಿಷ್ಠನು. ‘ಸೇನಾಧೀಶ್ವರ ಸರ್ವೇಶ್ವರ’ ಎಂಬುದೇ ಆತನ ನಾಮಧೇಯ. ಆತನೇ ಅವರ ವ್ಯಾಜ್ಯವನ್ನು ಜಯಿಸಿ, ನಾಡಿಗೆ ಶಾಂತಿಯನ್ನು ತಂದು, ಬಾಬಿಲೋನಿಯದವರಿಗೆ ಕಳವಳವನ್ನುಂಟುಮಾಡುವನು.”
35 : ಸರ್ವೇಶ್ವರ ಇಂತೆನ್ನುತ್ತಾರೆ:
“ಬಾಬಿಲೋನಿಯರ ಮೇಲೆ ಬೀಳಲಿದೆ ಖಡ್ಗ
ಅದರ ಜನಸಾಮಾನ್ಯರನ್ನು, ಪದಾಧಿಕಾರಿ
ಗಳನ್ನು, ಪಂಡಿತರನ್ನು
ಇವರೆಲ್ಲರನ್ನು ಹತಿಸಲಿದೆ ಆ ಖಡ್ಗ.
36 : ಅದು ಇರಿಯಲಿ ಕೊಚ್ಚಿಕೊಳ್ಳುವವರನ್ನು
ಬಯಲಿಗೆಳೆಯಲಿ ಅವರ ಬುದ್ಧಿಹೀನತೆಯನ್ನು
ಸಂಹರಿಸಲಿ ಆ ಬಾಬಿಲೋನಿನ ಶೂರರನ್ನು
ಬೆಬ್ಬರಬೀಳುವಂತಾಗಿಸಲಿ ಅವರೆಲ್ಲರನ್ನು.
37 : ಹೊಡೆಯಲಿ ಅಶ್ವಗಳನ್ನೂ ರಥಗಳನ್ನೂ
ಬಾಬಿಲೋನಿನಲ್ಲಿರುವ ನಾನಾ
ವಿದೇಶಿಯರನ್ನೂ
ಬೆದರಿಸಲಿ ಅವರ ಹೆಂಗಸರನ್ನು,
ಕಬಳಿಸಲಿ, ಸೂರೆಮಾಡಲಿ
ಆ ಖಡ್ಗ ಅವರ ಸಂಪತ್ತನ್ನು.
38 : ಅವರ ನೀರನ್ನೆಲ್ಲ ಹೀರಲಿ ಬೇಗನೆ
ಬತ್ತಿಹೋಗಲಿ ಅವರ ತೊರೆ.
ಅಕಟಾ ! ತುಂಬಿದೆ ಆ ದೇಶ ಬೊಂಬೆಗಳಿಂದ
ಮದವೇರಿದೆ ಅದರ ಜನತೆಗೆ
ವಿಗ್ರಹಾರಾಧನೆಯಿಂದ.
39 : ಈ ಕಾರಣ, ತೋಳಗಳೂ ಕಾಡುಮೃಗಗಳೂ
ಬೀಡುಮಾಡುವುವಲ್ಲಿ.
ಉಷ್ಟ್ರಪಕ್ಷಿಗಳೂ ತಂಗುವುವು ಅಲ್ಲಿ.
ಅದೆಂದಿಗೂ ನಿವಾಸಸ್ಥಳ ಆಗದು
ತಲತಲಾಂತರಕ್ಕೂ ಜನರು ಅಲ್ಲಿ ಒಕ್ಕಲಿರರು.
40 : ಯಾರೂ ನೆಲಸಲಾಗಲಿಲ್ಲ
ನಾನು ಕೆಡವಿದಾ ಸೊದೋಮ್ ಗೊಮೋರ
ನಗರಗಳಲ್ಲಿ
ಅದರ ಸುತ್ತಮುತ್ತಣ ಊರುಗಳಲ್ಲಿ,
ಯಾರೂ ವಾಸಿಸರು ಯಾವ ನರಪ್ರಾಣಿಯೂ
ನೆಲಸದು, ಬಾಬಿಲೋನಿನಲ್ಲಿ.
41 : ಇಗೋ ರಾಷ್ಟ್ರವೊಮದು ಬರುವುದು
ಉತ್ತರದಿಂದ:
ಎಚ್ಚರಗೊಳ್ವರು ಮಹಾಜನ ಹಾಗೂ ಅರಸರು
ಬಹುಮಂದಿ
ಬರುವರವರು ಲೋಕದ ಕಟ್ಟಕಡೆಯಿಂದ.
42 :
ಆ ಕ್ರೂರಿಗಳು, ಆ ನಿಷ್ಕರುಣಿಗಳು
ಹಿಡಿದುಕೊಂಡಿರುವರು ಬಿಲ್ಲನ್ನೂ
ಈಟಿಯನ್ನೂ.
ಅವರ ಧ್ವನಿ ಮೊರೆಯುತ್ತದೆ ಸಮುದ್ರದಂತೆ
ಕುದುರೆ ಸವಾರಿ ತೊಡಗಲಿದೆ.
ಬಾಬಿಲೋನ್ ನಗರಿಯೇ, ಕೇಳು,
ಆ ಸೈನ್ಯ ಶೂರವೀರರಿಂದ ಕೂಡಿದೆ.
ಅದು ನಿನ್ನ ಮೇಲೆ ಯುದ್ಧಸನ್ನದ್ಧವಾಗಿದೆ.
ಸರ್ವೇಶ್ವರನಾದ ನನ್ನ ನುಡಿ ಇದು.
43 : ಆ ಸುದ್ದಿ ಬಿತ್ತು ಬಾಬಿಲೋನಿನ ಅರಸನ
ಕಿವಿಗೆ
ಅವನ ಕೈಗಳಿದೋ ಜೋಲುಬಿದ್ದಿವೆ
ಅವನನ್ನು ಹಿಡಿದಿದೆ ಪ್ರಸವವೇದನೆಯಂಥ
ಯಾತನೆ.
44 : ಬಾಬಿಲೋನಿಯರಿಗೆ ನಿತ್ಯ ನೆಲೆಯಾದ ಗೋಮಾಳಕ್ಕೆ ಇಗೋ, ಜೋರ್ಡನ್ ದಟ್ಟಡವಿಯಿಂದ ಸಿಂಹದೋಪಾದಿ ನಾನು ಏರಿಬರುವೆನು. ಕ್ಷಣಮಾತ್ರದಲ್ಲಿ ಆ ಬಾಬಿಲೋನಿಯರನ್ನು ಅಲ್ಲಿಂದ ಓಡಿಸಿ ಬಿಡುವೆನು. ಅದನ್ನು ಪಾಲಿಸುವುದಕ್ಕೆ ನಾನು ಆರಿಸಿಕೊಂಡವನನ್ನೇ ನೇಮಿಸುವೆನು. ನನಗೆ ಸಮಾನನು ಯಾರು? ನ್ಯಾಯವಿಚಾರಣೆಗೆ ನನ್ನನ್ನು ಎಳೆಯಬಲ್ಲ ವ್ಯಕ್ತಿ ಯಾರು? ಮಂದೆಯನ್ನು ಕಾಯುವ ಯಾವನು ತಾನೆ ನನ್ನೆದುರಿಗೆ ನಿಲ್ಲಬಲ್ಲನು?
45 : ಹೀಗಿರಲು, ಸರ್ವೇಶ್ವರನು ಬಾಬಿಲೋನಿಯದ ವಿಷಯವಾಗಿ ಮಾಡಿಕೊಂಡಿರುವ ಆಲೋಚನೆಯನ್ನು, ಅದರ ಕಸ್ದೀಯರನ್ನು ಕುರಿತು ಸಂಕಲ್ಪಿಸಿರುವ ಉದ್ದೇಶವನ್ನು ಆಲಿಸಿರಿ: ಕಾಡುಮೃಗಗಳು ಹಿಂಡಿನ ಮರಿಗಳನ್ನು ಖಂಡಿತವಾಗಿ ಎಳೆದುಕೊಂಡು ಹೋಗುವುವು. ಅವುಗಳ ನಾಶಕ್ಕಾಗಿ ಹುಲ್ಲುಗಾವಲು ನಿಶ್ಚಯವಾಗಿ ಕಳವಳಪಡುವುದು.
46 : ಬಾಬಿಲೋನ್ ಶತ್ರುವಶ ಆಯಿತೆಂಬ ಕೋಲಾಹಲಕ್ಕೆ ಭೂಮಿ ಕಂಪಿಸುವುದು. ಅದರ ಮೊರೆ ರಾಷ್ಟ್ರಗಳಿಗೆ ಕೇಳಿಸುವುದು.