1 :
ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಮೋವಾಬನ್ನು ಕುರಿತು ಹೀಗೆನ್ನುತ್ತಾರೆ:
“ನೆಬೋ ಊರಿನ ಗತಿಯನ್ನು ಅಯ್ಯೋ,
ಏನೆಂದು ಹೇಳಲಿ, ಅದು ಹಾಳಾಯಿತು.
ಕಿರ್ಯಾತಯಿಮ್ ಮಾನಭಂಗ ಹೊಂದಿದೆ
ಶತ್ರು ಕೈಗೆ ಸಿಕ್ಕಿ.
ಮಿಸ್ಗಾಬ್ ಅವಮಾನಕ್ಕೆ ಗುರಿಯಾಗಿದೆ
ನೆಲಸಮವಾಗಿ.
2 : ಮೋವಾಬಿನ ಕೀರ್ತಿ ಮಾಯವಾಯಿತು
ಹೆಷ್ಬೋನ್ ಶತ್ರುಗಳ ಕೈವಶವಾಯಿತು.
‘ಮೋವಾಬ್ ಇನ್ನು ರಾಷ್ಟ್ರವೆನಿಸಿಕೊಳ್ಳದಷ್ಟು
ಅದನ್ನು ಹಾಳುಮಾಡೋಣ ಬನ್ನಿ’
ಎಂದಿದ್ದಾರೆ ಆ ಶತ್ರುಗಳು.
ಮದ್ಮೆನೇ, ನೀನೂ ಸುಮ್ಮನಾಗುವೆ,
ಖಡ್ಗ ಬರುವುದು ನಿನ್ನನ್ನು ಬೆನ್ನಟ್ಟಿ.
3 : ‘ಅಯ್ಯೋ, ಸೂರೆಹೋದೆವು, ತೀವ್ರ
ನಾಶವಾದೆವು !’
ಎಂಬ ಕೂಗಾಟ ಕೇಳಿಬರುತ್ತಿದೆ
ಹೊರೊನಯಿಮಿನಿಂದ.
4 : “ಮೋವಾಬ್ ನಾಶವಾಯಿತು.
ಅಲ್ಲಿ ದಿಕ್ಕೆಟ್ಟವರು ಮೊರೆಯಿಟ್ಟಿರುವರು.
5 : ಅಳುತ್ತಳುತ್ತಾ ಲೂಹೀತ್ ದಿಣ್ಣೆಯನ್ನು
ಹತ್ತುತ್ತಿರುವರು
‘ನಾಶವಾದೆವಲ್ಲಾ!’ ಎಂಬ ಪ್ರಾಣಸಂಕಟದ
ಪ್ರಲಾಪವು
ಹೊರೊನಯಿಮ್ ಇಳಿಜಾರಿನಲ್ಲಿ
ಕೇಳಿಸುತ್ತಿರುವುದು.
6 : ಅಡವಿಯ ಕಾಡುಕತ್ತೆಯಂತೆ
ಓಡಿಹೋಗಿ ಪ್ರಾಣ ಉಳಿಸಿಕೊಳ್ಳಿ’
ಎನ್ನುತ್ತಿರುವರು.
7 : “ಮೋವಾಬೇ,
ನಿನ್ನ ಸಾಧನೆಗಳಲ್ಲೇ, ಧನರಾಶಿಗಳಲ್ಲೇ
ಭರವಸೆಯಿಟ್ಟೆ.
ಆದುದರಿಂದ ನೀನು ಇದೀಗಲೆ ಶತ್ರುಗಳ
ಕೈವಶವಾಗುವೆ.
ಕೆಮೋಷ್ ಎಂಬ ನಿನ್ನ ದೇವತೆಯೂ
ಅದರ ಭಕ್ತ ಯಾಜಕರೂ ಹಾಗೂ
ರಾಜ್ಯಾಧಿಕಾರಿಗಳು
ಸೆರೆಗೆ ಹೋಗುವರು ಒಟ್ಟಿಗೆ.
8 : ಸೂರೆಗಾರನು ಪ್ರತಿಯೊಂದು ನಗರದ ಮೇಲೆ
ಬೀಳುವನು.
ಯಾವ ಪಟ್ಟಣವೂ ಉಳಿಯದು.
ಸರ್ವೇಶ್ವರನ ನುಡಿಯಂತೆಯೆ
ಮೇಲ್ನಾಡು ನಾಶವಾಗುವುದು, ಬೈಲ್ನಾಡು
ಹಾಳಾಗುವುದು.
9 : ಮೋವಾಬಿಗೆ ರೆಕ್ಕೆ ಕಟ್ಟಿರಿ, ಅದು ಹಾರಿಹೋಗಲಿ
ಅದರ ನಗರಗಳು ಹಾಳುಬಿದ್ದು
ನಿರ್ಜನವಾಗುವುವು.
10 : ಸರ್ವೇಶ್ವರನು ನೇಮಿಸಿದ ಕೆಲಸವನ್ನು ನಿರ್ವಹಿಸುವುದರಲ್ಲಿ ಆಲಸ್ಯನಾಗಿರುವವನು ಶಾಪಗ್ರಸ್ತನು. ತನ್ನ ಕತ್ತಿ ರಕ್ತಸುರಿಸದಂತೆ ತಡೆಯುವವನಿಗೆ ಶಾಪ ತಗಲಲಿ!
11 :
ಮೋವಾಬು ಚಿಕ್ಕತನದಿಂದಲೂ ನೆಮ್ಮದಿಯಾಗಿದೆ. ಅದು ಮಡ್ಡಿಯ ಮೇಲೆ ನಿಂತಿರುವ ದ್ರಾಕ್ಷಾರಸದಂತಿದೆ. ಅದನ್ನು ಪಾತ್ರೆಯಿಂದ ಪಾತ್ರೆಗೆ ಯಾರೂ ಹೊಯ್ಯಲಿಲ್ಲ. ಅದು ಎಂದೂ ಸೆರೆಹೋಗಲಿಲ್ಲ. ಆದಕಾರಣ ಅದರ ರುಚಿ ಅದರಲ್ಲಿದೆ. ಅದರ ವಾಸನೆ ಮಾರ್ಪಡಲಿಲ್ಲ.
12 : ಹೀಗಿರಲು ಸರ್ವೇಶ್ವರ ಇಂತೆನ್ನುತ್ತಾರೆ: “ಇಗೋ, ದಿನಗಳು ಬರಲಿವೆ, ಆಗ ನಾನು ‘ಹೊಯ್ಯತಕ್ಕವರನ್ನು’ ಅವರ ಬಳಿಗೆ ಕಳುಹಿಸುವೆನು. ಅವರು ಅದನ್ನು ಹೊಯ್ದುಬಿಡುವರು. ಪಾತ್ರೆಗಳನ್ನು ಬರಿದು ಮಾಡುವರು. ಗಡಿಗೆಗಳನ್ನು ಒಡೆದು ಹಾಕುವರು
13 : ಇಸ್ರಯೇಲ್ ವಂಶದವರು ನಂಬಿಕೆ ಇಟ್ಟಿದ್ದ ಬೇತೇಲ್ ಕ್ಷೇತ್ರವನ್ನು ಕುರಿತು ಆಶಾಭಂಗಪಟ್ಟಂತೆ ಆಗ ಮೋವಾಬ್ಯರು ತಮ್ಮ ಕೆಮೋಷ್ ದೇವತೆಯನ್ನು ಕುರಿತು ಆಶಾಭಂಗಪಡುವರು.
14 : ‘ನಾವು ಶೂರರು, ಯುದ್ಧ ಪ್ರವೀಣರು,
ಪರಾಕ್ರಮಿಗಳು’
ಎಂದು ನೀವು ಹೇಳುವುದೆಂತು?
15 : ಮೋವಾಬು ಹಾಳಾಗಿದೆ
ಸುಟ್ಟು ಹೋದ ಅದರ ನಗರಗಳಿಂದ ಹೊಗೆ
ಎದ್ದಿದೆ.
ಅದರ ಸರ್ವಶ್ರೇಷ್ಟ ಯುವಕರು
ಹೋಗಿದ್ದಾರೆ ಹತರಾಗುವುದಕ್ಕೆ,
ಸರ್ವಶಕ್ತ ಸರ್ವೇಶ್ವರನೆಂಬ ನಾಮವುಳ್ಳ
ರಾಜಾಧಿರಾಜನ ನುಡಿಯಂತೆ.
16 : ಮೋವಾಬಿಗೆ ದುರ್ಗತಿ ಸಮೀಪಿಸಿದೆ
ಅದಕ್ಕೆ ವಿಪತ್ತು ಬೇಗ ಬರಲಿದೆ.
17 : ಮೋವಾಬನ ನೆರೆಹೊರೆಯವರೇ,
ಅದರ ಹೆಸರುವಾಸಿಯನ್ನು ಅರಿತವರೇ,
ನೀವೆಲ್ಲರು ಅದಕ್ಕಾಗಿ ಎದೆಬಡಿದುಕೊಳ್ಳಿ !
‘ಅಯ್ಯೋ, ಶಕ್ತಿಯುತ ಚೆಂಗೋಲು,
ಮಹಿಮೆಯ ದಂಡಕೋಲು ಮುರಿದು
ಹೋಯಿತಲ್ಲಾ !’
ಎಂದು ಪ್ರಲಾಪಿಸಿರಿ.
18 : ಯುವತಿಯೇ, ದೀಬೋನ್ ನಗರಿಯೇ,
ನಿನ್ನ ಮಹಿಮೆಯ ಪದವಿಯಿಂದ
ಕೆಳಕ್ಕಿಳಿದು ಕುಳಿತುಕೊ ಬಾಯಾರಿದವಳಂತೆ.
ಮೋವಾಬನ್ನು ಹಾಳುಮಾಡುವವನು
ನಿನಗೆ ವಿರುದ್ಧವಾಗಿ ಬಂದಿದ್ದಾನೆ.
ನಿನ್ನ ಕೋಟೆಕೊತ್ತಲುಗಳನ್ನು ಅವನು
ಕೆಡವಿದ್ದಾನೆ.
19 : ಅರೋಯೇರಿನವರೇ, ದಾರಿ ಮಗ್ಗುಲಲ್ಲಿ
ನಿಂತು ನೋಡಿ !
ಓಡಿ ಹೋಗುವವನನ್ನೂ
ತಪ್ಪಿಸಿಕೊಳ್ಳುವವಳನ್ನೂ
ಏನಾಯಿತೆಂದು ವಿಚಾರಿಸಿರಿ.
20 : ಮೋವಾಬು ನಾಶವಾಗಿದೆ, ಅವಮಾನಕ್ಕೆ
ಈಡಾಗಿದೆ.
ಗೋಳಾಡಿರಿ, ಅತ್ತು ಪ್ರಲಾಪಿಸಿರಿ !
ಮೋವಾಬು ಹಾಳಾಯಿತೆಂದು
ಅರ್ವೋನಿನ ತೀರದಲ್ಲೆಲ್ಲಾ ಘೋಷಿಸಿರಿ.
21 : ಮೇಲ್ನಾಡಿಗೆ ದಂಡನೆಯಾಗಿದೆ, ಹೋಲೇನ್, ಯಾಚಾ, ಮೇಫಾತ್, ದೀಬೋನ್, ನೆಬೋ,
22 : ಬೇತ್‍ದಿಬ್ಲಾತಯಿಮ್,
23 : ಕಿರ್ಯಾತಯಿಮ್, ಬೇತ್‍ಗಾಮೂಲ್, ಬೇತ್‍ಮೆಯೋನ್, ಕೆರೀಯೋತ್,
24 : ಬೊಚ್ರ, ಹೀಗೆ ದೂರದ ಹತ್ತಿರದ ಮೋವಾಬಿನ ಎಲ್ಲ ನಗರಗಳಿಗೂ ದಂಡನೆಯಾಗಿದೆ.
25 : ಮೋವಾಬಿನ ಕೊಂಬು ಕಡಿದು ಬಿದ್ದಿದೆ. ಅದರ ತೋಳು ಮುರಿದುಹೋಗಿದೆ. ಇದು ಸರ್ವೇಶ್ವರನಾದ ನನ್ನ ನುಡಿ.”
26 :
“ಮೋವಾಬಿಗೆ ಅಮಲೇರುವಷ್ಟು ಕುಡಿಸಿರಿ. ಅದು ಸರ್ವೇಶ್ವರನನ್ನೆ ತಿರಸ್ಕರಿಸಿ ಉಬ್ಬಿಹೋಗಿದೆ. ತನ್ನ ವಾಂತಿಯಲ್ಲೆ ಬಿದ್ದು ಗೇಲಿ ಪರಿಹಾಸ್ಯಕ್ಕೆ ಗುರಿಯಾಗಲಿದೆ.
27 : ಮೋವಾಬೇ, ನೀನು ಇಸ್ರಯೇಲನ್ನು ಕುರಿತು ಗೇಲಿಮಾಡುತ್ತಿದ್ದೆಯಲ್ಲವೆ? ಕಳ್ಳರ ಗುಂಪಿಗೆ ಸೇರಿ ಅದು ಸಿಕ್ಕಿಕೊಂಡಂತೆ ನಿನಗೆ ಕಾಣುತ್ತಿತ್ತೇ? ಇಸ್ರಯೇಲಿನ ಪ್ರಸ್ತಾಪ ಎತ್ತಿದಾಗಲೆಲ್ಲ ನೀನು ತಲೆಯಾಡಿಸಿ ಹಿಯ್ಯಾಳಿಸುತ್ತಿಯಲ್ಲವೆ?
28 : “ಮೋವಾಬ್ಯರೇ, ನಗರಗಳನ್ನು ಬಿಟ್ಟು ಹೋಗಿ ಬಂಡೆಗಳ ಗುಹೆಯಲ್ಲಿ ವಾಸಮಾಡಿ. ಹಳ್ಳಕೊಳ್ಳಗಳ ಆಚೆಯ ಪಕ್ಕದಲ್ಲಿ ಗೂಡನ್ನು ಕಟ್ಟಿಕೊಳ್ಳುವ ಪಾರಿವಾಳದಂತೆ ಜೀವಿಸಿರಿ.
29 : ಮೋವಾಬ್ಯರಿಗೆ ಬಹಳ ಸೊಕ್ಕೇರಿದೆ! ಅವರ ಹೆಮ್ಮೆಯ ಸುದ್ದಿ, ಡಂಭಾಚಾರ, ಅಹಂಕಾರ, ಗರ್ವ, ಸ್ವಪ್ರತಿಷ್ಠೆ ಇವುಗಳ ಸಮಾಚಾರ ನಮ್ಮ ಕಿವಿಗೆ ಬಿದ್ದಿದೆ.
30 : ಸರ್ವೇಶ್ವರನಾದ ನಾನು ಹೇಳುವುದೇನೆಂದರೆ: ಅವರ ಗರ್ವೋದ್ರೇಕ ನನಗೆ ಗೊತ್ತಿದೆ. ಅದು ಬರೀ ಬುರುಡೆ ಮಾತ್ರ. ಅವರು ಕೊಚ್ಚಿಕೊಳ್ಳುವುದೆಲ್ಲ ನಿರರ್ಥಕವೇ ಸರಿ.
31 : ಆದ ಕಾರಣ ನಾನು ಮೋವಾಬಿನ ಬಗ್ಗೆ ವಿಷಾದಿಸುತ್ತೇನೆ. ಹೌದು, ಇಡೀ ನಾಡಿನ ದುರ್ಗತಿಯನ್ನು ನೋಡಿ ಪ್ರಲಾಪಿಸುತ್ತೇನೆ. ಕೀರ್ ಹೆರೆಸಿನವರ ವಿಷಯದಲ್ಲೂ ನನಗೆ ವ್ಯಥೆ ಇದೆ.
32 : ‘ಸಿಬ್ಮ’ದ ದ್ರಾಕ್ಷಾಲತೆಯೇ, ಯಜ್ಜೇರಿನ ನಿಮಿತ್ತ ದುಃಖಿಸುವುದಕ್ಕಿಂತಲು ನಿನ್ನನ್ನು ಕಂಡು ಹೆಚ್ಚಾಗಿ ದುಃಖಿಸುತ್ತೇನೆ. ನಿನ್ನ ಶಾಖೆಗಳು ಸಮುದ್ರದಾಚೆಗೂ ಯಜ್ಜೇರಿನ ಸರೋವರದವರೆಗೂ ವ್ಯಾಪಿಸಿವೆ. ಈಗ ನಿನ್ನ ಹಣ್ಣುಹಂಪಲುಗಳ ಮೇಲೆ ಹಾಗು ದ್ರಾಕ್ಷಿಯ ಸುಗ್ಗಿಯ ಮೇಲೆ ಸೂರೆಗಾರ ಬಂದೆರಗಿದ್ದಾನೆ.
33 : ಹರ್ಷಾನಂದಗಳು ತೋಟಗಳಿಂದಲೂ ಮೋವಾಬಿನ ಇಡೀ ನಾಡಿನಿಂದಲೂ ತೊಲಗಿವೆ. ತೊಟ್ಟಿಗಳಲ್ಲಿ ದ್ರಾಕ್ಷಾರಸ ಇಲ್ಲದಂತಾಗಿದೆ. ಯಾರೂ ತೊಟ್ಟಿಯಲ್ಲಿ ತುಳಿಯುತ್ತಾ ಆನಂದ ಧ್ವನಿಗೈಯುತ್ತಿಲ್ಲ. ಕೇಳಿಸುವಾ ಧ್ವನಿ ಆನಂದ ಧ್ವನಿ ಅಲ್ಲ.
34 : ಹೆಷ್ಬೋನಿನ ಮತ್ತು ಎಲೆಯಾಲೆಯ ಜನರು ಅರಚಿಕೊಳ್ಳುತ್ತಿದ್ದಾರೆ. ಆ ಕೂಗು ಯಹಚಿನವರೆಗೆ ಕೇಳಿಸುತ್ತಿದೆ. ಚೋಯರಿನಿಂದ ಹೊರೊನಯಿಮಿನವರೆಗೆ ಮತ್ತು ಎಗ್ಲತ್ ಶೆಲೆಶೀಯದವರೆಗೆ ಆ ಕಿರಿಚಾಟ ಕೇಳಿಸುತ್ತಿದೆ. ನಿಮ್ರೀಮ್ ಹಳ್ಳವೂ ಹಾಳಾಗಿದೆ.
35 : “ಮೋವಾಬಿನ ಪೂಜಾಸ್ಥಾನಗಳಲ್ಲಿ ಬಲಿಯರ್ಪಿಸುವುದನ್ನೂ ತಮ್ಮ ದೇವರುಗಳಿಗೆ ಧೂಪಾರತಿ ಯೆತ್ತುವುದನ್ನೂ ನಿಲ್ಲಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ.
36 : “ಆದುದರಿಂದ ಮೋವಾಬಿನ ಮತ್ತು ಕೀರ್ ಹೆರೆಸಿನವರ ನಿಮಿತ್ತ ನನ್ನ ಹೃದಯ ಕೊಳಲಿನಂತೆ ಮೊರೆಯಿಡುತ್ತದೆ. ಮೋವಾಬ್ಯರು ಕೂಡಿಸಿಟ್ಟ ಹೇರಳವಾದ ಆಸ್ತಿ ಮಾಯವಾಯಿತು
37 : ಎಲ್ಲರ ತಲೆಬೋಲು, ಎಲ್ಲರ ಗಡ್ಡ ವಿಕಾರ, ಎಲ್ಲರ ಕೈ ಗಾಯ. ಎಲ್ಲರ ನಡುವಿಗೆ ಗೋಣಿ ತಟ್ಟು.
38 : ಮೋವಾಬಿನ ಎಲ್ಲ ಮಾಳಿಗೆಗಳ ಮೇಲೆಯೂ ಚೌಕಗಳಲ್ಲಿಯೂ ಒಂದೇ ರೋದನ. ಏಕೆಂದರೆ ಯಾರಿಗೂ ಬೇಡದ ಮಡಕೆಯಂತೆ ಮೋವಾಬನ್ನು ಒಡೆದುಹಾಕಿದ್ದೇನೆ. ಇದು ಸರ್ವೇಶ್ವರನಾದ ನನ್ನ ನುಡಿ.
39 : ಅದು ಹೇಗೆ ನುಚ್ಚುನೂರಾಗಿದೆ ! ಆ ಜನರು ಕಿರಿಚಿಕೊಳ್ಳುತ್ತಿದ್ದಾರೆ! ಇಗೋ, ಮೋವಾಬು ನಾಚಿಕೆಯಿಂದ ಬೆನ್ನು ತೋರಿಸಿದೆ. ನೆರೆಹೊರೆಯವರು ಅಣಕಿಸುವುದಕ್ಕೂ ಬೆಚ್ಚಿಬೀಳುವುದಕ್ಕೂ ಆಸ್ಪದ ಆಗಿದೆ.”
ಸರ್ವೇಶ್ವರ ಹೀಗೆನ್ನುತ್ತಾರೆ:
40 : “ಶತ್ರುವು ಮೋವಾಬಿನ ಮೇಲೆ ಎರಗಲು
ರಣಹದ್ದಿನಂತೆ ರೆಕ್ಕೆಗಳನ್ನು ಹರಡಿ
ಹಾರುವನು.
41 : ನಗರಗಳನ್ನು ಹಿಡಿಯುವನು, ಕೋಟೆಗಳನ್ನು
ಆಕ್ರಮಿಸುವನು.
ಆ ದಿನದಂದು, ಹೆರುವ ಹೆಂಗಸಿನ ಎದೆಯಂತೆ
ಅದರುವುದು ಮೋವಾಬಿನ ಶೂರರ ಎದೆ.
42 : ಉಬ್ಬಿಕೊಂಡು ಸರ್ವೇಶ್ವರನನ್ನೆ ತಿರಸ್ಕರಿಸಿದ
ಕಾರಣ
ಹಾಳಾಗಿ ಇನ್ನು ರಾಷ್ಟ್ರವೆನಿಸಿಕೊಳ್ಳದು
ಮೋವಾಬ್.
43 : ಮೋವಾಬಿನ ನಿವಾಸಿಯೇ, ಕೇಳು
ನಿನಗೆ ಕಾದಿದೆ ಭೀತಿ, ಗುಳಿ, ಉರುಳು!
ಇದು ಸರ್ವೇಶ್ವರನ ನುಡಿ.
44 : ಭಯಕ್ಕೆ ಓಡುವವನು ಗುಂಡಿಯಲ್ಲಿ
ಬೀಳುವನು
ಗುಂಡಿಯಿಂದ ಹತ್ತಿ ಬರುವವನು ಬಲೆಗೆ
ಸಿಕ್ಕುವನು.
ದಂಡನೆಯ ವರ್ಷವನ್ನು ಮೋವಾಬಿಗೆ
ಖಂಡಿತ ಬರಮಾಡುವೆನು –
ಇದು ಸರ್ವೇಶ್ವರನ ನುಡಿ.
45 : ಪಲಾಯನವಾದವರು ಹೆಷ್ಬೋನಿನ ನೆರಳಲ್ಲಿ
ನಿಂತಿದ್ದಾರೆ ಬಲಗುಂದಿದವರಾಗಿ.
ಆದರೆ ಸೀಹೋನನ ರಾಜ್ಯಕ್ಕೆ ಸೇರಿದ
ಆ ಹೆಷ್ಬೋನಿನಿಂದಲೆ ಹೊರಟಿದೆ ಅಗ್ನಿ.
ಮೋವಾಬಿನ ಮೇರೆಯನ್ನೂ ಶಿಖರವನ್ನೂ
ನುಂಗಿಬಿಟ್ಟಿದೆ ಆ ಬೆಂಕಿ.
46 : ಮೋವಾಬ್ಯರೇ, ನಿಮ್ಮ ಗತಿಯೇನೆಂದು
ಹೇಳಲಿ !
ಕೆಮೋಷ್ ದೇವತೆಯ ಭಕ್ತರು ನಾಶವಾದರು.
ನಿಮ್ಮ ಗಂಡುಹೆಣ್ಣು ಮಕ್ಕಳು ಗಡೀಪಾರಾಗಿ
ಸೆರೆಯಾದರು.
47 : ಆದರೂ ಬರಲಿರುವಾ ದಿನದಂದು
ತಪ್ಪಿಸುವೆನು ಮೋವಾಬಿನ ದುರವಸ್ಥೆಯನ್ನು
ಎನ್ನುತ್ತಾರೆ ಸರ್ವೇಶ್ವರ.
- ಇತಿ ಮೋವಾಬನ್ನು ಕುರಿತ ತೀರ್ಪು.