1 :
ರಾಷ್ಟ್ರಗಳ ವಿಷಯವಾಗಿ ಸರ್ವೇಶ್ವರ ಸ್ವಾಮಿ ಪ್ರವಾದಿ ಯೆರೆಮೀಯನಿಗೆ ಅನುಗ್ರಹಿಸಿದ ವಾಣಿ ಇದು:
ಈಜಿಪ್ಟನ್ನು ಕುರಿತ ವಾಣಿ:
2 : ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಈಜಿಪ್ಟಿನ ಅರಸನಾದ ಫರೋಹ ನೆಕೋವಿನ ಸೈನ್ಯವು ಯೂಫ್ರೆಟಿಸ್ ನದಿಯ ಬಳಿ ಕರ್ಕೆಮೀಷಿನಲ್ಲಿ ಇರುವಾಗ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಆ ಸೈನ್ಯದ ಮೇಲೆ ದಾಳಿಮಾಡಿದ ವಿಷಯ:
3 : “ಗುರಾಣಿ ಖೇಡ್ಯಗಳನ್ನು ಸಿದ್ಧಮಾಡಿ
ಯುದ್ಧಕ್ಕೆ ಹೊರಡಿ !
4 : ರಥಾಶ್ವಗಳನ್ನು ಕಟ್ಟಿರಿ, ವಾಹನಾಶ್ವಗಳನ್ನು
ಹತ್ತಿರಿ,
ಶಿರಸ್ತ್ರಾಣಗಳನ್ನು ಹಾಕಿಕೊಂಡು ಯುದ್ಧಕ್ಕೆ
ನಿಲ್ಲಿ.
ಭರ್ಜಿಗಳನ್ನು ಬೆಳಗಿರಿ, ಕವಚಗಳನ್ನು
ತೊಟ್ಟುಕೊಳ್ಳಿರಿ!”
5 : ಆದರೆ, ನನ್ನ ಕಣ್ಣಿಗೆ ಕಾಣುತ್ತಿರುವುದೇನು?
ಅವರು ಓಡುತ್ತಿರುವರು ನೋಡು,
ಧೈರ್ಯಗೆಟ್ಟು, ಬೆನ್ನುಗೊಟ್ಟು.
ಅವರ ಶೂರರು ಹಿಂದಿರುಗದೆ ಓಡುತ್ತಿರುವರು
ಪೆಟ್ಟುತಿಂದು.
ದಿಗಿಲು ಕವಿದಿದೆ ಸುತ್ತ ಮುತ್ತಲು,”
ಸರ್ವೇಶ್ವರನ ವಾಣಿ ಇದು.
6 : “ವೇಗಶಾಲಿಗಳು ಓಡಿ ಹೋಗಲಾರರು
ಬಲಿಷ್ಟರು ತಪ್ಪಿಸಿಕೊಳ್ಳಲಾರರು.
ಉತ್ತರದಲ್ಲಿ, ಯೂಫ್ರೆಟಿಸ್ ನದಿಯ
ಹತ್ತಿರದಲ್ಲಿ,
ಎಡವಿಬಿದ್ದಿರುವರು.
7 : ಈ ಪ್ರವಾಹ ಯಾವುದು?
ನೈಲ್ ನದಿಯಂತೆ ಉಬ್ಬಿರುವುದಲ್ಲಾ?
ನೈಲಿನ ಶಾಖೆಗಳ ಹಾಗೆ ತುಂಬಿ
ತುಳುಕುತ್ತಿದೆಯಲ್ಲಾ?
8 : ಈಜಿಪ್ಟ್ ನದಿ ಉಬ್ಬಿದೆ, ನೈಲ್ ನದಿಯಂತೆ
ಈಜಿಪ್ಟೆಂಬ ಪ್ರವಾಹವೇ ತುಂಬಿ ತುಳುಕುತ್ತಿದೆ
ನೈಲಿನ ಶಾಖೆಗಳಂತೆ,
‘ನಾನು ಉಬ್ಬಿಕೊಂಡು ಲೋಕದೊಳಗೆಲ್ಲಾ
ಹಬ್ಬುವೆನು
ನಗರಗಳನ್ನೂ ಅವುಗಳ ನಿವಾಸಿಗಳನ್ನೂ
ನಾಶಮಾಡುವೆನು’ ಎಂದು
ಕೊಳ್ಳುತ್ತಿರುವುದು.
9 : ಅಶ್ವಗಳೇ, ಕುಣಿದಾಡಿ; ರಥಗಳೇ,
ರಭಸವಾಗಿ ಓಡಿ !
ಹೊರಡಲಿ ಶೂರರು, ಖೇಡ್ಯ ಸನ್ನದ್ಧರಾದ
ಸುಡಾನರು, ಲಿಬಿಯಾದವರು
ಮುನ್ನುಗ್ಗಲಿ ಧನುರ್ಧಾರಿಗಳಾದ
ಲಿಡಿಯದವರು.
10 : ಲಿಡಿಯದವರು.
ಆದರೆ ಈ ದಿನ, ಯುದ್ಧದ ದಿನ
ಸೇನಾಧೀಶ್ವರನೆಂಬ ಸರ್ವೇಶ್ವರಸ್ವಾಮಿ
ಶತ್ರುಗಳಿಗೆ ಮುಯ್ಯಿ ತೀರಿಸುವ ದಿನ
ಇದು ದಂಡನೆಯ ದಿನ.
ಇಂದು ಖಡ್ಗವು ಕಬಳಿಸುವುದು ತೃಪ್ತಿಯಾಗಿ
ರಕ್ತವನ್ನು ಹೀರುವುದು ಸಂತೃಪ್ತಿಯಾಗಿ
ಉತ್ತರದ ಯೂಫ್ರೆಟಿಸ್ ನದಿಯ ಹತ್ತಿರ
ಬಲಿಮಾಡಬೇಕೆಂದಿರುವನು ಸರ್ವಶಕ್ತನೆಂಬ
ಸರ್ವೇಶ್ವರ.
11 : ಈಜಿಪ್ಟಿನ ಕನ್ಯೆಯೇ, ಯುವತಿಯೇ,
ಗಿಲ್ಯಾದಿಗೆ ಹೋಗಿ ಔಷಧವನ್ನು ಕೊಂಡು ಬಾ
ನಿನ್ನ ಬಗೆಬಗೆಯ ಮದ್ದುಗಳಿಂದ
ಪ್ರಯೋಜನವಿಲ್ಲ
ಅವುಗಳಿಂದ ನಿನಗೆ ಗುಣವಾಗುವಂತಿಲ್ಲ!
12 : ನಿನ್ನ ಲಜ್ಜೆಯ ಸುದ್ದಿ ರಾಷ್ಟ್ರಗಳಿಗೆ ಮುಟ್ಟಿದೆ
ಲೋಕವೆಲ್ಲಾ ನಿನ್ನ ಗೋಳಾಟದಿಂದ ತುಂಬಿದೆ
ಯೋಧನು ಯೋಧನನ್ನು ಎಡವಿ,
ಇಬ್ಬರೂ ಬಿದ್ದಿರುವರು ಕೆಳಗೆ.”
13 :
ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಬಂದು ಈಜಿಪ್ಟ್ ದೇಶದ ಮೇಲೆ ಮುತ್ತಿಗೆ ಹಾಕುವನು ಎಂಬುದಾಗಿ ಸರ್ವೇಶ್ವರನಿಂದ ಪ್ರವಾದಿ ಯೆರೆಮೀಯನಿಗೆ ಕೇಳಿ ಬಂದ ವಾಣಿ:
14 : “ಪ್ರಕಟಿಸಿರಿ ಈಜಿಪ್ಟಿನಲ್ಲಿ,
ಪ್ರಚುರಪಡಿಸಿರಿ ಮಿಗ್ದೋಲ್, ತಹಪನೇಸ್,
ಹಾಗು ಸೋಫ್ ಎಂಬೀ ನಗರಗಳಲ್ಲಿ.
ಸಾರಿರಿ ಇಂತೆಂದು: ‘ಈಜಿಪ್ಟೇ,
ಸ್ಥಿರವಾಗಿ ನಿಲ್ಲು, ಯುದ್ಧ ಸನ್ನದ್ಧವಾಗು,
ಖಡ್ಗ ಆವರಿಸುತ್ತಿದೆ ನಿನ್ನ ಸುತ್ತಮುತ್ತಲು’
15 : ನಿನ್ನ ಎಪಿಸ್ ಬಸವ ಬಿದ್ದು ಹೋದದ್ದೇನು?
ಸರ್ವೇಶ್ವರನೆ ಕೆಡವಲು ಅದು ನಿಲ್ಲಲಾರದೆ
ಹೋಯಿತು!
16 : ಬಹು ಜನರು ಮುಗ್ಗರಿಸಿ ಬಿದ್ದರು
ಹೌದು, ಒಬ್ಬರಿಗೊಬ್ಬರು ತಾಕಿ ಬಿದ್ದರು.
‘ಎದ್ದು ಜನ್ಮಭೂಮಿಗೆ ತೆರಳೋಣ
ಸ್ವಜನರನ್ನು ಸೇರಿಕೊಳ್ಳೋಣ
ಸಂಹರಿಸುವ ಖಡ್ಗದಿಂದ ತಪ್ಪಿಸಿಕೊಳ್ಳೋಣ’
ಎಂದುಕೊಂಡರು.
17 : ಈಜಿಪ್ಟಿನ ಅರಸನು ಗಡಿಬಿಡಿಯ ಮಾತಾಡಿ
ಸದಾವಕಾಶವನ್ನು ಕಳೆದುಕೊಂಡವನೆಂದು
ಕರೆಸಿಕೊಂಡ ವ್ಯಕ್ತಿ.
18 : ಇಗೋ, ಸೇನಾಧೀಶ್ವರ ಸರ್ವೇಶ
ಎಂಬ ಹೆಸರುಳ್ಳ ರಾಜಾಧಿರಾಜನ ನುಡಿ:
‘ಪರ್ವತಗಳನ್ನು ಮೀರುವ ತಾಬೋರ್
ಬೆಟ್ಟದಂತೆ
ಸಮುದ್ರದಿಂದೆದ್ದಿರುವ ಕರ್ಮೆಲ್ ಗುಡ್ಡದಂತೆ
ಉನ್ನತನೊಬ್ಬನು ಬರುವನು, ನನ್ನ
ಜೀವದಾಣೆ.’
19 : ಈಜಿಪ್ಟಿನಲ್ಲಿ ವಾಸಿಸುವ ಯುವತಿಯೇ,
ಸೆರೆಗೆ ಬೇಕಾದ ಸಾಮಗ್ರಿಗಳನ್ನು
ಒದಗಿಸಿಕೊ.
ಮೆಂಫಿಸ್ ನಗರ ಹಾಳಾಗುವುದು
ಅದು ಸುಟ್ಟು ನಿರ್ಜನವಾಗುವುದು.
20 : ಈಜಿಪ್ಟ್ ಅಂದವಾದ ಒಂದು ಕಡಸು
ಅದಕ್ಕೆ ಹತ್ತಿಬಿಟ್ಟಿದೆ ಬಡಗಲಿಂದ ಬಂದ
ಉಣ್ಣೆ.
21 : ಸಂಬಳಕ್ಕಾಗಿ ಈಜಿಪ್ಟ್ ಸೇರಿದ ದಂಡಾಳುಗಳು
ನೋಡಲಿಕ್ಕೆ ಅವರು ಕೊಬ್ಬಿದ ಕರುಗಳು.
ಆದರೂ ಬೆಂಗೊಟ್ಟು ಓಡಿಹೋಗಿರುವರು
ನಿಲ್ಲದೆ,
ವಿಪತ್ಕಾಲ, ದಂಡನೆಯದಿನ, ಬಂದೊದಗಿದೆ
ಅವರಿಗೆ.
22 : ಈಜಿಪ್ಟ್ ದೇಶ ದೌಡಾಯಿಸುವ ಶಬ್ದ
ಸರಿಯುವ ಸರ್ಪದ ಸಪ್ಪಳಕ್ಕೆ ಸಮಾನ.
ಕೊಡಲಿಗಳಿಂದ ಮರಕಡಿಯುವವರಂತೆ
ಶತ್ರುಗಳು ದಂಡೆತ್ತಿ ಬಂದು ಬೀಳುವರು ಆ
ನಾಡಿನ ಮೇಲೆ.
23 : ಮಿಡಿತೆಗಳಿಗಿಂತ ಅಸಂಖ್ಯಾತರಾಗುವವರು
ಕಡಿವರವರು ದಾಟಲಾಗದ ಈಜಿಪ್ಟಿನ ದಟ್ಟ
ಕಾಡನ್ನು
ಸರ್ವೇಶ್ವರನ ನುಡಿ ಇದು.
24 : ಈಜಿಪ್ಟೆಂಬ ಯುವತಿ ಗುರಿಯಾಗುವಳು
ಅವಮಾನಕ್ಕೆ
ಸಿಕ್ಕಿಬೀಳುವಳು ಬಡಗಲವರ ಕೈಗೆ.”
25 : ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ: “ಇಗೋ, ನಾನು ನೋ ಎಂಬ ನಗರದಲ್ಲಿನ ಅಮೋನ್ ದೇವತೆಯನ್ನು, ಫರೋಹನನ್ನು, ಈಜಿಪ್ಟನ್ನು, ಈಜಿಪ್ಟಿನ ದೇವತೆಗಳನ್ನೂ ಅಲ್ಲಿನ ಅರಸರನ್ನೂ ದಂಡಿಸುವೆನು. ಹೌದು, ಫರೋಹನನ್ನೂ ಅವನಲ್ಲಿ ನಂಬಿಕೆ ಇಟ್ಟವರನ್ನೂ ದಂಡಿಸುವೆನು.
26 : ಅವರ ಪ್ರಾಣವನ್ನು ಹುಡುಕುವ ಬಾಬಿಲೋನಿಯದ ಅರಸನಾದ ನೆಬೂಕದ್ನೆಚ್ಚರನ ಮತ್ತು ಅವನ ಸೇವಕರ ಕೈಗೆ ಅವರನ್ನು ಒಪ್ಪಿಸಿ ಬಿಡುವೆನು. ಆ ಬಳಿಕ ಈಜಿಪ್ಟಿನಲ್ಲಿ ಪೂರ್ವ ಕಾಲದ ಹಾಗೆ ಜನರು ವಾಸಿಸುವರು. ಇದು ಸರ್ವೇಶ್ವರನಾದ ನನ್ನ ನುಡಿ.”
27 : “ನನ್ನ ದಾಸ ಯಕೋಬೇ, ಭಯಪಡಬೇಡ
ಇಸ್ರಯೇಲೇ, ಅಂಜಬೇಡ.
ಇಗೋ, ನಾನು ನಿನ್ನನ್ನು ಉದ್ಧರಿಸುವೆನು
ದೂರದೇಶದಿಂದ
ನಿನ್ನ ಸಂತಾನವನ್ನು ರಕ್ಷಿಸುವೆನು ಸೆರೆಹೋದ
ಸೀಮೆಯಿಂದ.
ಯಕೋಬು ಹಾಯಾಗಿ ಹಿಂತಿರುಗಿ
ಬಾಳುವುದು ನೆಮ್ಮದಿಯಿಂದ.
ಭಯಪಡಬೇಡ ನನ್ನ ದಾಸ ಯಕೋಬೇ,
ನಾನಿದ್ದೇನೆ ನಿನ್ನೊಂದಿಗೆ.
ಯಾವ ರಾಷ್ಟ್ರಗಳಿಗೆ ನಿನ್ನನ್ನು ಅಟ್ಟಿದೆನೋ
ಆ ರಾಷ್ಟ್ರಗಳನ್ನೆಲ್ಲ ನಿರ್ಮೂಲ ಮಾಡುವೆನು.
ನಿನ್ನನ್ನಾದರೋ, ನಿರ್ಮೂಲ ಮಾಡೆನು
ಮಿತಿ ಮೀರಿ ಶಿಕ್ಷಿಸೆನು.
ಆದರೆ ಶಿಕ್ಷಿಸದೆ ಬಿಡೆನು.
ಸರ್ವೇಶ್ವರನಾದ ನನ್ನ ನುಡಿ ಇದು.”