1 :
ಈಜಿಪ್ಟ್ ದೇಶದ ಮಿಗ್ದೋಲ್, ತಹಪನೇಸ್, ನೋಫ್ ಎಂಬ ನಗರಗಳಲ್ಲೂ ಮತ್ತು ಪತ್ರೋಸ್ ಪ್ರಾಂತ್ಯದಲ್ಲೂ ವಾಸಮಾಡುತ್ತಿದ್ದ ಯೆಹೂದ್ಯರೆಲ್ಲರ ವಿಷಯವಾಗಿ ಸರ್ವೇಶ್ವರಸ್ವಾಮಿ ಯೆರೆಮೀಯನಿಗೆ ತಿಳಿಯಪಡಿಸಿದ ವಾಣಿ ಇದು:
2 : “ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ: ‘ನಾನು ಜೆರುಸಲೇಮಿಗು ಹಾಗು ಜುದೇಯದ ಎಲ್ಲ ಊರುಗಳಿಗು ಬರಮಾಡಿದ ಕೇಡನ್ನು ನೀವೇ ನೋಡಿದ್ದೀರಿ.
3 : ಅಲ್ಲಿನವರು ತಮಗೂ ನಿಮಗೂ ಮತ್ತು ನಿಮ್ಮ ಪೂರ್ವಜರಿಗೂ ತಿಳಿಯದ ಅನ್ಯ ದೇವತೆಗಳಿಗೆ ಧೂಪಾರತಿ ಎತ್ತಿ ಪೂಜಿಸುವುದಕ್ಕೆ ತವಕಪಟ್ಟರು. ನನ್ನನ್ನು ಕೆಣಕಬೇಕೆಂದೇ ಈ ದುರಾಚಾರವನ್ನು ನಡೆಸಿದರು. ಆದ್ದರಿಂದಲೇ ಆ ಸ್ಥಳಗಳು ಹಾಳಾದವು, ನಿರ್ಜನಪ್ರದೇಶಗಳಾದವು.
4 : ನಾನು ನನ್ನ ದಾಸರಾದ ಪ್ರವಾದಿಗಳನ್ನೆಲ್ಲಾ ಅವರ ಬಳಿಗೆ ತಡಮಾಡದೆ ಕಳುಹಿಸುತ್ತಾ ಬಂದೆ. ‘ಎಚ್ಚರಿಕೆ, ನಾನು ಹೇಸುವ ಈ ಅಸಹ್ಯ ಕಾರ್ಯಗಳನ್ನು ಮಾಡಬೇಡಿ’ ಎಂದು ಪ್ರಕಟಿಸುತ್ತಾ ಬಂದೆ.
5 : ಆದರೂ ಅವರು ಕಿವಿಗೊಟ್ಟು ಕೇಳಲಿಲ್ಲ. ಅನ್ಯ ದೇವತೆಗಳಿಗೆ ಧೂಪಾರತಿ ಎತ್ತುವುದನ್ನು ನಿಲ್ಲಿಸಲಿಲ್ಲ. ತಮ್ಮ ದುರಾಚಾರವನ್ನು ಕೈಬಿಡಲಿಲ್ಲ.
6 : ಆದ ಕಾರಣ, ನನ್ನ ರೌದ್ರ ಕೋಪಾಗ್ನಿ ಸುರಿದು ಜುದೇಯದ ಊರುಗಳಲ್ಲೂ ಜೆರುಸಲೇಮಿನ ಬೀದಿಗಳಲ್ಲೂ ಧಗಧಗಿಸಿತು. ಅವು ಈಗಲೂ ಹಾಳುಪಳಾಗಿವೆ.’
7 : ಹೀಗಿರಲು, ಸೇನಾಧೀಶ್ವರಸ್ವಾಮಿಯೂ ಇಸ್ರಯೇಲಿನ ದೇವರೂ ಆದ ಸರ್ವೇಶ್ವರ ಈಗ ಹೇಳುವುದನ್ನು ಕೇಳಿ: ‘ಈ ದೊಡ್ಡ ಕೇಡನ್ನು ನಿಮಗೆ ನೀವೆ ಬರಮಾಡಿಕೊಳ್ಳುವುದು ಸರಿಯೆ? ಈ ದುರಾಚಾರದ ನಿಮಿತ್ತ ಜುದೇಯದ ಗಂಡಸರು, ಹೆಂಗಸರು, ಮಕ್ಕಳು, ಮೊಲೆಕೂಸುಗಳು ನಿರ್ಮೂಲವಾಗುವರು. ನಿಮ್ಮಲ್ಲಿ ಯಾರೂ ಉಳಿಯರು.
8 : ಪ್ರವಾಸಿಳಾಗಿ ನೀವು ಬಂದಿರುವ ಈಜಿಪ್ಟಿನಲ್ಲಿ ಅನ್ಯದೇವತೆಗಳಿಗೆ ಧೂಪಾರತಿ ಎತ್ತುವ ದುಷ್ಕøತ್ಯವನ್ನು ನಡೆಸುತ್ತಾ ನನ್ನನ್ನು ಕೆಣಕುತ್ತಿದ್ದೀರಿ. ಆದ್ದರಿಂದ ನೀವೂ ನಿರ್ಮೂಲರಾಗಿ ಎಲ್ಲ ಭೂರಾಜ್ಯಗಳ ಶಾಪ, ನಿಂದೆ, ದೂಷಣೆಗಳಿಗೆ ಗುರಿಯಾಗುವಿರಿ.
9 : ನಿಮ್ಮ ಪೂರ್ವಜರು, ಜುದೇಯದ ಅರಸರು, ಅವರ ಪತ್ನಿಯರು, ನೀವು, ನಿಮ್ಮ ಹೆಂಡತಿಯರು, ಇವರೆಲ್ಲರು ಜುದೇಯದ ನಾಡಿನಲ್ಲೂ ಜೆರುಸಲೇಮಿನ ಹಾದಿ ಬೀದಿಗಳಲ್ಲೂ ನಡೆಸಿದ ದುರಾಚಾರಗಳನ್ನು ನೀವು ಮರೆತುಬಿಟ್ಟಿರೋ?
10 : ಅವರು ಇಂದಿನವರೆಗೂ ಪಶ್ಚಾತ್ತಾಪಪಡಲಿಲ್ಲ. ನನಗೆ ಭಯ ಪಡಲಿಲ್ಲ. ನಿಮಗೂ ನಿಮ್ಮ ಪೂರ್ವಜರಿಗೂ ನಾನು ನೇಮಿಸಿದ ನಿಯಮನಿಷ್ಠೆಗಳನ್ನು ಅನುಸರಿಸಿ ನಡೆಯಲಿಲ್ಲ.”
11 : “ಆದಕಾರಣ ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಹೇಳುವುದನ್ನು ಕೇಳಿರಿ: ‘ಜುದೇಯವನ್ನೆಲ್ಲ ನಿರ್ಮೂಲ ಮಾಡುವೆನು. ಕೇಡಿಗಾಗಿಯೇ ನಿಮ್ಮ ಮೇಲೆ ಕಣ್ಣಿಡುವೆನು.
12 : ಈಜಿಪ್ಟಿಗೆ ಹೋಗಿ ಅಲ್ಲಿ ಪ್ರವಾಸಿಸಲು ಹಟ ಹಿಡಿದ ಆ ಜುದೇಯದ ಅಳಿದುಳಿದ ಜನರನ್ನು ನಾಶಮಾಡುವೆನು. ಈಜಿಪ್ಟಿನಲ್ಲೆ ಅವರು ಮಣ್ಣು ಪಾಲಾಗುವರು. ಖಡ್ಗ-ಕ್ಷಾಮಗಳಿಂದ ಅಳಿದು ಹೋಗುವರು. ಚಿಕ್ಕವರು-ದೊಡ್ಡವರು ಎನ್ನದೆ ಖಡ್ಗ-ಕ್ಷಾಮಗಳಿಗೆ ತುತ್ತಾಗಿ, ಅಪವಾದ, ಅಪಹಾಸ್ಯಗಳಿಗೂ ಶಾಪ, ನಿಂದೆ, ದೂಷಣೆಗಳಿಗೂ ಗುರಿಯಾಗುವರು.
13 : ಜೆರುಸಲೇಮಿನವರನ್ನು ಖಡ್ಗ-ಕ್ಷಾಮ-ವ್ಯಾಧಿಗಳಿಂದ ದಂಡಿಸಿದಂತೆ ಈಜಿಪ್ಟಿನಲ್ಲಿ ವಾಸಿಸುವವರನ್ನೂ ದಂಡಿಸುವೆನು.
14 : ಈಜಿಪ್ಟಿಗೆ ಹೋಗಿ ಪ್ರವಾಸಿಸುತ್ತಿರುವ ಆ ಜುದೇಯದ ಅಳಿದುಳಿದ ಜನರು ಸ್ವದೇಶಕ್ಕೆ ಹಿಂದಿರುಗಬೇಕೆಂದು ಎಷ್ಟು ಆಶಿಸಿದರೂ ಅವರಲ್ಲಿ ಯಾರೂ ಅಲ್ಲಿಂದ ತಪ್ಪಿಸಿಕೊಂಡು ಜುದೇಯಕ್ಕೆ ಹಿಂದಿರುಗರು. ಕೆಲವು ನಿರಾಶ್ರಿತರನ್ನು ಬಿಟ್ಟರೆ ಯಾವನೂ ಹಿಂತಿರುಗುವುದಿಲ್ಲ’.”
15 : ಆಗ ತಮ್ಮ ಹೆಂಡತಿಯರು ಅನ್ಯದೇವತೆಗಳಿಗೆ ಧೂಪಾರತಿ ಎತ್ತುತ್ತಿದ್ದರೆಂದು ತಿಳಿದುಕೊಂಡ ಗಂಡಸರು, ಅಲ್ಲೆ ದೊಡ್ಡ ಗುಂಪಾಗಿ ನಿಂತಿದ್ದ ಹೆಂಗಸರು, ಹಾಗೂ ಈಜಿಪ್ಟಿನಲ್ಲೂ ಪತ್ರೋಸಿನಲ್ಲೂ ವಾಸವಾಗಿದ್ದ ಎಲ್ಲ ಜನರು ಯೆರೆಮೀಯನಿಗೆ ಹೀಗೆಂದು ಉತ್ತರಕೊಟ್ಟರು:
16 : “ಸರ್ವೇಶ್ವರನ ಹೆಸರಿನಲ್ಲಿ ನೀನು ನಮಗೆ ನುಡಿದ ಮಾತನ್ನು ನಾವು ಕೇಳಲೊಲ್ಲೆವು.
17 : ನಾವು, ನಮ್ಮ ಪೂರ್ವಜರು, ನಮ್ಮ ಅರಸರು, ಅಧಿಕಾರಿಗಳು ಜುದೇಯದ ಊರುಗಳಲ್ಲಿ ಮತ್ತು ಜೆರುಸಲೇಮಿನ ಬೀದಿಗಳಲ್ಲಿ ಮಾಡಿದಂತೆ ಗಗನದೊಡತಿಯಾದ ದೇವತೆಗೆ ಧೂಪಾರತಿ ಎತ್ತುತ್ತೇವೆ, ಪಾನನೈವೇದ್ಯವನ್ನು ಸುರಿಯುತ್ತೇವೆ. ನಾವು ಬಾಯಿಬಿಟ್ಟು ಹೇಳಿದ ಈ ಮಾತುಗಳನ್ನೆಲ್ಲಾ ಖಂಡಿತವಾಗಿ ನೆರವೇರಿಸುತ್ತೇವೆ. ಏಕೆಂದರೆ ಹಾಗೆ ಮಾಡುತ್ತಿದ್ದಾಗ ನಾವು ಯಾವ ಕೇಡನ್ನೂ ಕಾಣದೆ ಹೊಟ್ಟೆತುಂಬ ಉಂಡು ಸುಖಪಡುತ್ತಿದ್ದೆವು.
18 : ಆ ಗಗನ ದೊಡತಿಗೆ ಧೂಪಾರತಿ ಎತ್ತುವುದನ್ನೂ ಪಾನವನ್ನು ನೈವೇದ್ಯವಾಗಿ ಸುರಿಯುವುದನ್ನೂ ನಿಲ್ಲಿಸಿ ಬಿಟ್ಟಂದಿನಿಂದ ಎಲ್ಲಾ ತರಹದ ಕೊರತೆಗೆ ಗುರಿಯಾಗುತ್ತಿದ್ದೇವೆ, ಖಡ್ಗ-ಕ್ಷಾಮಗಳಿಂದ ನಾಶವಾಗುತ್ತಿದ್ದೇವೆ.”
19 : ಮಹಿಳೆಯರು, “ಗಗನದೊಡತಿಗೆ ಧೂಪಾರತಿ ಎತ್ತಿ, ಪಾನನೈವೇದ್ಯವನ್ನು ಸುರಿಯುತ್ತಿದ್ದಾಗ ನಾವು ಆಕೆಯ ಪೂಜೆಗಾಗಿ ಆಕೆಯ ಆಕಾರದಂಥ ಹೋಳಿಗೆಗಳನ್ನು ಮಾಡಿ ಪಾನದ್ರವ್ಯವನ್ನು ಅರ್ಪಿಸುತ್ತಿದ್ದುದು ನಮ್ಮ ಗಂಡಂದಿರಿಗೆ ಒಪ್ಪಿಗೆಯಾಗಿರಲಿಲ್ಲವೆ?” ಎಂದರು.
20 : ಆಗ ಯೆರೆಮೀಯನು ಆ ಗಂಡಸರಿಗೆ, ಮಹಿಳೆಯರಿಗೆ ಹಾಗು ತನಗೆ ಉತ್ತರಕೊಟ್ಟ ಎಲ್ಲ ಜನರಿಗೆ ಹೀಗೆಂದು ಹೇಳಿದನು:
21 : ನೀವು, ನಿಮ್ಮ ಪೂರ್ವಜರು, ನಿಮ್ಮ ಅರಸರು, ಅಧಿಕಾರಿಗಳು, ಜನಸಾಮಾನ್ಯರು ಮತ್ತು ನೀವೆಲ್ಲರು ಜುದೇಯದ ಊರುಗಳಲ್ಲೂ ಜೆರುಸಲೇಮಿನ ಬೀದಿಗಳಲ್ಲೂ ಎತ್ತಿದ ಧೂಪಾರತಿ ಸರ್ವೇಶ್ವರನ ನೆನಪಿನಲ್ಲಿ ಇದೆ ಅಲ್ಲವೆ? ಅದನ್ನು ಅವರು ಮರೆತುಬಿಟ್ಟಿದ್ದಾರೆಯೇ?
22 : ನೀವು ನಡೆಸಿದ ದುರಾಚಾರಗಳನ್ನು ಹಾಗು ಅಸಹ್ಯ ಕಾರ್ಯಗಳನ್ನು ಸರ್ವೇಶ್ವರ ಇನ್ನು ಸಹಿಸಲಾರದೆ ಹೋದುದರಿಂದಲೇ ನಿಮ್ಮ ನಾಡು ಹಾಳು ಬಿದ್ದಿದೆ. ನಿರ್ಜನವಾಗಿ ಭಯಭೀತಿಗೆ ಎಡೆ ಆಗಿದೆ. ಅದರ ಸ್ಥಿತಿ ಈಗಲೂ ಬದಲಾಗಿಲ್ಲ.
23 : ನೀವು ಸರ್ವೇಶ್ವರಸ್ವಾಮಿಯ ಮಾತನ್ನು ಕೇಳದೆ, ಅವರ ಧರ್ಮಶಾಸ್ತ್ರವನ್ನೂ ನಿಬಂಧನೆಗಳನ್ನೂ ಕಟ್ಟಳೆಗಳನ್ನೂ ಅನುಸರಿಸದೆ, ಪಾಪ ಮಾಡಿ ಅನ್ಯದೇವತೆಗಳಿಗೆ ಧೂಪಾರತಿ ಎತ್ತಿದ್ದರಿಂದಲೇ ಇಂಥಾ ವಿಪತ್ತು ನಿಮಗೆ ಸಂಭವಿಸಿದೆ.
24 : ಇದಲ್ಲದೆ ಯೆರೆಮೀಯನು ಆ ಎಲ್ಲ ಜನರಿಗೆ ಮುಖ್ಯವಾಗಿ ಮಹಿಳೆಯರಿಗೆ, ಹೀಗೆ ಹೇಳಿದನು: “ಈಜಿಪ್ಟಿನಲ್ಲಿರುವ ಯೆಹೂದ್ಯರೇ, ನಿಮ್ಮೆಲ್ಲರಿಗೆ ಸರ್ವೇಶ್ವರ ಹೀಗೆನ್ನುತ್ತಾರೆ –
25 : ‘ಗಗನದೊಡತಿಗೆ ಧೂಪಾರತಿ ಎತ್ತಿ ಪಾನ ನೈವೇದ್ಯವನ್ನು ಸುರಿಯುತ್ತೇವೆ. ಅದಕ್ಕಾಗಿ ಮಾಡಿಕೊಂಡ ಹರಕೆಯನ್ನು ಖಂಡಿತವಾಗಿ ತೀರಿಸುತ್ತೇವೆ ಎಂಬುದಾಗಿ ನೀವೂ ನಿಮ್ಮ ಹೆಂಡತಿಯರೂ ಬಾಯಿಂದ ಪ್ರತಿಜ್ಞೆಮಾಡಿದ್ದೀರಿ, ಕೈಯಿಂದ ನೆರವೇರಿಸಿದ್ದೀರಿ! ಸರಿಸರಿ, ನಿಮ್ಮ ಹರಕೆಗಳನ್ನು ತೀರಿಸಿರಿ, ಅವುಗಳನ್ನು ಬಿಡದೆ ನೆರವೇರಿಸಿರಿ!
26 : ಈಜಿಪ್ಟಿನಲ್ಲಿ ವಾಸವಾಗಿರುವ ಯೆಹೂದ್ಯರೇ, ನೀವೆಲ್ಲರು ಸರ್ವೇಶ್ವರನಾದ ನಾನು ಹೇಳುವ ಮಾತನ್ನು ಕೇಳಿರಿ: ‘ಸರ್ವೇಶ್ವರನಾದ ದೇವರ ಜೀವದಾಣೆ’ ಎಂದು ನನ್ನ ಹೆಸರನ್ನು ಬಾಯಿಂದ ಉಚ್ಚರಿಸಲಿಕ್ಕೆ ಈಜಿಪ್ಟಿನಲ್ಲಿ ಯಾವ ಯೆಹೂದ್ಯನು ಇನ್ನಿರನು ಎಂಬುದಾಗಿ ನನ್ನ ಮಹಾನಾಮದ ಮೇಲೆ ಆಣೆ ಇಟ್ಟಿದ್ದೇನೆ.
27 : ಇಗೋ, ನಿಮಗೆ ಒಳಿತನ್ನು ಅಲ್ಲ, ಕೇಡನ್ನೇ ಬರಮಾಡಬೇಕೆಂದು ನಿಮ್ಮ ವಿಷಯದಲ್ಲಿ ಎಚ್ಚರಗೊಂಡಿದ್ದೇನೆ. ಈಜಿಪ್ಟಿನ ಎಲ್ಲ ಯೆಹೂದ್ಯರು ಖಡ್ಗ-ಕ್ಷಾಮಗಳಿಂದ ನಾಶ ಹೊಂದುತ್ತಾ ನಿರ್ನಾಮವಾಗುವರು.
28 : ಖಡ್ಗಕ್ಕೆ ತಪ್ಪಿಸಿಕೊಂಡ ಕೊಂಚ ಜನರು ಮಾತ್ರ ಈಜಿಪ್ಟಿನಿಂದ ಜುದೇಯಕ್ಕೆ ಹಿಂದಿರುಗುವರು. ಈಜಿಪ್ಟಿಗೆ ಹೋಗಿ ಪ್ರವಾಸಿಸುತ್ತಿರುವ ಅಳಿದು ಉಳಿದ ಯೆಹೂದ್ಯರೆಲ್ಲರು, ನನ್ನ ಮಾತು ದಿಟವಾಯಿತೋ ಅಥವಾ ಅವರ ಮಾತು ದಿಟವಾಯಿತೋ ಎಂದು ಆಗ ತಿಳಿದುಕೊಳ್ಳುವರು.’
29 : ‘ನಾನು ನಿಮ್ಮನ್ನು ಈ ಸ್ಥಳದಲ್ಲೇ ದಂಡಿಸುವೆನು ಎಂಬುದಕ್ಕೆ ಒಂದು ಗುರುತು ಕಾಣುವುದು. ನನ್ನ ಮಾತು ಈಡೇರಿ ನಿಮಗೆ ಕೇಡು ಉಂಟಾಗುವುದು ಎಂಬುದಾಗಿ ಅದರಿಂದಲೇ ನಿಮಗೆ ತಿಳಿದುಬರುವುದು;
30 : ಆ ಗುರುತು ಯಾವುದೆಂದರೆ: ಇಗೋ ಜುದೇಯದ ಅರಸ ಚಿದ್ಕೀಯನನ್ನು ಅವನ ಪ್ರಾಣ ಶತ್ರುವಾದ ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನ ಕೈಗೆ ಒಪ್ಪಿಸಿದಂತೆ ಈಜಿಪ್ಟಿನ ಅರಸನಾದ ಫರೋಹ ಹೊಫ್ರನನ್ನು ಅವನ ಪ್ರಾಣ ಹುಡುಕುವ ಶತ್ರುಗಳ ಕೈಗೆ ಒಪ್ಪಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ’.”