1 : ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ಕಾಲ ಬರಲಿದೆ, ಆಗ ಇಸ್ರಯೇಲಿನ ಸಕಲ ಗೋತ್ರಗಳಿಗೆ ನಾನೇ ದೇವರಾಗಿರುವೆನು. ಅವರು ನನಗೆ ಪ್ರಜೆಯಾಗಿರುವರು.
2 : ಇದು ಸರ್ವೇಶ್ವರನಾದ ನನ್ನ ನುಡಿ. ಅಳಿದುಳಿದಾ ಜನಕ್ಕೆ ಅರಣ್ಯದಲ್ಲಿ ದಯೆ ದೊರೆಯಿತು. ಇಸ್ರಯೇಲ್ ಶಾಂತಿಯನ್ನು ಅರಸುತ್ತಾ ಹೋಗುವಾಗ
3 : ಸರ್ವೇಶ್ವರನಾದ ನಾನು ದೂರದಿಂದ ಅದಕ್ಕೆ ದರ್ಶನಕೊಟ್ಟು: ‘ನಾನು ನಿನ್ನನ್ನು ಪ್ರೀತಿಸುವುದು ಶಾಶ್ವತ ಪ್ರೇಮದಿಂದ. ಈ ಕಾರಣದಿಂದ ನಿನ್ನನ್ನು ಆಕರ್ಷಿಸಿಕೊಂಡಿದ್ದೇನೆ ಅಚಲ ಪ್ರೇಮದಿಂದ.
4 : ಇಸ್ರಯೇಲೆಂಬ ಯುವತಿಯೇ, ನಿನ್ನ ಪಾಳು ಬಿದ್ದ ಪ್ರದೇಶಗಳನ್ನು ನಾನು ಪುನಃ ಕಟ್ಟುವೆನು, ಅವು ಕಟ್ಟಡಗಳಿಂದ ಕೂಡಿರುವುವು. ನೀನು, ಮತ್ತೆ ತಾಳಮೇಳಗಳನ್ನು ತೆಗೆದುಕೊಂಡು ನಲಿದಾಡುವವರ ನಾಟ್ಯಗಳಲ್ಲಿ ಭಾಗವಹಿಸುವೆ.
5 : ಸಮಾರಿಯದ ಗುಡ್ಡಗಳಲ್ಲಿ ಮರಳಿ ದ್ರಾಕ್ಷಾ ತೋಟಗಳನ್ನು ಮಾಡಿಕೊಳ್ಳುವೆ. ನೆಡುವವರೇ ನೆಟ್ಟ ಫಲಗಳನ್ನು ಸವಿಯುವರು.
6 : ಹೌದು, ದಿನ ಬರುವುದು. ಆಗ ಕಾವಲುಗಾರರು ಎಫ್ರಯಿಮಿನ ಗುಡ್ಡಗಳ ಮೇಲೆ ನಿಂತು, ‘ಎದ್ದೇಳಿ, ಹೋಗೋಣ. ಬನ್ನಿ ಸಿಯೋನಿಗೆ, ನಮ್ಮ ದೇವರಾದ ಸರ್ವೇಶ್ವರನ ಸನ್ನಿಧಾನಕ್ಕೆ’ ಎಂದು ಕೂಗಿ ಕರೆನೀಡುವರು.”
7 : ಸರ್ವೇಶ್ವರ ಹೀಗೆನ್ನುತ್ತಾರೆ:
“ಯಕೋಬನನ್ನು ಕುರಿತು ಹರ್ಷಧ್ವನಿಗೈಯಿರಿ
ಜನಾಂಗಗಳಾ ಶಿರೋಮಣಿಗೆ ಜೈಕಾರ
ಮಾಡಿರಿ.
‘ಸರ್ವೇಶ್ವರ ಅಳಿದುಳಿದಾ ಇಸ್ರಯೇಲರನ್ನು
ರಕ್ಷಿಸಿಹನು’
ಎಂದು ಘೋಷಿಸುತ್ತಾ ಸ್ತುತಿಸಿರಿ.
8 : ಅವರನ್ನು ಬರಮಾಡುವೆನು ಉತ್ತರ ದೇಶದಿಂದ
ಅವರನ್ನು ಒಂದುಗೂಡಿಸುವೆನು
ದಿಗಂತಗಳಿಂದ.
ಅವರೊಡನೆ ಕುರುಡರನ್ನೂ ಕುಂಟರನ್ನೂ
ಗರ್ಭಿಣಿಯರನ್ನೂ ದಿನತುಂಬಿದ
ಬಸುರಿಯರನ್ನೂ ಒಟ್ಟಿಗೆ ಕರೆತರುವೆನು.
ಅವರು ದೊಡ್ಡ ಗುಂಪಾಗಿ ಇಲ್ಲಿಗೆ
ಹಿಂದಿರುಗುವರು.
9 : ಕಣ್ಣೀರಿಡುತ್ತಾ ಹೋದವರು ಹಿಂದಿರುಗಿ
ಬರುವರು.
ಪ್ರಾರ್ಥಿಸುತ್ತಾ ಅವರು ಮುನ್ನಡೆಯುವಂತೆ
ಮಾಡುವೆನು
ಎಡವಲಾಗದ ಸಮಮಾರ್ಗದಲ್ಲಿ ಅವರನ್ನು
ನಡೆಸುವೆನು
ತುಂಬಿದ ತೊರೆಯ ಬಳಿಗೆ ಬರಮಾಡುವೆನು.
10 : ರಾಷ್ಟ್ರಗಳೇ, ಸರ್ವೇಶ್ವರನ ವಾಕ್ಯವನ್ನು
ಕೇಳಿರಿ:
ದೂರದ ದ್ವೀಪಗಳಲ್ಲೂ ಅದನ್ನು ಸಾರಿರಿ:
ಇಸ್ರಯೇಲರನ್ನು ಚದುರಿಸಿದಾತ
ಕುರಿಮಂದೆಯನ್ನು ಕಾಯುವ ಕುರುಬನಂತೆ
ಅವರನ್ನು ಕೂಡಿಸಿ ಕಾಪಾಡುವನೆಂದು
ಪ್ರಕಟಿಸಿರಿ.
11 : ಸರ್ವೇಶ್ವರ ಯಕೋಬರ ವಿಮೋಚಕ
ಅವರನ್ನು ಅವರಿಗಿಂತ ಬಲಿಷ್ಠರ ಕೈಯಿಂದ
ಬಿಡಿಸಿದಾತ.
12 : ಅವರು ಬಂದು ಹಾಡುವರು ಸಿಯೋನ್
ಶಿಖರದಲ್ಲಿ
ಬರುವರು ಪ್ರವಾಹ ಪ್ರವಾಹವಾಗಿ
ಧಾನ್ಯ, ದ್ರಾಕ್ಷಾರಸ, ಎಣ್ಣೆ, ಕುರಿ, ಕುರಿಮರಿ,
ಸರ್ವೇಶ್ವರನ ಈ ವರದಾನಗಳನ್ನು
ಅನುಭವಿಸಲಿಕ್ಕಾಗಿ.
ಹದವಾಗಿ ನೀರುಹಾಯಿಸಿದ
ಉದ್ಯಾನವನದಂತೆ ಅವರ ಜೀವನ
ಇನ್ನು ಅವರಿಗಿರದು ವ್ಯಸನ.
13 : ಆಗ ನಾಟ್ಯವಾಡಿ ನಲಿವಳು ಯುವತಿ
ಹರ್ಷಿಸುವರು ಯುವಕರು ಮುದುಕರು
ಜೊತೆಯಾಗಿ.
ಅವರ ದುಃಖವನ್ನು ಸಂತೋಷವಾಗಿಸುವೆನು
ವ್ಯಸನ ತೊರೆದು ಆನಂದಿಸುವಂತೆ ಅವರನ್ನು
ಸಂತೈಸುವೆನು.
14 : ಯಾಜಕರನ್ನು ಮೃಷ್ಟಾನ್ನದಿಂದ
ತೃಪ್ತಿಪಡಿಸುವೆನು
ನನ್ನ ಜನ ಸವಿಯುವರು ಯಥೇಚ್ಛವಾಗಿ ನನ್ನ
ವರದಾನಗಳನ್ನು.
ಇದು ಸರ್ವೇಶ್ವರನಾದ ನನ್ನ ನುಡಿ.”
ಸರ್ವೇಶ್ವರನ ಕರುಣೆ ಇಸ್ರಯೇಲಿನ ಮೇಲೆ
15 : ಸರ್ವೇಶ್ವರ ಹೀಗೆನ್ನುತ್ತಾರೆ:
“ಕೇಳಿ ಬರುತ್ತಿದೆ ರಾಮಾ ಊರಿನೊಳು
ರೋದನ
ಗೋಳಾಟ, ಅಘೋರ ಆಕ್ರಂದನ.
ಕಳೆದುಕೊಂಡ ಮಕ್ಕಳಿಗಾಗಿ ಗೋಳಾಡುತ್ತಿಹಳು
ರಾಖೇಲಳು
ಇನ್ನಿಲ್ಲದ ಅವುಗಳಿಗಾಗಿ ಉಪಶಮನ
ಒಲ್ಲೆನೆನುತಿಹಳು.”
16 : ಸರ್ವೇಶ್ವರ ಹೀಗೆನ್ನುತ್ತಾರೆ:
“ನಿಲ್ಲಿಸು ನಿನ್ನ ಗೋಳಾಟವನ್ನು
ಒರಸು ನಿನ್ನ ಕಣ್ಗಳಿಂದ ನೀರನ್ನು.
ನಿನ್ನ ಪ್ರಯಾಸ ಸಾರ್ಥಕವಾಗುವುದು
ಶತ್ರುವಿನ ದೇಶದಿಂದ ನಿನ್ನ ಮಕ್ಕಳು
ಹಿಂದಿರುಗುವರು.
ಸರ್ವೇಶ್ವರನಾದ ನನ್ನ ನುಡಿ ಇದು.”
17 : ಸರ್ವೇಶ್ವರ ಇಂತೆನ್ನುತ್ತಾರೆ:
“ನಿನ್ನ ಭವಿಷ್ಯದ ಬಗ್ಗೆ ಭರವಸೆಯಿಂದಿರು
ನಿನ್ನ ಮಕ್ಕಳು ಹಿಂದಿರುಗಿ ಸ್ವದೇಶ ಸೇರುವರು.
18 : ಎಫ್ರಯಿಮನ ಈ ಪ್ರಲಾಪ ನನ್ನ ಕಿವಿಗೆ ಬಿದ್ದಿದೆ:
‘ನೀನು ನನಗೆ ಶಿಕ್ಷೆ ವಿಧಿಸಿದೆ
ಪಳಗದ ಹೋರಿಯಂತೆ ನಾನು ಆ ಶಿಕ್ಷೆಯನ್ನು
ಅನುಭವಿಸಿದೆ.
ನೀನು ನನ್ನನ್ನು ತಿರುಗಿಸು,
ನೀ ತಿರುಗಿಸಿದ ಹಾಗೆ ನಾನು ತಿರುಗುವೆ.
ನೀನೆ ನನ್ನ ದೇವರಾದ ಸರ್ವೇಶ್ವರನಲ್ಲವೆ?
19 : ತಿರುಗಿಸಲ್ಪಟ್ಟ ಮೇಲೆಯೆ ನಾನು ಪಶ್ಚಾತ್ತಾಪ
ಪಟ್ಟೆ
ತಿಳುವಳಿಕೆ ಹೊಂದಿದ ಮೇಲೆಯೆ
ಕೆನ್ನೆಗೆ ಹಾಕಿಕೊಂಡೆ
ನನ್ನ ಯೌವನ ನಡತೆ ನನಗೆ ಅವಮಾನದ
ಹೊರೆ
ಈ ಕಾರಣ ಲಜ್ಜೆಗೊಂಡೆ.
ಹೌದು, ನಾಚಿಕೆಯಿಂದ ತಲೆತಗ್ಗಿಸಿದೆ’.”
20 : ಸರ್ವೇಶ್ವರ ಹೀಗೆನ್ನುತ್ತಾರೆ:
“ಎಫ್ರಯಿಮ್, ನನಗೆ ಪ್ರಿಯ ಪುತ್ರನಲ್ಲವೆ?
ನನ್ನ ಮುದ್ದು ಮಗನಲ್ಲವೆ?
ಅವನ ವಿರುದ್ಧ ನಾನು ಪದೇ ಪದೇ
ಮಾತಾಡಿದ್ದರೂ
ನನ್ನ ಜ್ಞಾಪಕಕ್ಕೆ ಬರುತ್ತಲೇ ಇರುತ್ತಾನೆ.
ಅವನಿಗಾಗಿ ನನ್ನ ಕರುಳು ಮರುಗುತ್ತದೆ.
ಅವನನ್ನು ನಿಶ್ಚಯವಾಗಿ ಕರುಣಿಸುವೆನು.”
21 : “ದಾರಿತೋರುವ ಕಂಬಗಳನ್ನೂ
ಕೈಮರಗಳನ್ನೂ ನಿಲ್ಲಿಸಿಕೊ
ನೀನು ಯಾವ ಮಾರ್ಗವಾಗಿ ಹೋದೆಯೋ
ಆ ಮಾರ್ಗವನ್ನು ನೆನೆಸಿಕೊ.
ಇಸ್ರಯೇಲೆಂಬ ಯುವತಿಯೇ ಹಿಂದಿರುಗು
ಈ ನಿನ್ನ ನಗರಕ್ಕೆ ಹಿಂದಿರುಗು.
22 : “ನಂಬಿಕೆದ್ರೋಹಿಯಾದ ಕುವರಿಯೇ,
ಎಂದಿನವರೆಗೆ ಅತ್ತಿತ್ತ ಅಲೆದಾಡುತ್ತಿರುವೆ?
ಸರ್ವೇಶ್ವರನಾದ ನಾನು
ಅಪೂರ್ವವಾದುದನ್ನು ಉಂಟಾಗಿಸಿರುವೆ:
ಇಗೋ, ಸ್ತ್ರೀಯಾದವಳು ತನ್ನ ಪುರುಷನನ್ನು
ಕಾಪಾಡುವಳು.”
23 : ದೈವಪ್ರಜೆಯ ಮುಂದಿನ ಸೌಭಾಗ್ಯ
ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರನ ನುಡಿ ಹೀಗಿದೆ: “ನಾನು ನನ್ನ ಜನರ ಗುಲಾಮಗಿರಿಯನ್ನು ನೀಗಿಸುವೆನು. ಆಗ, ‘ನ್ಯಾಯದ ನಿವಾಸವೇ, ಪರಿಶುದ್ಧ ಪರ್ವತವೇ, ಸರ್ವೇಶ್ವರ ನಿನ್ನನ್ನು ಆಶೀರ್ವದಿಸಲಿ’ ಎಂಬ ಮಾತು ಜುದೇಯ ನಾಡಿನಲ್ಲೂ ಅದರ ನಗರಗಳಲ್ಲೂ ಮತ್ತೆ ಕೇಳಿಬರುವುದು.
24 : ಜುದೇಯದಲ್ಲೂ ಅದರ ನಗರಗಳಲ್ಲೂ ಜನರು ಒಂದುಗೂಡಿ ಬಾಳುವರು. ವ್ಯವಸಾಯಗಾರರು, ಮುಂದೆ ಮೇಯಿಸುವವರು ಹಾಗೂ ಯೆಹೂದ್ಯರೆಲ್ಲರು ಒಟ್ಟಿಗೆ ವಾಸಿಸುವರು.
25 : ಬಳಲಿ ಬೆಂಡಾದವರೆಲ್ಲರನ್ನು ತಣಿಸುವೆನು ಹಾಗೂ ತೃಪ್ತಿಪಡಿಸುವೆನು.”
26 : ‘ಆಗ ನಾನು ನೋಡಿದೆ ಎಚ್ಚೆತ್ತು
ನನ್ನ ಕನಸು ನನಗೆ ಮನೋಹರವಾಗಿತ್ತು.’
27 : “ಸರ್ವೇಶ್ವರನಾದ ನಾನು ನಿಮಗೆ ಹೇಳುವುದೇನೆಂದರೆ: ಇಗೋ, ಇಸ್ರಯೇಲ್ ಮತ್ತು ಜುದೇಯ ಕ್ಷೇತ್ರಗಳಲ್ಲಿ ನಾನು ಮನುಷ್ಯರನ್ನೂ ಪ್ರಾಣಿಗಳನ್ನೂ ಬಿತ್ತಿ ಭರ್ತಿ ಮಾಡುವ ದಿನಗಳು ಬರುವುವು.
28 : ಅವರನ್ನು ಕೀಳಲು ಕೆಡವಲು, ಅಳಿಸಲು ಹಾಳುಮಾಡಲು, ಈ ಮೊದಲು ಎಚ್ಚರ ವಹಿಸಿದ ಹಾಗೆಯೆ ಇನ್ನು ಮುಂದೆ ಅವರನ್ನು ಕಟ್ಟಲು ಹಾಗು ನೆಡಲು ಎಚ್ಚರವಹಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ.
29 : ಆ ಕಾಲ ಬಂದಾಗ ಜನರು, ‘ಹೆತ್ತವರು ಹುಳಿದ್ರಾಕ್ಷೆಯನ್ನು ತಿಂದರು. ಆದರೆ ಮಕ್ಕಳ ಹಲ್ಲುಗಳು ಚಳಿತು ಹೋದವು’ ಎಂದು ಹೇಳರು.
30 : ಏಕೆಂದರೆ ಸಾಯತಕ್ಕವನು ತನ್ನ ಸ್ವಂತ ದೋಷಕ್ಕಾಗಿಯೇ ಸಾಯುವನು. ಹುಳಿದ್ರಾಕ್ಷೆಯನ್ನು ತಿಂದವನ ಹಲ್ಲೇ ಚಳಿತು ಹೋಗುವುದು.”
31 : ಸರ್ವೇಶ್ವರ ಹೇಳುವುದನ್ನು ಕೇಳಿ: “ನಾನು ಇಸ್ರಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವುವು.
32 : ಈ ಒಡಂಬಡಿಕೆ, ನಾನು ಅವರ ಪೂರ್ವಜರನ್ನು ಕೈ ಹಿಡಿದು ಈಜಿಪ್ಟಿನಿಂದ ಕರೆದು ತಂದಾಗ ಅವರೊಡನೆ ಮಾಡಿಕೊಂಡ ಒಡಂಬಡಿಕೆ ಅಂಥದಾಗಿ ಇರುವುದಿಲ್ಲ. ನಾನು ಅವರಿಗೆ ಯಜಮಾನನಾಗಿ ಇದ್ದರೂ ಆ ನನ್ನ ಒಡಂಬಡಿಕೆಯನ್ನು ಅವರು ಮೀರಿನಡೆದರು.
33 : ಸರ್ವೇಶ್ವರನಾದ ನಾನು ಹೇಳುತ್ತೇನೆ ಕೇಳಿ: ಆ ದಿನಗಳು ಬಂದಮೇಲೆ ನಾನು ಇಸ್ರಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆ ಹೀಗಿರುವುದು - ನನ್ನ ಧರ್ಮಶಾಸ್ತ್ರವನ್ನು ಅವರ ಅಂತರಂಗದಲ್ಲಿ ಇಡುವೆನು. ಅವರ ಹೃದಯದ ಹಲಗೆಯ ಮೇಲೆ ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.
34 : ಒಬ್ಬನು ತನ್ನ ನೆರೆಹೊರೆಯವರನ್ನು ಕುರಿತು ಅಥವಾ ಅಣ್ಣ ತಮ್ಮಂದಿರನ್ನು ಕುರಿತು, ‘ಸರ್ವೇಶ್ವರನನ್ನು ಅರಿತುಕೊ’ ಎಂದು ಬೋಧಿಸಬೇಕಾಗಿರುವುದಿಲ್ಲ. ಚಿಕ್ಕವರಿಂದ ಮೊದಲ್ಗೊಂಡು ದೊಡ್ಡವರ ತನಕ ಎಲ್ಲರು ನನ್ನನ್ನು ಅರಿತುಕೊಳ್ಳುವರು. ನಾನು ಅವರ ಅಪರಾಧವನ್ನು ಕ್ಷಮಿಸಿ, ಅವರ ಪಾಪವನ್ನು ಎಂದಿಗೂ ನೆನಪಿಗೆ ತಂದುಕೊಳ್ಳುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ.”
35 :
ಸರ್ವೇಶ್ವರನು, ಹಗಲಲ್ಲಿ ಬೆಳಕು ನೀಡಲು
ಸೂರ್ಯನನ್ನು ನೇಮಿಸಿದಾತ.
ಇರುಳಲ್ಲಿ ಬೆಳಕು ನೀಡಲು
ಚಂದ್ರ ನಕ್ಷತ್ರಗಳನ್ನು ಏರ್ಪಡಿಸಿದಾತ.
ಅಲೆಗಳು ಭೋರ್ಗರೆವಷ್ಟು ಸಮುದ್ರವನ್ನು
ಕೆರಳಿಸುವಾತ
‘ಸೇನಾಧೀಶ್ವರ ಸರ್ವೇಶ್ವರ’ ಎಂಬ
ನಾಮಧೇಯದಿಂದ ಪ್ರಸಿದ್ಧನಾತ.
36 : ಆತನ ಮಾತು ಇವು-
ಈ ಪ್ರಕೃತಿ ನಿಯಮ ನನ್ನ ಪರಾಂಬರಿಕೆಯಲ್ಲಿ
ಇರುವತನಕ
ಒಂದು ರಾಷ್ಟ್ರವಾಗಿ ಉಳಿವುದು ಇಸ್ರಯೇಲ್
ಸಂತಾನ.
37 : ಮೇಲಿನ ಆಕಾಶ ಮಂಡಲವನ್ನು
ಅಳೆಯಬಹುದಾದರೆ
ಕೆಳಗಿನ ಭೂಮಂಡಲದ ವಿಸ್ತಾರವನ್ನು
ಪರೀಕ್ಷಿಸಬಹುದಾದರೆ
ಆಗ ಮಾತ್ರ ಅದರ ದುಷ್ಕøತ್ಯಗಳನ್ನು
ಮುನ್ನಿಟ್ಟು
ಇಸ್ರಯೇಲ್ ವಂಶವನ್ನು ನಾನು ನಿರಾಕರಿಸಿ
ಬಿಡಲು ಸಾಧ್ಯ.
38 :
ಸರ್ವೇಶ್ವರ ಹೀಗೆನ್ನುತ್ತಾರೆ: “ಇಗೋ ಕಾಲ ಬರಲಿದೆ. ಆಗ ಸರ್ವೇಶ್ವರನಾದ ನನ್ನ ಮಹಿಮೆಗಾಗಿ ಈ ನಗರವನ್ನು ಹನನೇಲನ ಗೋಪುರದಿಂದ ಮೂಲೆ ಬಾಗಿಲವರೆಗೆ ವಿಸ್ತರಿಸಲಾಗುವುದು.
39 : ಅದರ ಎಲ್ಲೆ ಇನ್ನು ಮೇಲೆ ಗಾರೇಬ್ ಗುಡ್ಡದತನಕ ನೆಟ್ಟಗೆ ಹೋಗಿ ಗೋಯದ ಕಡೆಗೆ ತಿರುಗುವುದು.
40 : ಹಣ ಹೂಣುವ, ಬೂದಿತುಂಬುವ ಕಣಿವೆಯಿಂದ, ಕಿದ್ರೋನ್ ಹಳ್ಳ, ಪೂರ್ವದಿಕ್ಕಿನ ಕುದುರೆ ಬಾಗಿಲ ಮೂಲೆ, ಇವುಗಳವರೆಗಿರುವ ಪ್ರದೇಶವೆಲ್ಲ ಸರ್ವೇಶ್ವರನಿಗೆ ಪರಿಶುದ್ಧ ಸ್ಥಾನವಾಗುವುದು. ಈ ನಗರ ಇನ್ನೆಂದಿಗೂ ನಿರ್ಮೂಲವಾಗದು, ನಾಶವಾಗದು.”