1 : ಇಸ್ರಯೇಲಿನ ವಿಶ್ವಾಸಘಾತ
ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ಗಂಡನು ತ್ಯಜಿಸಿದವಳು, ಅವನಿಂದ ಹೊರಟು ಮತ್ತೊಬ್ಬನವಳಾದ ಮೇಲೆ, ಅವಳನ್ನು ಆ ಗಂಡನು ಮತ್ತೆ ಸೇರಿಸಿಕೊಳ್ಳುತ್ತಾನೆಯೆ? ಸೇರಿಸಿಕೊಂಡರೆ ಆ ನಾಡು ಕೆಟ್ಟು ಅಪವಿತ್ರವಾಗಿ ಹೋಗುವುದಿಲ್ಲವೇ? ಹೀಗಿರಲು ಓ ಇಸ್ರಯೇಲ್, ಬಹು ಮಂದಿ ಮಿಂಡರೊಡನೆ ವೇಶ್ಯವಾಟಿಕೆ ನಡೆಸಿದ ನೀನು ನನ್ನ ಬಳಿಗೆ ಬರುವೆಯಾ?
2 : ಕಣ್ಣೆತ್ತಿ ಬೋಳು ಬೆಟ್ಟಗಳನ್ನು ನೋಡು, ಯಾವುದರಲ್ಲಿ ತಾನೆ ನೀನು ವೇಶ್ಯೆಯಾಗಿ ವರ್ತಿಸಲಿಲ್ಲ? ಅರಬೀಯನು ಅಡವಿಯಲ್ಲಿ ಹೊಂಚು ಹಾಕುವ ಹಾಗೆ ನೀನು ದಾರಿಯ ಮಗ್ಗುಲಲ್ಲಿ ಅವರಿಗಾಗಿ ಹೊಂಚುಹಾಕುತ್ತಾ ಕುಳಿತಿದ್ದೆ. ನಿನ್ನ ವೇಶ್ಯೆತನದಿಂದಲೂ ನಿನ್ನ ಕೆಟ್ಟತನದಿಂದಲೂ ನಾಡನ್ನು ಅಪವಿತ್ರ ಮಾಡಿರುವೆ.
3 : ಆದಕಾರಣವೇ ಹದಮಳೆಗೆ ಅಡ್ಡಿಯಾಯಿತು. ವಸಂತಕಾಲದ ಮಳೆ ಬರದೆಹೋಯಿತು. ಇನ್ನೂ ನೀನು ವೇಶ್ಯೆ ಮುಖದವಳು, ಲಜ್ಜೆಗೆಟ್ಟವಳು!
4 : “ಈಗತಾನೆ, ‘ನೀವೆ ನನ್ನ ತಂದೆ, ನನ್ನ ಯೌವನದ ಆಪ್ತರು’ ಎಂದು ಕರೆಯುತ್ತಿರುವೆ
5 : ನಿತ್ಯಕ್ಕೂ ಕೋಪ ಮಾಡಬೇಡಿ; ಕೊನೆಯತನಕ ಸಿಟ್ಟುಗೊಳ್ಳಬೇಡಿ’ ಎಂದು ಕೋರುತ್ತಿರುವೆ. ಹೀಗೆಲ್ಲ ನೀನು ಹೇಳುತ್ತಿರುವೆಯಾದರೂ ನಿನ್ನಿಂದ ಸಾಧ್ಯವಾಗುವಷ್ಟು ದುಷ್ಕøತ್ಯಗಳನ್ನು ಮಾಡಿ ಕೃತಾರ್ಥಳಾಗಿರುವೆ!”
7 : ಅವಳು ಇಂಥವುಗಳನ್ನೆಲ್ಲ ಮಾಡಿದ ಮೇಲೆ ನನ್ನ ಬಳಿಗೆ ಮರಳಿ ಬಂದೇ ಬರುವಳು ಎಂದುಕೊಂಡಿದ್ದೆ. ಆದರೆ ಬರಲಿಲ್ಲ. ಆಗ ಜುದೇಯವೆಂಬ ದ್ರೋಹಿಯಾದ ಅವಳ ತಂಗಿ ಇದನ್ನು ನೋಡಿದಳು.
8 : ಭ್ರಷ್ಟಳಾದ ಇಸ್ರಯೇಲ್ ನನಗೆ ವಿಮುಖಳಾಗಿ ವ್ಯಭಿಚಾರಿಣಿಯಂತೆ ವರ್ತಿಸಿದ ಕಾರಣದಿಂದಲೆ, ನಾನು ಅವಳನ್ನು ನಿರಾಕರಿಸಿ ವಿವಾಹ ವಿಚ್ಛೇದನ ಪತ್ರ ಕೊಟ್ಟದ್ದನ್ನು ಜುದೇಯವೆಂಬ ದ್ರೋಹಿಯಾದ ಅವಳ ತಂಗಿ ನೋಡಿಯೂ ಅಂಜದೆ ಹೋದಳು. ತಾನೂ ಹೋಗಿ ವೇಶ್ಯೆಯಂತೆ ವರ್ತಿಸಿದಳು.
9 : ಕಲ್ಲು ಮರಗಳಿಗೆ ಆರಾಧನೆ ಮಾಡಿ ವ್ಯಭಿಚಾರಿಣಿಯಾದಳು. ಇದೆಲ್ಲ ಲಘುವೆಂದು ಭಾವಿಸಿ ತನ್ನ ವೇಶ್ಯಾ ವರ್ತನೆಯಿಂದ ನಾಡನ್ನು ಅಪವಿತ್ರಪಡಿಸಿದಳು.
10 : ಇಸ್ರಯೇಲಳಿಗೆ ಇಷ್ಟು ದಂಡನೆ ಆದರೂ ಜುದೇಯವೆಂಬ ದ್ರೋಹಿಯಾದ ಅವಳ ತಂಗಿ ನನ್ನ ಕಡೆಗೆ ಪೂರ್ಣಮನಸ್ಸಿನಿಂದ ತಿರುಗಿಕೊಳ್ಳಲಿಲ್ಲ. ತಿರುಗಿಕೊಂಡಂತೆ ನಟಿಸಿದಳು ಮಾತ್ರ. ಇದು ಸರ್ವೇಶ್ವರನಾದ ನನ್ನ ನುಡಿ.”
11 : ಬಳಿಕ ಸರ್ವೇಶ್ವರಸ್ವಾಮಿ ನನಗೆ ಇಂತೆಂದರು-“ಭ್ರಷ್ಟಳಾದ ಇಸ್ರಯೇಲ್ ದ್ರೋಹಿಯಾದ ಜುದೇಯಳಿಗಿಂತ ಶಿಷ್ಟಳಾಗಿ ಕಂಡು ಬಂದಿದ್ದಾಳೆ.
12 : ನೀನು ಉತ್ತರ ದಿಕ್ಕಿಗೆ ಹೋಗಿ ಆ ಇಸ್ರಯೇಲಿಗೆ ಈ ಸಂದೇಶವನ್ನು ಸಾರು-ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ; ಭ್ರಷ್ಟಳಾದ ಇಸ್ರಯೇಲೇ, ಹಿಂದಿರುಗು; ನಾನು ಅಷ್ಟು ಕೋಪ ಮುಖದಿಂದ ನಿನ್ನನ್ನು ನೋಡುವುದಿಲ್ಲ. ನಾನು ಕರುಣಾಮೂರ್ತಿ, ನಿತ್ಯಕೋಪಿಯಲ್ಲ.
13 : ನೀನು ನಿನ್ನ ತಪ್ಪನ್ನು ಮಾತ್ರ ಒಪ್ಪಿಕೊ. ಕಂಡ ಕಡೆಯೆಲ್ಲ ಅಲೆದಾಡಿ, ಹುಲುಸಾಗಿ ಬೆಳೆದ ಪ್ರತಿಯೊಂದು ಮರದ ಕೆಳಗೆ ಅನ್ಯದೇವರುಗಳನ್ನು ಸೇರಿ, ನನ್ನ ಮಾತುಗಳನ್ನು ಕೇಳದೆ, ನಿನ್ನ ದೇವರಾದ ಸರ್ವೇಶ್ವರ ಎಂಬ ನನಗೇ ದ್ರೋಹ ಮಾಡಿರುವೆ ಎಂಬುದನ್ನು ಒಪ್ಪಿಕೊ.
14 : “ಭ್ರಷ್ಟರಾದ ಜನರೇ, ನನಗೆ ಅಭಿಮುಖರಾಗಿರಿ, ನಾನು ನಿಮಗೆ ಅಧಿಪತಿ. ನಿಮ್ಮಲ್ಲಿ ಒಂದು ಪಟ್ಟಣಕ್ಕೆ ಒಬ್ಬನಂತೆ, ಗೋತ್ರಕ್ಕೆ ಇಬ್ಬರಂತೆ ಆರಿಸಿ ಸಿಯೋನಿಗೆ ಕರೆತರುವೆನು.
15 : ಇದಲ್ಲದೆ ನನ್ನ ಮನಸ್ಸು ಒಪ್ಪುವ ಪಾಲಕರನ್ನು ನಿಮಗೆ ಕೊಡುವೆನು. ಅವರು ನಿಮ್ಮನ್ನು ಜ್ಞಾನವಿವೇಕಗಳಿಂದ ಪೋಷಿಸುವರು.
16 : ನೀವು ನಾಡಿನಲ್ಲಿ ಹೆಚ್ಚಿ ಅಭಿವೃದ್ಧಿಯಾದಾಗ, ‘ಸರ್ವೇಶ್ವರನ ಒಡಂಬಡಿಕೆಯ ಮಂಜೂಷವೆಲ್ಲಿ?’ ಎಂದು ಪ್ರಸ್ತಾಪಿಸುವಂತಿಲ್ಲ. ಅದು ಜ್ಞಾಪಕಕ್ಕೆ ಬರುವುದಿಲ್ಲ, ಯಾರೂ ಅದನ್ನು ಸ್ಮರಿಸುವುದಿಲ್ಲ. ಅದು ಇಲ್ಲವಲ್ಲಾ ಎಂದು ದುಃಖಿಸುವುದಿಲ್ಲ. ಹೊಸದೊಂದನ್ನು ಕಲ್ಪಿಸಿಕೊಳ್ಳುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ.
17 : ಆ ಕಾಲ ಬಂದಾಗ ಜೆರುಸಲೇಮನ್ನೇ ‘ಸರ್ವೇಶ್ವರನ ಸಿಂಹಾಸನ’ ಎಂದು ಕರೆಯುವರು. ನನ್ನ ನಾಮಮಹತ್ವದ ಸ್ಥಾನವಾದ ಜೆರುಸಲೇಮಿಗೆ ಸಕಲ ರಾಷ್ಟ್ರಗಳವರು ನೆರೆದುಬರುವರು. ಆಮೇಲೆ ತಮ್ಮ ದುಷ್ಟ ಹೃದಯದ ನಿಮಿತ್ತ ಹಟಮಾರಿಗಳಂತೆ ನಡೆಯಲಾರರು.
18 : ಆ ಕಾಲದಲ್ಲಿ ಜುದೇಯ ವಂಶವು ಇಸ್ರಯೇಲ್ ವಂಶದೊಡನೆ ಜೊತೆಯಾಗಿ ಬಾಳುವುದು. ಈ ಎರಡು ವಂಶಗಳೂ ಉತ್ತರ ಪ್ರಾಂತ್ಯವನ್ನು ಬಿಟ್ಟು ನಾನು ನಿಮ್ಮ ಪೂರ್ವಜರಿಗೆ ಬಾಧ್ಯವಾಗಿ ಕೊಟ್ಟ ನಾಡಿಗೆ ಬರುವುವು.”
19 : ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ಎಲೈ ಇಸ್ರಯೇಲ್, ನಾನು ಎಷ್ಟೋ ಆದರದಿಂದ ನಿನ್ನನ್ನು ನನ್ನ ಪುತ್ರನೆಂದು ಭಾವಿಸಿ, ನಿನಗೆ ಮನೋಹರವಾದ ನಾಡನ್ನು, ಅಂದರೆ, ಸಮಸ್ತ ರಾಷ್ಟ್ರಗಳಲ್ಲಿ ರಮಣೀಯವಾದ ಸೊತ್ತನ್ನು ಕೊಡಬೇಕು ಎಂದುಕೊಂಡಿದ್ದೆ. ನೀನು ನನ್ನನ್ನು ‘ತಂದೆ’ ಎಂದು ಸನ್ಮಾನಿಸಿ, ನನ್ನನ್ನು ತಪ್ಪದೆ ಹಿಂಬಾಲಿಸಿ ಬರುವೆಯೆಂದಿದ್ದೆ.
20 : “ಆದರೆ ಓ ಇಸ್ರಯೇಲ್ ವಂಶಜರೇ, ಒಬ್ಬ ಹೆಂಗಸು ಪತಿದ್ರೋಹ ಮಾಡಿದಂತೆ ನೀವು ನನಗೆ ದ್ರೋಹಮಾಡಿರುವುದು ನಿಶ್ಚಯ. ಇದು ಸರ್ವೇಶ್ವರನಾದ ನನ್ನ ನುಡಿ.”
21 : ಇಗೋ ಕೇಳಿ, ಬೋಳು ಗುಡ್ಡಗಳ ಮೇಲಿಂದ ಒಂದು ಶಬ್ದ: ‘ನಾವು ಡೊಂಕುದಾರಿಯನ್ನು ಹಿಡಿದಿದ್ದೇವೆ. ನಮ್ಮ ದೇವರಾದ ಸರ್ವೇಶ್ವರಸ್ವಾಮಿಯನ್ನು ಮರೆತುಬಿಟ್ಟಿದ್ದೇವೆ’ ಎಂದು ಇಸ್ರಯೇಲರು ಕಣ್ಣೀರು ಸುರಿಸುತ್ತಾ ದೇವರ ಕೃಪೆಯನ್ನು ಬೇಡುತ್ತಿದ್ದಾರೆ.
22 : ಸರ್ವೇಶ್ವರ: “ಭ್ರಷ್ಟರಾದ ಜನರೇ, ಹಿಂದಿರುಗಿ ಬನ್ನಿ, ನಾನು ನಿಮ್ಮ ಭ್ರಷ್ಟತನವನ್ನು ಪರಿಹರಿಸುವೆನು.”
23 : ಜನರು: “ಇಗೋ, ನಿಮಗೆ ಅಭಿಮುಖರಾಗಿ ಬಂದಿದ್ದೇವೆ. ನೀವೇ ನಮ್ಮ ಸರ್ವೇಶ್ವರ, ನಮ್ಮ ದೇವರು. ನಿಶ್ಚಯವಾಗಿ ಬೆಟ್ಟಗುಡ್ಡಗಳಿಂದಲೂ ಜಾತ್ರೆಜಂಗುಳಿಯಿಂದಲೂ ನಮಗೆ ಮೋಸವಾಯಿತು. ಇಸ್ರಯೇಲಿನ ಉದ್ಧಾರ ಇರುವುದು ನಮ್ಮ ದೇವರಾದ ಸರ್ವೇಶ್ವರಸ್ವಾಮಿಯ ಕೈಯಲ್ಲೇ, ಇದು ಸತ್ಯಕ್ಕೂ ಸತ್ಯ.
24 : ನಾವು ಚಿಕ್ಕಂದಿನಿಂದ ನೋಡಿರುವಂತೆ ನಮ್ಮ ಪಿತೃಗಳು ದುಡಿದದ್ದನ್ನೂ ಅವರ ದನಕುರಿಗಳನ್ನೂ ಅವರ ಗಂಡುಹೆಣ್ಣುಮಕ್ಕಳನ್ನೂ ಬಾಳ್ ದೇವತೆ ಕಬಳಿಸುತ್ತಾ ಬಂದಿದೆ.
25 : ನಾವೇ ತಂದುಕೊಂಡ ಅವಮಾನವೆಂಬ ಹಾಸಿಗೆಯಲ್ಲಿ ಬಿದ್ದಿರೋಣ. ನಾಚಿಕೆಯೆಂಬ ಹೊದಿಕೆ ನಮ್ಮನ್ನು ಮುಚ್ಚಿ ಬಿಡಲಿ. ಚಿಕ್ಕತನದಿಂದ ಈವರೆಗು ನಾವೂ ನಮ್ಮ ಪೂರ್ವಜರೂ ನಮ್ಮ ದೇವರಾದ ಸರ್ವೇಶ್ವರಸ್ವಾಮಿಗೆ ಇದಿರಾಗಿ ಪಾಪಮಾಡುತ್ತಾ ಬಂದಿರುವುದು ನಿಶ್ಚಯ. ಆ ಸ್ವಾಮಿಯ ಮಾತನ್ನು ಕೇಳದೆ ಹೋದೆವಲ್ಲಾ!” ಎಂದು ಮೊರೆಯಿಡುತ್ತಿದ್ದಾರೆ.