1 :
ಸರ್ವೇಶ್ವರಸ್ವಾಮಿ ನನಗೆ ಹೀಗೆ ಎಂದು ಆಜ್ಞೆಮಾಡಿದರು: “ನೀನು ಜುದೇಯದ ಅರಸನ ಮನೆಗೆ ಹೋಗು. ಅಲ್ಲಿ ಈ ಮಾತನ್ನು ಹೇಳು:
2 : ‘ದಾವೀದನ ಸಿಂಹಾಸನಾರೂಢನಾದ ಜುದೇಯದ ಅರಸನೇ, ಸರ್ವೇಶ್ವರನ ಮಾತನ್ನು ಕೇಳು; ನಿನ್ನ ಪರಿವಾರದವರೂ ಈ ಬಾಗಿಲುಗಳಲ್ಲಿ ಪ್ರವೇಶಿಸುವ ನಿನ್ನ ಪ್ರಜೆಗಳೂ ಕೇಳಲಿ;
3 : ಸರ್ವೇಶ್ವರನ ಸಂದೇಶ ಇದು: ನ್ಯಾಯ ನೀತಿಯನ್ನು ಆಚರಿಸಿರಿ. ವಂಚಿತನಾದವನನ್ನು ದೋಚಿಕೊಳ್ಳುವವನ ಕೈಯಿಂದ ಬಿಡಿಸಿರಿ. ಪರದೇಶೀಯರಿಗೆ, ಅನಾಥರಿಗೆ, ವಿಧವೆಯರಿಗೆ ಅನ್ಯಾಯಮಾಡಬೇಡಿ, ಅವರನ್ನು ಹಿಂಸಿಸಬೇಡಿ. ನಿರಪರಾಧಿಗಳ ರಕ್ತವನ್ನು ಈ ಸ್ಥಳದಲ್ಲಿ ಸುರಿಸಬೇಡಿ.
4 : ನೀವು ಈ ಆಜ್ಞೆಗಳನ್ನು ಮನಃಪೂರ್ವಕವಾಗಿ ಕೈಗೊಂಡು ನಡೆದಿರಾದರೆ ದಾವೀದನ ಸಿಂಹಾಸನಾರೂಢರಾದ ಅರಸರು ರಥಾಶ್ವಗಳನ್ನೇರಿ ತಮ್ಮ ಪರಿವಾರದೊಡನೆ ಹಾಗು ಪ್ರಜೆಗಳೊಡನೆ ಈ ಅರಮನೆಯ ಬಾಗಿಲುಗಳಲ್ಲಿ ಪ್ರವೇಶಿಸುವರು.
5 : ನೀವು ಈ ಮಾತುಗಳನ್ನು ಕೇಳದೆಹೋದರೆ ಈ ಅರಮನೆ ಹಾಳುಬೀಳುವುದು. ಇದನ್ನು ನನ್ನ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಇದು ಸರ್ವೇಶ್ವರನಾದ ನನ್ನ ನುಡಿ.”
6 : ಹೌದು, ಜುದೇಯದ ಅರಸನ ಮನೆತನವನ್ನು
ಕುರಿತು
ಸರ್ವೇಶ್ವರ ಹೀಗೆನ್ನುತ್ತಾರೆ:
“ನನ್ನ ದೃಷ್ಟಿಗೆ ನೀನಿರುವೆ ಗಿಲ್ಯಾದಿನಂತೆ,
ಲೆಬನೋನಿನ ಶಿಖರದಂತೆ
ಆದರೆ ನಿನ್ನನ್ನು ಮರುಭೂಮಿಯಂತೆ,
ನಿರ್ಜನಪ್ರದೇಶದಂತೆ
ಮಾಡುವೆನೆಂಬುದು ನಿಶ್ಚಯ.
7 : ಆಯುಧ ಸನ್ನದ್ಧರಾದ ಸಂಹಾರಕರನ್ನು
ನಿನಗೆ ವಿರುದ್ಧ ಏರ್ಪಡಿಸುವೆನು.
ಅವರು ನಿನ್ನ ಶ್ರೇಷ್ಠ ದೇವದಾರುಗಳನ್ನು
ಬೆಂಕಿಗೆ ಕಡಿದು ಹಾಕುವರು.
8 : ಅನೇಕ ಅನ್ಯಜನಾಂಗದವರು ಈ ನಗರದ ಮಾರ್ಗವಾಗಿ ಹೋಗುತ್ತಾ ಸರ್ವೇಶ್ವರ ಈ ಮಹಾನಗರಕ್ಕೆ ಹೀಗೇಕೆ ಮಾಡಿದರೆಂದು ಮಾತಾಡಿಕೊಳ್ಳುವರು.
9 : ‘ಈ ನಗರದವರು ತಮ್ಮ ದೇವರಾದ ಸರ್ವೇಶ್ವರನ ಒಡಂಬಡಿಕೆಯನ್ನು ನಿರಾಕರಿಸಿ ಅನ್ಯ ದೇವತೆಗಳನ್ನು ಪೂಜಿಸಿ ಆರಾಧಿಸಿದ್ದರಿಂದಲೇ ಇದಕ್ಕೆ ಈ ಗತಿಯಾಯಿತು’ ಎಂದು ಹೇಳಿಕೊಳ್ಳುವರು.”
10 :
“ಸತ್ತವನಿಗಾಗಿ (ಯೋಷೀಯನಿಗಾಗಿ)
ಅಳಬೇಡಿ
ಅವನಿಗಾಗಿ ಗೋಳಾಡಬೇಡಿ.
ಬದಲಿಗೆ ಸೆರೆಹೋದವನಿಗಾಗಿ ಬಿಕ್ಕಿಬಿಕ್ಕಿ ಅಳಿರಿ
ಇನ್ನು ಅವನು ಹಿಂತಿರುಗನು
ಸ್ವಂತ ನಾಡನ್ನು ಮತ್ತೆ ನೋಡನು !
11 : ಶಲ್ಲೂಮನಿಗೆ ಧಿಕ್ಕಾರ !
ಜುದೇಯದ ಅರಸನಾದ ಯೋಷೀಯನ ಮಗನೂ ತನ್ನ ತಂದೆ ಯೋಷೀಯನ ತರುವಾಯ ಪಟ್ಟಕ್ಕೆ ಬಂದವನೂ ಹಾಗು ಇಲ್ಲಿಂದ ಸೆರೆಯಾಗಿ ಹೋದವನೂ ಆದ ಶಲ್ಲೂಮನ ವಿಷಯವಾಗಿ ಸರ್ವೇಶ್ವರ ಹೇಳುವುದು ಏನೆಂದರೆ:
12 : “ಅವನು ಇಲ್ಲಿಗೆ ಇನ್ನು ಹಿಂದಿರುಗಿ ಬರುವುದಿಲ್ಲ. ಅವನನ್ನು ಎಲ್ಲಿಗೆ ಸೆರೆ ಒಯ್ದರೋ ಅಲ್ಲೇ ಅವನು ಸಾಯುವನು. ಈ ನಾಡನ್ನು ಇನ್ನು ಅವನು ನೋಡುವುದಿಲ್ಲ.”
13 : ಯೆಹೋಯಾಕೀಮನಿಗೆ ಧಿಕ್ಕಾರ!
“ನೆರೆಯವನಿಗೆ ಕೂಲಿಕೊಡದೆ ಬಿಟ್ಟಿಕೆಲಸ
ಮಾಡಿಸಿಕೊಂಡು
ಅರಮನೆಯನ್ನು ಕಟ್ಟಿಸಿಕೊಳ್ಳುವವನಿಗೆ
ಧಿಕ್ಕಾರ!
ಅವನು ಅರಮನೆಯನ್ನು ಕಟ್ಟಿಸಿಕೊಳ್ಳುವುದು
ಅನೀತಿಯಿಂದ
ಮಹಡಿಗಳನ್ನು ನಿರ್ಮಿಸಿಕೊಳ್ಳುವುದು
ಅನ್ಯಾಯದಿಂದ.
14 : ‘ಸವಿಸ್ತಾರವಾದ ಅರಮನೆ
ನಿರ್ಮಿಸಿಕೊಳ್ಳುವೆನು
ವಿಶಾಲವಾದ ಮಹಡಿ ಕಟ್ಟಿಸಿಕೊಳ್ಳುವೆನು’
ಎನ್ನುವನಿಗೆ ಧಿಕ್ಕಾರ !
ಅವನು ಅಗಲಗಲವಾದ
ಕಿಟಿಕಿಗಳನ್ನಿಡಿಸಿಕೊಳ್ಳುತ್ತಾನೆ
ಅವುಗಳಿಗೆ ಕೆಂಪು ಬಣ್ಣವನ್ನೂ ಬಳಿಸಿ
ಕೊಳ್ಳುತ್ತಾನೆ.
15 : ದೇವದಾರಿನ ಕೆಲಸದಲ್ಲಿ,
ಬೇರೆಯವರನ್ನು ಮೀರಿಸುವುದರಲ್ಲಿ
ಅಡಗಿದೆಯೇ ನಿನ್ನ ದೊರೆತನದ ಹಿರಿಮೆ?
ನಿನ್ನ ತಂದೆ ಎಷ್ಟೇ ಕುಡಿದರೂ ತಿಂದರೂ
ನ್ಯಾಯನೀತಿಯನ್ನು ಪಾಲಿಸುತ್ತಿದ್ದನಲ್ಲವೆ?
ಆಗ ಅವನಿಗೆ ಎಲ್ಲವು
ನೆಮ್ಮದಿಯಾಗಿತ್ತಲ್ಲವೆ?
16 : ಆತ ದೀನದಲಿತರಿಗೆ ನ್ಯಾಯ ದೊರಕಿಸುತ್ತಿದ್ದ
ಆಗ ಅವನಿಗೆ ಎಲ್ಲವು ಸುಗಮವಾಗಿತ್ತು.
ನನ್ನನ್ನು ಅರಿಯುವುದು ಎಂದರೆ ಇದುವೇ.
ಇದು ಸರ್ವೇಶ್ವರನಾದ ನನ್ನ ನುಡಿ.
17 : ಆದರೆ ನಿನ್ನ ದೃಷ್ಟಿ, ನಿನ್ನ ಮನಸ್ಸು ನೆಲೆಗೊಂಡಿವೆ
ದುರ್ಲಾಭದಲ್ಲಿ, ನಿರ್ದೋಷಿಯ
ರಕ್ತಸುರಿಸುವುದರಲ್ಲಿ
ದಬ್ಬಾಳಿಕೆಯಲ್ಲಿ, ಹಿಂಸಾಚಾರಗಳಲ್ಲಿ.”
18 : ಆದಕಾರಣ ಯೋಷೀಯನ ಮಗನೂ
ಜುದೇಯದ ಅರಸನೂ ಆದ ಯೆಹೋಯಾಕೀಮನ
ವಿಷಯವಾಗಿ ಸರ್ವೇಶ್ವರ ಹೀಗೆನ್ನುತ್ತಾರೆ:
“ಇವನಿಗಾಗಿ ಯಾರೂ
‘ಅಯ್ಯೋ ಸೋದರಸೋದರಿಯೇ’
ಎಂದು ಗೋಳಾಡರು
‘ಅಯ್ಯೋ ನಮ್ಮೊಡೆಯಾ, ರಾಜಾಧಿರಾಜ’
ಎಂದು ಪ್ರಲಾಪಿಸರು.
19 : ಇವನನ್ನು ಜೆರುಸಲೇಮಿನ ಬಾಗಿಲ ಹೊರಗಡೆ
ಬಿಸಾಡುವರು
ಕತ್ತೆಗೆ ತಕ್ಕ ಮರ್ಯಾದೆಯೊಂದಿಗೆ
ಹೂಣುವರು.”
ಜೆರುಸಲೇಮ್ ನಗರಿಗೆ ಧಿಕ್ಕಾರ !
20 : “ಲೆಬನೋನ್ ಬೆಟ್ಟವನ್ನು ಹತ್ತಿ
ಬೊಬ್ಬೆಯಿಡು!
ಬಾಷಾನಿನಲ್ಲಿ ಮೊರೆಯಿಡು !
ಅಬಾರೀಮಿನಲ್ಲಿ ಕಿರುಚಾಡು !
ಏಕೆಂದರೆ ನಿನ್ನ ಮಿಂಡರೆಲ್ಲ
ಹಾಳಾಗಿಹೋದರು !
21 : ನೀನು ನೆಮ್ಮದಿಯಾಗಿದ್ದ ಕಾಲದಲ್ಲಿ ನಿನ್ನೊಡನೆ
ಮಾತಾಡಿದೆ
ಆದರೆ ನೀನು, “ಕೇಳಲೊಲ್ಲೆ” ಎಂದು
ಹೇಳಿಬಿಟ್ಟೆ.
ನನ್ನ ಮಾತಿಗೆ ಕಿವಿಗೊಡದಿರುವುದು
ನಿನಗೆ ಬಾಲ್ಯದಿಂದಲೆ ವಾಡಿಕೆ !
22 : ನಿನ್ನನ್ನು ಅಟ್ಟಿ ಮೇಯಿಸುವ ಕುರುಬರನ್ನು
ಗಾಳಿ ಅಟ್ಟಿಕೊಂಡು ಹೋಗುವುದು.
ನಿನ್ನ ಮಿಂಡರನ್ನು ಸೆರೆಹಿಡಿದುಕೊಂಡು
ಹೋಗುವರು.
ಆಗ ಖಂಡಿತವಾಗಿ ನೀನು ಆಶಾಭಂಗಪಡುವೆ
ನಿನ್ನ ದುಷ್ಕøತ್ಯಗಳ ನಿಮಿತ್ತ
ಅವಮಾನಕ್ಕೀಡಾಗುವೆ.
23 : ‘ಲೆಬನೋನ್’ ಅರಮನೆಯಲ್ಲಿ
ವಾಸಿಸುವವಳೇ,
ದೇವದಾರುಗಳ ನಡುವೆ
ಗೂಡುಮಾಡಿಕೊಂಡಿರುವವಳೇ,
ಪ್ರಸವವೇದನೆಯಂಥ ಸಂಕಟಗಳು
ಸಂಭವಿಸಿದಾಗ
ನಿನಗೊದಗುವ ಪರಿಸ್ಥಿತಿ ಎಷ್ಟೋ ದುಃಖಕರ !
24 :
ಸರ್ವೇಶ್ವರನ ಮಾತಿದು – “ನನ್ನ ಜೀವದಾಣೆ, ಯೆಹೋಯಾಕೀಮನ ಮಗನೂ ಜುದೇಯದ ಅರಸನೂ ಆದ ಕೊನ್ಯನೇ, ನೀನು ನನ್ನ ಬಲಗೈ ಮುದ್ರಯುಂಗುರವಾಗಿದ್ದರೂ ನಾನು ನಿನ್ನನ್ನು ಅಲ್ಲಿಂದ ಕಿತ್ತು ಹಾಕುತ್ತಿದ್ದೆ.
25 : ನಿನ್ನ ಪ್ರಾಣ ಹುಡುಕುತ್ತಿರುವವರ ಕೈಗೆ, ನಿನ್ನಲ್ಲಿ ಭಯ ಹುಟ್ಟಿಸುವವರ ಕೈಗೆ, ಅಂದರೆ ಬಾಬಿಲೋನಿನ ಜನರ ಕೈಗೆ ನಿನ್ನನ್ನು ಕೊಟ್ಟುಬಿಡುವೆನು.
26 : ನಿನ್ನನ್ನೂ ನಿನ್ನ ಹೆತ್ತ ತಾಯಿಯನ್ನೂ ಜನ್ಮಭೂಮಿಯಲ್ಲದ ಅನ್ಯದೇಶಕ್ಕೆ ಎಸೆದುಬಿಡುವೆನು. ನೀವು ಅಲ್ಲೇ ಸಾಯುವಿರಿ.
27 : ಹಿಂದಿರುಗಬೇಕೆಂದು ಹಂಬಲಿಸಿದರೂ ತಾಯ್ನಾಡಿಗೆ ಹಿಂದಿರುಗುವುದೇ ಇಲ್ಲ.”
28 : ಕೊನ್ಯನು ಬಿಸಾಡಲ್ಪಟ್ಟ ಒಡಕು ಕುಡಿಕೆಯೆ?
ಯಾರಿಗೂ ಬೇಡವಾದ ಮಣ್ಣಿನ ಮಡಿಕೆಯೆ?
ಅವನೂ ಅವನ ಮಡದಿಮಕ್ಕಳೇಕೆ
ಬೀದಿಪಾಲಾಗಿದ್ದಾರೆ?
29 : ನಾಡೇ, ನಾಡೇ, ಎಲೈ ನಾಡೇ,
ಸರ್ವೇಶ್ವರನ ಮಾತಿಗೆ ಕಿವಿಗೊಡು.
30 : ಹೀಗಿದೆ ಸರ್ವೇಶ್ವರನ ನುಡಿ:
“ಇವನು ಮಕ್ಕಳನ್ನು ಕಳೆದುಕೊಂಡ ವ್ಯಕ್ತಿ
ತನ್ನ ಜನ್ಮವನ್ನು ಸಾರ್ಥಕ ಮಾಡಿಕೊಳ್ಳದ
ವ್ಯಕ್ತಿ
ಇವನ ಸಂತಾನದಲ್ಲಿ ಇನ್ನು ಯಾವನೂ
ದಾವೀದನ ಸಿಂಹಾಸನದಲ್ಲಿ ಕೂರನು,
ಜುದೇಯವನ್ನು ಆಳಿ ಬಾಳನು.”