1 :
ಯೆರೆಮೀಯ ಈ ಪ್ರವಾದನೆ ಮಾಡುವುದನ್ನು ಇಮ್ಮೇರನ ಮಗ ಹಾಗು ಸರ್ವೇಶ್ವರನ ಆಲಯದ ಮುಖ್ಯಾಧಿಕಾರಿಯಾದ ಯಾಜಕ ಷಷ್ಹೂರನು ಕೇಳಿದನು.
2 : ಅವನು ಪ್ರವಾದಿ ಯೆರೆಮೀಯನನ್ನು ಹೊಡೆಯಿಸಿ ಸರ್ವೇಶ್ವರನ ಆಲಯಕ್ಕೆ ಸೇರಿದ ಮೇಲಣ ಬೆನ್ಯಾಮೀನ್ ಬಾಗಿಲ ಬಳಿಯಲ್ಲಿದ್ದ ಸೆರೆಗೆ ಹಾಕಿಸಿದನು.
3 : ಮರುದಿನ ಆ ಷಷ್ಹೂರನು ಯೆರೆಮೀಯನನ್ನು ಸೆರೆಯಿಂದ ಬಿಡಿಸಿದಾಗ ಯೆರೆಮೀಯ ಅವನಿಗೆ ಹೀಗೆಂದು ಹೇಳಿದನು: “ಸರ್ವೇಶ್ವರ ನಿನ್ನ ಹೆಸರನ್ನು ಷಷ್ಹೂರ್ ಎಂದು ಕರೆಯದೆ ‘ಮಾಗೋರ್ ಮಿಸ್ಸಾಬೀಬ್’ ಎಂದು ಕರೆದಿದ್ದಾರೆ.
4 : ಏಕೆಂದರೆ ಸರ್ವೇಶ್ವರನೆ ಹೇಳಿರುವ ಮಾತಿವು – ‘ಇಗೋ, ನಾನು ನಿನ್ನನ್ನು ನಿನಗೂ ನಿನ್ನ ಎಲ್ಲ ಸ್ನೇಹಿತರಿಗೂ ಭಯಾನಕನನ್ನಾಗಿ ಮಾಡುವೆನು. ಅವರು ತಮ್ಮ ಶತ್ರುಗಳ ಖಡ್ಗದಿಂದ ಬೀಳುವರು. ಅದನ್ನು ನೀನು ಕಣ್ಣಾರೆ ಕಾಣುವೆ. ನಾನು ಜುದೇಯರನ್ನೆಲ್ಲ ಬಾಬಿಲೋನಿನ ಅರಸನ ಕೈಗೊಪ್ಪಿಸುವೆನು. ಅವನು ಇವರನ್ನು ಬಾಬಿಲೋನಿಗೆ ಸೆರೆಯಾಗಿ ಕೊಂಡೊಯ್ದು ಕತ್ತಿಗೆ ತುತ್ತಾಗಿಸುವನು.
5 : ಅಷ್ಟು ಮಾತ್ರವಲ್ಲ, ಈ ನಗರದ ಎಲ್ಲ ಆಸ್ತಿಯನ್ನೂ ಆದಾಯವನ್ನೂ ಸಂಪತ್ತನ್ನೂ ಹಾಗು ಜುದೇಯದ ಅರಸರ ಸಕಲ ನಿಧಿನಿಕ್ಷೇಪಗಳನ್ನೂ ಇವರ ಶತ್ರುಗಳ ಕೈವಶಮಾಡುವೆನು. ಅವರು ಅವುಗಳನ್ನು ಕೊಳ್ಳೆಹೊಡೆದು ಬಾಬಿಲೋನಿಗೆ ತೆಗೆದುಕೊಂಡು ಹೋಗುವರು.
6 : ಷಷ್ಹೂರನೇ ಕೇಳು, ನೀನು ನಿನ್ನ ಮನೆಯ ಎಲ್ಲರೊಡನೆ ಸೆರೆಗೆ ಹೋಗುವೆ. ನೀನು ಮತ್ತು ನಿನ್ನ ಸುಳ್ಳು ಪ್ರವಾದನೆಯನ್ನು ಕೇಳಿದ ನಿನ್ನ ಸಕಲ ಗೆಳೆಯರೂ ಬಾಬಿಲೋನಿಗೆ ಸೇರಿ ಅಲ್ಲೆ ಸತ್ತು ಮಣ್ಣಾಗುವಿರಿ’.”
7 :
ಸರ್ವೇಶ್ವರಾ, ನೀವು ನನ್ನನ್ನು ಮರುಳಾಗಿಸಿದಿರಿ.
ನಾನು ಮರುಳಾದೆ.
ನೀವು ನನ್ನನ್ನು ಗೆದ್ದುಬಿಟ್ಟಿರಿ,
ನೀವು ನನಗಿಂತ ಬಲಿಷ್ಠರಲ್ಲವೆ?
ಎಲ್ಲರು ನನ್ನನ್ನು ಅಣಕಿಸುವವರೆ,
ದಿನವೆಲ್ಲ ನಾನು ಅಪಹಾಸ್ಯಕ್ಕೆ ಬಲಿಯಾದೆ.
8 : ನನ್ನ ಮಾತೆಲ್ಲ ಅರಚಾಟ
‘ಹಿಂಸಾಚಾರ, ಕೊಳ್ಳೆ’ ಇವೇ ನನ್ನ ಕೂಗಾಟ.
ಸರ್ವೇಶ್ವರನ ವಾಕ್ಯವನ್ನು ನಾನು ಸಾರಿದೆ
ಜನರ ನಿಂದೆ ಪರಿಹಾಸ್ಯಕ್ಕೆ ಗುರಿಯಾದೆ.
9 : ‘ಸರ್ವೇಶ್ವರನ ವಿಷಯವನ್ನು ಪ್ರಕಟಿಸೆನು,
ಅವರ ಹೆಸರಿನಲ್ಲಿ ಇನ್ನು ಮಾತಾಡೆನು’
ಎಂದುಕೊಂಡೆನಾದರೆ
ನನ್ನ ಹೃದಯದೊಳು ಸಂಕಟ ಉಂಟಾಗುತ್ತದೆ.
ಸುಡುಬೆಂಕಿ ನನ್ನೆಲುಬುಗಳಲ್ಲಿ ಅಡಗಿದೆಯೋ
ಎಂಬಂತೆ
ಅದನ್ನು ತಡೆತಡೆದು ದಣಿದಿರುವೆ, ಇನ್ನು
ಸಹಿಸಲಾಗದಿದೆ.
10 : ಸುತ್ತಮುತ್ತಲು ದಿಗಿಲೆಂದರೆ ದಿಗಿಲು !
‘ಬನ್ನಿ, ಇವರ ಮೇಲೆ ಚಾಡಿ ಹೇಳಿ, ನಾವೂ
ಹೇಳುವೆವು’
ಎಂದು ಗುಸುಗುಟ್ಟುತ್ತಿರುವರು ಬಹು ಜನರು.
‘ಇವನು ಎಡವಿಬೀಳಲಿ, ನಾವು ಹೊಂಚಿ
ನೋಡುವೆವು’
ಎನ್ನುತ್ತಿರುವರು ನನ್ನಾಪ್ತ ಮಿತ್ರರೆಲ್ಲರು.
‘ಇವನು ಸಿಕ್ಕಿಬೀಳಲಿ, ಆಗ ಗೆದ್ದು
ಮುಯ್ಯಿತೀರಿಸಿಕೊಳ್ಳುವೆವು.’
ಎಂದುಕೊಳ್ಳುತ್ತಿರುವರು ತಮ್ಮತಮ್ಮೊಳಗೆ.
11 : ಆದರೆ ನನ್ನ ಸಂಗಡ ಇರುವರು ಸರ್ವೇಶ್ವರ
ಭಯಂಕರ ಶೂರನಂತೆ
ನನ್ನ ಹಿಂಸಕರು ಮುಗ್ಗರಿಸಿ ಬೀಳುವರು
ಜಯ ಸಾಧಿಸದೆ.
ನಾಚಿಕೆಗೆ ಈಡಾಗುವರು ತಮ್ಮ ಯೋಜನೆ
ಕೈಗೂಡದೆ
ಶಾಶ್ವತ ಅವಮಾನಕ್ಕೆ ಗುರಿಯಾಗುವರು
ಎಂದಿಗೂ ಮರೆಯಲಾಗದಂತೆ.
12 : ಸರ್ವಶಕ್ತರಾದ ಸರ್ವೇಶ್ವರಾ,
ನೀವು ಸತ್ಪುರುಷರನ್ನು ಪರಿಶೋಧಿಸುವರು
ಅಂತರಿಂದ್ರಿಯಗಳನ್ನೂ ಅಂತರಾಳವನ್ನೂ
ವೀಕ್ಷಿಸುವವರು.
ನನ್ನ ವ್ಯಾಜ್ಯವನ್ನು ನಿಮಗೆ ಅರಿಕೆಮಾಡಿರುವೆನು
ನನ್ನ ಹಿಂಸಕರಿಗೆ ನೀವು ವಿಧಿಸುವ
ಪ್ರತಿದಂಡನೆಯನ್ನು
ನಾನು ನೋಡುವಂತೆ ಮಾಡಿ.
13 : ಸರ್ವೇಶ್ವರನನ್ನು ಸ್ತುತಿಸಿರಿ, ಸರ್ವೇಶ್ವರನನ್ನು
ಸಂಕೀರ್ತಿಸಿರಿ.
ಅವರು ಬಡವರ ಪ್ರಾಣವನ್ನು ಬಿಡಿಸಿದ್ದಾರೆ
ಕೆಡುಕರ ಕೈಯಿಂದ.
14 : ಶಪಿಸಲ್ಪಡಲಿ ನಾ ಹುಟ್ಟಿದಾ ದಿನವು !
ಶುಭವೆನಿಸಿಕೊಳ್ಳದಿರಲಿ ತಾಯಿ ನನ್ನನ್ನು
ಹೆತ್ತಿದಾ ದಿನವು.
15 : ಶಪಿಸಲ್ಪಡಲಿ ‘ನಿನಗೆ ಗಂಡು ಹುಟ್ಟಿದೆ’ ಎಂದು
ನನ್ನ ತಂದೆಗೆ ತಿಳಿಸಿದಾತ !
ಕೇವಲ ಸಂತಸವನ್ನು ನನ್ನ ತಂದೆಯಲ್ಲಿ
ಉಂಟುಮಾಡಿದಾತ.
16 : ಸರ್ವೇಶ್ವರನು ಕನಿಕರಿಸದೆ ಕೆಡವಿಬಿಟ್ಟ
ಪಟ್ಟಣದ ಗತಿ ಅವನಿಗಾಗಲಿ !
ಬೆಳಿಗ್ಗೆ ಕಿರುಚಾಟ, ನಡುಹಗಲಲ್ಲಿ ಕೂಗಾಟ
ಅವನ ಕಿವಿಗೆ ಬೀಳಲಿ !
17 : ತಾಯಗರ್ಭದಲ್ಲಿರುವಾಗಲೆ ಅವನೇಕೆ
ನನ್ನನ್ನು ಕೊಂದುಹಾಕಲಿಲ್ಲ?
ಆಗ ನನ್ನ ತಾಯೇ ನನಗೆ
ಗೋರಿಯಾಗುತ್ತಿದ್ದಳಲ್ಲಾ !
ಆಕೆಯ ಗರ್ಭ ಸದಾ ಬಸಿರಾಗಿಯೇ
ಇರುತ್ತಿತ್ತಲ್ಲಾ !
18 : ಗರ್ಭಬಿಟ್ಟು ನಾನೇಕೆ ಹೊರಬಂದೆ?
ಕಷ್ಟದುಃಖಗಳನ್ನು ಅನುಭವಿಸುವುದಕ್ಕೊ?
ಅವಮಾನದಲ್ಲೆ ಬಾಳಿನ ದಿನಗಳನ್ನೆಲ್ಲ
ಕಳೆಯುವುದಕ್ಕೊ?