1 :
ಸರ್ವೇಶ್ವರಸ್ವಾಮಿ ನನಗೆ ಹೀಗೆ ಹೇಳಿದರು: “ಹೋಗು, ಕುಂಬಾರ ಮಾಡಿದ ಮಣ್ಣಿನ ಮಡಕೆಯೊಂದನ್ನು ಕೊಂಡುಕೊ. ಜನರ ಹಿರಿಯರಲ್ಲೂ ಯಾಜಕರ ಹಿರಿಯರಲ್ಲೂ ಕೆಲವರನ್ನು ಕರೆದುಕೊಂಡು
2 : ಬೋಕಿಯ ಬಾಗಿಲಿನ ಸಮೀಪದಲ್ಲಿರುವ ‘ಬೆನ್ಹಿನ್ನೋಮ್’ ಕಣಿವೆಗೆ ಹೋಗು. ನಾನು ನಿನಗೆ ತಿಳಿಸುವ ಈ ಸಂದೇಶವನ್ನು ಅಲ್ಲಿ ಸಾರು
3 : ‘ಜುದೇಯದ ಅರಸರೇ, ಜೆರುಸಲೇಮಿನ ನಿವಾಸಿಗಳೇ, ಸರ್ವೇಶ್ವರನ ಸಂದೇಶವನ್ನು ಕೇಳಿರಿ. ಇದು ಇಸ್ರಯೇಲರ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರನ ನುಡಿ: ಈ ಸ್ಥಳದ ಮೇಲೆ ನಾನು ಕೇಡನ್ನು ಬರಮಾಡುವೆನು. ಅದರ ಸುದ್ದಿಯನ್ನು ಕೇಳುವವರ ಕಿವಿಗಳೂ ನಿಮಿರುವುವು.
5 : ತಮ್ಮ ಮಕ್ಕಳನ್ನು ಬಾಳ್ದೇವತೆಗೆ ಆಹುತಿಕೊಡಲು ಆ ದೇವತೆಗೆ ಬಲಿಪೀಠಗಳನ್ನು ಕೂಡ ಏರ್ಪಡಿಸಿದ್ದಾರೆ. ನಾನು ಇಂಥ ಆಚಾರಗಳನ್ನು ವಿಧಿಸಲಿಲ್ಲ. ಅದರ ಮಾತನ್ನೇ ಎತ್ತಲಿಲ್ಲ. ಅಂಥದ್ದು ನನ್ನ ಮನಸ್ಸಿಗೂ ತೋಚಿದ್ದಿಲ್ಲ.
6 : ಆದಕಾರಣ ಈ ಸ್ಥಳಕ್ಕೆ ತೋಫೆತ್ ಮತ್ತು ಬೆನ್ಹಿನ್ನೋಮಿನ ಕಣಿವೆ ಎಂಬ ಹೆಸರುಗಳು ಹೋಗಿ, ‘ಕೊಲೆಯ ಕಣಿವೆ’ ಎಂದು ಹೆಸರಿಸಲಾಗುವ ಕಾಲ ಬರುವುದು.
7 : ಈ ಸ್ಥಳದಲ್ಲಿ ಯೆಹೂದ್ಯರ ಮತ್ತು ಜೆರುಸಲೇಮಿನವರ ಯೋಜನೆಗಳನ್ನು ಮಣ್ಣುಪಾಲಾಗಿಸುವೆನು. ಅವರ ಶತ್ರುಗಳ ಹಾಗು ಕೊಲೆಗಡುಕರ ಕತ್ತಿಗೆ ಅವರನ್ನು ತುತ್ತಾಗಿಸುವೆನು. ಅವರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಭೂಜಂತುಗಳಿಗೂ ಆಹಾರವಾಗಿಸುವೆನು.
8 : ಈ ನಗರವನ್ನು ಭಯಾನಕ ಹಾಗೂ ಹಾಸ್ಯಾಸ್ಪದ ಸ್ಥಳವನ್ನಾಗಿಸುವೆನು. ಹಾದು ಹೋಗುವವರೆಲ್ಲರು ಅದಕ್ಕೆ ಒದಗಿದ ವಿಪತ್ತನ್ನು ಕಂಡು ನಿಬ್ಬೆರಗಾಗಿ ಹೀಗಳೆಯುವರು.
9 : ಅವರ ಶತ್ರುಗಳು, ಕೊಲೆಗಡುಕರು ಅವರನ್ನು ಮುತ್ತಿ ನಸುಕುವಾಗ ಒಬ್ಬರು ಮತ್ತೊಬ್ಬರನ್ನು ತಿನ್ನುವುದು ಮಾತ್ರವಲ್ಲ, ತಮ್ಮ ಪುತ್ರಪುತ್ರಿಯರ ಮಾಂಸವನ್ನೇ ತಿನ್ನುವರು.’
10 : “ಆಗ ನೀನು, ನಿನ್ನ ಸಂಗಡ ಬಂದವರ ಕಣ್ಣೆದುರಿಗೇ ಆ ಮಣ್ಣಿನ ಮಡಕೆಯನ್ನು ಒಡೆದು ಬಿಟ್ಟು ಅವರಿಗೆ ಹೀಗೆಂದು ನುಡಿ:
11 : ಸರ್ವಶಕ್ತ ಸರ್ವೇಶ್ವರನ ಸಂದೇಶವಿದು – ಕುಂಬಾರ ಮಾಡಿದ ಮಣ್ಣಿನ ಮಡಕೆಯನ್ನು ಒಡೆದುಹಾಕಿದ ಮೇಲೆ ಸರಿಪಡಿಸಲಾಗದು. ಅಂತೆಯೇ ನಾನು ಈ ಜನರನ್ನು ಹಾಗು ನಗರವನ್ನು ಒಡೆದು ಹಾಕುವೆನು. ಹೂಣಲು ಇನ್ನೆಲ್ಲಿಯೂ ಸ್ಥಳವಿಲ್ಲವಾಗಿ ಹೆಣಗಳನ್ನು ಈ ತೋಫೆತಿನಲ್ಲೇ ಹೂಣುವರು.
12 : ನಾನು ಈ ಸ್ಥಳವನ್ನೂ ಇದರ ನಿವಾಸಿಗಳನ್ನೂ ಅಷ್ಟರಮಟ್ಟಿಗೆ ನಾಶಪಡಿಸಿ ಈ ನಗರವನ್ನು ತೋಫೆತಿನ ಪರಿಸ್ಥಿತಿಗೆ ಇಳಿಸುವೆನು.
13 : ಜೆರುಸಲೇಮಿನ ಮನೆಗಳೂ ಜುದೇಯದ ಅರಸರ ಮನೆಗಳೂ, ಅಂದರೆ ಯಾವ ಯಾವ ಮನೆ ಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆಲ್ಲ ಧೂಪಾರತಿ ಎತ್ತಿ ಅನ್ಯದೇವತೆಗಳಿಗೆ ಪಾನ ನೈವೇದ್ಯಗಳನ್ನು ಸುರಿದಿದ್ದಾರೋ ಆ ಮನೆಗಳೆಲ್ಲ ಹೊಲಸಾಗಿ ತೋಫೆತ್ ಸ್ಥಳಕ್ಕೆ ಸಮಾನವಾಗುವುವು.”
14 : ಯೆರೆಮೀಯನು ಸರ್ವೇಶ್ವರಸ್ವಾಮಿಯ ಅಪ್ಪಣೆಯಂತೆ ತೋಫೆತಿನಲ್ಲಿ ಪ್ರವಾದಿಸಿದ ಬಳಿಕ ಅಲ್ಲಿಂದ ಬಂದು ಸರ್ವೇಶ್ವರನ ಆಲಯದ ಪ್ರಾಕಾರದಲ್ಲಿ ನಿಂತುಕೊಂಡು:
15 : “ಇಸ್ರಯೇಲರ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ – ಈ ನಗರದವರೂ ಇದರ ಸುತ್ತಮುತ್ತಿನ ಊರಿನವರೂ ನನ್ನ ಮಾತನ್ನು ಕೇಳದೆ ಹೋದರು. ತಮ್ಮ ಮನಸ್ಸನ್ನು ಕಲ್ಲಾಗಿಸಿಕೊಂಡರು. ಆದುದರಿಂದ ನಾನು ಈ ನಗರಕ್ಕೆ ಶಾಪ ಹಾಕಿದ ಕೇಡನ್ನೆಲ್ಲಾ ಅವರಿಗೆ ಬರಮಾಡುವೆನು,” ಎಂದು ಎಲ್ಲ ಜನರಿಗೆ ಸಾರಿದನು.