1 :
ಸರ್ವೇಶ್ವರಸ್ವಾಮಿ ಜುದೇಯದ ಜನರಿಗೆ ಹೀಗೆನ್ನುತ್ತಾರೆ: “ಜುದೇಯದ ಪಾಪವನ್ನು ಕಬ್ಬಿಣದ ಲೇಖನಿಯಿಂದ, ವಜ್ರದ ಮೊನೆಯಿಂದ ಬರೆಯಲಾಗಿದೆ. ಅದನ್ನು ನಿಮ್ಮ ಜನರ ಹೃದಯದ ಹಲಗೆಯ ಮೇಲೂ ಅವರ ಬಲಿಪೀಠಗಳ ಕೊಂಬುಗಳ ಮೇಲೂ ಕೆತ್ತಲಾಗಿದೆ.
2 : ನಿಮ್ಮ ಮಕ್ಕಳು ಸೊಂಪಾಗಿ ಬೆಳೆದ ಮರಗಳನ್ನಾಗಲಿ ಎತ್ತರವಾದ ಗುಡ್ಡಗಳನ್ನಾಗಲಿ, ಬೈಲಿನ ಬೆಟ್ಟಗಳನ್ನಾಗಲಿ ಕಂಡಾಗಲೆಲ್ಲ ಅವರ ಬಲಿಪೀಠಗಳನ್ನು ಹಾಗು ಅಶೇರ ವಿಗ್ರಹಸ್ತಂಭಗಳನ್ನು ಜ್ಞಾಪಿಸಿಕೊಳ್ಳುತ್ತಾರೆ.
3 : ನಿಮ್ಮ ಪ್ರಾಂತ್ಯಗಳಲ್ಲೆಲ್ಲ ನೀವು ಮಾಡಿದ ಪಾಪದ ನಿಮಿತ್ತ ನಾನು ನಿಮ್ಮ ಎಲ್ಲ ಸೊತ್ತು ಸಂಪತ್ತುಗಳನ್ನು ಮತ್ತು ಪೂಜಾಸ್ಥಳಗಳನ್ನು ಸೂರೆಗೆ ಈಡುಮಾಡುವೆನು.
4 : ನಾನು ನಿಮಗೆ ಹಕ್ಕು ಬಾಧ್ಯತೆಯಾಗಿ ದಯಪಾಲಿಸಿದ ಸೊತ್ತನ್ನು ನಿಮ್ಮ ದೋಷದಿಂದಲೆ ಕಳೆದುಕೊಳ್ಳುವಿರಿ. ನೀವು ನೋಡದ ನಾಡಿನಲ್ಲಿ ನಿಮ್ಮನ್ನು ನಿಮ್ಮ ಶತ್ರುಗಳಿಗೇ ಊಳಿಗದವರನ್ನಾಗಿ ಮಾಡುವೆನು. ನೀವು ನನ್ನ ಕೋಪಾಗ್ನಿಯನ್ನು ಹೊತ್ತಿಸಿದ್ದೀರಿ. ಅದು ನಿರಂತರವಾಗಿ ಉರಿಯುತ್ತಿರುವುದು.”
5 :
ಇವು ಸರ್ವೇಶ್ವರನ ಮಾತುಗಳು:
“ಮಾನವ ಮಾತ್ರದವರಲ್ಲಿ ಭರವಸೆಯಿಟ್ಟು
ನರಜನ್ಮದವರನ್ನೇ ತನ್ನ ಭುಜಬಲ
ವೆಂದುಕೊಂಡು
ಸರ್ವೇಶ್ವರನನ್ನೇ ತೊರೆಯುವಂಥ
ಹೃದಯವುಳ್ಳವನು
ಶಾಪಗ್ರಸ್ತನು!
6 : ಇಂಥವನು ಅಡವಿಯಲ್ಲಿನ ಜಾಲಿಗಿಡಕ್ಕೆ
ಸಮಾನನು.
ಶುಭಸಂಭವಿಸಿದರೂ ಅದು ಅವನ ಕಣ್ಣಿಗೆ
ಕಾಣದು.
ಜನರಾರೂ ವಾಸಿಸದ ಚೌಳು ನೆಲದೊಳು
ಬೆಳೆಯಿಲ್ಲದ ಬೆಂಗಾಡಿನೊಳು
ವಾಸಿಸುವವನ ಪರಿಸ್ಥಿತಿ ಅವನದು.
7 : ಸರ್ವೇಶ್ವರನಲ್ಲಿ ಭರವಸೆಯಿಟ್ಟವನಾದರೋ
ಧನ್ಯ!
ಅಂಥವನಿಗೆ ಸರ್ವೇಶ್ವರನಲ್ಲೇ ವಿಶ್ವಾಸ.
8 : ನೀರರುಗಿನಲೆ ನೆಡಲಾದ, ನದಿಯ ಬದಿಯಲೆ
ಬೇರು ಹರಡಿದ
ಬಿಸಿಲ ಧಗೆಗೆ ಹೆದರದ, ಬರಗಾಲದಲ್ಲೂ
ನಿಶ್ಚಿಂತವಾದ
ಹಸಿರೆಲೆಬಿಡುವ, ಫಲನೀಡುವ ಮರಕ್ಕೆ
ಸಮಾನನು ಆತ.
9 : ಮಾನವ ಹೃದಯ ಎಲ್ಲಕ್ಕಿಂತ ವಂಚಕ
ಅದಕ್ಕೆ ಅಂಟಿದೆ ಗುಣವಾಗದ ರೋಗ
ಅದರ ಗುಟ್ಟನ್ನು ಅರಿತುಕೊಳ್ಳಬಲ್ಲವರೂ
ಇಲ್ಲ.
10 : ಸರ್ವೇಶ್ವರನಾದ ನಾನು ಹೃದಯ ಪರಿಶೀಲಕ
ಹೌದು, ಅಂತರಿಂದ್ರಿಯಗಳನ್ನು
ಪರಿಶೋಧಿಸುವಾತ.
11 : ಅನ್ಯಾಯವಾಗಿ ಆಸ್ತಿಪಾಸ್ತಿಗಳನ್ನು
ಗಳಿಸಿಕೊಳ್ಳುವ ಮಾನವ
ತನ್ನದಲ್ಲದ ಮರಿಗಳನ್ನು ಕೂಡಿಸಿಕೊಳ್ಳುವ
ಕೌಜುಗ ಹಕ್ಕಿಗೆ ಸಮಾನ.
ಅವು ಅವನಿಂದ ತೊಲಗಿ ಹೋಗುವುವು
ನಡುಪ್ರಾಯದಲ್ಲಿ
ಅವನು ಮೂರ್ಖನಾಗಿ ಕಂಡುಬರುವನು
ಅಂತ್ಯಕಾಲದಲ್ಲಿ.”
12 : ಆದಿಯಿಂದಲೂ ಉನ್ನತಸ್ಥಾನದಲ್ಲಿದೆ ನಮ್ಮ ಪವಿತ್ರಾಲಯ ಅದು ಮಹಿಮೆಯ ಸಿಂಹಾಸನ.
13 : ಸ್ವಾಮಿ ಸರ್ವೇಶ್ವರಾ, ನೀವು ಇಸ್ರಯೇಲರ
ಆಶ್ರಯ!
ನಿಮ್ಮನ್ನು ಬಿಟ್ಟುಹೋಗುವವರು
ಆಶಾಭಂಗಪಡುವರು
ಅವರು ಜೀವಜಲದ ಬುಗ್ಗೆಯನ್ನೆ ತೊರೆ
ದವರು
ತಮ್ಮ ಹೆಸರನ್ನು ಧೂಳಿನಲ್ಲಿ ಬರೆಸಿ
ಕೊಂಡವರು.
14 : ಹೇ ಸರ್ವೇಶ್ವರಾ, ನನ್ನನ್ನು ಸ್ವಸ್ಥಪಡಿಸಿರಿ, ನಾನು ಸ್ವಸ್ಥನಾಗುವೆನು. ನನ್ನನ್ನು ರಕ್ಷಿಸಿರಿ, ನಾನು ರಕ್ಷಿತನಾಗಿಯೆ ತೀರುವೆನು. ನೀವೇ ನನಗೆ ಸ್ತುತ್ಯಾರ್ಹರು!
15 : ಅಕಟಾ, ಜನರು ನನ್ನನ್ನು ‘ಸರ್ವೇಶ್ವರನ ಮಾತೆಲ್ಲಿ? ಅದು ಈಗಲೇ ನೆರವೇರಲಿ’ ಎಂದು ಮೂದಲಿಸುತ್ತಾರೆ.
16 : ನಾನಾದರೋ ‘ಕೇಡನ್ನು ಬರಮಾಡಿ’ ಎಂದು ನಿಮ್ಮನ್ನು ತವಕಪಡಿಸಲಿಲ್ಲ. ಅನಿವಾರ್ಯ ವಿಪತ್ತಿನ ದಿನವನ್ನು ನಾನು ಅಪೇಕ್ಷಿಸಲಿಲ್ಲ. ಇದು ನಿಮಗೆ ತಿಳಿದ ವಿಷಯ. ನನ್ನ ಮಾತುಗಳು ನಿಮ್ಮ ಸಮಕ್ಷಮದಲ್ಲೇ ನನ್ನ ಬಾಯಿಂದ ಹೊರಟವು.
17 : ನನಗೆ ಭಯಕ್ಕೆ ಕಾರಣವಾಗಬೇಡಿ, ಕೇಡಿನ ಕಾಲದಲ್ಲಿ ನನಗೆ ಆಶ್ರಯ ನೀಡಿ. 18ನನಗಲ್ಲ, ನನ್ನ ಹಿಂಸಕರಿಗೆ ಅವಮಾನವಾಗಲಿ. ಭಯಭ್ರಾಂತಿ ನನ್ನನ್ನಲ್ಲ, ಅವರನ್ನು ಅಪಹರಿಸಲಿ. ಅವರಿಗೆ ಕೇಡುಗಾಲವನ್ನು ಬರಮಾಡಿ, ಬೇರುಸಹಿತ ಅವರನ್ನು ನಾಶಪಡಿಸಿರಿ!
19 :
ಸರ್ವೇಶ್ವರ ನನಗೆ ಕೊಟ್ಟ ಆದೇಶ: “ನೀನು ಹೊರಟು ಜುದೇಯದ ಅರಸರು ಹೋಗಿಬರುವ ಜನತಾದ್ವಾರದಲ್ಲೂ ಜೆರುಸಲೇಮಿನ ಇತರ ಬಾಗಿಲುಗಳಲ್ಲೂ ನಿಂತುಕೊಂಡು ಹೀಗೆಂದು ಸಾರು:
20 : ‘ಈ ಬಾಗಿಲುಗಳಲ್ಲಿ ಸೇರುವ ಜುದೇಯದ ಅರಸರೇ, ಎಲ್ಲ ಯೆಹೂದ್ಯರೇ, ಜೆರುಸಲೇಮಿನ ಸಕಲ ನಿವಾಸಿಗಳೇ, ಸರ್ವೇಶ್ವರಸ್ವಾಮಿಯ ಈ ಸಂದೇಶವನ್ನು ಕೇಳಿರಿ.
21 : ಮನಮುಟ್ಟಿ ಇದನ್ನು ಗಮನಿಸಿರಿ: ಸಬ್ಬತ್ ದಿನದಲ್ಲಿ ಯಾವ ಹೊರೆಯನ್ನೂ ಹೊರಬೇಡಿ. ಜೆರುಸಲೇಮಿನ ಬಾಗಿಲುಗಳಲ್ಲಿ ಅದನ್ನು ತರಲೇಬೇಡಿ.
22 : ಆ ಸಬ್ಬತ್ ದಿನದಲ್ಲಿ ನಿಮ್ಮ ಮನೆಗಳಿಂದ ಯಾವ ಹೊರೆಯನ್ನೂ ಈಚೆಗೆ ತೆಗೆದುಕೊಂಡು ಬರಬೇಡಿ. ಯಾವ ಕೆಲಸವನ್ನು ಮಾಡದಿರಿ. ನಾನು ನಿಮ್ಮ ಪೂರ್ವಜರಿಗೆ ಆಜ್ಞೆಮಾಡಿದಂತೆ ಸಬ್ಬತ್ ದಿನವನ್ನು ಪವಿತ್ರ ದಿನವನ್ನಾಗಿ ಆಚರಿಸಿರಿ.
23 : ಅವರಾದರೋ ನನಗೆ ಕಿವಿಗೊಡಲಿಲ್ಲ. ಕೇಳಲಿಕ್ಕೂ ಕಲಿತುಕೊಳ್ಳಲಿಕ್ಕೂ ಅವರು ಒಪ್ಪಲಿಲ್ಲ.
24 : “ಸರ್ವೇಶ್ವರನಾದ ನಾನು ಹೇಳುವ ಮಾತಿದು: ನೀವು ನನ್ನ ಕಡೆಗೆ ಚೆನ್ನಾಗಿ ಕಿವಿಗೊಟ್ಟು ಸಬ್ಬತ್ ದಿನದಲ್ಲಿ ಈ ಊರಿನ ಬಾಗಿಲುಗಳೊಳಗೆ ಯಾವ ಹೊರೆಯನ್ನು ತರದೆ, ಯಾವ ಕೆಲಸವನ್ನೂ ಮಾಡದೆ, ಆ ದಿನವನ್ನು ಪವಿತ್ರವಾಗಿ ಆಚರಿಸಿದರೆ,
25 : ಆಗ ದಾವೀದನ ಸಿಂಹಾಸನಾರೂಢರಾದ ಅರಸರೂ ಹಾಗು ಪ್ರಭುಗಳೂ ರಥಾಶ್ವಗಳನ್ನು ಏರಿದವರಾಗಿ ಈ ನಗರದ ಬಾಗಿಲುಗಳನ್ನು ಪ್ರವೇಶಿಸುವರು. ಇವರು ಮಾತ್ರವಲ್ಲ, ಇವರ ಪ್ರಧಾನರು, ಜುದೇಯದ ಜನರು, ಜೆರುಸಲೇಮಿನ ನಿವಾಸಿಗಳು ಎಲ್ಲರೂ ಇಲ್ಲಿ ಸೇರುವರು. ಈ ನಗರದಲ್ಲಿ ಜನರು ಯಾವಾಗಲು ತುಂಬಿರುವರು.
26 : ಜುದೇಯದ ನಗರಗಳು, ಜೆರುಸಲೇಮಿನ ಸುತ್ತ ಮುತ್ತಲಿನ ಪ್ರದೇಶಗಳು, ಬೆನ್ಯಾಮಿನ್ ಪ್ರಾಂತ್ಯ, ಇಳಕಲಿನ ಪ್ರದೇಶ, ಬೆಟ್ಟದ ಮೇಲಣ ಪ್ರದೇಶ, ದಕ್ಷಿಣ ಪ್ರಾಂತ್ಯ, ಈ ಎಲ್ಲ ಸ್ಥಳಗಳಿಂದ ಸರ್ವಾಂಗ ಹೋಮಪಶು, ಯಜ್ಞಪಶು, ಧಾನ್ಯನೈವೇದ್ಯ, ಧೂಪ ಮತ್ತು ಕೃತಜ್ಞತಾರ್ಪಣೆ ಇವುಗಳನ್ನು ಜನರು ನನ್ನ ಆಲಯಕ್ಕೆ ತೆಗೆದುಕೊಂಡು ಬರುವರು.
27 : ಆದರೆ ನನ್ನ ಕಡೆಗೆ ಕಿವಿಗೊಡದೆ, ಸಬ್ಬತ್ ದಿನದಲ್ಲಿ ಹೊರೆಹೊತ್ತು, ಜೆರುಸಲೇಮಿನ ಬಾಗಿಲುಗಳೊಳಗೆ ಪ್ರವೇಶಿಸಬಾರದೆಂಬ ನಿಯಮವನ್ನು ಕೈಗೊಳ್ಳದೆ, ಆ ಸಬ್ಬತ್ ದಿನವನ್ನು ಪವಿತ್ರ ದಿನ ಎಂದು ಆಚರಿಸದೆ ಹೋದರೆ, ಆಗ ನಾನು ಊರಬಾಗಿಲುಗಳಲ್ಲಿ ಬೆಂಕಿಯನ್ನು ಹೊತ್ತಿಸುವೆನು. ಅದು ಜೆರುಸಲೇಮಿನ ಅರಮನೆಗಳನ್ನು ದಹಿಸಿಬಿಡುವುದು, ಆ ಬೆಂಕಿ ಆರುವುದೇ ಇಲ್ಲ.”