1 :
ಸರ್ವೇಶ್ವರಸ್ವಾಮಿ ನನಗೆ ಹೀಗೆಂದರು: “ಮೋಶೆ ಮತ್ತು ಸಮುವೇಲನು ನನ್ನ ಮುಂದೆ ನಿಂತು ವಿಜ್ಞಾಪಿಸಿದರೂ ನಾನು ಈ ಜನರ ಬಗ್ಗೆ ನನ್ನ ಮನಸ್ಸನ್ನು ಬದಲಾಯಿಸೆನು. ಇವರನ್ನು ನನ್ನ ಸಮ್ಮುಖದಿಂದ ತಳ್ಳಿಬಿಡು; ತೊಲಗಿಹೋಗಲಿ!
2 : ‘ನಾವೆಲ್ಲಿಗೆ ಹೋಗಬೇಕು?’ ಎಂದು ಕೇಳಿಯಾರು. ಆಗ ನೀನು ಅವರಿಗೆ:
‘ಇದು ಸರ್ವೇಶ್ವರನ ಸಂದೇಶ:
ಮರಣವ್ಯಾಧಿಗೆ ಗೊತ್ತಾದವರು
ಮರಣವ್ಯಾಧಿಗೆ
ಖಡ್ಗಕ್ಕೆ ಗೊತ್ತಾದವರು ಖಡ್ಗಕ್ಕೆ
ಕ್ಷಾಮಕ್ಕೆ ಗೊತ್ತಾದವರು ಕ್ಷಾಮಕ್ಕೆ
ಸೆರೆಗೆ ಗೊತ್ತಾದವರು ಸೆರೆಗೆ
ಗುರಿಯಾಗಿ ಸಾಯುವರು’ ಎಂದು ಹೇಳು.
3 : “ನಾನು ಅವರಿಗೆ ನಾಲ್ಕು ವಿಧವಾದ ಬಾಧೆಗಳನ್ನು ವಿಧಿಸುವೆನು: ಕಡಿಯುವುದಕ್ಕೆ ಖಡ್ಗವನ್ನು, ಸೀಳುವುದಕ್ಕೆ ನಾಯಿಯನ್ನು, ನುಂಗಿ ನಾಶಮಾಡುವುದಕ್ಕೆ ಪ್ರಾಣಿಪಕ್ಷಿಗಳನ್ನು ನೇಮಿಸುವೆನು.
4 : ಈ ಜನರನ್ನು ಜಗದ ರಾಜ್ಯಗಳೆಲ್ಲವು ಭಯೋತ್ಪಾದಕರೆಂದು ಭಾವಿಸುವಂತೆ ಮಾಡುವೆನು. ಹಿಜ್ಕೀಯನ ಮಗನು ಹಾಗು ಜುದೇಯದ ಅರಸನು ಆದ ಮನಸ್ಸೆಯು ಜೆರುಸಲೇಮಿನಲ್ಲಿ ನಡೆಸಿದ ದುಷ್ಕøತ್ಯಕ್ಕೆ ಇದು ಪ್ರತೀಕಾರವಾಗಿರುವುದು.”
5 : “ಜೆರುಸಲೇಮೆ, ನಿನಗೆ ಕರುಣೆ
ತೋರುವವರಾರು?
ನಿನ್ನ ಪರಿಸ್ಥಿತಿಯನ್ನು ಕಂಡು
ಪ್ರಲಾಪಿಸುವವರಾರು?
ತಿರುಗಿ ನೋಡಿ ನಿನ್ನ ಕ್ಷೇಮವನ್ನು
ವಿಚಾರಿಸುವವರಾರು?
6 : ಸರ್ವೇಶ್ವರನಾದ ನನ್ನ ಈ ಮಾತುಗಳನ್ನು
ಕೇಳು:
ನೀನು ನನ್ನನ್ನು ಅಲ್ಲಗಳೆದು ನನಗೆ
ವಿಮುಖಳಾಗಿರುವೆ.
ಆದಕಾರಣ ನಿನ್ನನ್ನು ನಾಶಮಾಡಲು
ಕೈಯೆತ್ತಿರುವೆ
ನಿನ್ನನ್ನು ಕ್ಷಮಿಸಿ ಕ್ಷಮಿಸಿ ಸಾಕಾಗಿದೆ ನನಗೆ.
7 : ನನ್ನ ಜನರನ್ನು ನಾಡಿನ ಉಕ್ಕಡಗಳಲ್ಲಿ
ಮೊರದಿಂದ ಗಾಳಿಗೆ ತೂರಿಬಿಟ್ಟೆನು.
ಅವರನ್ನು ಪುತ್ರಶೋಕಕ್ಕೆ ಈಡು ಮಾಡಿ
ನಾಶಪಡಿಸಿದೆನು.
ಏಕೆಂದರೆ, ಅವರು ತಮ್ಮ ದುರ್ಮಾರ್ಗದಿಂದ
ಹಿಂದಿರುಗದೆ ಹೋದರು.
8 : ಅವರ ವಿಧವೆಯರು ನನ್ನ ಭಾಗಕ್ಕೆ ಕಡಲ
ಮರಳಿನಂತೆ
ಯುವಜನರಿಗೆ ಸಾವು ಬರಮಾಡಿದೆ ನಡು
ಜೀವನದಲ್ಲೆ.
ಅವರ ತಾಯಂದಿರನ್ನು ದುಃಖಕ್ಕೆ ಈಡು
ಮಾಡಿದೆ
ತಟ್ಟನೆ ಅವರನ್ನು ಕಳಕಳಕ್ಕೂ ದಿಗಿಲಿಗೂ
ಗುರಿಪಡಿಸಿದೆ.
9 : ಏಳು ಮಕ್ಕಳನ್ನು ಕಳೆದುಕೊಂಡ ತಾಯಿ
ಪ್ರಾಣಬಿಟ್ಟಂತಿದ್ದಾಳೆ ದುಃಖದಿಂದ ಬಳಲಿ
ಅವಳ ಪಾಲಿಗೆ ಸೂರ್ಯ ಮುಳುಗಿದ್ದಾನೆ
ಹಾಡುಹಗಲಲ್ಲೆ.
ಆಶಾಭಂಗಪಟ್ಟಿದ್ದಾಳೆ, ಅವಮಾನಕ್ಕೆ
ಈಡಾಗಿದ್ದಾಳೆ.
ಖಡ್ಗಕ್ಕೆ ಗುರಿಮಾಡುವೆ ಅವಳ ಉಳಿದ
ಸಂತಾನವನ್ನು ಶತ್ರುಗಳ ಕಣ್ಣೆದುರಿಗೆ.
ಇದು ಸರ್ವೇಶ್ವರನಾದ ನನ್ನ ನುಡಿ.”
10 :
“ನನ್ನ ಹೆತ್ತತಾಯೇ, ನನ್ನ ಗತಿಯನ್ನು ಏನು ಹೇಳಲಿ! ಜಗದ ಜನರಿಗೆಲ್ಲ ನಾನೊಬ್ಬ ಜಗಳಗಂಟಿಗ, ವ್ಯಾಜ್ಯಗಾರ. ನಾನು ಹಣವನ್ನು ಸಾಲವಾಗಿ ಕೊಟ್ಟವನಲ್ಲ, ಕೊಂಡವನೂ ಅಲ್ಲ. ಆದರೂ ನನ್ನನ್ನು ಎಲ್ಲರು ಶಪಿಸುವವರೇ.
11 : ಸರ್ವೇಶ್ವರಾ, ನಾನು ನಿಮಗೆ ಶ್ರೇಷ್ಠವಾದ ಸೇವೆ ಸಲ್ಲಿಸದೆ ಹೋಗಿದ್ದರೆ, ನನ್ನ ಶತ್ರುಗಳು ಕಷ್ಟ ಸಂಕಟಗಳಲ್ಲಿ ಸಿಕ್ಕಿಬಿದ್ದ ಕಾಲದಲ್ಲಿ ಅವರ ಪರವಾಗಿ ನಿನಗೆ ಮೊರೆಯಿಡದೆ ಇದ್ದಿದ್ದರೆ ನನಗೆ ಶಾಪ ತಗುಲಲಿ!
12 : ಕಬ್ಬಿಣವನ್ನು ಅದೂ ಉತ್ತರದಿಂದ ಬಂದ ಕಬ್ಬಿಣವನ್ನು ಹಾಗು ಕಂಚನ್ನು ಬಗ್ಗಿಸಲು ಯಾರಿಂದಾದೀತು?”
13 : ಸರ್ವೇಶ್ವರ: “ನಾಡಿನಾದ್ಯಂತ ನನ್ನ ಜನರು ಮಾಡಿದ ಎಲ್ಲ ಪಾಪಗಳ ನಿಮಿತ್ತ ಅವರ ಸೊತ್ತು ಸಂಪತ್ತನ್ನು ಪುಕ್ಕಟೆಯಾಗಿ ಕೊಳ್ಳೆಗಾರರ ಪಾಲಾಗಿಸುವೆನು.
14 : ಅಪರಿಚಿತ ನಾಡಿಗೆ ಅವರನ್ನು ಸಾಗಿಸುವೆನು. ಅಲ್ಲಿ ಶತ್ರುಗಳಿಗೇ ಊಳಿಗದವರನ್ನಾಗಿಸುವೆನು. ಏಕೆಂದರೆ ನನ್ನ ಕೋಪಾಗ್ನಿ ಉರಿಯುತ್ತಿದೆ. ಅದು ನಿಮ್ಮನ್ನು ಸುಟ್ಟು ಹಾಕುವುದು.”
15 : ಅದಕ್ಕೆ ನಾನು: “ಸರ್ವೇಶ್ವರಾ, ನೀವು ಎಲ್ಲವನ್ನು ಬಲ್ಲವರು. ನನ್ನನ್ನು ನೆನಪಿಗೆ ತಂದುಕೊಂಡು ನೆರವುನೀಡಿ. ನನಗಾಗಿ ನನ್ನ ಶತ್ರುಗಳಿಗೆ ಮುಯ್ಯಿತೀರಿಸಿರಿ. ಅವರಿಗೆ ಹೆಚ್ಚು ತಾಳ್ಮೆ ತೋರಿ ನನ್ನನ್ನು ನಿರ್ಮೂಲ ಮಾಡಬೇಡಿ. ನಿಮ್ಮ ನಿಮಿತ್ತವೇ ನಾನು ನಿಂದೆಗೆ ಗುರಿಯಾದೆ ಎಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಿ.
16 : ನಿಮ್ಮ ವಚನಗಳು ನನಗೆ ದೊರೆತವು. ಅವುಗಳನ್ನು ಹಾಗೆಯೆ ನುಂಗಿ ಬಿಟ್ಟೆನು. ನಿಮ್ಮ ನುಡಿಗಳು ನನಗೆ ಹರ್ಷವನ್ನೂ ಹೃದಯಾನಂದವನ್ನೂ ತಂದೆವು. ಸರ್ವಶಕ್ತರಾದ ದೇವರೇ, ಸರ್ವೇಶ್ವರಾ, ನಾನು ನಿಮ್ಮ ನಾಮಧಾರಿಯಲ್ಲವೆ?
17 : ವಿನೋದಗಾರರ ಕೂಟದಲ್ಲಿ ಭಾಗವಹಿಸಿ ನಾನು ಉಲ್ಲಾಸ ಪಟ್ಟವನಲ್ಲ. ನಿಮ್ಮ ಕೈ ನನ್ನ ಮೇಲೆ ಇದ್ದುದರಿಂದ ನಾನು ಒಬ್ಬಂಟಿಗನಾದೆ. ಕೋಪಾವೇಶದಿಂದ ತುಂಬಿದವನಾದೆ.
18 : ನನಗೇಕೆ ನಿರಂತರವಾದ ವೇದನೆ? ಗುಣವಾಗದ ಗಡಸು ಗಾಯ? ನೀರು ಇರುವುದಾಗಿ ತೋರಿಸಿಕೊಳ್ಳುವ ಕಳ್ಳ ತೊರೆಯಾಗಬೇಕೆ ನೀವು ನನಗೆ?”
19 : ಅದಕ್ಕೆ ಸರ್ವೇಶ್ವರ: “ನೀನು ನನಗೆ ಅಭಿಮುಖನಾಗಿ ಹಿಂದಿರುಗಿ ಬಂದರೆ ಮರಳಿ ನಿನ್ನನ್ನು ನನ್ನ ಸೇವೆಗೆ ಸೇರಿಸಿಕೊಳ್ಳುವೆನು. ತುಚ್ಛವಾದುದನ್ನು ತೊರೆದು ಅಮೂಲ್ಯವಾದುದನ್ನು ಉಚ್ಚರಿಸುವೆಯಾದರೆ ನೀನು ನನ್ನ ಬಾಯಂತಿರುವೆ. ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು. ನೀನು ಅವರ ಕಡೆಗೆ ತಿರುಗದಿರುವೆ.
20 : ನಾನು ನಿನ್ನನ್ನು ಆ ಜನರಿಗೆ ದುರ್ಗಮವಾದ ಕಂಚಿನ ಪೌಳಿಗೋಡೆಯನ್ನಾಗಿಸುವೆನು. ನಿನಗೆ ವಿರುದ್ಧ ಅವರು ಯುದ್ಧಮಾಡುವರು. ಆದರೆ ನಿನ್ನನ್ನು ಸೋಲಿಸಲಾಗದು. ನಿನ್ನನ್ನು ಉದ್ಧರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು. ಇದು ಸರ್ವೇಶ್ವರನಾದ ನನ್ನ ಮಾತು. ನಿನ್ನನ್ನು ದುಷ್ಟರ ಕೈಯಿಂದ ಉದ್ಧರಿಸುವೆನು, ಕ್ರೂರಿಗಳ ಕೈಯಿಂದ ರಕ್ಷಿಸುವೆನು.”