Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆರೆವಿೂಯ


1 : ಬರಗಾಲದ ಬಗ್ಗೆ ಸರ್ವೇಶ್ವರ ಯೆರೆಮೀಯನಿಗಿತ್ತ ಸಂದೇಶ:
2 : ‘ಜುದೇಯ ನಾಡು ದುಃಖಿಸುತ್ತಿದೆ ಅದರ ಪುರದ್ವಾರಗಳು ಬಹಳ ಕಪ್ಪಾಗಿವೆ. ಜೆರುಸಲೇಮಿನವರ ಗೋಳಾಟ ಕೇಳಿಸುತ್ತಿದೆ.
3 : ಅವರಲ್ಲಿನ ಶ್ರೀಮಂತರು ತಮ್ಮ ಊಳಿಗದವರನ್ನು ನೀರಿಗೆ ಕಳಿಸುತ್ತಾರೆ. ಅವರೋ ಕೊಳಗಳಲ್ಲಿ ನೀರು ಕಾಣದೆ ಬರೀ ಬಿಂದಿಗೆಗಳೊಂದಿಗೆ ಹಿಂದಿರುಗುತ್ತಾರೆ. ನಿರಾಶೆಗೊಂಡು, ನಾಚಿಕೆಪಟ್ಟು ಮೋರೆ ಮುಚ್ಚಿಕೊಳ್ಳುತ್ತಾರೆ.
4 : ನಾಡಿನಲ್ಲಿ ಮಳೆಯಿಲ್ಲದೆ ಭೂಮಿ ಬಿರುಕುಬಿಟ್ಟಿದೆ ನೇಗಿಲಯೋಗಿ ನಿರಾಶೆಗೊಂಡು ಮೋರೆ ಮುಚ್ಚಿಕೊಳ್ಳುತ್ತಾನೆ.
5 : ಕಾಡಿನಲ್ಲಿ ಹುಲ್ಲಿಲ್ಲದ ಕಾರಣ ತಾಯಿಹುಲ್ಲೆ ಮರಿಹಾಕಿ ಮರೆಯಾಗುತ್ತದೆ.
6 : ಕಾಡುಕತ್ತೆಗಳು ಬೋಳುಗುಡ್ಡಗಳಲ್ಲಿ ನಿಂತು ನಿಟ್ಟುಸಿರು ಬಿಡುತ್ತವೆ ನರಿಗಳಂತೆ ಗಾಳಿಕೋರುತ್ತವೆ, ಸೊಪ್ಪುಸದೆಯಿಲ್ಲದೆ ಕಂಗೆಡುತ್ತವೆ”
7 : ಸೊಪ್ಪುಸದೆಯಿಲ್ಲದೆ ಕಂಗೆಡುತ್ತವೆ” ಸರ್ವೇಶ್ವರಾ, ನಮ್ಮ ದ್ರೋಹಗಳು ಹಲವು ನಿಮಗೆ ವಿರುದ್ಧ ಪಾಪಮಾಡಿದೆವು. ನಮ್ಮ ಅಪರಾಧಗಳೇ ನಮಗೆ ವಿರುದ್ಧ ಸಾಕ್ಷಿ ನೀಡುತ್ತಿವೆ ಆದರೂ ನಿಮ್ಮ ನಾಮದ ನಿಮಿತ್ತ ಕೈ ನೀಡು ನಮಗೆ.
8 : ಸರ್ವೇಶ್ವರಾ, ಇಸ್ರಯೇಲರಿಗೆ ನೀವೇ ನಿರೀಕ್ಷೆ ಇಕ್ಕಟ್ಟಿನಲ್ಲಿ ಅವರಿಗೆ ನೀವೇ ರಕ್ಷೆ. ನಾಡಿನಲ್ಲಿ ಅನ್ಯ ದೇಶೀಯನಂತಿರುವಿರಿ, ಏಕೆ? ರಾತ್ರಿ ಕಳೆಯಲು ಗುಡಾರಹಾಕಿದ ಪ್ರಯಾಣಿಕನಂತಿರುವಿರಿ, ಏಕೆ?
9 : ದಿಕ್ಕು ತೋಚದವನಂತೆ ನಿಶ್ಚಲರಾಗಿರುವಿರಿ, ಏಕೆ? ರಕ್ಷಿಸಲಾಗದ ರಣಧೀರನಂತಿರುವಿರಿ, ಏಕೆ? ಆದರೂ ಸರ್ವೇಶ್ವರಾ, ನೀವು ನಮ್ಮ ಮಧ್ಯೆ ಇರುವಿರಿ; ನಾವು ನಿಮ್ಮ ಹೆಸರಿನವರು, ನಮ್ಮನ್ನು ಕೈಬಿಡಬೇಡಿ.
10 : ಈ ಜನರನ್ನು ಕುರಿತು ಸರ್ವೇಶ್ವರ ನನಗೆ ಹೇಳಿದ ಮಾತುಗಳು: “ಇವರು ಅಲೆದಾಡಲು ಇಷ್ಟಪಡುವ ಜನರು. ತಮ್ಮ ಕಾಲಿನ ಮೇಲೆ ಹತೋಟಿಯಿಲ್ಲದವರು. ಆದಕಾರಣ ಸರ್ವೇಶ್ವರನಾದ ನಾನು ಇವರನ್ನು ಕರುಣೆಯಿಂದ ನೋಡುವುದಿಲ್ಲ. ಇದೀಗಲೆ ಇವರ ಅಪರಾಧಗಳನ್ನು ನೆನಪಿಗೆ ತಂದುಕೊಂಡು ಇವರ ಪಾಪಗಳಿಗೆ ದಂಡನೆಯನ್ನು ವಿಧಿಸುವೆನು.”
11 : ಸರ್ವೇಶ್ವರ ಮತ್ತೆ ನನಗೆ: “ಈ ಜನರ ಹಿತವನ್ನು ಬಯಸಿ ಇವರಿಗೋಸ್ಕರ ಪ್ರಾರ್ಥನೆ ಮಾಡಬೇಡ.
12 : ಇವರು ಉಪವಾಸ ಕೈಗೊಂಡರೂ ಇವರ ಮೊರೆಯನ್ನು ನಾನು ಕೇಳುವುದಿಲ್ಲ. ದಹನಬಲಿಗಳನ್ನೂ ಧಾನ್ಯನೈವೇದ್ಯಗಳನ್ನೂ ಅರ್ಪಿಸಿದರೂ ಸ್ವೀಕರಿಸುವುದಿಲ್ಲ. ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಇವರನ್ನು ಮುಗಿಸಿಬಿಡುತ್ತೇನೆ,” ಎಂದು ಹೇಳಿದರು.
13 : ಆಗ ನಾನು, “ಅಯ್ಯೋ, ಸ್ವಾಮಿ ಸರ್ವೇಶ್ವರಾ, ಈ ಜನರಿಗೆ, ‘ಖಡ್ಗ ನಿಮ್ಮ ಕಣ್ಣಿಗೂ ಕಾಣಿಸದು, ಕ್ಷಾಮ ನಿಮಗೆಂದಿಗೂ ಬಂದೊದಗದು. ಸರ್ವೇಶ್ವರ ಈ ನಾಡಿನಲ್ಲೆ ನಿಮಗೆ ಚಿರಶಾಂತಿ ಸಮಾಧಾನವನ್ನು ಕೊಡುವರು’ ಎಂದು ಪ್ರವಾದಿಗಳೇ ನುಡಿಯುತ್ತಿದ್ದಾರೆ,” ಎಂದು ಹೇಳಿದೆನು.
14 : ಅದಕ್ಕೆ ಸರ್ವೇಶ್ವರ ನನಗೆ: “ಪ್ರವಾದಿಗಳು ನನ್ನ ಹೆಸರೆತ್ತಿ ಸುಳ್ಳು ಪ್ರವಾದನೆ ಮಾಡುತ್ತಿದ್ದಾರೆ. ನಾನು ಅವರನ್ನು ಕಳಿಸಲಿಲ್ಲ, ಅವರಿಗೆ ಅಪ್ಪಣೆಕೊಟ್ಟಿಲ್ಲ. ಅವರೊಡನೆ ಮಾತಾಡಿದ್ದಿಲ್ಲ. ಅವರು ಕಳ್ಳದರ್ಶನಗಳನ್ನು, ಕಣಿಗಳನ್ನು, ಮಾಯಮಂತ್ರಗಳನ್ನು ಹಾಗು ತಾವೇ ಕಲ್ಪಿಸಿಕೊಂಡ ಕಪಟವನ್ನು ನಿಮಗೆ ಪ್ರಕಟಿಸುತ್ತಿದ್ದಾರೆ.
15 : ಆದುದರಿಂದ ನನ್ನ ಅಪ್ಪಣೆಯಿಲ್ಲದೆ, ನನ್ನ ಹೆಸರೆತ್ತಿ, ಪ್ರವಾದನೆ ಮಾಡುತ್ತಾ ಖಡ್ಗವಾಗಲಿ, ಕ್ಷಾಮವಾಗಲಿ ಈ ನಾಡಿಗೆ ಬರುವುದಿಲ್ಲ ಎಂದು ಬೋಧಿಸುತ್ತಿದ್ದಾರಲ್ಲವೆ? ಆ ಪ್ರವಾದಿಗಳ ವಿಷಯದಲ್ಲಿ ಸರ್ವೇಶ್ವರನಾದ ನಾನು ಹೇಳುವುದೇನೆಂದರೆ – ಖಡ್ಗದಿಂದಲೆ, ಕ್ಷಾಮದಿಂದಲೆ ಆ ಪ್ರವಾದಿಗಳು ನಾಶವಾಗುವರು.
16 : ಅವರ ಪ್ರವಾದನೆಗೆ ಕಿವಿಗೊಡುವ ಜನರು ಕೂಡ ಕ್ಷಾಮಖಡ್ಗಗಳಿಗೆ ತುತ್ತಾಗುವರು. ಜೆರುಸಲೇಮಿನ ಬೀದಿಗಳಲ್ಲಿ ಬಿಸಾಡಲ್ಪಡುವರು. ಅವರನ್ನೂ ಅವರ ಮಡದಿ ಮಕ್ಕಳನ್ನೂ ಹೂಣಲು ಸಹ ಯಾರೂ ಇರುವುದಿಲ್ಲ. ಅವರ ದುಷ್ಟತನವನ್ನು ಅವರ ಮೇಲೆಯೆ ಸುರಿದು ಬಿಡುವೆನು.”
17 : “ನೀನು ನಿನ್ನ ದುಃಖವನ್ನು ಅವರಿಗೆ ಹೀಗೆಂದು ವ್ಯಕ್ತಪಡಿಸು – ‘ರಾತ್ರಿಹಗಲು ನನ್ನ ಕಣ್ಣೀರು ಸುರಿಯಲಿ ನಿರಂತರವಾಗಿ ಏಕೆಂದರೆ ನನ್ನ ಜನವೆಂಬ ಯುವತಿ ಗಾಯಗೊಂಡಿದ್ದಾಳೆ ತೀವ್ರವಾಗಿ, ಹೌದು, ಅವಳಿಗೆ ಪೆಟ್ಟುಬಿದ್ದಿದೆ ಗಡುಸಾಗಿ.
18 : ಊರುಬಿಟ್ಟು ಹೊರಗೆ ಹೋದರೆ ಅಲ್ಲಿ ಕಾಣಿಸುತ್ತಾರೆ ಖಡ್ಗದಿಂದ ಸತ್ತವರು. ಊರ ಒಳಗೆ ಬಂದರೆ ಅಲ್ಲಿ ಕಾಣಿಸುತ್ತಾರೆ ಕ್ಷಾಮದಿಂದ ನರಳುವವರು. ಅಪರಿಚಿತನಾಡಿಗೆ ಗಡೀಪಾರಾಗಿದ್ದಾರೆ ಪ್ರವಾದಿಗಳು ಮತ್ತು ಯಾಜಕರು’.”
19 : “ಸ್ವಾವಿೂ, ನೀವು ಜುದೇಯವನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿರೊ? ಸಿಯೋನಿನ ಬಗ್ಗೆ ನಿಮಗೆ ಮನಃಪೂರ್ವಕವಾದ ಅಸಹ್ಯ ಹುಟ್ಟಿದೆಯೊ? ಗುಣವಾಗದಂಥ ಪೆಟ್ಟನ್ನು ನಮಗೆ ಕೊಟ್ಟಿರುವಿರಿ ಏಕೆ? ಸುಖವನ್ನು ನಿರೀಕ್ಷಿಸಿದೆವು, ಸಿಗಲಿಲ್ಲ ನಮಗೆ ಯಾವ ಫಲ. ಸುಕ್ಷೇಮವನ್ನು ಎದುರು ನೋಡಿದೆವು, ಇಗೋ ಬಂದೊದಗಿದೆ ಸಂಕಟ.
20 : ಹೇ ಸರ್ವೇಶ್ವರಾ, ಒಪ್ಪಿಕೊಂಡಿದ್ದೇವೆ ನಮ್ಮ ದುಷ್ಟತನವನ್ನು ನಮ್ಮ ಪೂರ್ವಜರು ಎಸಗಿದ ದುರಾಚಾರವನ್ನು ನಾವು ಮಾಡಿದ ಪಾಪ ನಿಮಗೆ ವಿರುದ್ಧವೆಂಬುದನ್ನು.
21 : ನಿಮ್ಮ ನಾಮವನ್ನು ಮುಂದಿಟ್ಟು, ನಮಗೆ ಅವಮಾನ ಮಾಡಬೇಡಿ ನಿಮ್ಮ ಮಹಿಮೆಯ ಸಿಂಹಾಸನವನ್ನು ಅಸಡ್ಡೆ ಮಾಡಬೇಡಿ ನಮ್ಮೊಡನೆ ಮಾಡಿದ ಒಡಂಬಡಿಕೆಯನ್ನು ನೆನೆಯಿರಿ. ಅದನ್ನು ಭಂಗಪಡಿಸಬೇಡಿ.
22 : ಅನ್ಯಜನಾಂಗಗಳ ಶೂನ್ಯದೇವತೆಗಳಲ್ಲಿ ಮಳೆಸುರಿಸಬಲ್ಲವರುಂಟೆ? ಆಕಾಶವು ತಾನಾಗಿ ಹದಮಳೆಯನ್ನು ಬರಮಾಡಬಲ್ಲುದೆ? ನಮ್ಮ ದೇವರಾದ ಸರ್ವೇಶ್ವರಾ, ವೃಷ್ಟಿದಾತರು ನೀವೇ ನಾವು ನಿರೀಕ್ಷಿಸುತ್ತಿರುವುದು ನಿಮ್ಮನ್ನೇ ಹೌದು, ಇವುಗಳನ್ನೆಲ್ಲ ನಡೆಸುವವರು ನೀವೇ.

· © 2017 kannadacatholicbible.org Privacy Policy