1 :
ಸರ್ವೇಶ್ವರಸ್ವಾಮಿ ಯೆರೆಮೀಯನಾದ ನನಗೆ ದಯಪಾಲಿಸಿದ ವಾಕ್ಯ ಇದು:
2 : “ಒಡಂಬಡಿಕೆಯ ಈ ವಚನಗಳನ್ನು ಕೇಳಿ ಯೆಹೂದ್ಯರಿಗೂ ಜೆರುಸಲೇಮಿನ ನಿವಾಸಿಗಳಿಗೂ ಸಾರು.
3 : ನೀನು ಅವರಿಗೆ ಹೇಳಬೇಕಾದುದು ಕಬ್ಬಿಣ ಕರಗಿಸುವ ಕುಲುಮೆಯಂತಿದ್ದ ಈಜಿಪ್ಟ್ ದೇಶದಿಂದ ನಿಮ್ಮ ಪೂರ್ವಜರನ್ನು ನಾನು ಬರಮಾಡಿದಾಗ ಅವರಿಗೆ
4 : ‘ನೀವು ನನ್ನ ಮಾತನ್ನು ಕೇಳಿ ನಾನು ನಿಮಗೆ ಆಜ್ಞಾಪಿಸಿರುವ ವಿಧಿಗಳನ್ನೆಲ್ಲಾ ಕೈಗೊಂಡರೆ ನೀವು ನನ್ನ ಪ್ರಜೆಯಾಗಿರುವಿರಿ; ನಾನು ನಿಮ್ಮ ದೇವರಾಗಿರುವೆನು.
5 : ಹಾಲೂ ಜೇನೂ ಹರಿಯುವ ನಾಡನ್ನು, ಅಂದರೆ ಇಂದು ನೀವಿರುವ ನಾಡನ್ನು, ಕೊಡುವುದಾಗಿ ನಿಮ್ಮ ಮೂಲಪಿತೃಗಳಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು’ ಎಂದು ಹೇಳಿದ್ದೆ. ಈ ಒಡಂಬಡಿಕೆಯ ವಚನಗಳಿಗೆ ಕಿವಿಗೊಡದವನು ಶಾಪಗ್ರಸ್ತನು. ಇದು ಇಸ್ರಯೇಲಿನ ದೇವರಾದ ಸರ್ವೇಶ್ವರ ಹೇಳುವ ಮಾತು.”
ಆಗ ನಾನು, “ತಮ್ಮ ಅಪ್ಪಣೆಯಂತಾಗಲಿ, ಸರ್ವೇಶ್ವರಾ,” ಎಂದು ಉತ್ತರಕೊಟ್ಟೆ.
6 : ಸರ್ವೇಶ್ವರ ನನಗೆ: “ಜುದೇಯದ ನಗರಗಳಲ್ಲೂ ಜೆರುಸಲೇಮಿನ ಹಾದಿಬೀದಿಗಳಲ್ಲೂ ಈ ಸಮಾಚಾರವನ್ನು ಹರಡು-ಈ ಒಡಂಬಡಿಕೆಯ ವಚನಗಳನ್ನು ಕೇಳಿ ಅದರಂತೆ ನಡೆದುಕೊಳ್ಳಿರಿ.
7 : ನಿಮ್ಮ ಪೂರ್ವಜರನ್ನು ಈಜಿಪ್ಟ್ ದೇಶದಿಂದ ಬರಮಾಡಿದ ದಿನದಿಂದ ಇಂದಿನವರೆಗೂ ನಾನು ಅವರಿಗೆ ನನ್ನ ಮಾತನ್ನು ಕೇಳಿರೆಂದು ತಡಮಾಡದೆ ಖಂಡಿತವಾಗಿ ಆಜ್ಞಾಪಿಸುತ್ತಾ ಬಂದಿದ್ದೇನೆ.
8 : ಅವರಾದರೋ ಕೇಳಲಿಲ್ಲ, ಕಿವಿಗೊಡಲಿಲ್ಲ, ಪ್ರತಿಯೊಬ್ಬನು ತನ್ನ ದುಷ್ಟ ಹೃದಯದ ನಿಮಿತ್ತ ಹಟಮಾರಿಯಂತೆ ನಡೆದುಕೊಂಡನು. ಆದ ಕಾರಣ, ಕೈಗೊಳ್ಳಬೇಕೆಂದು ನಾನು ಆಜ್ಞಾಪಿಸಿದ್ದರೂ ಅವರು ಕೈಗೊಳ್ಳದೆ ಹೋದ ಆ ಒಡಂಬಡಿಕೆಯಲ್ಲೆ ಸೂಚಿಸಲಾಗಿರುವ ಶಾಪಗಳನ್ನೆಲ್ಲ ಅವರ ಮೇಲೆ ಬರಮಾಡಿದೆ.”
9 : ಮತ್ತೆ ಸರ್ವೇಶ್ವರ ನನಗೆ: “ಜುದೇಯದ ಹಾಗು ಜೆರುಸಲೇಮಿನ ನಿವಾಸಿಗಳಲ್ಲಿ ಒಳಸಂಚು ಕಂಡುಬಂದಿದೆ.
10 : ನನ್ನ ಮಾತನ್ನು ಕೇಳದೆ ಹೋದ ತಮ್ಮ ಮೂಲಪಿತೃಗಳ ದುಷ್ಕøತ್ಯಗಳ ಕಡೆ ಈ ಜನರು ತಿರುಗಿಕೊಂಡಿದ್ದಾರೆ. ಅನ್ಯ ದೇವತೆಗಳನ್ನು ಹಿಂಬಾಲಿಸುತ್ತಿದ್ದಾರೆ. ಅವುಗಳನ್ನು ಪೂಜಿಸುತ್ತಿದ್ದಾರೆ. ನಾನು ಅವರ ಪೂರ್ವಜರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಇಸ್ರಯೇಲ್ ವಂಶದವರೂ ಜುದೇಯ ವಂಶದವರೂ ಮೀರಿದ್ದಾರೆ.
11 : ಆದಕಾರಣ ಸರ್ವೇಶ್ವರನಾದ ನಾನು ಹೇಳುವುದೇನೆಂದರೆ: ಇಗೋ, ತಪ್ಪಿಸಿಕೊಳ್ಳಲಾಗದ ಕೇಡನ್ನು ಅವರ ಮೇಲೆ ಬರಮಾಡುವೆನು. ಇವರು ನನಗೆ ಮೊರೆಯಿಟ್ಟರೂ ನಾನೂ ಕಿವಿಗೊಡೆನು.
12 : ಆಗ ಜುದೇಯದ ನಗರದವರೂ ಜೆರುಸಲೇಮಿನ ನಿವಾಸಿಗಳೂ ಯಾವ ದೇವತೆಗಳಿಗೆ ಧೂಪಾರತಿಯೆತ್ತಿದರೋ ಅವುಗಳನ್ನು ಮರೆಹೊಕ್ಕು ಕೂಗಿಕೊಳ್ಳುವರು. ಆದರೆ ಅಂಥ ಕೇಡಿನ ಕಾಲದಲ್ಲಿ ಆ ದೇವತೆಗಳಿಂದ ಅವರಿಗೆ ಯಾವ ರಕ್ಷಣೆಯೂ ದೊರಕದು.
13 : ಎಲೈ ಯೆಹೂದ ಜನರೇ, ನಿಮಗೆ ಎಷ್ಟು ನಗರಗಳಿವೆಯೋ ಅಷ್ಟೂ ದೇವರುಗಳಿದ್ದಾರೆ. ಜೆರುಸಲೇಮಿನಲ್ಲಿ ಹಾದಿಬೀದಿಗಳು ಎಷ್ಟಿವೆಯೋ ಅಷ್ಟೂ ಬಲಿಪೀಠಗಳಿವೆ, ಆ ತುಚ್ಛ ದೇವತೆ ಬಾಳನಿಗೆ ಧೂಪಾರತಿಯೆತ್ತಲು.
14 : ಆದುದರಿಂದ ಯೆರೆಮೀಯನೇ, ಈ ಜನರ ಪರವಾಗಿ ಬೇಡಿಕೊಳ್ಳಬೇಡ. ಇವರಿಗಾಗಿ ಮೊರೆಯಿಡಬೇಡ, ಪ್ರಾರ್ಥಿಸಲೂಬೇಡ. ಅವರಿಗೆ ಕೇಡು ಬಂದಾಗ ನನ್ನನ್ನು ಗೋಗರೆದರೂ ನಾನು ಕೇಳುವುದಿಲ್ಲ.
15 : “ನನಗೆ ಆಪ್ತವಾದ ಜನತೆಯು, ನನಗೆ ಅಸಹ್ಯಕಾರ್ಯಗಳನ್ನು ಮಾಡಿದ್ದೇಕೆ? ನನ್ನ ಆಲಯದಲ್ಲಿ ಅದಕ್ಕಿರುವ ಹಕ್ಕಾದರೂ ಏನು? ವ್ರತಗಳ ಮೂಲಕ, ಪಶುಬಲಿ ಮಾಂಸದ ಮೂಲಕ ಅದು ಬರಲಿರುವ ದಂಡನೆಯನ್ನು ತಡೆಗಟ್ಟಬಲ್ಲದೆ?
16 : ಸರ್ವೇಶ್ವರನಾದ ನಾನು ಅದಕ್ಕೆ “ಸುಂದರ ಫಲದಿಂದ ಕೂಡಿದ ಚೆಲುವಾದ ಹಚ್ಚನೆಯ ಓಲಿವ್ ಮರ’ ಎಂದು ಹೆಸರಿಟ್ಟೆ. ಆದರೆ ಅದೇ ಮರಕ್ಕೆ ಬೆಂಕಿಯಿಟ್ಟು ಧಗಧಗನೆ ಉರಿಯುವಂತೆ ಮಾಡುವೆನು. ಅದರ ರೆಂಬೆಗಳು ಸುಟ್ಟುಹೋಗುವುವು.
17 : “ಸರ್ವಶಕ್ತ ಸರ್ವೇಶ್ವರನಾದ ನಾನೇ ಈ ಇಸ್ರಯೇಲನ್ನೂ ಜುದೇಯವನ್ನೂ ನೆಟ್ಟಿ ಬೆಳೆಸಿದೆ. ಆದರೆ ಈಗ ‘ನಿನಗೆ ಕೇಡು,’ ಎಂದು ಶಪಿಸುತ್ತಿದ್ದೇನೆ. ಏಕೆಂದರೆ ಬಾಳನಿಗೆ ಧೂಪಾರತಿಯೆತ್ತಿ, ನನ್ನನ್ನು ಕೆಣಕಿ, ತಮಗೇ ಕೆಡುಕನ್ನು ಮಾಡಿಕೊಂಡಿದ್ದಾರೆ.
18 :
ಸರ್ವೇಶ್ವರಸ್ವಾಮಿ ತಿಳಿಸಿದ್ದರಿಂದಲೇ ಶತ್ರುಗಳು ನನಗೆ ವಿರುದ್ಧ ಹೂಡಿದ್ದ ಕುತಂತ್ರವು ನನಗೆ ಗೊತ್ತಾಯಿತು. ಅವರ ಕೃತ್ಯಗಳನ್ನು ನನಗೆ ತೋರಿಸಲಾಯಿತು.
19 : ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಯಂತೆ ಇದ್ದೆ. “ಮರವನ್ನು ಫಲಸಹಿತ ನಾಶಪಡಿಸೋಣ, ಜೀವ ಲೋಕದಿಂದ ಇವನನ್ನು ನಿರ್ಮೂಲ ಮಾಡೋಣ. ಅವನ ಹೆಸರೇ ಇಲ್ಲದಂತಾಗಲಿ,” ಎಂದು ಅವರು ಕುಯುಕ್ತಿ ಕಲ್ಪಿಸಿದ್ದರು. ಆದರೆ ನನಗೆ ಅದು ತಿಳಿದಿರಲಿಲ್ಲ.
20 : ಆಗ ನಾನು, “ಸೇನಾಧೀಶ್ವರರಾದ ಸರ್ವೇಶ್ವರಾ, ನೀವು ಹೃನ್ಮನಗಳನ್ನು ಪರೀಕ್ಷಿಸಿ ನ್ಯಾಯವಾದ ತೀರ್ಪನ್ನು ನೀಡುವವರು. ನೀವು ಅವರಿಗೆ ಮಾಡುವ ಪ್ರತೀಕಾರವನ್ನು ನಾನು ಕಾಣುವೆನು. ನನ್ನ ವ್ಯಾಜ್ಯವನ್ನು ನಿಮ್ಮ ಕೈಗೊಪ್ಪಿಸಿದ್ದೇನೆ,” ಎಂದೆನು.
21 : ಹೀಗಿರಲು, “ಸರ್ವೇಶ್ವರನ ಹೆಸರೆತ್ತಿ ಪ್ರವಾದನೆ ಮಾಡಬೇಡ, ಮಾಡಿದರೆ ನಮ್ಮ ಕೈಯಿಂದಲ ನೀನು ಸಾಯುವೆ,” ಎಂದು ಅನಾತೋತಿನವರು ನನ್ನ ಪ್ರಾಣಕ್ಕೆ ಹೊಂಚು ಹಾಕುತ್ತಿದ್ದರು.
22 : ಅವರ ವಿಷಯವಾಗಿ ಸರ್ವೇಶ್ವರ, “ಇಗೋ ಅವರನ್ನು ನಾನು ದಂಡಿಸಿಯೇ ತೀರುವೆನು. ಅವರ ಯುವಕರು ಕತ್ತಿಗೆ ತುತ್ತಾಗುವರು. ಅವರ ಗಂಡುಹೆಣ್ಣು ಮಕ್ಕಳು ಕ್ಷಾಮದಿಂದ ಸಾಯುವರು.
23 : ದಂಡನೆಯ ಕಾಲವನ್ನು ಗೊತ್ತು ಮಾಡಿರುವೆನು. ಅದು ಬಂದಾಗ ಅವರಲ್ಲಿ ಯಾರೂ ಉಳಿಯರು. ಇದು ನನ್ನ ತೀರ್ಮಾನ,” ಎಂದರು.