Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಶಾಯ


1 : (ಸ್ವಾಮೀ) ಆಕಾಶವನ್ನು ಸೀಳಿ ಇಳಿದು ಬರಲಾರಿರಾ? ನಿಮ್ಮ ದರ್ಶನವನ್ನು ಕಂಡು ಬೆಟ್ಟಗುಡ್ಡಗಳು ಗಡಗಡನೆ ನಡುಗಬಾರದೆ?
2 : ಒಣಗಿಡಕ್ಕೆ ಹಚ್ಚುವ ಕಿಚ್ಚಿನಂತೆ, ನೀರನ್ನು ಕುದಿಸುವ ಬೆಂಕಿಯಂತೆ ನೀವು ಪ್ರತ್ಯಕ್ಷರಾಗಲಾರಿರಾ?
3 : ನಮ್ಮ ನಿರೀಕ್ಷೆಗೆ ಮೀರಿದ ಮಹತ್ಕಾರ್ಯಗಳನ್ನು ನಡೆಸಿ, ನಿಮ್ಮ ನಾಮ ಮಹಿಮೆಯನ್ನು ನಿಮ್ಮ ಶತ್ರುಗಳಿಗೆ ಪ್ರದರ್ಶಿಸಿ, ಅನ್ಯರಾಷ್ಟ್ರಗಳನ್ನು ನಡುಗಿಸಲಾರಿರಾ? ಹೌದು, ನೀವು ಇಳಿದುಬಂದು, ಬೆಟ್ಟಗುಡ್ಡಗಳು ನಡುಗಿದರೆ ಎಷ್ಟೋ ಲೇಸು.
4 : ತಮ್ಮನ್ನು ಕಾದು ಎದುರು ನೋಡುವವರ ಪರವಾಗಿ ಕಾರ್ಯಗತರಾಗುವಂಥ ದೇವರು, ನಿಮ್ಮನ್ನು ಬಿಟ್ಟರೆ, ಯಾರಿದ್ದಾರೆ? ಅಂಥಾ ದೇವರನ್ನು ಲೋಕಾದಿಯಿಂದ ಯಾರೂ ಕಂಡಿಲ್ಲ, ಅಂಥವರು ಯಾರ ಕಿವಿಗೂ ಬೀಳಲಿಲ್ಲ. ಯಾವ ಕಣ್ಣಿಗೂ ಕಾಣಿಸಲಿಲ್ಲ.
5 : ಸದಾಚಾರದಲ್ಲೇ ಸಂತೋಷಪಡುತ್ತಾ, ನಿಮ್ಮ ಮಾರ್ಗದಲ್ಲಿ ನಡೆಯುತ್ತಾ, ನಿಮ್ಮನ್ನು ಸ್ಮರಿಸುತ್ತಾ ಬಂದವರಿಗೆ ಪ್ರತ್ಯಕ್ಷರಾಗುತ್ತೀರಿ. ನಮ್ಮ ಮೇಲಾದರೋ ಕೋಪಗೊಂಡಿರಿ. ಆದರೂ ನಾವು ಪಾಪದಲ್ಲೇ ಮುನ್ನಡೆದೆವು. ಬಹುಕಾಲದಿಂದ ಪಾಪದಲ್ಲಿ ಮುಳುಗಿಹೋದೆವು. ನಮ್ಮಂಥವರಿಗೆ ರಕ್ಷಣೆ ಇದೆಯೇ?
6 : ನಾವೆಲ್ಲರೂ ಅಶುದ್ಧರು, ನಮ್ಮ ಸತ್ಕಾರ್ಯಗಳೆಲ್ಲ ಕೊಳಕು, ತರಗೆಲೆಯಂತೆ ಒಣಗಿ ಹೋಗಿದ್ದೇವೆ. ಬಿರುಗಾಳಿಯಂತೆ ನಮ್ಮನ್ನು ತಳ್ಳಿಕೊಂಡು ಬಂದಿವೆ, ನಮ್ಮ ಅಪರಾಧಗಳು.
7 : ನಿಮ್ಮ ನಾಮಸ್ಮರಣೆ ಮಾಡುವವನು ಯಾರೂ ಇಲ್ಲ. ನಿಮ್ಮ ಆಶ್ರಯ ಕೋರುವ ಆಸಕ್ತನು ಎಲ್ಲಿಯೂ ಇಲ್ಲ. ಏಕೆಂದರೆ ನೀವು ನಮಗೆ ವಿಮುಖರಾಗಿದ್ದೀರಿ. ನಮ್ಮ ಪಾಪಗಳ ವಶಕ್ಕೆ ನಮ್ಮನ್ನು ಬಿಟ್ಟುಬಿಟ್ಟಿದ್ದೀರಿ.
8 : ಆದರೂ ಸ್ವಾಮಿ ಸರ್ವೇಶ್ವರಾ, ನೀವು ನಮ್ಮ ತಂದೆ. ನಾವು ಜೇಡಿಮಣ್ಣು, ನೀವೇ ಕುಂಬಾರ; ನಾವೆಲ್ಲರು ನಿಮ್ಮ ಕೈಯ ಕೃತಿಗಳು.
9 : ಸ್ವಾಮಿ, ನಮ್ಮ ಮೇಲೆ ಅತಿಕೋಪಗೊಳ್ಳದಿರಿ. ಸದಾ ನಮ್ಮ ಅಕ್ರಮಗಳನ್ನು ನೆನೆಸದಿರಿ, ಇಗೋ ನೋಡಿ, ಬೇಡುತ್ತಿದ್ದೇವೆ, ನಾವೆಲ್ಲರೂ ನಿಮ್ಮ ಜನರು.
10 : ನಿಮ್ಮ ಪವಿತ್ರ ಪಟ್ಟಣಗಳು ಕಾಡಾಗಿವೆ. ಸಿಯೋನ್ ಪಾಳುಬಿದ್ದಿದೆ. ಜೆರುಸಲೇಮ್ ಹಾಳಾಗಿಹೋಗಿದೆ.
11 : ನಮ್ಮ ಪಿತೃಗಳು ನಿಮ್ಮನ್ನು ಕೀರ್ತಿಸುತ್ತಿದ್ದ ಆ ಸ್ಥಳವೇ, ಆ ನಮ್ಮ ಚೆಲುವ ಪವಿತ್ರಾಲಯವೇ, ಬೆಂಕಿಯ ಪಾಲಾಗಿದೆ. ನಮ್ಮ ಅಮೂಲ್ಯ ವಸ್ತುಗಳೆಲ್ಲ ನಾಶವಾಗಿವೆ.
12 : ಸ್ವಾಮಿ ಸರ್ವೇಶ್ವರಾ, ಇವುಗಳನ್ನು ನೋಡಿಯೂ ಸುಮ್ಮನಿರುವಿರಾ? ನೆಮ್ಮದಿಯಿಂದಿರುವಿರಾ? ನಾವು ತಡೆದುಕೊಳ್ಳಲಾಗದಷ್ಟು ದಂಡಿಸುತ್ತಿರುವಿರಾ?

· © 2017 kannadacatholicbible.org Privacy Policy