1 : “ಎದೋಮಿನ ಬೊಚ್ರನಗರದಿಂದ ಬರುವ ಈತನು ಯಾರು? ರಕ್ತ ಗೆಂಪಾದ ಉಡುಪನ್ನುಟ್ಟು ಥಳಥಳಿಸುವ ವಸ್ತ್ರಗಳನ್ನು ಧರಿಸಿಕೊಂಡು, ಮಹಾಶೌರ್ಯದಿಂದ ಮೆರೆಯುತ್ತಾ ನಡೆದುಬರುವ ಈತನು ಯಾರು? “ಆತನು ನಾನೇ, ಸತ್ಯವನು ಘೋಷಿಸುವವನು, ಆತನು ನಾನೇ, ಉದ್ಧರಿಸಲು ಸಮರ್ಥನು”.
2 : ನಿನ್ನ ಉಡುಪೇತಕೆ ಕೆಂಪಗಿದೆ? ನಿನ್ನ ಬಟ್ಟೆಗಳೇಕೆ ದ್ರಾಕ್ಷೆಯನು ತುಳಿಯುವವನ ಬಟ್ಟೆಯ ಹಾಗಿದೆ?
3 : “ದ್ರಾಕ್ಷಿಹಣ್ಣನು ತುಳಿವಂತೆ
ತುಳಿದಿದ್ದೇನೆ ರಾಷ್ಟ್ರಗಳನು ಒಬ್ಬಂಟಿಗನಾಗೇ
ಯಾರು ಇರಲಿಲ್ಲ ನನಗೆ ಸಹಾಯಕ್ಕೆ.
ಅವರನ್ನು ತುಳಿದೆ ಕೋಪದಿಂದ
ರೋಷಾವೇಶದಿಂದ ಹೊಸಕಿದೆ ಕಾಲಿನಿಂದ.
ಅವರ ರಕ್ತ ನನ್ನ ಬಟ್ಟೆಗಳ ಮೇಲೆ ಸಿಡಿದಿದೆ.
ನನ್ನ ಉಡುಪಿಗೆಲ್ಲಾ ಆ ಬಿಸಿರಕ್ತ
ಮೆತ್ತಿಕೊಂಡಿದೆ.
4 : ಏಕೆಂದರೆ, ನನ್ನ ಜನರನು ಉದ್ಧರಿಸುವ
ವರುಷವು ಬಂದಿತ್ತು
ಮುಯ್ಯಿತೀರಿಸುವ ದಿನವು ನನ್ನ ಮನದಲ್ಲಿ
ನಿಶ್ಚಿತವಾಗಿತ್ತು.
5 : ಸುತ್ತಲು ನೋಡಿದೆ, ಯಾರು ಇರಲಿಲ್ಲ
ಸಹಾಯ ಮಾಡಲು ನನಗೆ
ಒತ್ತಾಸೆಗೆ ಒಬ್ಬನೂ ಇಲ್ಲದ್ದನ್ನು ಕಂಡು
ಸ್ತಬ್ಧನಾದೆ.
ಆಗ ನನ್ನ ಭುಜಬಲವೇ ಜಯಕ್ಕೆ
ಅಡಿಪಾಯವಾಯಿತು.
6 : ರಾಷ್ಟ್ರಗಳನು ತುಳಿದೆ ಕುಪಿತನಾಗಿ
ಅವುಗಳನು ನುಚ್ಚುನೂರುಮಾಡಿದೆ
ರೋಷಾವಿಷ್ಟನಾಗಿ
ಅವುಗಳ ರಕ್ತವನು ನೆಲದಲಿ ಹರಿಸಿದೆ
ಪ್ರವಾಹವಾಗಿ.
7 : ಸ್ಮರಿಸುವೆನು ಸರ್ವೇಶ್ವರನ
ಸ್ತುತ್ಯಕಾರ್ಯಗಳನು
ಆತನ ಅಚಲಪ್ರೀತಿಯನು,
ಕೃಪಾತಿಶಯಗಳನು.
ಹೊಗಳುವೆನು ಆತನೆಮಗೆ ಅನುಗ್ರಹಿಸಿದ
ಎಲ್ಲ ವರದಾನಗಳಿಗಾಗಿ
ಇಸ್ರಯೇಲ್ ವಂಶಜರಿಗೆ ಮಾಡಿದ
ಮಹೋಪಕಾರಗಳಿಗಾಗಿ.
8 : “ನಿಜವಾಗಿ ಇವರು ನನ್ನ ಜನ, ನನ್ನ ಮಕ್ಕಳು, ನನಗೆ ಮೋಸಮಾಡರು,” ಎಂದುಕೊಂಡರು ಸರ್ವೇಶ್ವರಸ್ವಾಮಿ.
9 : ಆ ಜನರ ಕಷ್ಟ ದುಃಖಗಳಲ್ಲಿ ಸಂರಕ್ಷಿಸಿದರು. ದಯೆಯಿಂದಲೂ ಪ್ರೀತಿಯಿಂದಲೂ ಅವರಿಗೆ ಬಿಡುಗಡೆ ನೀಡಿದರು. ಪುರಾತನ ಕಾಲದಲ್ಲೆಲ್ಲಾ ಅವರನ್ನು ಎತ್ತಿ ಹೊತ್ತು ಆದರಿಸಿದರು.
10 : ಅವರಾದರೋ ಬಂಡಾಯವೆದ್ದರು; ಸ್ವಾಮಿಯ ಪವಿತ್ರಾತ್ಮನನ್ನು ದುಃಖಪಡಿಸಿದರು. ಎಂತಲೇ ಸರ್ವೇಶ್ವರ ಅವರಿಗೆ ಶತ್ರುವಾಗಿ ಮಾರ್ಪಟ್ಟರು, ತಾವೇ ಅವರಿಗೆ ವಿರುದ್ಧವಾಗಿ ಹೋರಾಡಿದರು.
11 : ಆಗ ಆ ಜನರು ಪುರಾತನ ಮೋಶೆಯ ಕಾಲವನ್ನು ನೆನಪಿಗೆ ತಂದುಕೊಂಡು ಹೀಗೆಂದರು: “ತನ್ನ ಜನರೆಂಬ ಮಂದೆಯನ್ನು, ಅದರ ಕುರುಬನ ಸಮೇತ ಸಮುದ್ರದಿಂದ ಸುರಕ್ಷಿತವಾಗಿ ಬರಮಾಡಿದ ಸ್ವಾಮಿ ಎಲ್ಲಿ? ಆ ಜನರಿಗೆ ತಮ್ಮ ಪವಿತ್ರಾತ್ಮನನ್ನು ಪ್ರದಾನಮಾಡಿದ ಸ್ವಾಮಿ ಎಲ್ಲಿ?
12 : ಮೋಶೆಯ ಬಲಗೈಗೆ ತಮ್ಮ ಮಹಿಮಾ ಭುಜಬಲವನ್ನು ನೀಡಿದ ಸ್ವಾಮಿ ಎಲ್ಲಿ? ಆತನ ಕೈಯಿಂದ ಜಲರಾಶಿಯನ್ನು ಆ ಜನರ ಕಣ್ಮುಂದೆ ಇಬ್ಬಾಗಿಸಿದ ಸ್ವಾಮಿ ಎಲ್ಲಿ? ಹೀಗೆ ತಮ್ಮ ಹೆಸರನ್ನು ಶಾಶ್ವತವಾಗಿಸಿಕೊಂಡ ಸ್ವಾಮಿ ಎಲ್ಲಿ?
13 : ಬಯಲಿನಲ್ಲಿ ಸರಾಗವಾಗಿ ನಡೆವ ಕುದುರೆಯಂತೆ ಆ ಜನರನ್ನು ಜಲದಮೇಲೆ ನಡೆಸಿದ ಸ್ವಾಮಿ ಎಲ್ಲಿ?
14 : ತಪ್ಪಲಿಗೆ ಇಳಿದ ದನಕರುಗಳಂತೆ ಆ ಜನರನ್ನು ಕರೆತಂದಿತು ಸ್ವಾಮಿಯ ಆತ್ಮ ಶಾಂತಿ ನಿಲಯಕೆ. ಹೀಗೆ, ಆ ಜನರಿಗೆ ಮಾರ್ಗದರ್ಶಕರಾಗಿ ತಮ್ಮ ನಾಮವನ್ನು ಘನಪಡಿಸಿಕೊಂಡರು ಸ್ವಾಮಿ.
15 : ಸ್ವಾಮಿ ಸರ್ವೇಶ್ವರಾ, ಆಕಾಶದಿಂದ ನಮ್ಮನು ಈಕ್ಷಿಸಿನೋಡಿ; ಪರಿಶುದ್ಧವೂ ಪೂಜ್ಯವೂ ಆದ ನಿಮ್ಮ ನಿವಾಸದಿಂದ ವೀಕ್ಷಿಸಿ ನೋಡಿ. ನಿಮ್ಮ ಹುರುಪು ಉತ್ಸಾಹವೆಲ್ಲಿ? ನಿಮ್ಮ ಸಾಹಸಕಾರ್ಯಗಳು ಏನಾದುವು? ನಮ್ಮಿಂದ ಬಿಗಿ ಹಿಡಿದಿರುವಿರಾ ನಿಮ್ಮ ಕನಿಕರವನು? ನಿಮ್ಮ ಕರುಳ ಕರೆಯನು?
16 : ನೀವೇ ನಮ್ಮ ತಂದೆ. ಅಬ್ರಹಾಮನು ನಮ್ಮನ್ನು ಅರಿಯದೆ ಇರಬಹುದು, ಇಸ್ರಯೇಲನು ನಮ್ಮನ್ನು ಗುರುತಿಸದೆ ಇರಬಹುದು, ಆದರೆ ಸರ್ವೇಶ್ವರಾ, ನೀವೇ ನಮ್ಮ ತಂದೆ, ನಮ್ಮ ಉದ್ಧಾರಕ; ಆದಿಯಿಂದ ಇರಲು ಅದುವೇ ನಿಮ್ಮ ನಾಮಾಂಕಿತ.
17 : ಸ್ವಾಮೀ, ನಾವು ನಿಮ್ಮ ಮಾರ್ಗ ತಪ್ಪಿ ಅಲೆಯುವಂತೆ ಮಾಡುತ್ತೀರಿ, ಏಕೆ? ನಿಮಗೆ ಭಯಪಡದ ಹಾಗೆ ನಮ್ಮ ಹೃದಯವನ್ನು ಕಠಿಣ ಪಡಿಸುವುದು ಏಕೆ? ನಿಮ್ಮ ಶರಣರ ನಿಮಿತ್ತ, ನಿಮಗೆ ಬಾಧ್ಯರಾದ ಕುಲಗಳ ನಿಮಿತ್ತ, ನಮಗೆ ಪ್ರಸನ್ನಚಿತ್ತರಾಗಿರಿ.
18 : ನಿಮ್ಮ ಸ್ವಕೀಯ ಜನರು ಸ್ವಲ್ಪಕಾಲ ಮಾತ್ರ ಅನುಭವಿಸಿದಾ ನಿಮ್ಮ ಪವಿತ್ರ ಗರ್ಭಗುಡಿಯನ್ನು ನಮ್ಮ ವೈರಿಗಳು ತುಳಿದು ಹಾಳು ಮಾಡಿದರಲ್ಲಾ!
19 : ನಾವಾದರೋ, ನಿಮ್ಮ ದೊರೆತನಕ್ಕೆ ಎಂದಿಗೂ ಒಳಗಾಗದ, ನಿಮ್ಮ ನಾಮವನ್ನು ಧರಿಸದ, ಪರಕೀಯರಂತೆ ಆಗಿದ್ದೇವಲ್ಲಾ!