Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಶಾಯ


1 : ಸಿಯೋನಿನ ಸದ್ಧರ್ಮವು ಪ್ರಕಾಶಗೊಳ್ಳುವತನಕ ಜೆರುಸಲೇಮಿನ ಉದ್ಧಾರ ದೀಪವು ಬೆಳಗುವತನಕ ಸುಮ್ಮನಿರೆನು ನಾನು ಸಿಯೋನಿನ ಹಿತವನ್ನು ಲಕ್ಷಿಸದೆ, ಮೌನವಿರೆನು ಜೆರುಸಲೇಮಿನ ಸುಕ್ಷೇಮವನು ಚಿಂತಿಸದೆ.
2 : ನೋಡುವರು ಜನಾಂಗಗಳು ನಿನ್ನ ಸದ್ಧರ್ಮವನು ಕಾಣುವರು ಸಕಲ ರಾಜರು ನಿನ್ನ ವೈಭವವನು ಪಡೆಯುವೆ ನೀನು ಸರ್ವೇಶ್ವರನೇ ಕೊಟ್ಟ ಹೊಸ ಹೆಸರನು.
3 : ಸರ್ವೇಶ್ವರನ ಕೈಯಲ್ಲಿ ನೀನು ಸುಂದರ ಕಿರೀಟವಾಗಿ ಮೆರೆಯುವೆ ನಿನ್ನ ದೇವರ ಹಸ್ತದಲ್ಲಿ ರಾಜ ಮುಕುಟವಾಗಿ;
4 : “ಎನ್ನ ಮನದನ್ನೆ” ಎನಿಸಿಕೊಳ್ಳುವೆ ನೀನು “ಸುವಿವಾಹಿತೆ” ಎನಿಸಿಕೊಳ್ಳುವುದು ನಿನ್ನ ನಾಡು. ನಿನ್ನಲ್ಲಿದೆ ಉಲ್ಲಾಸ ಸರ್ವೇಶ್ವರನಿಗೆ ವಿವಾಹವಾಗುವುದಿದೆ ನಿನ್ನ ನಾಡಿಗೆ.
5 : ಯುವಕನು ಕನ್ಯೆಯುವತಿಯನು ವರಿಸುವಂತೆ ವರಿಸುವನು ಸೃಷ್ಟಿಕರ್ತನು ನಿನ್ನನು. ವರನು ವಧುವಿನಲಿ ಆನಂದಿಸುವಂತೆ ನಿನ್ನಲಿ ಆನಂದಿಸುವನು ನಿನ್ನ ದೇವನು.
6 : ಜೆರುಸಲೇಮ್, ಕಾವಲಿಟ್ಟಿರುವೆ ನಿನ್ನ ಗೋಡೆ ಸುತ್ತಲು ಮೌನವಿರಕೂಡದು ಆ ಕಾವಲಿಗರು ಹಗಲಿರುಳು.
7 : ಜೆರುಸಲೇಮನ್ನು ಭದ್ರಪಡಿಸಿ ಲೋಕಪ್ರಸಿದ್ಧಿಗೆ ತರುವತನಕ ನೆನಪಿಸುತ್ತಿರಬೇಕು ಭದ್ರಪಡಿಸಿ ಲೋಕಪ್ರಸಿದ್ಧಿಗೆ ತರುವತನಕ ನಿಮಗಿರದಿರಲಿ ವಿಶ್ರಾಂತಿ, ಆತನಿಗೂ ಕೊಡದಿರಿ ವಿರಾಮ.
8 : ತನ್ನ ಬಲಗೈ ಮೇಲೆ, ಭುಜಬಲದ ಮೇಲೆ ಸರ್ವೇಶ್ವರನಿಟ್ಟ ಆಣೆ: “ಕೊಡೆನಿನ್ನು ನಿನ್ನ ದವಸಧಾನ್ಯವನು ಶತ್ರುಗಳ ಆಹಾರಕ್ಕೆ ನಿನ್ನ ದುಡಿಮೆಯ ದ್ರಾಕ್ಷಾರಸವನು ಅನ್ಯಜನರು ಕುಡಿಯಲಿಕ್ಕೆ.
9 : ಬೆಳೆಮಾಡಿದವರೇ ಕಾಳನು ತಿಂದು ಸ್ತುತಿಸುವರು ಸರ್ವೇಶ್ವರನನು; ದ್ರಾಕ್ಷಿ ಕಿತ್ತವರೇ ಕುಡಿವರು ಈ ರಸವನು ನನ್ನಾಲಯದ ಅಂಗಳದೊಳು.”
10 : ಹೊರಟು ಬನ್ನಿ, ಹಾದು ಬನ್ನಿ, ಪುರದ್ವಾರವನು ಬರಲಿರುವ ಜನರಿಗೆ ಸರಿಮಾಡಿರಿ ಹಾದಿಯನು ಎತ್ತರಿಸಿ ಹೆದ್ದಾರಿಯನು, ತೆಗೆದುಹಾಕಿ ಕಲ್ಲುಗಳನು ಹಾರಿಸಿ ಧ್ವಜವನು, ನೀಡಿ ರಾಷ್ಟ್ರಗಳಿಗೆ ಸೂಚನೆಯನು.
11 : ಇಗೋ, ಸಮೀಪಿಸುತ್ತಿದೆ ನೀವು ಮುಕ್ತಿಹೊಂದುವದಿನ ಆತನೊಂದಿಗಿದೆ ಆತ ನೀಡುವ ಬಹುಮಾನ ಆತನ ಮುಂದಿದೆ ಆತ ಗಳಿಸಿದ ವರಮಾನ. ಇದನು ತಿಳಿಯಹೇಳಿರಿ ಸಿಯೋನೆಂಬಾಕೆಗೆ ಸರ್ವೇಶ್ವರನ ಆಜ್ಞೆಯಿದು ಜಗದ ದಿಗಂತದವರೆಗೆ.
12 : ‘ಪವಿತ್ರ ಪ್ರಜೆ’ ಎನಿಸಿಕೊಳ್ಳುವುದು ನಿಮ್ಮ ಜನತೆ ‘ಸರ್ವೇಶ್ವರಸ್ವಾಮಿಯೇ ಉದ್ಧರಿಸಿದ ಜನತೆ’. ನಿನ್ನ ಹೆಸರೋ, ‘ಪ್ರಾಪ್ತ ನಗರಿ’ ಪತಿ ವರಿಸಿ ಕೈ ಬಿಡದ ಪುರಿ.

· © 2017 kannadacatholicbible.org Privacy Policy