Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಶಾಯ


1 : ನನ್ನ ಮೇಲಿದೆ ಸರ್ವೇಶ್ವರ ಸ್ವಾಮಿಯ ಆತ್ಮ; ನನಗೆ ಅಭಿಷೇಕಮಾಡಿ, ಕಳುಹಿಸಿಹನು ಆತ: ದೀನದಲಿತರಿಗೆ ಶುಭಸಂದೇಶ ಬೋಧಿಸಲೆಂದೆ ಮನನೊಂದವರನು ಸಂತೈಸಿ ಗುಣಪಡಿಸಲೆಂದೆ ಬಂಧಿತರಿಗೆ ಬಿಡುಗಡೆಯನು ಪ್ರಕಟಿಸಲೆಂದೆ; ಸೆರೆಯಾಳುಗಳಿಗೆ ಬಂಧವಿಮುಕ್ತಿಯಾಗುವುದನು,
2 : ಸರ್ವೇಶ್ವರಸ್ವಾಮಿಯ ಅನುಗ್ರಹದ ವರುಷವನು, ನಮ್ಮ ದೇವರು ಮುಯ್ಯಿತೀರಿಸುವಾ ದಿನವನು ಘೋಷಿಸಲೆಂದೆ.
3 : ದುಃಖಿತರೆಲ್ಲರಿಗೆ ಸಾಂತ್ವನ ಸಾರಲೆಂದೇ ಕಳುಹಿಸಿದನಾತ ನನ್ನನು. ಸಿಯೋನಿನ ಶೋಕಾರ್ತರಿಗೆ ಬರಿಬೂದಿಗೆ ಬದಲು ಶಿರೋಭೂಷಣ, ದುಃಖತಾಪದ ಬದಲು ಆನಂದ ತೈಲ, ಸೊರಗಿದ್ದ ಮನಕೆ ಮೆಚ್ಚಿಕೆಯ ಮೇಲ್ವಸ್ತ್ರ ಒದಗಿಸಲೆಂದೇ ನನ್ನನು ಕಳುಹಿಸಿದನಾತ. ನೆಟ್ಟಿಹನು ಇವರನು ಸರ್ವೇಶ್ವರ ತನ್ನ ಮಹಿಮೆಯಾಗಿ ಹೆಸರ ಪಡೆವರಿವರು ‘ನೀತಿವೃಕ್ಷ’ ಗಳೆಂಬುದಾಗಿ.
4 : ಮರಳಿ ಕಟ್ಟುವರಿವರು ಪಾಳುಬಿದ್ದ ಪುರಾತನ ಮನೆಗಳನು ಮತ್ತೆ ಎಬ್ಬಿಸುವರು ಬಿದ್ದ ಹಳೆಯ ಕಟ್ಟಡಗಳನು ನೂತನಗೊಳಿಸುವರು ತಲಾಂತರದ ಹಾಳುಬೀಳು ಪಟ್ಟಣಗಳನು.
5 : ವಿದೇಶಿಯರು, ಮಂದೆ ಕಾವಲುಗಾರರಾಗುವರು ನಿಮಗೆ ಅನ್ಯ ಜನರು ಉಳುವವರೂ ತೋಟಗಾರರಾಗುವರೂ ನಿಮಗೆ.
6 : “ಸರ್ವೇಶ್ವರನ ಯಾಜಕರು” ಎಂಬ ಬಿರುದು ನಿಮ್ಮದಾಗುವುದು “ನಮ್ಮ ದೇವರ ಪರಿಚಾರಕರು” ಎಂಬ ಹೆಸರು ನಿಮಗೆ ಬರುವುದು. ಅನುಭವಿಸುವಿರಿ ಅನ್ಯರಾಷ್ಟ್ರಗಳ ಸಂಪತ್ತನ್ನು ಹೆಮ್ಮೆ ಪಡುವಿರಿ ಆ ಸಿರಿ ನಿಮ್ಮದಾಯಿತೆಂದು.
7 : ಸಿಗುವುದು ನಿಮಗಾದ ಅವಮಾನಕೆ ಇಮ್ಮಡಿ ಹಿರಿತನ ಆದ ತಿರಸ್ಕಾರಕೆ ಪ್ರತಿಯಾಗಿ ಸಂತಸ ಸಿರಿತನ. ದ್ವಿಗುಣವಾಗುವುದು ನಿಮಗೆ ನಾಡಿನ ಸಂಪದ ಅನಂತಕಾಲಕ್ಕು ನಿಮಗಿರುವುದು ಆನಂದ.
8 : “ಸರ್ವೇಶ್ವರ ಆದ ನಾನು ನ್ಯಾಯಪ್ರಿಯ. ಸುಲಿಗೆ ಅನ್ಯಾಯ, ನನಗೆ ಅಸಹ್ಯ. ಪ್ರಾಮಾಣಿಕವಾಗಿ ನೀಡುವೆನು ಇವರಿಗೆ ಪ್ರತಿಫಲ ಮಾಡಿಕೊಳ್ಳುವೆನು ಇವರೊಡನೆ ಅಳಿಯದ ಒಪ್ಪಂದ.
9 : ಪ್ರಖ್ಯಾತವಾಗುವುದು ಇವರ ಸಂತಾನ ವಿಶ್ವದಲ್ಲೆಲ್ಲ ಹೆಸರುವಾಸಿಯಾಗುವುದು ಇವರ ಸಂತತಿ ಅನ್ಯರಾಷ್ಟ್ರಗಳಲ್ಲೆಲ್ಲ. ಲಭಿಸುವುದು ಸರ್ವೇಶ್ವರನ ಆಶೀರ್ವಾದ ಈ ಜನತೆಗೆ ಖಚಿತವಾಗುವುದಿದು ನೋಡುವವರೆಲ್ಲರಿಗೆ.”
10 : ನಾನು ಪಡೆಯುವೆ ಸರ್ವೇಶ್ವರನಲ್ಲಿ ಪರಮಾನಂದ ಹಿರಿಹಿಗ್ಗುವುದು ನನ್ನ ದೇವರಲಿ ನನ್ನಾತ್ಮ. ಮದುವಣಿಗನಿಗೆ ಬಾಸಿಂಗವನು ತೊಡಿಸುವಂತೆ ವಧುವಿಗೆ ಆಭರಣಗಳಿಂದ ಅಲಂಕರಿಸುವಂತೆ ಹೊದಿಸಿಹನಾತ ನನಗೆ ಮುಕ್ತಿಯೆಂಬ ವಸ್ತ್ರವನು ತೊಡಿಸಿಹನು ನನಗೆ ನೀತಿಯೆಂಬ ನಿಲುವಂಗಿಯನು.
11 : ಬುವಿಯು ತನ್ನಿಂದ ಬೀಜವನು ಮೊಳೆಯಿಸುವಂತೆ ತೋಟವು ತನ್ನೊಳು ಸಸಿಯನು ಬೆಳೆಸುವಂತೆ ಸ್ವಾಮಿ ಸರ್ವೇಶ್ವರ, ಸಮಸ್ತ ರಾಷ್ಟ್ರಗಳ ಮುಂದೆ ವೃದ್ಧಿಗೊಳಿಸುವನು ಸದ್ಧರ್ಮವನೆ, ಸ್ತುತಿಸ್ತೋತ್ರವನೆ.

· © 2017 kannadacatholicbible.org Privacy Policy