Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಶಾಯ


1 : ನಿನಗೆ ಬೆಳಕು ಬಂದಿದೆ ಜೆರುಸಲೇಮೇ, ಏಳು, ಪ್ರಕಾಶಿಸು; ನಿನ್ನ ಮೇಲೆ ಉದಯಿಸಿದೆ ಸರ್ವೇಶ್ವರನ ತೇಜಸ್ಸು.
2 : ಇಗೋ ಜಗತ್ತನು ಮುತ್ತಿದೆ ಕತ್ತಲು ಜನಾಂಗಗಳನು ಆವರಿಸಿದೆ ಕಾರ್ಗತ್ತಲು. ನಿನ್ನ ಮೇಲಾದರೋ ಉದಯಿಸುವನು ಸರ್ವೇಶ್ವರನು ನಿನ್ನಲ್ಲಿ ಗೋಚರವಾಗುವುದು ಆತನಾ ತೇಜಸ್ಸು.
3 : ರಾಷ್ಟ್ರಗಳು ಬರುವುವು ನಿನ್ನ ಬೆಳಕಿಗೆ ಅರಸರು ನಿನ್ನ ಉದಯದ ಶೋಭೆಗೆ.
4 : ನೀ ನೋಡು ಸುತ್ತಮುತ್ತಲ ಕಣ್ಣೆತ್ತಿ ಬರುತಿಹರು ನಿನ್ನ ಮಕ್ಕಳೆಲ್ಲರು ಗುಂಪಾಗಿ. ದೂರದಿಂದ ಬರುತಿಹರು ಗಂಡುಮಕ್ಕಳು ಕಂಕುಳಿನಲ್ಲಿ ಹೊತ್ತ ಆ ಹೆಣ್ಣುಮಕ್ಕಳು.
5 : ಇದನ್ನು ನೋಡಿ ನೀ ಬೆಳಗುವೆ ಕಾಂತಿಯಿಂದ ಉಬ್ಬುವುದು ನಿನ್ನ ಎದೆ ಆನಂದದಿಂದ. ಹರಿಯುವುದು ನಿನ್ನೆಡೆಗೆ ಸಮುದ್ರ ವ್ಯಾಪಾರ ಸಮೃದ್ಧಿ ದೊರಕುವುದು ನಿನಗೆ ಅನ್ಯಜನಾಂಗಗಳ ಆಸ್ತಿಪಾಸ್ತಿ.
6 : ತುಂಬಿರುವುವು ನಿನ್ನೊಳು ಒಂಟೆಗಳ ಗುಂಪುಗಳು ಮಿದ್ಯಾನಿನ, ಏಫದ ಪ್ರಾಯದ ಒಂಟೆಗಳು. ಬರುವರೆಲ್ಲರು ಶೆಬದಿಂದ, ತರುವರು ಬಂಗಾರ, ಧೂಪಗಳನು ಸಾರುವರೆಲ್ಲರು ಸರ್ವೇಶ್ವರನ ಸ್ತುತ್ಯಕಾರ್ಯಗಳನು.
7 : ನಿನ್ನಲ್ಲಿ ಕೂಡುವುವು ಕೇದಾರಿನ ಸಕಲ ಮಂದೆಗಳು ಬಲಿಯರ್ಪಣೆಗೊದಗುವುವು ನೆಬಾಯೋತಿನ ಟಗರುಗಳು. ಏರುವುವು ನನಗೆ ಸಮರ್ಪಕವಾದ ಹೋಮವಾಗಿ ಬಲಿಪೀಠವನು. ಚಂದಗೊಳಿಸುವೆನು ನನ್ನ ಸುಂದರವಾದ ಆಲಯವನು.
8 : ಹಾರಿಬರುತ್ತಿರುವ ಇವರಾರು ಮೇಘಗಳಂತೆ? ಗೂಡುಗಳಿಗೆ ತ್ವರೆಮಾಡುವ ಪಾರಿವಾಳಗಳಂತೆ?
9 : ನಿರೀಕ್ಷಿಸುತ್ತಿಹರು ನನ್ನನು ದೂರದ ನಿವಾಸಿಗಳು ಮುಂದಾಗಿ ಬರುತಿಹವು ತಾರ್ಷೀಷಿನ ಹಡಗುಗಳು, ನಿನ್ನ ದೇವರಾದ ಸರ್ವೇಶ್ವರನ ಶ್ರೀನಾಮ ನಿಧಿಯಾದ ಇಲ್ಲಿಗೆ; ನಿನ್ನ ಘನಪಡಿಸಿದ ಇಸ್ರಯೇಲಿನ ಪರಮಪಾವನನ ಸನ್ನಿಧಿಗೆ. ಹೊತ್ತು ತರುತಿಹರು ನಿನ್ನ ಮಕ್ಕಳನು ಜೊತೆಗೆ ಅವರ ಬೆಳ್ಳಿಬಂಗಾರಗಳನು.
10 : ಕಟ್ಟುವರು ವಿದೇಶಿಯರು ನಿನ್ನ ಪೌಳಿಗೋಡೆಗಳನು ಅರಸರು ಕೂಡ ಸಲ್ಲಿಸುವರು ನಿನಗೆ ಸೇವೆಯನು. ಶಿಕ್ಷಿಸಿದೆ ನಿನ್ನನ್ನು ಕೋಪದಿಂದ ಆದರೆ, ಕರುಣಿಸುವೆನು ಕೃಪೆಯಿಂದ.
11 : ತರುತ್ತಿಹರು ರಾಷ್ಟ್ರಗಳ ಆಸ್ತಿಯನ್ನು ನಿನ್ನಲ್ಲಿಗೆ ಬರುತಿಹರು ಅವುಗಳ ಅರಸರು ಮೆರವಣಿಗೆಯೊಂದಿಗೆ. ನಿನ್ನ ದ್ವಾರಗಳು ತೆರೆದಿರುವುವು ಹಗಲಿರುಳು ಮುಚ್ಚದೆ.
12 : ನಾಶವಾಗುವುವು ನಿನ್ನ ಸೇವೆಮಾಡಲೊಲ್ಲದ ರಾಜ್ಯಗಳು, ಜನಾಂಗಗಳು; ಹೌದು, ಸಂಪೂರ್ಣವಾಗಿ ಹಾಳಾಗುವುವು ಆ ಜನಾಂಗಗಳು.
13 : ಬರುವುದು ನಿನ್ನಲ್ಲಿಗೆ ಲೆಬನೋನಿನ ವೈಭವವು ಅದರ ತುರಾಯಿ, ಅಗಸೆ, ತಿಲಕ ಈ ಮರಗಳಾವುವು. ಅಲಂಕರಿಸುವುವು ನನ್ನ ಪವಿತ್ರಾಲಯವನು ಮಹಿಮೆಪಡಿಸುವೆನು ನನ್ನ ಪಾದಪೀಠದ ಮಂದಿರವನು.
14 : ನಿನ್ನ ತುಳಿದವರ ಸಂತಾನ ಬರುವುದು ನಿನ್ನ ಬಳಿಗೆ ತಲೆಬಾಗಿ ನಿನ್ನ ಬೇಡವೆಂದವರು ಬೀಳುವರು ಕಾಲಿಗೆ ಸಾಷ್ಟಾಂಗವಾಗಿ. ಹೊಗಳುವರು ‘ನೀನೇ ಸರ್ವೇಶ್ವರನ ನಗರವೆಂದು, ಇಸ್ರಯೇಲಿನ ಪರಮಪಾವನ ಸಿಯೋನ್’ ಎಂದು.
15 : ಪರಿತ್ಯಕ್ತಳೂ ದ್ವೇಷಿತಳೂ ಆದ ನಿರ್ಜನ ನಗರಿಯೇ, ನಿತ್ಯಘನತೆಯನ್ನು, ಶಾಶ್ವತ ಸಂತೋಷವನು ನೀಡುವೆ ನಿನಗೆ.
16 : ಮೊಲೆಯೂಡಿಸುವರು ಜನಾಧಿಪತಿಗಳು ನಿನಗೆ ಮೊಲೆಗೂಸಾಗುವೆ ನೀನು ಜನಾಂಗಗಳಿಗೆ. ಆಗ ತಿಳಿಯುವೆ ನಿನ್ನನುದ್ಧರಿಸಿದ ಸರ್ವೇಶ್ವರ ನಾನೆಂದು ನಿನ್ನ ವಿಮೋಚಕನು, ಯಕೋಬ್ಯರ ಪರಾಕ್ರಮಿಯು ನಾನೆಂದು.
17 : ಒದಗಿಸುವೆ ನಿನಗೆ ಮರವಿದ್ದಲ್ಲಿ ತಾಮ್ರವನು ಹಿತ್ತಾಳೆಗೆ ಬದಲಾಗಿ ಬಂಗಾರವನು ಕಬ್ಬಿಣಕ್ಕೆ ಪ್ರತಿಯಾಗಿ ಬೆಳ್ಳಿಯನು ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನು ಮಾಡುವೆ ಶಾಂತಿಯನ್ನೇ ನಿನಗೆ ಅಧಿಪತಿಯನ್ನಾಗಿ ಸದ್ಧರ್ಮವನ್ನೇ ನಿನಗೆ ಅಧಿಕಾರಿಯನ್ನಾಗಿ.
18 : ಬಲಾತ್ಕಾರದ ಸುದ್ಧಿಯೇ ಕಿವಿಗೆ ಬೀಳದು ನಿನ್ನ ದೇಶದಲಿ ನಾಶವಿನಾಶಗಳ ವಾರ್ತೆಯೇ ಕೇಳಿಬರದು ನಿನ್ನ ಪ್ರಾಂತ್ಯಗಳಲಿ. ಆಗ ಹೆಸರಿಡುವೆ ನಿನ್ನ ಪೌಳಿಗೋಡೆಗೆ ‘ದೈವಮುಕ್ತಿ’ ಎಂದು ನಿನ್ನೀ ಪುರದ್ವಾರಗಳಿಗೆ ‘ದೈವಸ್ತುತಿ’ ಎಂದು.
19 : ನಿನಗಿನ್ನು ಬೇಕಾಗಿಲ್ಲ ಸೂರ್ಯನ ಬೆಳಕು ಹಗಲೊಳು ನಿನಗೆಂದಿಗೂ ಬೇಕಾಗಿಲ್ಲ ಚಂದ್ರನ ಬೆಳಕು ಇರುಳೊಳು. ನಿನಗೆ ನಿತ್ಯಪ್ರಕಾಶ ಸರ್ವೇಶ್ವರನೆ, ನಿನ್ನ ಬೆಳಗುವ ತೇಜಸ್ಸು ನಿನ್ನ ದೇವನೆ.
20 : ನಿನ್ನ ಸೂರ್ಯನು ಇನ್ನು ತೊಲಗನು. ನಿನ್ನ ಚಂದ್ರನು ಬಿಟ್ಟು ತೊಲಗನು. ಸರ್ವೇಶ್ವರನೇ ನಿನಗೆ ನಿತ್ಯಜ್ಯೋತಿ ನಿನ್ನ ದುಃಖ ದಿನಗಳಿಗಿದೆ ಸಮಾಪ್ತಿ.
21 : ಸದ್ಧರ್ಮಿಗಳಾಗಿರುವರು ನಿನ್ನ ಜನರೆಲ್ಲರು ಆಗುವರವರು ನಾಡಿಗೆ ಶಾಶ್ವತ ಬಾಧ್ಯಸ್ಥರು ನನ್ನ ಮಹಿಮೆಗಾಗಿ ನಾ ನೆಟ್ಟ ಸಸಿಗಳವರು ನನ್ನ ಕೈಗಳು ಸೃಷ್ಟಿಸಿದ ಪ್ರಜೆಗಳವರು.
22 : ದೊಡ್ಡ ಕುಲವಾಗಿಸುವೆನು ಚಿಕ್ಕವನಿಂದ ಬಲಿಷ್ಠ ರಾಷ್ಟ್ರವಾಗಿಸುವೆನು ದುರ್ಬಲನಿಂದ. ಸಾಧಿಸುವೆನು ಇದನು ಕ್ಲುಪ್ತಕಾಲದೊಳು ಸರ್ವೇಶ್ವರನಾದ ನಾನು, ಶೀಘ್ರದೊಳು.

· © 2017 kannadacatholicbible.org Privacy Policy