Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಶಾಯ


1 : ಸರ್ವೇಶ್ವರಸ್ವಾಮಿ ಹೇಳುವುದು ಏನೆಂದರೆ: ನ್ಯಾಐವನ್ನು ಅನುಸರಿಸಿರಿ. ನೀತಿಯನ್ನು ಆಚರಿಸಿರಿ. ಏಕೆಂದರೆ ನಾನೀಡುವ ಮುಕ್ತಿಯು ಬೇಗನೆ ಬರುವುದು; ನಾನು ತರುವ ಸತ್ಸಂಬಂಧವು ಕೂಡಲೆ ಬೆಳಗುವುದು.
2 : ಅದನ್ನು ಕೈಗೊಳ್ಳುವವನು ಧನ್ಯನು! ಅದನ್ನು ಸುಭದ್ರವಾಗಿ ಕಾದಿರಿಸಿಕೊಂಡು ಸಬ್ಬತ್ ದಿನವನ್ನು ಹೊಲೆ ಮಾಡದೆ ಆಚರಿಸುತ್ತಾ ಬರುವವನು ಹಾಗೂ ಯಾವ ಕೇಡಿಗೂ ಕೈ ಹಾಕದವನು ಭಾಗ್ಯವಂತನು!
3 : ಸರ್ವೇಶ್ವರನನ್ನು ಅವಲಂಬಿಸುವ ವಿದೇಶಿಯನು, ‘ಸರ್ವೇಶ್ವರ ತನ್ನ ಜನರಿಂದ ನನ್ನನ್ನು ಖಂಡಿತವಾಗಿ ಬಹಿಷ್ಕರಿಸುವನು’ ಎಂದು ಹೇಳದಿರಲಿ.
4 : ಅಂಥವನಿಗೆ ಸರ್ವೇಶ್ವರಸ್ವಾಮಿ ಹೇಳುವುದನ್ನು ಕೇಳು: “ಸಬ್ಬತ್‍ದಿನಗಳನ್ನು ನನ್ನ ದಿನಗಳೆಂದು ಆಚರಿಸಿ, ನನಗೆ ಮೆಚ್ಚುಗೆಯಾದುವನ್ನು ಕೈಗೊಂಡು, ನನ್ನ ಒಡಂಬಡಿಕೆಯನ್ನು ಸುಭದ್ರವಾಗಿ ಪಾಲಿಸಿಕೊಂಡು ಬರುವ ನಪುಂಸಕರಿಗೆ,
5 : ನನ್ನ ಆಲಯದಲ್ಲೆ, ಅದರ ಪ್ರಾಕಾರಗಳಲ್ಲೆ, ಅವರ ಸ್ಮಾರಕ ಶಿಲೆಗಳನ್ನು ಇಡುವೆನು. ಮಕ್ಕಳನ್ನು ಪಡೆದವರಿಗಿಂತಲು ಶ್ರೇಷ್ಠವಾದ ಹೆಸರನ್ನು ಅವರಿಗೆ ದಯಪಾಲಿಸುವೆನು. ಹೌದು, ಎಂದಿಗೂ ಅಳಿಯದ, ಶಾಶ್ವತವಾಗಿ ಉಳಿಯುವ, ಹೆಸರನ್ನು ಅವರಿಗೆ ದಯಪಾಲಿಸುವೆನು.
6 : ಅನ್ಯದೇಶಿಯರಲ್ಲಿ ಯಾರು ಯಾರು ‘ಸರ್ವೇಶ್ವರ’ ಎಂದು ನನ್ನನ್ನು ಅವಲಂಬಿಸಿ, ಪೂಜಿಸಿ, ನನ್ನ ನಾಮವನ್ನು ಪ್ರೀತಿಸಿ, ನನಗೆ ದಾಸನಾಗಿ, ಸಬ್ಬತ್‍ದಿನವನ್ನು ಹೊಲೆಮಾಡದೆ ನನ್ನ ದಿನವೆಂದು ಆಚರಿಸಿ, ಜೊತೆಗೆ ನನ್ನ ಒಡಂಬಡಿಕೆಯನ್ನು ಸುಭದ್ರವಾಗಿ ಪಾಲಿಸುತ್ತಾರೋ,
7 : ಅವರೆಲ್ಲರನ್ನು ನನ್ನ ಪವಿತ್ರ ಪರ್ವತಕ್ಕೆ ಬರಮಾಡುವೆನು; ನನ್ನ ಪ್ರಾರ್ಥನಾಲಯದಲ್ಲಿ ಅವರನ್ನು ಆನಂದಗೊಳಿಸುವೆನು; ನನ್ನ ಬಲಿಪೀಠದ ಮೇಲೆ ಅವರು ನೀಡುವ ದಹನಬಲಿಗಳನ್ನೂ ಅರ್ಪಣೆಗಳನ್ನೂ ಸಂತೋಷದಿಂದ ಸ್ವೀಕರಿಸುವೆನು. ನನ್ನ ಆಲಯ ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ ಎನಿಸಿಕೊಳ್ಳುವುದು.”
8 : ಇಸ್ರಯೇಲಿನ ಸೆರೆಹೋದ ಜನರನ್ನು ಬರಮಾಡಿಕೊಳ್ಳುವ ದೇವರಾದ ಸರ್ವೇಶ್ವರ, “ನಾನು ಕೂಡಿಸಿಕೊಂಡ ಇಸ್ರಯೇಲ ಜನರೊಂದಿಗೆ ಇನ್ನೂ ಹಲವರನ್ನು ಕೂಡಿಸುವೆನು” ಎಂದಿದ್ದಾರೆ. ಇಸ್ರಯೇಲಿನ ಪ್ರಮುಖರಿಗೆ ಧಿಕ್ಕಾರ!
9 : “ಕಾಡಿನ ಮೃಗಗಳೇ ಬನ್ನಿ, ಬಂದು ನುಂಗಿ ಬಿಡಿ!
10 : ಈ ಕಾವಲುಗಾರರು ಕುರುಡರು, ಇವರಿಗೆ ತಿಳುವಳಿಕೆಯಿಲ್ಲ. ಇವರೆಲ್ಲರೂ ಬೊಗಳಲಾರದ ಮೂಕನಾಯಿಗಳು, ಮಲಗಿಕೊಂಡು ಕನವರಿಸುವ ನಿದ್ದೆಕೋರ ನಾಯಿಗಳು.
11 : ಹೊಟ್ಟೆಬಾಕ ಕುನ್ನಿಗಳು; ಎಂದಿಗೂ ತೃಪ್ತಿ ಪಡೆಯದ ಶುನಕಗಳು. ಇಂಥವರು ಕುರಿಗಳನ್ನು ಕಾಯಲು ಯೋಗ್ಯರೋ? ಇವರು ಬುದ್ಧಿಹೀನರು. ಇವರಲ್ಲಿ ಪ್ರತಿಯೊಬ್ಬನು ಕೊಳ್ಳೆಹೊಡೆಯಬೇಕೆಂದು ತನ್ನದೇ ಆದ ಮಾರ್ಗವನ್ನು ಹಿಡಿದಿದ್ದಾನೆ.
12 : ಅಲ್ಲದೆ, ‘ಬನ್ನಿ, ಮಧುಪಾನವನ್ನು ತರಿಸುತ್ತೇನೆ. ಅಮಲೇರಿಸುವ ಮದ್ಯವನ್ನು ಬೇಕಾದಷ್ಟು ಕುಡಿಯೋಣ; ಇಂದಿನಂತೆ ನಾಳೆಯೂ ಕುಡಿಯೋಣ; ಆಗ ಇನ್ನೂ ಸಂಭ್ರಮವಾಗಿರುವುದು!’ ಎಂದು ಹರಟಿಕೊಳ್ಳುವರು.”

· © 2017 kannadacatholicbible.org Privacy Policy